ಗುರುವಾರ , ಜುಲೈ 16, 2020
22 °C

ಯಾರು ಚಾಲನೆ ಮಾಡಿದರೆ ನಿಮ್ಮ ಪ್ರವಾಸ ಸುರಕ್ಷಿತ?

ಜಯಸಿಂಹ ಆರ್. Updated:

ಅಕ್ಷರ ಗಾತ್ರ : | |

ಯಾರು ಚಾಲನೆ ಮಾಡಿದರೆ ನಿಮ್ಮ ಪ್ರವಾಸ ಸುರಕ್ಷಿತ?

ಕಾರು ಚಾಲನೆ ಈಗ ನಗರವಾಸಿಗಳಲ್ಲಿ ಹಲವರಿಗೆ ದೈನಂದಿನ ಅನಿವಾರ್ಯಗಳಲ್ಲಿ ಒಂದಾಗಿದೆ. ಕಚೇರಿಗೆ ಅಥವಾ ವ್ಯಾವಹಾರಿಕ ಓಡಾಟಕ್ಕೆ ಅಥವಾ ಮಕ್ಕಳನ್ನು ಶಾಲೆಗೆ ಬಿಡಲು ಅಥವಾ ಕಾಲೇಜಿಗೆ ಹೋಗಲು ಹೀಗೆ... ಕಾರುಗಳನ್ನು ಭಿನ್ನ ಅಗತ್ಯಗಳಿಗೆ ಬಳಸುವವರ ಸಂಖ್ಯೆ ಭಾರತದ ನಗರ ಪ್ರದೇಶಗಳಲ್ಲಿ ದೊಡ್ಡದಿದೆ. ಇನ್ನು ವಾರಾಂತ್ಯದಲ್ಲಿ ದೂರದ ಪ್ರಯಾಣಕ್ಕೆ ಬಳಸುವವರ ಸಂಖ್ಯೆಯೂ ದೊಡ್ಡದಿದೆ. ಈ ಎಲ್ಲಾ ಸಂದರ್ಭಗಳಲ್ಲಿ ಒಬ್ಬಂಟಿಯಾಗಿ ಚಾಲನೆ ಮಾಡಿಕೊಂಡು ಹೋಗುವವರೂ ಇದ್ದಾರೆ, ತಮ್ಮ ಸಂಗಾತಿಗಳನ್ನು ಕಚೇರಿಗೆ ಬಿಟ್ಟು ಪಯಣ ಮುಂದುವರೆಸುವವರೂ ಇದ್ದಾರೆ. ಎಷ್ಟೋ ಬಾರಿ ಮಕ್ಕಳು ತಮ್ಮ ಪೋಷಕರನ್ನು ಅವರವರ ಕಚೇರಿಗಳಿಗೆ ಬಿಟ್ಟು, ತೆರಳುವುದೂ ಇಂದಿನ ಸಾಮಾನ್ಯಗಳಲ್ಲಿ ಒಂದು. ಆದರೆ ಹೀಗೆ ತಮ್ಮ ಸಂಗಾತಿ ಅಥವಾ ಪೋಷಕರು ಅಥವಾ ಮಕ್ಕಳು ಚಾಲನೆ ಮಾಡುವಾಗ ಅವರ ಚಾಲನೆ ಮೇಲೆ ಎಷ್ಟು ವಿಶ್ವಾಸ ಇರಬಹುದು?

ನೀವು ನಿಮ್ಮ ಸಂಗಾತಿ ಅಥವಾ ಪೋಷಕರು ಅಥವಾ ಮಕ್ಕಳ ಚಾಲನೆಯನ್ನು ಎಷ್ಟರಮಟ್ಟಿಗೆ ನಂಬುತ್ತೀರಿ ಎಂಬ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಕಾರು ತಯಾರಿಕಾ ಕಂಪನಿ ನಿಸಾನ್ ಭಾರತದ 20 ರಾಜ್ಯಗಳಲ್ಲಿ ಸಮೀಕ್ಷೆ ನಡೆಸಿದೆ. ಸಮೀಕ್ಷೆಯ ಫಲಿತಾಂಶ ನಿಜಕ್ಕೂ ಕುತೂಹಲಕಾರಿಯಾಗಿದೆ.

ಪುರುಷರು ಸ್ವತಃ ತಮ್ಮ ಚಾಲನೆಯಲ್ಲಿ ಮಾತ್ರ ಅತ್ಯಧಿಕ ವಿಶ್ವಾಸ ಹೊಂದಿದ್ದಾರೆ. ಮಕ್ಕಳ ಚಾಲನೆ ಬಗ್ಗೆ ನಂಬಿಕೆ ಹೊಂದಿರುವ ಪೋಷಕರ ಸಂಖ್ಯೆ ತೀರಾ ಕಮ್ಮಿ. ಈ ಮಾಹಿತಿಗಳ ಜತೆಗೆ ತಮ್ಮ ಚಾಲನಾ ಹವ್ಯಾಸಗಳ ಬಗ್ಗೆಯೂ ಸಮೀಕ್ಷೆಯಲ್ಲಿ ಭಾಗವಹಿಸಿದ್ದವರು ಮಾಹಿತಿ ಹಂಚಿಕೊಂಡಿದ್ದಾರೆ.

ಕಾರನ್ನು ಮನೆಯಿಂದ ಹೊರಗೆ ತೆಗೆದುಕೊಂಡು ಹೋಗುವಾಗ ಸರಿಸುಮಾರು ಅರ್ಧದಷ್ಟು ಮಂದಿ ಮಾತ್ರ ಮನೆಯಲ್ಲಿರುವವರಿಗೆ ಆ ಬಗ್ಗೆ ಮಾಹಿತಿ ನೀಡುತ್ತಾರೆ. ಹೀಗೆ ಮಾಹಿತಿ ನೀಡುವವರಲ್ಲಿ ಪುರುಷರಿಗಿಂತ ಮಹಿಳೆಯರ ಪ್ರಮಾಣ ತುಸು ಹೆಚ್ಚು.

ಪೋಷಕರಿಗೆ ತಿಳಿಸಿ, ಕಾರು ತೆಗೆದುಕೊಂಡು ಹೋಗುವ ಮಕ್ಕಳ ಪ್ರಮಾಣ ಶೇ 40ರಷ್ಟು ಮಾತ್ರ. ಈ ಬಗ್ಗೆ ತಮ್ಮ ತಾಯಿಗೆ ಮಾತ್ರ ಮಾಹಿತಿ ನೀಡಲು ಹೆಚ್ಚು ಮಕ್ಕಳು ಇಷ್ಟಪಡುತ್ತಾರೆ. ಹೀಗೆ ಮಾಹಿತಿ ನೀಡಿ ಹೋದರೂ, ತಿಳಿಸಿದ ಸಮಯಕ್ಕೆ ಮಕ್ಕಳು ಮನೆಗೆ ಬರುವುದಿಲ್ಲ ಎಂಬುದನ್ನು ಬಹುತೇಕ ತಾಯಂದಿರು ಒಪ್ಪುತ್ತಾರೆ. ಮಕ್ಕಳು ಸುಳ್ಳು ಹೇಳಿ ಕಾರು ತೆಗೆದುಕೊಂಡು ಹೋಗುತ್ತಾರೆ ಎಂದು ಬಹುತೇಕ ಪೋಷಕರು ನಂಬಿದ್ದಾರೆ.

ಇವು ಈ ಸಮೀಕ್ಷೆಯ ಕೆಲವು ಅಂಶಗಳು ಅಷ್ಟೆ. ಈ ಮೇಲೆ ಪ್ರಸ್ತಾಪಿಸಲಾದ ಎಲ್ಲಾ ಪ್ರಶ್ನೆಗಳನ್ನು ನಿಮಗೆ ನೀವೇ ಕೇಳಿಕೊಳ್ಳಬಹುದು, ನಿಮ್ಮ ಕುಟುಂಬದವರಿಗೂ ಕೇಳಬಹುದು. ಆಗ ಬರುವ ಉತ್ತರಗಳೂ ಇಷ್ಟೇ ಕುತೂಲಕಾರಿಯಾಗಿರಬಹುದು.

**

ಕಳವಳದ ಸಂಗತಿ

ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ ಪ್ರತಿ ಐವರಲ್ಲಿ ಮೂವರು ತಾವು ಚಾಲನೆ ವೇಳೆ ಮೊಬೈಲ್ ಬಳಸುತ್ತೇವೆ ಎಂದು ಒಪ್ಪಿಕೊಂಡಿದ್ದಾರೆ. ಹೀಗೆ ಒಪ್ಪಿಕೊಂಡ ಪ್ರತಿ ನಾಲ್ವರಲ್ಲಿ ಒಬ್ಬರು ಮಾತ್ರ, ‘ಚಾಲನೆ ವೇಳೆ ಮೊಬೈಲ್ ಬಳಸುವಾಗ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದೇವೆ’ ಎಂದು ಒಪ್ಪಿಕೊಂಡಿದ್ದಾರೆ.

ಕರ್ನಾಟಕದಲ್ಲಿ ಹೀಗೆ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದೇವೆ ಎಂದು ಹೇಳಿಕೊಂಡವರ ಪ್ರಮಾಣ ಶೇ 25.1 ಮಾತ್ರ. ಶೇ 60ರಷ್ಟು ಜನರು ತಾವು ಮಿತಿಗಿಂತ ಹೆಚ್ಚು ವೇಗವಾಗಿ ಕಾರು ಚಾಲನೆ ಮಾಡುತ್ತೇವೆ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಕರ್ನಾಟಕದಲ್ಲಿ ಹೀಗೆ ಒಪ್ಪಿಕೊಂಡವರ ಪ್ರಮಾಣ ಸರಿಸುಮಾರು ಶೇ 45ರಷ್ಟು.  ಸಂಚಾರ ನಿಯಮ ಉಲ್ಲಂಘಿಸುವವರಲ್ಲಿ ಬಹುತೇಕರು ಸಂಚಾರ ಪೊಲೀಸರ ಗಮನಕ್ಕೆ ಬರುವುದೇ ಇಲ್ಲ ಎಂಬುದನ್ನು ಇದು ಸೂಚಿಸುತ್ತದೆ. ಇದು ಅತ್ಯಂತ ಕಳವಳಕಾರಿ ಸಂಗತಿ.ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.