ಸೋಮವಾರ, ಆಗಸ್ಟ್ 10, 2020
26 °C

ನೋಟು ಎಲ್ಲಿ ಹೋಗುತ್ತಿವೆ: ಖರ್ಗೆ ಪ್ರಶ್ನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನೋಟು ಎಲ್ಲಿ ಹೋಗುತ್ತಿವೆ: ಖರ್ಗೆ ಪ್ರಶ್ನೆ

ಕಲಬುರ್ಗಿ: ‘ದೇಶದಲ್ಲಿ ಅಗತ್ಯಕ್ಕಿಂತ ಹೆಚ್ಚೇ ನಗದು ಇದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳುತ್ತಾರೆ. ಆದರೆ ಆ ಎಲ್ಲ ನೋಟುಗಳು ಎಲ್ಲಿ ಹೋಗುತ್ತಿವೆ’ ಎಂದು ಸಂಸದ ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದರು.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಆಡಳಿತ ಸಂಪೂರ್ಣ ನಿಷ್ಕ್ರಿಯಗೊಂಡಿದೆ. ಬ್ಯಾಂಕ್, ಎಟಿಎಂಗಳಲ್ಲಿ ಹಣವೇ ದೊರೆಯುತ್ತಿಲ್ಲ. ನೋಟು ರದ್ದತಿಯಿಂದ ಜನಸಾಮಾನ್ಯರು ತೀವ್ರ ತೊಂದರೆ ಅನುಭವಿಸುವಂತಾಗಿದೆ’ ಎಂದು ಆರೋಪಿಸಿದರು.

ಜಾದೂ ನಡೆಯಲ್ಲ: ‘ರಾಜ್ಯದಲ್ಲಿ ಅಮಿತ್ ಶಾ ಜಾದೂ ನಡೆಯುವುದಿಲ್ಲ. ಕರ್ನಾಟಕದಲ್ಲಿ ಕಳೆದ ಬಾರಿಗಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಮತ್ತೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದು ನಿಶ್ಚಿತ. ಬಿಜೆಪಿಯವರ ಕಾಂಗ್ರೆಸ್ ಮುಕ್ತ ಭಾರತ ಆಶಯಕ್ಕೆ ಕರ್ನಾಟಕದಿಂದಲೇ ತಡೆವೊಡ್ಡಲು ರಣತಂತ್ರ ರೂಪಿಸಿದ್ದೇವೆ. ಹೀಗಾಗಿ ಮತ್ತೊಮ್ಮೆ ಅಧಿಕಾರದ ಗದ್ದುಗೆ ಏರುತ್ತೇವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ದೇಶದ ಹಿತದೃಷ್ಟಿಯಿಂದ ಮತ್ತು ಸಂವಿಧಾನದ ಆಶಯಗಳನ್ನು ರಕ್ಷಿಸುವ ಉದ್ದೇಶದಿಂದ ರಾಜ್ಯದ ಚುನಾವಣೆ ಇಡೀ ದೇಶದ ಗಮನ ಸೆಳೆದಿದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ಮತ್ತು ಬಾದಾಮಿಯಿಂದ ಸ್ಪರ್ಧಿಸುತ್ತೇನೆ ಎಂದು ಎಲ್ಲಿಯೂ ಹೇಳಿಲ್ಲ. ಎರಡು ಕಡೆ ಸ್ಪರ್ಧಿಸುವುದು ಬೇಡ ಅಂತ ನಾನು ಕೂಡ ಅವರಿಗೆ ಹೇಳಿಲ್ಲ. ಆದರೂ ಈ ಬಗ್ಗೆ ಊಹಾಪೋಹ ಕೇಳಿ ಬಂದಿವೆ. ಟಿಕೆಟ್ ಸಿಗದ ಕಾರಣ ಕೆಲವರಲ್ಲಿ ಅಸಮಾಧಾನ ಉಂಟಾಗಿರುವುದು ನಿಜ. ಎಲ್ಲವನ್ನೂ ಹೈಕಮಾಂಡ್ ಬಗೆಹರಿಸಲಿದೆ’ ಎಂದರು.

ದೊಡ್ಡವರ ಬಗ್ಗೆ ಮಾತನಾಡಲ್ಲ..

ಅಫಜಲಪುರ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಾಲೀಕಯ್ಯ ಗುತ್ತೇದಾರ ಹೇಳಿಕೆ ಬಗ್ಗೆ ಕೇಳಲಾದ ಪ್ರಶ್ನೆಗೆ ಅವರು, 'ದೊಡ್ಡವರ ಬಗ್ಗೆ ನಾನು ಮಾತನಾಡುವುದಿಲ್ಲ. ಬೇಕಿದ್ದರೆ ನರೇಂದ್ರ ಮೋದಿ, ಅಮಿತ್ ಶಾ ಬಗ್ಗೆ ಮಾತನಾಡುತ್ತೇನೆ’ ಎಂದರು.

‘ಅವರು ಬಳಸುತ್ತಿರುವ ಭಾಷೆ, ಅವರ ಸಂಸ್ಕಾರವನ್ನು ಮತದಾರರು ಗಮನಿಸುತ್ತಿದ್ದಾರೆ. ಅವರಲ್ಲಿ ಆತ್ಮವಿಶ್ವಾಸ ಇರಬಹುದು. ಅದಕ್ಕೆ ಹಾಗೆಲ್ಲ ಮಾತನಾಡುತ್ತಿದ್ದಾರೆ. ಅವರ ಬಗ್ಗೆ ನಾನು ಏನನ್ನೂ ಮಾತನಾಡುವುದಿಲ್ಲ' ಎಂದು ಖಾರವಾಗಿ ಪ್ರತಿಕ್ರಿಯಿಸಿದರು.

ಟಿಕೆಟ್ ಪಡೆದ ಅಭ್ಯರ್ಥಿ: ಸೇಡಂ, ಅಫಜಲಪುರ ಮತ್ತು ಕಲಬುರ್ಗಿ ಗ್ರಾಮೀಣ ಮತಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳಾದ ಡಾ. ಶರಣಪ್ರಕಾಶ ಪಾಟೀಲ, ಎಂ.ವೈ.ಪಾಟೀಲ ಮತ್ತು ಆರ್.ವಿಜಯಕುಮಾರ್ ಅವರು ಮಲ್ಲಿಕಾರ್ಜುನ ಖರ್ಗೆ ಅವರಿಂದ ಬಿ ಫಾರ್ಮ್‌ ಪಡೆದುಕೊಂಡರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.