ಭಾನುವಾರ, ಡಿಸೆಂಬರ್ 15, 2019
25 °C

ಕಾಯಂ ‘ಅತಿಥಿ’ಗಳಿವರು; ಅನಾದರದ ಫಲಾನುಭವಿಗಳು

ಎನ್‌.ಉದಯಕುಮಾರ್ Updated:

ಅಕ್ಷರ ಗಾತ್ರ : | |

ಕಾಯಂ ‘ಅತಿಥಿ’ಗಳಿವರು; ಅನಾದರದ ಫಲಾನುಭವಿಗಳು

ಸರ್ಕಾರಿ ಕಾಲೇಜುಗಳು ಬೇಕು. ಆ ಕಾಲೇಜುಗಳಿಗೆ ಹೆಚ್ಚು ಹೆಚ್ಚು ವಿದ್ಯಾರ್ಥಿಗಳು ಸೇರಬೇಕು. ಅವರಿಗೆ ಗುಣಮಟ್ಟದ ಶಿಕ್ಷಣವನ್ನೂ ಕೊಡಬೇಕು. ಆದರೆ ಪಾಠ ಮಾಡಲು ಸೇವಾ ಭದ್ರತೆಯುಳ್ಳ ಅಧ್ಯಾಪಕರು ಬೇಕಾಗಿಲ್ಲ!

ಕಟ್ಟಡ ಬೇಕೆಂದು ಕೇಳಿ! ತಕ್ಷಣ ಮಂಜೂರಾಗುತ್ತದೆ. ಬೋಧಕರ ನೇಮಕ ಮಾತ್ರ ದಶವಾರ್ಷಿಕ ಯೋಜನೆ. ಅಲ್ಲಿಯವರೆಗೂ ಈ ಬೋಧನಾಲಯಗಳ ಚಕ್ರ ಉರುಳುವುದು ಹೇಗೆ? ಈ ರಥಚಕ್ರಗಳನ್ನು ಎಳೆಯಲೆಂದೇ ಸೃಷ್ಟಿಯಾದವರು ‘ಅತಿಥಿ ಉಪನ್ಯಾಸಕ’ರು. ಅವರ ಕಾಲಿಗೆ ಸರಪಳಿ ಬಿಗಿದರೆ ಸಾಕು; ರಥ ಹೇಗೋ ದೇಕುತ್ತದೆ!

ಹಿಂದಕ್ಕೋ ಮುಂದಕ್ಕೋ... ದೇಕಿದರೆ ಅಷ್ಟೇ ಸಾಕು. ವಿದ್ಯಾರ್ಥಿಗಳ ಭವಿಷ್ಯ, ಗುಣಾತ್ಮಕತೆ, ಅತಿಥಿ ಉಪನ್ಯಾಸಕರ ಹೆಸರಿನಲ್ಲಿ ಅಲ್ಲಿ ದುಡಿಯುತ್ತಿರುವ ಬೋಧಕರ ಯೋಗಕ್ಷೇಮ... ಈ ಯಾವುದರ ಬಗ್ಗೆಯೂ ಆಡಳಿತಾರೂಢರಿಗೆ ಚಿಂತೆ ಇದ್ದಂತಿಲ್ಲ.

ಕಾಲೇಜು ಆರಂಭಿಸುವಂತೆ ಒತ್ತಡ ಹೇರುವವರಿದ್ದಾರೆ. ಅದು ಮಂಜೂರಾದರೆ ‘ಕಾಲೇಜು ತರಿಸಿದ್ದೇ ನಾನು’ ಎಂದು ಬೀಗಲು ಪೈಪೋಟಿಯೂ ಇರುತ್ತದೆ. ಕಟ್ಟಡ ಕಾಮಗಾರಿಗಳಂತೂ ಅಧಿಕಾರಸ್ಥರ ಪಾಲಿಗೆ ‘ಕಾಮಧೇನು’. ಕಮಿಷನ್‌ ಹೆಸರಿನಲ್ಲಿ ಜೇಬು ತುಂಬಿಸಿಕೊಳ್ಳುವ ದಂಧೆಯಾಗಿರುವುದರಿಂದ ಕಟ್ಟಡ ಕಾಮಗಾರಿಗಳ ನೀಲನಕಾಶೆ ಬಲುಬೇಗ ರೂಪು ತಳೆಯುತ್ತದೆ. ಆದರೆ ಅಧ್ಯಾಪಕರ ನೇಮಕದ ವಿಷಯಕ್ಕೆ ಬಂದಾಗ ಆಡಳಿತ ನಡೆಸುವವರು ಮತ್ತು ಮುಂದೆ ಅಧಿಕಾರ ಹಿಡಿಯಲು ಹಾತೊರೆಯುತ್ತಿರುವವರು ಈ ಎಲ್ಲರದೂ ಅನುಕೂಲಸಿಂಧು ನಿಲುವು.

‘ಅತಿಥಿ’ ಎನ್ನುವ ಹೆಸರು ಯಾರು ತಗುಲಿಹಾಕಿದರೋ ತಿಳಿಯದು! ಟಿ.ವಿ., ಸ್ಮಾರ್ಟ್‌ಫೋನ್‌ ಯುಗದಲ್ಲಿ ಕೆಲವಾದರೂ ಮನೆಗಳಲ್ಲಿ ಅತಿಥಿಗಳು ಹೇಗೆ ಅನಾದರಕ್ಕೆ ಒಳಗಾಗಿದ್ದಾರೋ ಅದೇ ರೀತಿಯ ಅನಾದರಕ್ಕೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಈ ಇಡೀ ಅತಿಥಿ ಉಪನ್ಯಾಸಕ ಸಮೂಹ ಈಡಾಗಿದೆ. ದುಡಿಮೆ ದಂಡಿ. ಸಂಬಳ ಮಾತ್ರ ಕನಿಷ್ಠ. ಉದ್ಯೋಗಕ್ಕೆ ಭದ್ರತೆ ಇಲ್ಲ. ಅನುಭವಕ್ಕೆ ಬೆಲೆ ಇಲ್ಲ. ಒಂದು ರೀತಿಯಲ್ಲಿ ಇದ್ದೂ ಇಲ್ಲದ ಅತಂತ್ರ ಸ್ಥಿತಿ.

ಮಾನವ ಸಂಪನ್ಮೂಲ ನಿರ್ವಹಣೆಯಲ್ಲಿ ನಾವು ಹೇಗೆ ಎಡವಿದ್ದೇವೆ ಎಂಬುದಕ್ಕೆ ಇವರನ್ನು ಬಳಸಿಕೊಳ್ಳುತ್ತಿರುವ ರೀತಿ ಒಂದು ನಿದರ್ಶನವಾಗಿ ನಿಲ್ಲುತ್ತದೆ. ಶೈಕ್ಷಣಿಕ ಆಡಳಿತಕ್ಕೆ ಸಂಬಂಧಿಸಿದ ನಮ್ಮ ದೃಷ್ಟಿಕೋನ ಎಷ್ಟು ವಕ್ರವಾಗಿದೆ ಎಂಬುದಕ್ಕೂ ಈ ‘ಅತಿಥಿ’ಗಳು ಜೀವಂತ ಉದಾಹರಣೆ. ಯಾವ ಪಕ್ಷದ ಸರ್ಕಾರವೂ ಇವರ ಆತಂಕ ನಿವಾರಣೆಗೆ ಪ್ರಾಮಾಣಿಕ ಪ್ರಯತ್ನ ಮಾಡಿಲ್ಲ. ‘ವಿರೋಧ ಪಕ್ಷವಾಗಿದ್ದಾಗ ಒಂದು ವರಸೆ, ಆಡಳಿತಕ್ಕೆ ಬಂದ ಮೇಲೆ ಮತ್ತೊಂದು ವರಸೆ. ಬಾಯಿ ಮಾತಿನ ಸಹಾನುಭೂತಿ ಬಿಟ್ಟರೆ ಬೇರೆ ಏನೂ ಆಗಿಲ್ಲ’ ಎಂದು ಹೇಳುವ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ರಾಜ್ಯ ಸಮನ್ವಯ ಸಮಿತಿ ಅಧ್ಯಕ್ಷ ಡಾ. ಎಚ್‌. ಸೋಮಶೇಖರ ಶಿವಮೊಗ್ಗಿ ಅವರ ಆಕ್ರೋಶದಲ್ಲಿ ಅರ್ಥ ಇಲ್ಲದೇ ಇಲ್ಲ. ರಾಜ್ಯದ ಮೂರೂ ಪ್ರಧಾನ ಪಕ್ಷಗಳ ಆಡಳಿತ ಕಂಡಿರುವ ಇವರ ಪಾಲಿಗೆ ಭರವಸೆ ಎಂಬುದೇ ಬಿಸಿಲ್ಗುದುರೆ ಆಗಿದೆ.

ಮನವಿ, ಆಗ್ರಹ, ಧರಣಿ, ಉಪವಾಸಗಳನ್ನೊಳಗೊಂಡ ಎಲ್ಲ ಬಗೆಯ ಅಸ್ತ್ರಗಳನ್ನು ಪ್ರಯೋಗಿಸಿದ ಬಳಿಕ ತಿಂಗಳ ಪಗಾರವು ವರ್ಷದ ಹಿಂದೆ ₹ 13 ಸಾವಿರಕ್ಕೆ ಏರಿದೆ. ಅದು ಕೂಡ ಪಿಎಚ್‌.ಡಿ. ಮಾಡಿದವರಿಗೆ; ‘ನೆಟ್‌’, ‘ಸ್ಲೆಟ್‌’ ಪಾಸಾದವರಿಗೆ. ಇಲ್ಲವಾದಲ್ಲಿ ಬರೀ ₹ 11,500. ಅದೂ ಅನಿಶ್ಚಿತ. ಮೂರು ತಿಂಗಳಿಗೋ ನಾಲ್ಕು ತಿಂಗಳಿಗೋ ಒಮ್ಮೆ ಸಂಬಳ ಕೈಗೆ ಸಿಕ್ಕರೆ ಅದೇ ಭಾಗ್ಯ. ಒಂದು ಶೈಕ್ಷಣಿಕ ಸಾಲಿನಲ್ಲಿ ಒಂಬತ್ತರಿಂದ ಹತ್ತು ತಿಂಗಳು ಮಾತ್ರ ಕೆಲಸ. ಅದಾದ ಬಳಿಕ ಮುಂದಿನ ಸಾಲಿಗೆ ಮುಂದುವರಿಯುವ ಯಾವ ಖಾತರಿಯೂ ಇಲ್ಲ.

ರಾಜ್ಯದಲ್ಲಿ 412 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿವೆ. ಈ ಕಾಲೇಜುಗಳಲ್ಲಿ 14 ಸಾವಿರದಷ್ಟು ಅತಿಥಿ ಉಪನ್ಯಾಸಕರು ಸುಮಾರು 15 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದರು. ಇತ್ತೀಚೆಗೆ 2,160 ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ನೇಮಕಾತಿ ನಡೆದ ಕಾರಣ, ಸುಮಾರು 4,000 ಮಂದಿ ಅತಿಥಿ ಉಪನ್ಯಾಸಕರಿಗೆ ಇದ್ದ ತಾತ್ಕಾಲಿಕ ಕೆಲಸವೂ ಮರೀಚಿಕೆಯಾಯಿತು. ಅಂದರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು ಇಲ್ಲಿಯವರೆಗೂ ನಡೆಯುತ್ತಿರುವುದೇ ಅತಿಥಿ ಉಪನ್ಯಾಸಕರನ್ನು‌ ನೆಚ್ಚಿಕೊಂಡು. ಆದರೆ ಅವರ ಇರುವಿಕೆಯನ್ನೇ ನಿರಾಕರಿಸುವ ಮಟ್ಟಿಗೆ ಅವರ ಸೇವೆಯನ್ನು ಕಡೆಗಣಿಸಲಾಗಿದೆ.

ಯುಜಿಸಿ ವೇತನ ಶ್ರೇಣಿ ಅನ್ವಯ ಸಹಾಯಕ ಪ್ರಾಧ್ಯಾಪಕರಿಗೆ ಆರಂಭಿಕ ಹಂತದಲ್ಲೇ ತಿಂಗಳಿಗೆ ₹ 60 ಸಾವಿರದಿಂದ 70 ಸಾವಿರದಷ್ಟು ವೇತನ ಸಿಗುತ್ತದೆ. ಅತಿಥಿ ಉಪನ್ಯಾಸಕರು ಮತ್ತು ಕಾಯಂ ಆಗಿ ನೇಮಕಗೊಂಡ ಅಧ್ಯಾಪಕರ ನಡುವೆ ಒಂದು ವ್ಯತ್ಯಾಸ ಇದೆ. ಅತಿಥಿ ಉಪನ್ಯಾಸಕರು ತಿಂಗಳಿಗೆ 32 ತಾಸು ಪಾಠ ಮಾಡಬೇಕು. ಯುಜಿಸಿ ವೇತನ ಶ್ರೇಣಿಯ ಅಧ್ಯಾಪಕರು 64 ತಾಸು ಪಾಠ ಮಾಡಬೇಕು. ಬೋಧನಾ ಅವಧಿಯಲ್ಲಿನ ವ್ಯತ್ಯಾಸ ಇದು. ಉಳಿದಂತೆ ಪರೀಕ್ಷೆ, ಮೌಲ್ಯಮಾಪನದಂಥ ಕೆಲಸಗಳಲ್ಲಿ ಕಾಯಂ ಸಿಬ್ಬಂದಿ ಜತೆ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡಬೇಕು. ಆದರೆ ವೇತನದಲ್ಲಿನ ವ್ಯತ್ಯಾಸ ಕಣ್ಣಿಗೆ ರಾಚುವಂತಿದೆ. ಕೆಲವು ಅತಿಥಿ ಉಪನ್ಯಾಸಕರು ಹತ್ತು ವರ್ಷಗಳಿಗೂ ಹೆಚ್ಚು ಸೇವಾನುಭವ ಹೊಂದಿದ್ದಾರೆ. ಆದರೆ ಈ ಸೇವಾನುಭವವು ನೇಮಕ ಪ್ರಕ್ರಿಯೆಯಲ್ಲಿ ಯಾವ ರೀತಿಯಲ್ಲೂ ಪರಿಗಣನೆಗೆ ಬರುವುದೇ ಇಲ್ಲ.

ಯುಜಿಸಿ ಶ್ರೇಣಿಯ ಅಧ್ಯಾಪಕರಿಗೆ ಅಕಾಡೆಮಿಕ್ ಆಗಿ ಹತ್ತಾರು ಸೌಲಭ್ಯಗಳಿವೆ. ಪಿಎಚ್‌.ಡಿ. ಮಾಡಲು ಮೂರು ವರ್ಷಗಳ ಸಂಬಳಸಹಿತ ರಜೆ, ಸಂಶೋಧನಾ ಯೋಜನೆಗಳಿಗೆ ಹಣಕಾಸಿನ ನೆರವು ಸೇರಿದಂತೆ ಅನೇಕ ಅನುಕೂಲಗಳು ಇವೆ. ಆದರೆ, ಅತಿಥಿ ಉಪನ್ಯಾಸಕರದ್ದು ‘ಆಧುನಿಕ, ಅಘೋಷಿತ ಜೀತ ಪದ್ಧತಿ’ಯಲ್ಲಿನ ಬದುಕು.

ಅತಿಥಿ ಉಪನ್ಯಾಸಕರ ಸೇವೆ ಕಾಯಂ ಮಾಡಬೇಕು ಎಂಬ ಬೇಡಿಕೆ ತೀವ್ರಗೊಂಡಿದ್ದ ಒಂದು ಸಂದರ್ಭದಲ್ಲಿ, ಉನ್ನತ ಶಿಕ್ಷಣ ಸಚಿವರಾಗಿದ್ದ ವಿ.ಎಸ್. ಆಚಾರ್ಯ ಅವರು ‘ನಿರ್ದಿಷ್ಟ ಅವಧಿಗೆ ಸೀಮಿತವಾದುದು ತಮ್ಮ ಕೆಲಸ ಎಂದು ಗೊತ್ತಿದ್ದೂ, ಅದಕ್ಕೆ ಸಂಬಂಧಿಸಿದ ಒಪ್ಪಂದಗಳಿಗೆ ಸಹಿ ಮಾಡಿಯೂ ಸೇವೆ ಕಾಯಂಗೊಳಿಸಿ ಎಂದು ಆಗ್ರಹಿಸುವುದು, ಪ್ರತಿಭಟನೆ ನಡೆಸುವುದು ಎಷ್ಟು ಸರಿ' ಎಂದು ಅನೌಪಚಾರಿಕವಾಗಿ ಕೇಳಿದ್ದರು. ಸ್ನಾತಕೋತ್ತರ ಪದವಿ ಪಡೆದವರು ಅಧ್ಯಾಪಕರೇ ಆಗಬೇಕು ಎನ್ನುವ ನಂಬಿಕೆಯನ್ನು ಗಟ್ಟಿಗೊಳಿಸಿರುವುದು, ಎಂ.ಎ., ಎಂ.ಕಾಂ., ಎಂ.ಎಸ್ಸಿಯಂಥ ಪದವಿ ಪಡೆದಿದ್ದರೂ ಬೇರೆಡೆ ಕೆಲಸ ಗಿಟ್ಟಿಸಿಕೊಳ್ಳುವಂತಹ ಕೌಶಲವನ್ನು, ಸಾಮರ್ಥ್ಯವನ್ನು ಅವರಲ್ಲಿ ಬೆಳೆಸಿಲ್ಲದಿರುವುದು ಮತ್ತು ವ್ಯಾಪಕ ಬೇಡಿಕೆ ಇರುವ ಕೌಶಲಗಳನ್ನು ಅವರಲ್ಲಿ ರೂಢಿಸದಿರುವುದು ನಾವು ಕಟ್ಟಿರುವ ಶಿಕ್ಷಣ ವ್ಯವಸ್ಥೆಯ ಸೋಲಲ್ಲವೇ?

ಅತಿಥಿ ಉಪನ್ಯಾಸಕರಲ್ಲಿ 700 ಮಂದಿ ಪಿಎಚ್‌.ಡಿ. ಪೂರೈಸಿದ್ದಾರೆ. ಎರಡು ಸಾವಿರ ಮಂದಿ ‘ನೆಟ್’ ಪರೀಕ್ಷೆ ಪಾಸಾಗಿದ್ದಾರೆ, ಎರಡೂವರೆ ಸಾವಿರ ಮಂದಿ‌ ಎಂ.ಫಿಲ್. ಮಾಡಿದ್ದಾರೆ. ಯಾವುದೇ ಸಮಾಜಕ್ಕೆ ಇವರು ಆಸ್ತಿಯಾಗಬಹುದಿತ್ತು. ಆದರೆ ಅವರ ಬದುಕು ಹೆಣಗಾಟದಲ್ಲೇ ಸವೆದುಹೋಗುತ್ತಿದೆ. ಇವರಲ್ಲಿ ಬಹುತೇಕರು ಸರ್ಕಾರ ನೀಡುವ ಉಚಿತ ಶಿಕ್ಷಣದಿಂದ ಮುಂದೆ ಬಂದವರು. ಅವರ ಮೇಲೆ ಸರ್ಕಾರ ಇಷ್ಟು ಹೂಡಿಕೆ ಮಾಡಿ, ಆ ಹೂಡಿಕೆ ವ್ಯರ್ಥವಾಗಲು ಬಿಡಲಾಗಿದೆ! ಕಾಯಂ ಉಪನ್ಯಾಸಕರು ಅಂದರೆ ಬೊಕ್ಕಸಕ್ಕೆ ಹೊರೆ ಎಂದು ಅಧಿಕಾರಿಗಳು ಭಾವಿಸಿರುವಂತಿದೆ. ಶೈಕ್ಷಣಿಕ ಆಡಳಿತದ ಕಲ್ಪನೆಯೇ ನಮ್ಮಲ್ಲಿ ಇಲ್ಲದಿರುವುದು ನಮ್ಮ ಈ ಮನಃಸ್ಥಿತಿಗೆ ಕಾರಣ. ಹತ್ತಾರು ವರ್ಷ ಆದರೂ ಪ್ರಾಂಶುಪಾಲರ ಹುದ್ದೆ ಭರ್ತಿ ಮಾಡದಿರುವುದು, ಕಾಲಕಾಲಕ್ಕೆ ಕುಲಪತಿಗಳನ್ನು ನೇಮಿಸದಿರುವುದು, ಶೈಕ್ಷಣಿಕ ಸ್ವಾಯತ್ತತೆಯಲ್ಲಿ ಅನಗತ್ಯ ರಾಜಕೀಯ ಹಸ್ತಕ್ಷೇಪಗಳಿಂದಾಗಿ ಶಿಕ್ಷಣ ವ್ಯವಸ್ಥೆ ಸೊರಗಿದೆ. ಐಎಎಸ್‌ ಅಧಿಕಾರಿಗಳು ಇಲಾಖೆಗಳ ಮುಖ್ಯಸ್ಥರಾಗಿರುವುದರಿಂದ ಅವರಿಗೆ ಅಂಕಿ ಅಂಶಗಳ ಪ್ರಮಾಣ ಮುಖ್ಯವಾಗುತ್ತಿದೆಯೇ ಹೊರತು ಕಲಿಕಾರ್ಥಿಗಳ ಮೇಲೆ ಆಗುವ ಪರಿಣಾಮಗಳು ನಗಣ್ಯ. ನಮ್ಮಲ್ಲಿರುವುದು ಕಂದಾಯ ಆಡಳಿತದ ಮನಃಸ್ಥಿತಿ. ಹಾಗಾಗಿಯೇ ನಾವು ಭೌತಿಕ ಸಂಪನ್ಮೂಲ ಸೃಷ್ಟಿಸಲು ಕೊಡುವಷ್ಟು ಆದ್ಯತೆಯನ್ನು ಬೌದ್ಧಿಕ ಸಂಪನ್ಮೂಲ ಸೃಜಿಸಲು ಕೊಡುತ್ತಿಲ್ಲ.

ಉನ್ನತ ಶಿಕ್ಷಣ ಪಡೆಯುವವರ ಪ್ರಮಾಣ ನಮ್ಮಲ್ಲಿ ಕಡಿಮೆ. ಅಖಿಲ ಭಾರತ ಉನ್ನತ ಶಿಕ್ಷಣ ಸಮೀಕ್ಷೆಯ ಪ್ರಕಾರ, 2015-16ರಲ್ಲಿ ದೇಶದಲ್ಲಿ ಉನ್ನತ ಶಿಕ್ಷಣ ಕೋರ್ಸ್‌ಗಳಿಗೆ ಸೇರಿದವರ ಪ್ರಮಾಣ (ಜಿಇಆರ್‌) ಶೇಕಡ 25.2ರಷ್ಟು (18ರಿಂದ 23ರ ವಯಸ್ಸಿನವರು). ಅಮೆರಿಕದಲ್ಲಿ ಇದರ ಪ್ರಮಾಣ ಶೇ 85.8ರಷ್ಟು. ಚೀನಾದಲ್ಲಿ ಶೇ 43.99ರಷ್ಟಿದೆ. 2020ರ ವೇಳೆಗೆ ಈ ಪ್ರಮಾಣವನ್ನು ಶೇಕಡ 30ಕ್ಕೆ ಹೆಚ್ಚಿಸಬೇಕು ಎಂಬುದು ಭಾರತ ಸರ್ಕಾರದ ಗುರಿ. ಕರ್ನಾಟಕದಲ್ಲಿ ಈ ಪ್ರಮಾಣವನ್ನು ಶೇ 40ಕ್ಕೆ ಏರಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ (ಈಗಿರುವ ಪ್ರಮಾಣ ಶೇ 26.5). ಆದರೆ ನಮ್ಮ ಕಾಲೇಜುಗಳ ಸ್ಥಿತಿ ಈ ಗುರಿ ಸಾಧನೆಗೆ ಪೂರಕವಾಗಿದೆಯೇ ಎಂಬುದರ ಬಗ್ಗೆ ಯಾರೂ ಗಂಭೀರವಾಗಿ ಯೋಚಿಸುತ್ತಿಲ್ಲ.

ಇನ್ನೂ ಒಂದು ಆಸಕ್ತಿಕರ ವಿಷಯವನ್ನು ಉಲ್ಲೇಖಿಸಬೇಕಿದೆ. ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಶಿಕ್ಷಣ ಪಡೆಯುತ್ತಿರುವವರಲ್ಲಿ ಅರ್ಧಕ್ಕೂ ಹೆಚ್ಚು ಮಂದಿ ಹೆಣ್ಣುಮಕ್ಕಳು. ಇನ್ನೂ ಖಚಿತವಾಗಿ ಹೇಳಬೇಕೆಂದರೆ ಅವರ ಪ್ರಮಾಣ ಶೇ 57ರಷ್ಟು. ಅವರಲ್ಲಿ ಬಹುತೇಕರು ಗ್ರಾಮೀಣ ಪ್ರದೇಶಗಳಿಗೆ ಸೇರಿದವರು. ದುರ್ಬಲ ವರ್ಗಗಳಿಗೆ ಸೇರಿದ ವಿದ್ಯಾರ್ಥಿಗಳೇ ಅಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಓದಲು ಬರುತ್ತಾರೆ. ಈ ಕಾಲೇಜುಗಳನ್ನು ಸಮರ್ಪಕವಾಗಿ ನಿರ್ವಹಿಸದೇ ಇರುವುದು ಈ ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣವನ್ನು ನಿರಾಕರಿಸುವುದಕ್ಕೆ ಸಮ. ಉನ್ನತ ವರ್ಗಗಳ ವಿದ್ಯಾರ್ಥಿಗಳಿಗೆ ಖಾಸಗಿ ಕಾಲೇಜುಗಳು ಇಲ್ಲದಿರುತ್ತಿದ್ದರೆ, ಸರ್ಕಾರಿ ಕಾಲೇಜುಗಳ ಸ್ಥಿತಿ ಇದೇ ರೀತಿ ಇರುತ್ತಿತ್ತೇ?

ತಾನೇ ಪೋಷಿಸಿದ ಸಂಪನ್ಮೂಲವನ್ನು ತಾನೇ ಸೊರಗಿಸುವುದು ನಮ್ಮ ಸರ್ಕಾರಗಳಿಗೆ ಮಾತ್ರ ಸಾಧ್ಯವೇನೋ! ಶಿಕ್ಷಣ ಕ್ಷೇತ್ರವನ್ನಾದರೂ ಆದ್ಯತಾ ವಲಯವನ್ನಾಗಿ ಪರಿಗಣಿಸಿ ಕಾಲಕಾಲಕ್ಕೆ ನೇಮಕಾತಿಗಳನ್ನು ಮಾಡಿದ್ದಿದ್ದರೆ ಈ ಸಮಸ್ಯೆ ಎದುರಾಗುತ್ತಿರಲಿಲ್ಲ. ಸರ್ಕಾರ ಇನ್ನಾದರೂ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಲಿ. ಅಂತೆಯೇ ಅತಿಥಿ ಉಪನ್ಯಾಸಕರ ಆತಂಕ ನಿವಾರಿಸಲಿ.

ಬೇಕೇಬೇಕು ಪರಿಹಾರ

ಅತಿಥಿ ಉಪನ್ಯಾಸಕರ ಸಮಸ್ಯೆಗೆ ರಾಜ್ಯ ಸರ್ಕಾರ ಯಾವುದಾದರೂ ರೂಪದಲ್ಲಿ ಪರಿಹಾರ ಹುಡುಕಲೇಬೇಕು. ಯುಜಿಸಿ ಮಾರ್ಗಸೂಚಿಗಳನ್ನು ಗಮನದಲ್ಲಿ ಇರಿಸಿಕೊಂಡೇ ಸರ್ಕಾರದ ಮಟ್ಟದಲ್ಲಿ ಏನು ಮಾಡಬಹುದು ಎಂದು ಯೋಚಿಸಬೇಕು. ನೇಮಕಾತಿಯಲ್ಲಿ ‘ವೆಯ್ಟೇಜ್‌’ ಕೊಡುವ ಸಾಧ್ಯತೆ ಬಗ್ಗೆ ಹಣಕಾಸು, ಕಾನೂನು ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳೊಂದಿಗೆ ಕೂಲಂಕಷವಾಗಿ ಚರ್ಚಿಸಿ ಒಂದು ನಿರ್ಧಾರಕ್ಕೆ ಬರಬೇಕು.

ತಕ್ಷಣದ ಪರಿಹಾರವಾಗಿ ವೇತನದ ಮೊತ್ತ ಹೆಚ್ಚಿಸಬೇಕು. ಜೀವನ ವೆಚ್ಚ ದುಬಾರಿಯಾಗಿರುವ ಕಾರಣ ಮತ್ತು ಮಾನವೀಯ ನೆಲೆಯಲ್ಲಿ ಯೋಚಿಸಿದಾಗ ಇದು ಆಗಲೇಬೇಕು ಅನ್ನಿಸುತ್ತದೆ.

ಅಧ್ಯಾಪಕರನ್ನು ಕಾಲಕಾಲಕ್ಕೆ ನೇಮಕ ಮಾಡುವಲ್ಲಿ ತೋರಿದ ನಿರ್ಲಕ್ಷ್ಯದ ಪರಿಣಾಮವೇ ಈ ಸಮಸ್ಯೆ. ಶಿಕ್ಷಣದ ಫಲಾನುಭವಿಗಳ ಭವಿಷ್ಯವನ್ನು ಗಮನದಲ್ಲಿ ಇರಿಸಿಕೊಳ್ಳಬೇಕು.

– ಡಾ. ಬಿ.ಎಲ್‌. ಭಾಗ್ಯಲಕ್ಷ್ಮಿ, ಕಾಲೇಜು ಶಿಕ್ಷಣ ಇಲಾಖೆಯ ನಿವೃತ್ತ ನಿರ್ದೇಶಕಿ

ಪಕ್ಷಗಳು ಹೇಳುವುದೇನು?

ಆರ್ಥಿಕ ಭದ್ರತೆ ಒದಗಿಸುತ್ತೇವೆ

ಈಗಿರುವ ಮೀಸಲಾತಿ ನಿಯಮಗಳ ಅಡಿಯಲ್ಲಿ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಒದಗಿಸುವುದು ಕಷ್ಟ. ಸರ್ಕಾರ ಏನೇ ಮಾಡಿದರೂ ಅದಕ್ಕೆ ಕೋರ್ಟ್‌ನಲ್ಲಿ ಸಮ್ಮತಿ ಸಿಗುವುದಿಲ್ಲ. ಆದ್ದರಿಂದ ಅತಿಥಿ ಉಪನ್ಯಾಸಕರಿಗೆ ಮಾನವೀಯ ನೆಲೆಯಲ್ಲಿ ಆರ್ಥಿಕ ಭದ್ರತೆ ಒದಗಿಸುವ ಕೆಲಸವನ್ನು ನಮ್ಮ ಸರ್ಕಾರ ಮಾಡಲಿದೆ. ಎಲ್ಲರಿಗೂ ಗೌರವಯುತವಾಗಿ ಬದುಕುವ ಹಕ್ಕು ಇದೆ. ಅದು ನಮ್ಮ ಗಮನದಲ್ಲಿದೆ.

– ಕಿಮ್ಮನೆ ರತ್ನಾಕರ, ಶಾಸಕ, ಕಾಂಗ್ರೆಸ್‌

ಪರಿಹಾರಸೂತ್ರ ರೂಪಿಸುತ್ತೇವೆ

ಅತಿಥಿ ಉಪನ್ಯಾಸಕರ ಸಮಸ್ಯೆ ಬಗೆಹರಿಸಲು ತಾಂತ್ರಿಕ ತೊಂದರೆ ಇದೆ. ಕಾಯಂ ಉಪನ್ಯಾಸಕರ ನೇಮಕ ಸಂದರ್ಭದಲ್ಲಿ ಅತಿಥಿ ಉಪನ್ಯಾಸಕರಿಗೆ ಕೃಪಾಂಕ ನೀಡಬೇಕು. ಬೇರೆ ರಾಜ್ಯಗಳಲ್ಲಿ ಯಾವ ರೀತಿಯ ವ್ಯವಸ್ಥೆ ಇದೆ ಎಂಬುದನ್ನು ಪರಿಶೀಲಿಸಿ ನಮ್ಮಲ್ಲಿನ ಸಮಸ್ಯೆ ಬಗೆಹರಿಸಲು ನಿಯಮ ರೂಪಿಸಬೇಕು. ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಇದಕ್ಕೆ ಪರಿಹಾರಸೂತ್ರ ರೂಪಿಸುತ್ತೇವೆ.

– ಚೌಡರೆಡ್ಡಿ ತೂಪಲ್ಲಿ, ವಿಧಾನ ಪರಿಷತ್‌ ಸದಸ್ಯ, ಜೆಡಿಎಸ್‌

ಕೃಪಾಂಕದ ಮೂಲಕ ನೇಮಕ

ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಹೊಸದಾಗಿ ಹುದ್ದೆಗಳನ್ನು ಸೃಜಿಸಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ಕಾಯಂ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಬೇಕು. ಆಗ ವಿಶೇಷ ನಿಯಮಗಳನ್ನು ರೂಪಿಸಿ, ಅತಿಥಿ ಉಪನ್ಯಾಸಕರಿಗೆ ಕೃಪಾಂಕ ನೀಡುವ ಮೂಲಕ ಅವರು ಆಯ್ಕೆಯಾಗುವಂತೆ ನೋಡಿಕೊಳ್ಳಬೇಕು. ಯಾರಿಗೆ ಅರ್ಹತೆ ಇಲ್ಲವೋ ಅವರಿಗೆ 3–4 ವರ್ಷ ಕಾಲಾವಕಾಶ ನೀಡಿ, ನಂತರ ಕೈಬಿಡಬಹುದು. ನಾವು ಅಧಿಕಾರಕ್ಕೆ ಬಂದರೆ ಈ ಕೆಲಸ ಮಾಡುತ್ತೇವೆ.

ತಾತ್ಕಾಲಿಕ ಕ್ರಮವಾಗಿ ಅತಿಥಿ ಉಪನ್ಯಾಸಕರಿಗೆ ತಿಂಗಳಿಗೆ ₹25 ಸಾವಿರ ಗೌರವಧನ ನೀಡಬೇಕು. ಪ್ರತಿವರ್ಷ ಅತಿಥಿ ಉಪನ್ಯಾಸಕರನ್ನು ಹೊಸದಾಗಿ ನೇಮಕ ಮಾಡಿಕೊಳ್ಳುವ ಬದಲು, ಹಾಲಿ ಇರುವವರನ್ನೇ ಮುಂದುವರಿಸಬೇಕು.

– ಗಣೇಶ್‌ ಕಾರ್ಣಿಕ್‌, ವಿಧಾನ ಪರಿಷತ್‌ ಸದಸ್ಯ, ಬಿಜೆಪಿ

ಪ್ರತಿಕ್ರಿಯಿಸಿ (+)