ಶುಕ್ರವಾರ, ಆಗಸ್ಟ್ 14, 2020
21 °C

ಏಕಿಷ್ಟು ಮರೀತಾರೆ

ಪೃಥ್ವಿರಾಜ್‌ Updated:

ಅಕ್ಷರ ಗಾತ್ರ : | |

ಏಕಿಷ್ಟು ಮರೀತಾರೆ

ನಗರ ಪ್ರದೇಶಗಳ ಜೀವನವೆಂದರೆ ಎಲ್ಲದಕ್ಕೂ ಅವಸರ. ಕ್ಯಾಬ್‌ಗಳಲ್ಲಿ ಪ್ರಯಾಣಿಸುವ ಹಲವು ಪ್ರಯಾಣಿಕರು ಅವಸರದಲ್ಲಿ ಕೆಲವು ವಸ್ತುಗಳನ್ನು ವಾಹನಗಳಲ್ಲೇ ಬಿಟ್ಟು ಹೋಗಿರುವ ಉದಾಹರಣೆಗಳು ಸಾಕಷ್ಟಿವೆ. ಹೀಗೆ ಪ್ರಯಾಣಿಕರು ಬಿಟ್ಟು ಹೋದ ವಸ್ತುಗಳನ್ನು ಆಧರಿಸಿ ಆನ್‌ಲೈನ್‌ ಕ್ಯಾಬ್ ಬುಕಿಂಗ್ ಸೇವೆ ಒದಗಿಸುವ ಉಬರ್ ಸಂಸ್ಥೆ ವರದಿ ಸಿದ್ಧಪಡಿಸಿದೆ. ಆ ವರದಿಯಲ್ಲಿನ ಕೆಲವು ಆಶ್ಚರ್ಯಕರ ಸಂಗತಿಗಳು ಇಲ್ಲಿವೆ.

ಇಡೀ ವರ್ಷದಲ್ಲಿ ಉಳಿದ ದಿನಗಳಿಗೆ ಹೋಲಿಸಿಕೊಂಡರೆ ಹೊಸ ವರ್ಷಕ್ಕೆ ಸ್ವಾಗತ ಕೋರಲು ಮೋಜು ಮಸ್ತಿ ಆಚರಿಸುವ ಡಿಸೆಂಬರ್ 31ರಂದೇ ವಸ್ತುಗಳನ್ನು ಹೆಚ್ಚಾಗಿ ಕಳೆದುಕೊಂಡ ಪ್ರಕರಣಗಳು ದಾಖಲಾಗುತ್ತಿವೆ. ಇದಕ್ಕೆ ಕಾರಣ ಮದ್ಯದ ಮತ್ತು. ಡಿಸೆಂಬರ್ ತಿಂಗಳ 11,12 ಮತ್ತು 27ನೇ ತಾರೀಖುಗಳಲ್ಲಿ ಹೆಚ್ಚು ಕಳವು ಪ್ರಕರಣಗಳು ದಾಖಲಾಗಿವೆ.

ಪೇಂಟಿಂಗ್ಸ್‌ಗೆ ಅಗ್ರಸ್ಥಾನ

ವಿಶ್ವದಾದ್ಯಂತ 58 ದೇಶಗಳ ಸುಮಾರು 311 ನಗರಗಳಲ್ಲಿ ಉಬರ್‌ ಸಂಸ್ಥೆ ಸೇವೆ ಒದಗಿಸುತ್ತಿದೆ. ಎಲ್ಲ ದೇಶಗಳಲ್ಲೂ ಪ್ರಯಾಣಿಕರು ಹೆಚ್ಚಾಗಿ ಮರೆತು ಬಿಟ್ಟು ಹೋಗುತ್ತಿರುವ ವಸ್ತುಗಳ ಪಟ್ಟಿ ನೋಡಿದರೆ ಸರಾಸರಿಯಾಗಿ ಪೇಂಟಿಂಗ್ಸ್‌ಗಳು ಅಗ್ರಸ್ಥಾನದಲ್ಲಿವೆ. ನಂತರದ ಸ್ಥಾನಗಳಲ್ಲಿ ವಾದ್ಯಪರಿಕರಗಳು, ನಿಶ್ಚಿತಾರ್ಥದ ಉಂಗುರಗಳು ಮತ್ತು ತಿಂಡಿ ಪದಾರ್ಥಗಳು ಇವೆ.

ನಮ್ಮ ದೇಶದಲ್ಲಿ ಮೊಬೈಲ್‌ಗೆ ಅಗ್ರಸ್ಥಾನ

ನಮ್ಮ ದೇಶದಲ್ಲಿ ಕ್ಯಾಬ್ ಪ್ರಯಾಣದ ನಂತರ ಹೆಚ್ಚಾಗಿ ಮರೆತುಬಿಟ್ಟು ಹೋಗುತ್ತಿರುವ ವಸ್ತುಗಳ ಪೈಕಿ ಮೊಬೈಲ್‌ ಅಗ್ರಸ್ಥಾನದಲ್ಲಿದೆ. ಮೊಬೈಲ್‌ನಲ್ಲಿ ಮಾತನಾಡಿದ ನಂತರ ಪರಧಾನ್ಯದಲ್ಲಿ ಮುಳುಗಿ ಅದನ್ನು ಅಲ್ಲಿಯೇ ಬಿಟ್ಟು ಹೋಗುತ್ತಿದ್ದಾರೆ ಪ್ರಯಾಣಿಕರು. ನಂತರ ಸ್ಥಾನದಲ್ಲಿ ಉಂಗುರಗಳು, ಬೀಗದ ಕೈ, ಪರ್ಸ್‌, ಟೋಪಿ, ಬ್ಯಾಗ್‌ಗಳು ಇವೆ.  ಡ್ರೈವಿಂಗ್ ಲೈಸೆನ್ಸ್‌, ಐಡಿ ಕಾರ್ಡ್, ಪೆನ್‌ಡ್ರೈವ್‌, ಮೊಬೈಲ್‌ ಚಾರ್ಜರ್, ಕೂಲಿಂಗ್ ಗ್ಲಾಸ್‌ಗಳು ಮೊದಲ 10 ವಸ್ತುಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಮುಖ್ಯವಾದವುಗಳನ್ನೂ ಮರೆಯುತ್ತಿದ್ದಾರೆ.

ಉಬರ್‌ ಸಿದ್ಧಪಡಿಸಿರುವ ಈ ವರದಿ ನೋಡಿದರೆ, ಜನಕ್ಕೆ ಇಷ್ಟೊಂದು ಮರೆವು ಬಂದಿದೆಯೇ ಎಂದು ಎನಿಸುತ್ತದೆ. ಉದಾಹರಣೆಗೆ ಗಜಿನಿ ಮಹಾಶಯರೊಬ್ಬರು ₹15 ಲಕ್ಷ ಮೌಲ್ಯದ ಚೆಕ್‌ ಅನ್ನು ಕ್ಯಾಬ್‌ನಲ್ಲೇ ಬಿಟ್ಟು ಹೋಗಿದ್ದರು. ಕೆಲವರು ಕಂಪ್ಯೂಟರ್ ಕೀ ಬೋರ್ಡ್‌ಗಳನ್ನು ಮರೆತು ಹೋದರೆ, ಇನ್ನೂ ಕೆಲವರು ಪ್ರೀತಿಯಿಂದ ಸಾಕಿದ ನಾಯಿಮರಿಗಳನ್ನೂ ಬಿಟ್ಟು ಹೋಗಿರುವ ಉದಾಹರಣೆಗಳಿವೆ.

ಬೆಲೆಬಾಳುವ ಕೈ ಗಡಿಯಾರಗಳು, ಮದ್ಯದ ಬಾಟಲಿಗಳು, ಚಪ್ಪಲಿಗಳು, ಕ್ರಿಕೆಟ್‌ ಬ್ಯಾಟ್‌ಗಳು, ಅಮುಲ್ಯವಾದ ದಾಖಲೆಗಳನ್ನೂ ಕ್ಯಾಬ್‌ಗೆ ಅರ್ಪಿಸಿ ಹೋಗಿರುವ ಮಹಾನುಭವರು ಇದ್ದಾರೆ.

ಬೆಲೆ ಕಟ್ಟಲಾಗದ ವಸ್ತುಗಳೂ ಪಟ್ಟಿಯಲ್ಲಿವೆ!

ಗಂಡ ಕೊರಳಿಗೆ ಕಟ್ಟಿದ ತಾಳಿ, ತಾಯಿಯೊಂದಿಗೆ ಅಪರೂಪಕ್ಕೊಮ್ಮೆ ತೆಗೆಸಿಕೊಂಡ ಫೋಟೊ, ಇಷ್ಟವಾದವರು ಉಡುಗೊರೆಯಾಗಿ ನೀಡಿದ ಹೂವಿನ ಗಿಡ, ಅಭಿಮಾನದ ನಟ, ನಟಿಯರ ಹಸ್ತಾಕ್ಷರ ಪಡೆದ ಪ್ರತಿಗಳು ಇತ್ಯಾದಿಗಳನ್ನು ಕ್ಯಾಬ್‌ಗಳಲ್ಲೇ ಬಿಟ್ಟು ಹೋಗಿದ್ದಾರೆ ಹಲವರು.

ಶನಿವಾರವೇ ಹೆಚ್ಚು

ಉಳಿದ ದಿನಗಳಿಗೆ ಹೋಲಿಸಿಕೊಂಡರೆ, ಹೆಚ್ಚು ಜನರು ಶನಿವಾರವೇ ಕ್ಯಾಬ್‌ಗಳಲ್ಲಿ ಪ್ರಯಾಣಿಸುತ್ತಿದ್ದಾರೆ. ಹೀಗಾಗಿ ಆ ದಿನವೇ ಹೆಚ್ಚಾಗಿ ಕಳವು ಪ್ರಕರಣಗಳು ದಾಖಲಾಗುತ್ತಿವೆ. ನಂತರದ ಸ್ಥಾನದಲ್ಲಿ ಶುಕ್ರವಾರ ಮತ್ತು ಭಾನುವಾರಗಳಿವೆ.

ಅಗ್ರಸ್ಥಾನದಲ್ಲಿ ಬೆಂಗಳೂರು!

ದೇಶದಲ್ಲೇ ಅತಿ ಹೆಚ್ಚು ‘ಗಜಿನಿ’ ಮಹಾಶಯರು ಇರುವ ನಗರವಾಗಿ ಬೆಂಗಳೂರು ಸ್ಥಾನ ಪಡೆದಿದೆ. ಕಳೆದ ವರ್ಷ ಬಿಡುಗಡೆ ಮಾಡಿದ್ದ ಪಟ್ಟಿಯಲ್ಲೂ ಬೆಂಗಳೂರೇ ಪ್ರಥಮ ಸ್ಥಾನದಲ್ಲಿತ್ತು. ನಂತರದ ಸ್ಥಾನಗಳಲ್ಲಿ ನವದೆಹಲಿ, ಮುಂಬೈ, ಹೈದರಾಬಾದ್, ಕೋಲ್ಕತ್ತ ನಗರಳಿವೆ. ಉಳಿದಂತೆ ಪಟ್ಟಣ ಪ್ರದೇಶಗಳಲ್ಲಿ ಕಳವು ಪ್ರಕರಣಗಳು ಕಡಿಮೆ.

ಆ ಹೊತ್ತಲ್ಲೇ ಹೆಚ್ಚು

ಮುಂಜಾನೆ ಐದು ಮತ್ತು ಆರು ಗಂಟೆ ಅವಧಿಯ ನಡುವೆ ಹೆಚ್ಚಾಗಿ ವಸ್ತುಗಳನ್ನು ಮರೆಯುತ್ತಿದ್ದಾರೆ. ಕಾರಣ ನಿದ್ರೆಯ ಮತ್ತು. ಈ ಮತ್ತು ಮತ್ತೆ ಮಧ್ಯಾಹ್ನ 2ರಿಂದ 3 ಗಂಟೆ ನಡುವೆ ಕಾಡುತ್ತಿದೆ. ಹೀಗಾಗಿ ಈ ಹೊತ್ತಲ್ಲೂ ಹೆಚ್ಚಾಗಿ ವಸ್ತುಗಳನ್ನು ಮರೆತು ಹೋಗುತ್ತಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.