ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಸಿಲಿನ ತಾಪ: ಉದುರಿದ ಮಾವಿನ ಹೀಚು

ಮಾವಿನ ಮಡಿಲು ಶ್ರೀನಿವಾಸಪುರದಲ್ಲಿ ಬೆಳೆಗಾರರ ಸಂಕಷ್ಟ
Last Updated 18 ಏಪ್ರಿಲ್ 2018, 9:33 IST
ಅಕ್ಷರ ಗಾತ್ರ

ಶ್ರೀನಿವಾಸಪುರ: ತಾಲ್ಲೂಕಿನಲ್ಲಿ ಬಿಸಿಲಿನ ತಾಪ ಹೆಚ್ಚದಂತೆ ಮಾವಿನ ಕಾಯಿ ಉದುರುತ್ತಿವೆ. ಇದರಿಂದ ರೈತರಿಗೆ ಹೆಚ್ಚು ನಷ್ಟ ಉಂಟಾಗುತ್ತಿದೆ.

ಈ ಬಾರಿ ಹೂ ಬರುವ ಕಾಲದಲ್ಲಿ ಮಾವಿನ ಮರಗಳು ಚಿಗುರಿದ ಪರಿಣಾಮ ಅತಿ ಕಡಿಮೆ ಫಸಲು ಬಂದಿದೆ. ಚಿಗುರದ ಮರಗಳಲ್ಲಿ ಮಾತ್ರ ಅಷ್ಟಿಷ್ಟು ಕಾಯಿ ಕಾಣಿಸುತ್ತಿದೆ. ಚಿಗುರಿದ ಮರಗಳಲ್ಲಿ ಹೂವು ರೋಗಪೀಡಿತವಾಗಿ ಉದುರಿದ ಪರಿಣಾಮ ಪಿಂದೆ ಹಿಡಿಯಲಿಲ್ಲ.

ಈಗ ಇರುವ ಫಸಲಾದರೂ ಉಳಿದರೆ ಬೆಳೆಗೆ ಹಾಕಿದ ಬಂಡವಾಳವಾದರೂ ಹಿಂದಿರುಗಬಹುದು ಎಂದು ಬೆಳೆಗಾರರು ಯೋಚಿಸು
ತ್ತಿರುವಾಗಲೆ, ಅಧಿಕ ಉಷ್ಣಾಂಶದಿಂದ ಕಾಯಿ ಉದುರುತ್ತಿದೆ. ಮಾವಿನ ಬೆಳೆಯಲ್ಲಿ ಹೀಚು ಉದುರುವುದು ಸಾಮಾನ್ಯ ಎಂದು ತೋಟಗಾರಿಕಾ ತಜ್ಞರು ಹೇಳುತ್ತಾರೆ. ಆದರೆ ದೊಡ್ಡ ಗಾತ್ರದ ಕಾಯಿಗಳೇ ಉದುರಿ ಮಣ್ಣುಪಾಲಾಗುತ್ತಿವೆ. ಸ್ಥಿತಿ ಹೀಗೆಯೇ ಮುಂದುವರಿದರೆ ಮರದಲ್ಲಿ ಉಳಿಯುವುದೇನು ಎಂಬುದು ಬೆಳೆಗಾರರ ಪ್ರಶ್ನೆ.

ತೋಟಗಳಲ್ಲಿ ಉದುರಿದ ಕಾಯಿಯನ್ನು ಆದು ಗುಣಿಯಲ್ಲಿ ಹಾಕಿ ಮಣ್ಣು ಮುಚ್ಚಬೇಕು. ಇಲ್ಲವಾದರೆ ಹೂಜಿ ನೊಣದ ಹಾವಳಿ ಹೆಚ್ಚುತ್ತದೆ. ಹೂಜಿ ನೊಣಗಳು ಇರುವ ಪಿಂದೆಯನ್ನು ಚುಚ್ಚಿ ಮೊಟ್ಟೆ ಇಡುತ್ತವೆ. ಮೊಟ್ಟೆಯೊಡೆದು ಬರುವ ಹುಳುಗಳು ಮಾವಿನ ಕಾಯಿ ಕೊಳೆಯುವಂತೆ ಮಾಡುತ್ತವೆ ಎಂದು ತಾಲ್ಲೂಕು ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಶ್ರೀನಿವಾಸನ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಇರುವ ಫಸಲನ್ನು ಉಳಿಸಿಕೊಳ್ಳಲು ಹೂಜಿ ನೊಣ ನಿಯಂತ್ರಣ ಅತ್ಯಗತ್ಯ. ರೈತರು ಮೋಹಕ ಬಲೆ ಬಳಸಿ ಈ ನೊಣಗಳನ್ನು ನಿಯಂತ್ರಿಸಬಹುದಾಗಿದೆ. ಈ ವಿಧಾನವನ್ನು ಮಾವು ಬೆಳೆಗಾರರಿಗೆ ಈಗಾಗಲೇ ಪರಿಚಯಿಸಲಾಗಿದೆ ಎಂದು ಹೇಳಿದರು.

ಮಾವಿನ ಇಂದಿನ ಪರಿಸ್ಥಿತಿಯನ್ನು ಗಮನಿಸಿದರೆ, ಫಸಲಿನ ಪ್ರಮಾಣ ಕುಸಿಯವ ಸಂಭವ ಹೆಚ್ಚಾಗಿದೆ. ಈಗಾಗಲೆ ಇತ್ತೀಚೆಗೆ ತಾಲ್ಲೂಕಿನ ಕೆಲವು ಕಡೆಗಳಲ್ಲಿ ಮಳೆಯೊಂದಿಗೆ ಬಿದ್ದ ಆಲಿಕಲ್ಲಿನ ಹೊಡೆತಕ್ಕೆ ಸಿಕ್ಕಿ ಬಹಳಷ್ಟು ಫಸಲು ಹಾಳಾಗಿದೆ. ಈಗ ಫಸಲು ಉದುರುತ್ತಿದೆ. ಇನ್ನೂ ಹಲವು ಗಂಡಾಂತರ ಕಳೆದು ಉಳಿದ ಫಸಲು ಮಾತ್ರ ಲೆಕ್ಕಕ್ಕೆ ಬರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT