ಶನಿವಾರ, ಡಿಸೆಂಬರ್ 14, 2019
20 °C

ಬದುಕಿಗೊಂದು ದಾರಿ, ಕಲೆಗೊಂದು ನೆಲೆ

ಕಲಾವತಿ ಬೈಚಬಾಳ Updated:

ಅಕ್ಷರ ಗಾತ್ರ : | |

ಬದುಕಿಗೊಂದು ದಾರಿ, ಕಲೆಗೊಂದು ನೆಲೆ

ಹವ್ಯಾಸಗಳು ಹಲವರಿಗೆ ಆದಾಯದ ಮೂಲಗಳೂ ಹೌದು. ದೈನಂದಿನ ಬದುಕಿನ ಏಕತಾನತೆಯಿಂದ ಬೇಸತ್ತ ಮನಸಿಗೆ ನೆಮ್ಮದಿ ಕೊಡುವ ಜೊತೆಗೆ ಕುಟುಂಬಕ್ಕೆ ಆರ್ಥಿಕ ಆಸರೆಯಾಗಿಯೂ ಪೊರೆಯುವುದು ಕೆಲವರು ರೂಢಿಸಿಕೊಂಡಿರುವ ಹವ್ಯಾಸಗಳ ವೈಶಿಷ್ಟ್ಯ. ಬಾಲ್ಯದಿಂದಲೂ ರೂಢಿಸಿಕೊಂಡಿದ್ದ ಕೌಶಲವನ್ನೇ ಕಲೆಯಾಗಿ ವಿಸ್ತರಿಸಿಕೊಂಡವರು ಚಾಮರಾಜಪೇಟೆಯ ಶ್ರುತಿ.

ನಗರದಲ್ಲಿಯೇ ಹುಟ್ಟಿಬೆಳೆದ ಶ್ರುತಿ ಬಿ.ಕಾಂ. ಪದವೀಧರೆ. ದುಡಿಯುವ ಮನಸಿದ್ದರೂ ಸೂಕ್ತ ಕೆಲಸ ಸಿಗಲಿಲ್ಲ. ಹಾಗೇಂದು ಅವರು ಸುಮ್ಮನೆ ಕುಳಿತುಕೊಳ್ಳಲಿಲ್ಲ. ಚಿಕ್ಕಂದಿನಿಂದ ಅಮ್ಮನೊಂದಿಗೆ ಮಾಡುತ್ತಿದ್ದ ಚಟ್ನಿಪುಡಿ , ಸಾಂಬರ್ ಪುಡಿ, ಅಡಿಕೆ ಪುಡಿ, ಕುಂದನ್ ವರ್ಕ್ಸ್‌, ಸೀರೆಗೆ ಕುಚ್ಚುಕಟ್ಟುವುದು, ತೋರಣ ವಿನ್ಯಾಸ ಸೇರಿದಂತೆ ಹತ್ತಾರು ಕೆಲಸಗಳಲ್ಲಿ ತೃಪ್ತಿ ಕಂಡುಕೊಂಡರು.

ಆರಂಭದ ದಿನಗಳಲ್ಲಿ ಕೇವಲ ಮನೆ ಬಳಕೆಗೆ ಮಾತ್ರ ಮಾಡುತ್ತಿದ್ದ ಕೆಲಸಗಳು ಅಕ್ಕಪಕ್ಕದ ಮನೆಯವರ ಗಮನವನ್ನೂ ಸೆಳೆದವು. ಬೇಡಿಕೆ ಹೆಚ್ಚಾದಂತೆ ಆದಾಯದ ಮೂಲವಾಗಿ ಕಲೆ ಕುಟುಂಬದ ಆರ್ಥಿಕತೆಗೆ ಬೆಂಬಲವನ್ನೂ ನೀಡಿತು.ಕುಂದನ್‌ ಕುಂಕುಮ ಭರಣಿ

ಕುಂದನ್‌ ವರ್ಕ್ಸ್‌ಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಇದೆ. ಗಾಂಧಿ ಬಜಾರ್‌ನಿಂದ ಕಚ್ಚಾ ಸಾಮಗ್ರಿಗಳನ್ನು ತಂದು, ಮದುವೆ ಮುಂತಾದ ಶುಭ ಸಮಾರಂಭಗಳಿಗಾಗಿ ಸೂಕ್ತ ವಿನ್ಯಾಸಗಳನ್ನು ಸಿದ್ಧಪಡಿಸುತ್ತಾರೆ. ಕುಂದನ್‌ ದೀಪಗಳು, ಹಾರ, ಕುಂಕುಮ ಭರಣಿ, ರಂಗೋಲಿ ಅಚ್ಚು, ತೋರಣ, ಸಿಲ್ಕ್‌ ಥ್ರೆಡ್‌ ಕಿವಿಯೋಲೆ, ಬಳೆ, ಸರ ಹೀಗೆ ಹತ್ತಾರು ಬಗೆಯ ಕುಂದನ್‌ ವಿನ್ಯಾಸದ ಸಾಮಗ್ರಿಗಳು ಮತ್ತು ಆಭರಣಗಳನ್ನು ಸಿದ್ಧಪಡಿಸುತ್ತಾರೆ. ಸಾಂಪ್ರದಾಯಿಕ ವಿನ್ಯಾಸಗಳನ್ನು ಆಧುನಿಕ ಮನೋಭಾವಕ್ಕೆ ಒಗ್ಗಿಸುವುದು ಶ್ರುತಿ ಅವರ ವೈಶಿಷ್ಟ್ಯ. ‘ನನ್ನ ಹವ್ಯಾಸಕ್ಕೆ ಮನೆಯವರ ಬೆಂಬಲವೂ ಇದೆ. ಇದು ನನ್ನ ಉತ್ಸಾಹವನ್ನು ಹೆಚ್ಚಿಸಿದೆ. ಇನ್ನಷ್ಟು ಹೊಸ ವಿನ್ಯಾಸಗಳನ್ನು ಮೂಡಿಸುವುದು ಸಾಧ್ಯವಾಗಿದೆ’ ಎಂದು ಹೆಮ್ಮೆಯಿಂದ ಹೇಳುತ್ತಾರೆ.

‘ನನಗೆ ಆರ್ಡರ್ ಕೊಡುವ ಗ್ರಾಹಕರು ಕನಿಷ್ಠ ಒಂದು ತಿಂಗಳು ಸಮಯ ಕೊಡಬೇಕು. ಗುಣಮಟ್ಟದೊಂದಿಗೆ ನಾನು ರಾಜಿಯಾಗುವುದಿಲ್ಲ. ಉತ್ತಮ ವಿನ್ಯಾಸವೊಂದು ರೂಪುಗೊಳ್ಳಲು ಕನಿಷ್ಠ ಒಂದು ವಾರವಾದರೂ ಸಮಯ ಬೇಕು. ಹೆಚ್ಚು ಲಾಭ ಮಾಡಬೇಕು ಎನ್ನುವ ಆಸೆ ನನಗಿಲ್ಲ. ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕರೆ ಸಾಕು’ ಎಂದು ನುಡಿಯುತ್ತಾರೆ.ಶ್ರುತಿ

ಬೆಲೆಗೆ ತಕ್ಕ ವಸ್ತುಗಳು ಸಿಕ್ಕಾಗ ಮಾತ್ರ ಗ್ರಾಹಕ ಖುಷಿಯಾಗಿರಬಲ್ಲ. ಹೈ ಕ್ಲಾಸ್‌, ಮಿಡಲ್‌ ಕ್ಲಾಸ್‌ ಎನ್ನದೆ ಎಲ್ಲರನ್ನೂ ಸೆಳೆಯುವಂತಹ ವಸ್ತುಗಳು ಇವು. ಮದುವೆಗೆ ಮುನ್ನ ಮಾಡುತ್ತಿದ್ದ ಈ ಕೆಲಸವನ್ನು ಮದುವೆಯ ನಂತರವೂ ಮುಂದುವರೆಸಿಕೊಂಡು ಬಂದಿದ್ದೇನೆ ಎನ್ನುತ್ತಾರೆ ಶ್ರುತಿ ಅವರು.

ಸಂಪರ್ಕ ಸಂಖ್ಯೆ– 98866 53926

ಪ್ರತಿಕ್ರಿಯಿಸಿ (+)