ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿನಯ ಕುಲಕರ್ಣಿ ವಿರುದ್ಧ ಬಂಡಾಯ

Last Updated 18 ಏಪ್ರಿಲ್ 2018, 7:03 IST
ಅಕ್ಷರ ಗಾತ್ರ

ಧಾರವಾಡ: ಟಿಕೆಟ್‌ ಸಿಗದ ಕಾಂಗ್ರೆಸ್ ಆಕಾಂಕ್ಷಿಗಳು ಹಾಗೂ ಅವರ ಬೆಂಬಲಿಗರು ಸಚಿವ ವಿನಯ ಕುಲಕರ್ಣಿ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಹುಬ್ಬಳ್ಳಿ ಧಾರವಾಡ ಪಶ್ಚಿಮ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ದೀಪಕ ಚಿಂಚೋರೆ, ಧಾರವಾಡ ಕ್ಷೇತ್ರದಿಂದ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಲು ತೀರ್ಮಾನಿಸಿದ್ದಾರೆ.

‘ಇಷ್ಟು ದಿನ ಧಾರವಾಡ ಕ್ಷೇತ್ರದಲ್ಲಿ ವಿನಯ ಕುಲಕರ್ಣಿ ವಿರುದ್ಧ ಸ್ವಪಕ್ಷೀಯ ಬಂಡಾಯ ಇರಲಿಲ್ಲ.ಆದರೆ, ಈಗ ಅವರ ವಿರುದ್ಧ ಕಾಂಗ್ರೆಸ್‌ನಲ್ಲೇ ಅಸಮಾಧಾನದ ಹೊಗೆ ಎದ್ದಿದೆ. ನನಗೆ ಟಿಕೆಟ್ ಕೈತಪ್ಪಲೂ ಅವರೇ ನೇರ ಕಾರಣ. ಹೀಗಾಗಿ, ಅವರ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಲು ತೀರ್ಮಾನಿಸಿದ್ದೇನೆ’ ಎಂದು ದೀಪಕ ಚಿಂಚೋರೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘36 ವರ್ಷಗಳಿಂದ ಪಕ್ಷದ ಕಾರ್ಯಕರ್ತನಾಗಿ ದುಡಿದಿದ್ದೇನೆ. ಆದರೆ, ಹಂತ ಹಂತವಾಗಿ ನನ್ನನ್ನು ಕಡೆಗಣಿಸಲಾಗುತ್ತಿದೆ. ಹುಬ್ಬಳ್ಳಿ ಧಾರವಾಡ ಪಶ್ಚಿಮ ಕ್ಷೇತ್ರಕ್ಕೆ ನಾನು ಮತ್ತು ಇಸ್ಮಾಯಿಲ್ ಒಟ್ಟಿಗೆ ಅರ್ಜಿ ಸಲ್ಲಿಸಿದ್ದೆವು. ಯಾರಿಗೆ ಟಿಕೆಟ್ ಸಿಕ್ಕರೂ ಒಗ್ಗಟ್ಟಾಗಿ ಕೆಲಸ
ಮಾಡಲು ತೀರ್ಮಾನಿಸಿದ್ದೆವು. ಅದಕ್ಕೆ ನಾನು ಈಗಲೂ ಬದ್ಧ. ಆದರೆ, ಜಿಲ್ಲೆಯ ಉಸ್ತುವಾರಿ ವಹಿಸಿಕೊಂಡಿರುವ ವಿನಯ ಕುಲಕರ್ಣಿ, ನನ್ನ ಹೆಸರನ್ನು ಪ್ರಸ್ತಾಪ ಮಾಡದೆ ಕೀಳು ಮಟ್ಟದ ರಾಜಕೀಯ ಮಾಡಿದ್ದಾರೆ’ ಎಂದು ಆರೋಪಿಸಿದರು.

‘ವಿನಯ ಕುಲಕರ್ಣಿ ಅವರನ್ನು ಸೋಲಿಸಲು ನನ್ನ ಸ್ಪರ್ಧೆ ಅಲ್ಲ. ಗೆದ್ದು ಜನಸೇವೆ ಮಾಡಬೇಕೆಂದಿದ್ದೇನೆ. ಯಾವುದೇ ಕಾರಣಕ್ಕೂ ಸ್ಪರ್ಧೆಯಿಂದ ಹಿಂದೆ ಸರಿಯುವ ಮಾತಿಲ್ಲ’ ಎಂದು ಸ್ಪಷ್ಟಪಡಿಸಿದರು. ಈ ನಡುವೆ ಜೆಡಿಎಸ್‌ನಿಂದ ಎಸ್‌.ಆರ್‌. ಮೋರೆ ಅವರು ಧಾರವಾಡ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.

ಜೆಡಿಎಸ್‌ ವರಿಷ್ಠ ಎಚ್.ಡಿ. ದೇವೇಗೌಡ ಅವರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಆ ಪಕ್ಷದ ಮೂಲಗಳು ತಿಳಿಸಿವೆ. ‘ಆ ಪಕ್ಷದಲ್ಲಿರುವ ಸ್ನೇಹಿತರು ಆಹ್ವಾನ ನೀಡಿರುವುದು ನಿಜ. ಆದರೆ, ಇದು ನನ್ನೊಬ್ಬನ ನಿರ್ಧಾರವಲ್ಲ. ಬೆಂಬಲಿಗರು ಹಾಗೂ ಕ್ಷೇತ್ರದ ಜನರ ಅಭಿಪ್ರಾಯ ಪಡೆದು ತೀರ್ಮಾನ ತೆಗೆದುಕೊಳ್ಳಲಿದ್ದೇನೆ’ ಎಂದು ಮೋರೆ ‘ಪ್ರಜಾವಾಣಿ’ಗೆ ತಿಳಿಸಿದರು.

ಚಿಂಚೋರೆ ಮನೆಗೆ ದೇಸಾಯಿ ಭೇಟಿ

ದೀಪಕ ಚಿಂಚೋರೆ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ನಿರ್ಧಾರ ಪ್ರಕಟಿಸುತ್ತಿದ್ದಂತೆಯೇ ಧಾರವಾಡ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಮೃತ ದೇಸಾಯಿ, ತವನಪ್ಪ ಅಷ್ಟಗಿ ಅವರೊಂದಿಗೆ ಚಿಂಚೋರೆ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿದರು. ‘ಬಿಜೆಪಿಗೆ ಬರುವಂತೆ ಅಮೃತ ದೇಸಾಯಿ ಆಹ್ವಾನ ನೀಡಿದರು. ಜಾತ್ಯತೀತ ಸಿದ್ಧಾಂತದಲ್ಲಿ ನಂಬಿಕೆ ಇಟ್ಟಿದ್ದೇನೆ. ಹೀಗಾಗಿ, ಅವರ ಆಹ್ವಾನ ತಿರಸ್ಕರಿಸಿದೆ. ಜೆಡಿಎಸ್‌ ಮತ್ತು ಎಂಇಪಿಯಿಂದಲೂ ನನಗೆ ಆಹ್ವಾನವಿದೆ. ಆದರೆ ಯಾವುದೇ ಪಕ್ಷ ಸೇರುವುದಿಲ್ಲ’ ಎಂದು ಚಿಂಚೋರೆ ಸ್ಪಷ್ಟಪಡಿಸಿದರು.

‘ನಾನು ಮತ್ತು ಚಿಂಚೋರೆ ಬಹಳ ಹಳೆಯ ಗೆಳೆಯರು. ಅವರಿಗೆ ಟಿಕೆಟ್ ಸಿಗದಿರುವುದು ನನಗೂ ವೈಯಕ್ತಿಕವಾಗಿ ಬೇಸರವಾಗಿದೆ. ಹೀಗಾಗಿ, ಅವರಿಗೆ ಸಮಾಧಾನ ಹೇಳಲು ಹೋಗಿದ್ದೆವು. ಇದರಲ್ಲಿ ರಾಜಕೀಯವಿಲ್ಲ’ ತವನಪ್ಪ ಅಷ್ಟಗಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT