ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನರ ದಣಿವು ನೀಗಿಸುವ ಬದುಕು

Last Updated 18 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ನನ್ನ ಹೆಸರು ಮುನಿಯಮ್ಮ. ಸುಜಾತ ಬಸ್‌ ನಿಲ್ದಾಣದಿಂದ ನೂರು ಮೀಟರ್‌ ದೂರದಲ್ಲಿ ರಸ್ತೆ ಬದಿಯಲ್ಲಿ ಮಜ್ಜಿಗೆ ಅಂಬಲಿ ಮಾರುತ್ತಾ ಬದುಕು ನಡೆಸ್ತಾ ಇದೀನಿ. ವಯಸ್ಸು ಸುಮಾರು 57 ವರ್ಷ ಅಂದ್ಕೊಳಿ.

ಬಿಸಿಲು ಜಾಸ್ತಿ ಅಲ್ವಾ, ಅದ್ಕೆ ದೇಹಕ್ಕೆ ತಂಪಾಗ್ಲಿ ಅಂತ ಹದಾ ಮಾಡಿರೋ ಮಜ್ಜಿಗೆ ಜೊತೆಗೆ ನಂಚಿಕೆಗೆ ಮಜ್ಜಿಗೆ ಮೆಣಸಿನಕಾಯಿ, ರಾಗಿ ಅಂಬಲಿ, ರುಚಿಗೆ ಖಾರದ ಚಟ್ನಿ ಮಾರ್ತೀನಿ. 15 ರೂಪಾಯಿಗೆ ಚಿಕ್ಕ ಚಂಬು, 10 ರೂಪಾಯಿ ಒಂದು ಲೋಟದಲ್ಲಿ ಮಜ್ಜಿಗೆ, ಅಂಬಲಿ ಕೊಡ್ತೀನಿ.

ನಾನು ಈ ಕೆಲಸ ಶುರು ಮಾಡಿ ಸುಮಾರು ನಾಲ್ಕು ವರ್ಷ ಆಗಿರಬಹುದು. ಬೇಸಿಗೆ ಕಾಲದ ಮೂರು ತಿಂಗಳಲ್ಲಿ ಮಾತ್ರ ಕೆಲಸ ಇರುತ್ತೆ. ಪ್ರತಿದಿನ ಬೆಳಿಗ್ಗೆ ಅಂಗಡಿಯಿಂದ ಮೂರು ಲೀಟರ್‌ ಮೊಸರು ತಂದು ಅದ್ಕೆ ಈರುಳ್ಳಿ ಹಾಕಿ ಹದ ಮಾಡ್ತೀನಿ. ಮನೆಯಲ್ಲಿಯೇ ಅಂಬಲಿ ತಯಾರು ಮಾಡಿ, ತಳ್ಳೋಗಾಡೀಲಿ ಇಡ್ತೀನಿ.

ನಾನು ವ್ಯಾಪಾರ ಮಾಡೋ ಜಾಗದವರೆಗೆ ನನ್ನ ಮಗನೇ ಗಾಡಿ ತಳ್ಕೊಂಡು ಬಂದು ಬಿಡ್ತಾನೆ. ಪ್ರತಿದಿನ ಬೆಳಿಗ್ಗೆ 11 ರಿಂದ ಸಂಜೆ 5ಗಂಟೆವರೆಗೂ ವ್ಯಾಪಾರ ಮಾಡ್ತೀನಿ. ಈ ರಸ್ತೆಲೀ ಓಡಾಡೊ ಜನರು ತಂಪು ಮಜ್ಜಿಗೆ ಕುಡಿಯೋಕೆ ಅಂತ ಗಾಡಿ ನಿಲ್ಸಿ ಬರ್ತಾರೆ. ಪ್ರತಿದಿನ ವ್ಯಾಪಾರ ಒಂದೇ ರೀತಿ ಇರೋದಿಲ್ಲ.

ಒಂದು ದಿನ 300 ರೂಪಾಯಿ ಆದ್ರೆ ಮತ್ತೊಂದು ದಿನ 200 ರೂಪಾಯಿ ಆಗುತ್ತೆ. ಖರ್ಚೆಲ್ಲ ಕಳೆದರೆ ಕೂಲಿ ಮೂರು ಕಾಸು ಉಳಿಯುತ್ತೆ. ಏನ್‌ ಮಾಡೋಕಾಗತ್ತೆ ಜೀವನದಲ್ಲಿ ಪಡ್ಕಂಡು ಬಂದಿದ್ದು ಇಷ್ಟೇ ಅಂತ ಸುಮ್ಮನಾಗಬೇಕಷ್ಟೆ.

ಮನೇಲಿ ನಾನು ನನ್ನ ಮಗ, ಸೊಸೆ ಮತ್ತು ಮೊಮ್ಮಗ ಇದೀವಿ. ನನ್ನ ಮದುವೆ ಮಾಡಿ ಗಂಡನ ಮನೆ ತಮಿಳುನಾಡಿಗೆ ಕಳ್ಸಿದ್ರು. ನನ್ನ ಗಂಡ ಕುಡುಕ. ಇದ್ದ ಬದ್ದ ಚೂರು ಪಾರು ಆಸ್ತಿನೆಲ್ಲಾ ಹಾಳ್ಮಾಡಿ, ಕುಡಿದು ಕುಡಿದೇ ಸತ್ತೋದ.

ನಾನೂ ಓದಿಲ್ಲ. ನನ್ನ ಮಗನೂ ಓದಿಲ್ಲ. ಕಷ್ಟದಲ್ಲಿದ್ದ ನಮ್ಮ ಸಂಸಾರ ನೋಡಿ ಅವನು ಚಿಕ್ಕೋನಿರುವಾಗಿಂದಾನೇ ಕೆಲಸ ಮಾಡೋಕೆ ಶುರು ಮಾಡಿದ.

ಇಲ್ಲೇ ಮನೆ ಹತ್ರ ಚಿಕ್ಕ ಕಾರ್ಖಾನೆಲೀ ಕೆಲಸ ಮಾಡ್ತೀದಾನೆ. ನಾನು ಇದಕ್ಕೂ ಮೊದಲು ಕೂಲಿ ಕೆಲಸ, ಆಫೀಸ್‌ನಲ್ಲಿ ಕಸ ಗುಡಿಸಿ ಒರೆಸುವ ಕೆಲಸ ಮಾಡುತ್ತಿದ್ದೆ. ಅಲ್ಲೆಲ್ಲಾ ತಿಂಗಳಿಗೆ 600 ರೂಪಾಯಿ ಸಂಬಳ ಸಿಗೋದು. ನಂಗೆ ಉಸಿರಾಟದ ತೊಂದರೆನೂ ಇದೆ. ಅದ್ಕೆ ಅಲ್ಲಿ ಕೆಲಸ ಬಿಟ್ಟು ಮನಸಿಗೆ ಆರಾಮನ್ನಿಸುವ ಕೆಲಸ ಮಾಡ್ತಿದೀನಿ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT