ಶುಕ್ರವಾರ, ಆಗಸ್ಟ್ 14, 2020
26 °C
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಒತ್ತಾಯಿಸಿ ಸತ್ಯಾಗ್ರಹ

ಮನವೊಲಿಕೆಗೆ ಮಣಿಯದ ತೊಗಾಡಿಯಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮನವೊಲಿಕೆಗೆ ಮಣಿಯದ ತೊಗಾಡಿಯಾ

ಅಹಮದಾಬಾದ್‌: ಕೊನೆಯ ಕ್ಷಣದವರೆಗೆ ತೆರೆಯ ಮರೆಯಲ್ಲಿ ನಡೆದ ಮನವೊಲಿಕೆ ಯತ್ನಗಳಿಗೆ ಮಣಿಯದ ವಿಶ್ವ ಹಿಂದೂ ಪರಿಷತ್‌ (ವಿಎಚ್‌ಪಿ) ಮಾಜಿ ಮುಖಂಡ ಪ್ರವೀಣ್‌ ತೊಗಾಡಿಯಾ ಮೊದಲೇ ಘೋಷಿಸಿದಂತೆ ಮಂಗಳವಾರ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಒತ್ತಾಯಿಸಿ ಇಲ್ಲಿಯ ವಿಎಚ್‌ಪಿ ಕಚೇರಿ ಹೊರಗೆ ಸತ್ಯಾಗ್ರಹ ಕುಳಿತ ಅವರಿಗೆ ಹಲವು ಸಾಧು, ಸಂತರು ಮತ್ತು ಬೆಂಬಲಿಗರು ಸಾಥ್‌ ನೀಡಿದರು.

ಗೋಹತ್ಯೆ ನಿಷೇಧ, ಏಕರೂಪ ನಾಗರಿಕ ಸಂಹಿತೆ ಜಾರಿಗೆ ಕಾನೂನು ರೂಪಿಸುವಂತೆ ಅವರು ಕೇಂದ್ರ ಸರ್ಕಾರವನ್ನು ಆಗ್ರಹಿಸಿದರು.

ಮೋದಿ ವಿರುದ್ಧ ನಿಲ್ಲದ ವಾಗ್ದಾಳಿ:

ಪ್ರಧಾನಿ ನರೇಂದ್ರ ಮೋದಿ ಆಡಳಿತ ಮತ್ತು ಆರ್ಥಿಕ ನೀತಿಗಳನ್ನು ತೊಗಾಡಿಯಾ ಇದೇ ವೇಳೆ ತರಾಟೆಗೆ ತೆಗೆದುಕೊಂಡರು.

‘ಬಹುಮತ ದೊರೆತರೆ ಎಲ್ಲ ಸಮಸ್ಯೆಗಳಿಗೂ ಚಿಟಿಕೆ ಹೊಡೆಯುವಷ್ಟರಲ್ಲಿ ಪರಿಹಾರ ಕಂಡು ಹಿಡಿಯುವುದಾಗಿ ಮೋದಿ ಭರವಸೆ ನೀಡಿದ್ದರು. ನಿರೀಕ್ಷೆಯಂತೆ ಬಹುಮತ ದೊರೆಯಿತು. ಪ್ರಧಾನಿ ಸಮಸ್ಯೆ ಬಗೆಹರಿಸಬಹುದು ಎಂದು ನಾಲ್ಕು ವರ್ಷಗಳಿಂದ ಕಾಯುತ್ತಿದ್ದೇನೆ’ ಎಂದು ಅವರು ಲೇವಡಿ ಮಾಡಿದರು.

ಸತ್ಯಾಗ್ರಹ ವಿಳಂಬ

ಸತ್ಯಾಗ್ರಹ ಕೈಬಿಡುವಂತೆ ತೊಗಾಡಿಯಾ ಮನವೊಲಿಸಲು ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡೆಸಿದ ಹಲವು ಸುತ್ತಿನ ಕಸರತ್ತು ಫಲ ನೀಡಲಿಲ್ಲ. ಬಿಜೆಪಿಯ ನಾಯಕರು ಸೋಮವಾರದಿಂದಲೇ ತೊಗಾಡಿಯಾ ಬಳಿ ಮಾತುಕತೆ ಆರಂಭಿಸಿದ್ದರು.

ಆದರೆ, ಅವರು ಯಾವ ಒತ್ತಡಗಳಿಗೂ ಮಣಿಯದ ಕಾರಣ ಹಲವು ಸುತ್ತಿನ ಸಂಧಾನ ಮಾತುಕತೆಗಳು ವಿಫಲವಾದವು. ಸತ್ಯಾಗ್ರಹ ನಿಗದಿತ ಸಮಯಕ್ಕಿಂತ ತಡವಾಗಿ ಆರಂಭವಾಯಿತು.

ಉಪವಾಸ ಸತ್ಯಾಗ್ರಹ ನಡೆಸಲು ತೊಗಾಡಿಯಾ ಅವರು ಸ್ಥಳೀಯ ಅಧಿಕಾರಿಗಳಿಂದ ಅನುಮತಿ ಪಡೆದಿಲ್ಲ ಎಂಬ ಆರೋಪ ಕೇಳಿ ಬಂದಿದೆ.

**

ನೋಟು ರದ್ದತಿ ಮತ್ತು ಜಿಎಸ್‌ಟಿ ಜಾರಿ ಮೂಲಕ ಪ್ರಧಾನಿ ನರೇಂದ್ರ ಮೋದಿ ಈ ದೇಶದ ವರ್ತಕರ ಕತ್ತು ಮುರಿದರು

– ಪ್ರವೀಣ್‌ ತೊಗಾಡಿಯಾ, ವಿಎಚ್‌ಪಿ ಮಾಜಿ ನಾಯಕ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.