ಮಂಗಳವಾರ, ಜೂಲೈ 7, 2020
24 °C

ಸರ್ಕಾರಿ ಶಾಲೆಗಳಿಗೆ ‘ಜೀವಧಾರೆ’

ಶಶಿಕುಮಾರ್‌ ಸಿ. Updated:

ಅಕ್ಷರ ಗಾತ್ರ : | |

ಸರ್ಕಾರಿ ಶಾಲೆಗಳಿಗೆ ‘ಜೀವಧಾರೆ’

ಮಂತ್ರಾ ಸ್ವಯಂಸೇವಾ ಸಂಸ್ಥೆ ಹಾಗೂ ಆನೇಕಲ್‌ನ ದೊಮ್ಮಸಂದ್ರ ಸಮೂಹ ಸಂಪನ್ಮೂಲ ಕೇಂದ್ರದ ಜತೆಗೂಡಿ ಜೀವಧಾರೆ ಸಮಿತಿಯು ಈ ಭಾಗದ ಸರ್ಕಾರಿ ಶಾಲೆಗಳಿಗೆ ಜೀವ ಕಳೆ ತುಂಬುತ್ತಿದೆ. ಅದರ ಮುಂದುವರೆದ ಭಾಗವಾಗಿ ಸದ್ಯ ‘ಸರ್ಕಾರಿ ಶಾಲೆಗಳಿಗೆ ಮಕ್ಕಳ ದಾಖಲಾತಿ ಆಂದೋಲನ’ವನ್ನು ಸದ್ದಿಲ್ಲದೆ ಆರಂಭಿಸಿದೆ.

ವಿದ್ಯಾರ್ಥಿಗಳು, ಸರ್ಕಾರಿ ಶಾಲೆಗಳ ಶಿಕ್ಷಕರು, ಮಂತ್ರಾ ಸ್ವಯಂಸೇವಕರ ಜತೆಗೂಡಿ ದೊಮ್ಮಸಂದ್ರ ಕ್ಲಸ್ಟರ್‌ನ 14 ಸರ್ಕಾರಿ ಶಾಲೆಗಳ ವ್ಯಾಪ್ತಿಯಲ್ಲಿ ಮನೆಮನೆಗೂ ಹೋಗಿ ಕರಪತ್ರ ಹಂಚುವ ಮೂಲಕ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೇ ಸೇರಿಸುವಂತೆ ಪೋಷಕರ ಮನವೊಲಿಸುತ್ತಿದ್ದಾರೆ.

ಗ್ರಾಮಗಳ ಬೀದಿ–ಬೀದಿಗಳಲ್ಲಿ ಜಾಥಾ ನಡೆಸುತ್ತಿರುವ ವಿದ್ಯಾರ್ಥಿಗಳು ‘ಪ್ರತಿಯೊಂದಕ್ಕೂ ಸರ್ಕಾರಿ ನೌಕರಿ ಬೇಕು ಎಂದು ಹೇಳುತ್ತೀರಿ, ನಿಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳುಹಿಸಲು ಏಕೆ ಹಿಂದೇಟು ಹಾಕುತ್ತೀರಿ’ ಎಂದು ವಿದ್ಯಾರ್ಥಿಗಳು ಪೋಷಕರನ್ನು ಮುದ್ದಾಗಿ ಪ್ರಶ್ನಿಸಿ, ‘ಮಕ್ಕಳಿಗೆ ಆಸ್ತಿ ಮಾಡಬೇಡಿ ಅವರನ್ನೇ ಆಸ್ತಿ ಮಾಡಿ’ ಎಂದು ಸಲಹೆ ನೀಡುತ್ತಿದ್ದಾರೆ.

‘ನಿಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಿ, ಸರ್ಕಾರಿ ಶಾಲೆಗಳನ್ನು ಉಳಿಸಿ’ ಹಾಗೂ ‘ಎಲ್ಲರೂ ಕಲಿಯೋಣ ಎಲ್ಲರೂ ಬೆಳೆಯೋಣ’ ಎಂದು ವಿದ್ಯಾರ್ಥಿಗಳು ಘೋಷಣೆ ಕೂಗುವ ದೃಶ್ಯ ಒಂದೆಡೆ ಕಂಡರೆ, ಮತ್ತೊಂದೆಡೆ ಸ್ವಯಂಸೇವಕರು ಹಾಗೂ ಶಿಕ್ಷಕರು ಸರ್ಕಾರಿ ಶಾಲೆಗಳಲ್ಲಿನ ಸೌಲಭ್ಯಗಳ ಬಗ್ಗೆ ಪೋಷಕರಿಗೆ ತಿಳಿಸುತ್ತಿದ್ದದ್ದು ಕಂಡು ಬಂತು.

ಬರೀ ಮನೆಗಳ ಬಳಿಗೆ ಹೋಗುವುದಲ್ಲದೆ ಬೃಹತ್ ಕಟ್ಟಡ ನಿರ್ಮಾಣ ಪ್ರದೇಶ ಹಾಗೂ ಇಟ್ಟಿಗೆ ಕಾರ್ಖಾನೆಗಳಿಗೆ ಹೋಗಿ ಅಲ್ಲಿನ ವಲಸಿಗರರಲ್ಲೂ ಜಾಗೃತಿ ಮೂಡಿಸಲಾಗುತ್ತಿದೆ. ಬೇರೆ ಬೇರೆ ಕಾರಣಗಳಿಂದ ಶಾಲೆ ತೊರೆದಂತಹ ಅನೇಕ ವಿದ್ಯಾರ್ಥಿಗಳನ್ನು ಗುರುತಿಸಿ, ಅವರನ್ನು ಮರಳಿ ಶಾಲೆಗೆ ಕರೆತರುವ ಯತ್ನವನ್ನೂ ಈ ಸಮಿತಿ ಮಾಡುತ್ತಿದೆ.

ಪೈಪೋಟಿಗೆ ಬಿದ್ದಂತೆ ತಾ ಮುಂದು ನಾ ಮುಂದು ಎಂದು ಖಾಸಗಿ ಶಾಲೆಗಳು ತಮ್ಮ ಬಗ್ಗೆ ಪ್ರಚಾರ ಕೊಟ್ಟುಕೊಳ್ಳುತ್ತವೆ. ಹೀಗಾಗಿ, ಪೋಷಕರು ಸಹ ತಮ್ಮ ಮಕ್ಕಳನ್ನು ಅವುಗಳಿಗೆ ಸೇರಿಸಲು ಮುಗಿಬೀಳುತ್ತಿದ್ದಾರೆ. ಆದರೆ, ಸರ್ಕಾರಿ ಶಾಲೆಗಳಿಗೆ ಪ್ರಚಾರ ಸಿಗದೆ ವಿದ್ಯಾರ್ಥಿಗಳ ದಾಖಲಾತಿ ಪ್ರಮಾಣ ಕುಗ್ಗುತ್ತಿದ್ದೆ.

ಇದನ್ನು ಮನಗಂಡ ಜೀವಧಾರೆ ಸಮಿತಿಯು ಈ ಆಂದೋಲನಕ್ಕೆ ಮುನ್ನುಡಿ ಬರೆದಿದೆ ಎನ್ನುತ್ತಾರೆ ಮಂತ್ರಾದ ಕ್ಷೇತ್ರ ವ್ಯವಸ್ಥಾಪಕ ವೆಂಕಟೇಶ್.

ಕ್ಲಸ್ಟರ್‌ನ ವ್ಯಾಪ್ತಿಯಲ್ಲಿ ಹಿರಿಯ ಪ್ರಾಥಮಿಕ ಶಾಲೆಗಳಾದ ದೊಮ್ಮಸಂದ್ರ ಬಾಲಕರ, ದೊಮ್ಮಸಂದ್ರ ಬಾಲಕಿಯರ, ದೊಮ್ಮಸಂದ್ರ ಉರ್ದು, ದೊಮ್ಮಸಂದ್ರ ಜನತಾ ಕಾಲೊನಿ, ತಿಗಳ ಚೌಡದೇನಹಳ್ಳಿ ಶಾಲೆಗಳು ಹಾಗೂ ಸೋಂಪುರ, ಚಂಬೇನಹಳ್ಳಿ, ಕಾಡ ಅಗ್ರಹಾರ, ಬಿ.ಹೊಸಹಳ್ಳಿ, ಬಿಕ್ಕನಹಳ್ಳಿ, ಚಿಕ್ಕ ತಿಮ್ಮನಸಂದ್ರ, ಸೊಳ್ಳೆಪುರ, ಕೊಮ್ಮಸಂದ್ರ ಕಿರಿಯ ಪ್ರಾಥಮಿಕ ಶಾಲೆಗಳಿವೆ. ಈ ಶಾಲೆಗಳಲ್ಲಿ 49 ಶಿಕ್ಷಕರು ಹಾಗೂ 846 ವಿದ್ಯಾರ್ಥಿಗಳು ಇದ್ದಾರೆ.

ಈ ಎಲ್ಲ ಶಾಲೆಗಳ ಸುಸ್ಥಿರ ಅಭಿವೃದ್ಧಿಗೆ ಮಂತ್ರಾವು ಮುಂದೆ ಬಂದಿದೆ. 14 ಶಾಲೆಗಳ ಸಮಾನ ಮನಸ್ಕ ಶಿಕ್ಷಕರು, ಶಾಲಾ ಅಭಿವೃದ್ಧಿ ಮತ್ತು ನಿರ್ವಹಣೆ ಸಮಿತಿಯ ಸದಸ್ಯರ ನೇತೃತ್ವದಲ್ಲಿ ಜೀವಧಾರೆ ಸಮಿತಿ ರಚಿಸಲಾಗಿದ್ದು, ತಿಂಗಳ ಕೊನೆಯ ಶನಿವಾರದಂದು ಸಮಿತಿಯ ಸಭೆ ನಡೆಯುತ್ತದೆ. ತಿಂಗಳಿನಲ್ಲಿ ನಡೆದಂತಹ ಆಗು–ಹೋಗುಗಳ ಬಗ್ಗೆ ಅಲ್ಲಿ ಚರ್ಚಿಸಿ, ಮುಂದಿನ ತಿಂಗಳಲ್ಲಿ ಕೈಗೊಳ್ಳಬೇಕಾದ ಕಾರ್ಯಕ್ರಮಗಳ ಬಗ್ಗೆಯೂ ಕ್ರಿಯಾ ಯೋಜನೆಯನ್ನು ಸಭೆಯಲ್ಲಿ ರೂಪಿಸಲಾಗುತ್ತದೆ.

ಶಾಲೆಗಳ ಸರ್ವತೋಮುಖ ಅಭಿವೃದ್ಧಿಗೆ ಬೇಕಾದ ಮಾರ್ಗದರ್ಶನ ಹಾಗೂ ಪ್ರೋತ್ಸಾಹ ನೀಡುತ್ತಿರುವ ಮಂತ್ರಾವು ಕಾರ್ಪೊರೇಟ್ ಕಂಪನಿಗಳ ಸಾಮಾಜಿಕ ಹೊಣೆಗಾರಿಕೆ ಯೋಜನೆಯಡಿ ಹಾಗೂ ಸ್ಥಳೀಯ ದಾನಿಗಳಿಂದ ಈ ಶಾಲೆಗಳಿಗೆ ಬೇಕಾದ ಅಗತ್ಯ ನೆರವನ್ನು ಒದಗಿಸುತ್ತಿದೆ.

ಮೂರು ವರ್ಷಗಳ ವರೆಗೆ ಪ್ರೋತ್ಸಾಹ:

‘ದೊಮ್ಮಸಂದ್ರ ಕ್ಲಸ್ಟರ್‌ನ ಶಾಲೆಗಳು ಕೆಲ ಸಮಸ್ಯೆಗಳನ್ನು ಎದುರಿಸುತ್ತಿದ್ದವು. ಹೀಗಾಗಿ, ಈ ಕ್ಲಸ್ಟರ್ ಆಯ್ದುಕೊಂಡು ಅವುಗಳ ಸುಸ್ಥಿರ ಅಭಿವೃದ್ಧಿಗೆ ಆದ್ಯತೆ ನೀಡಿದೆವು. ಮುಂದಿನ ಮೂರು ವರ್ಷಗಳಲ್ಲಿ ಈ ಶಾಲೆಗಳ ದಾಖಲಾತಿ ಪ್ರಮಾಣವನ್ನು ಶೇ 50 ರಷ್ಟು ಹೆಚ್ಚಿಸುವ ಉದ್ದೇಶ ಹೊಂದಿದ್ದೇವೆ’ ಎಂದರು ಮಂತ್ರಾದ ಪ್ರತಿನಿಧಿ ಭಾರ್ಗವಿ.

ಹೊರಗಿನ ಸಂಪನ್ಮೂಲ ವ್ಯಕ್ತಿಗಳನ್ನು ಕರೆಸಿ ಶಿಕ್ಷಕರಿಗೆ ಕೆಲ ನಿರ್ದಿಷ್ಟ ವಿಷಯಗಳ ಬಗ್ಗೆ ತರಬೇತಿ ಕೊಡಿಸಲಾಗುತ್ತಿದೆ. ಸಮೂಹ ಸಂಪನ್ಮೂಲ ಕೇಂದ್ರದ ಅಧಿಕಾರಿ ಭಾರತಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಯಾದ ಕೆ.ಸಿ.ರಮೇಶ್ ಜೀವಧಾರೆಗೆ ಸಹಕಾರ ನೀಡಿದ್ದಾರೆ ಎಂದರು ಮಂತ್ರಾದ ಕ್ಷೇತ್ರ ವ್ಯವಸ್ಥಾಪಕಿ ಶಾಲಿನಿ.

ಸರ್ಕಾರಿ ಶಾಲೆಗೆ ದಾಖಲಾಗುವಂತೆ ಕೋರಿ ಬಾಲಕನಿಗೆ ಕರಪತ್ರ ನೀಡಿದ ವಿದ್ಯಾರ್ಥಿ

**

ಖಾಸಗಿ ಶಾಲೆ ತೊರೆದರು

ಜೀವಧಾರೆ ಸಕ್ರಿಯಗೊಂಡ ಬಳಿಕ ದೊಮ್ಮಸಂದ್ರ ಕ್ಲಸ್ಟರ್‌ನ ಶಾಲೆಗಳಿಗೆ ಜೀವಕಳೆ ಬಂದಿದೆ. ಶಿಕ್ಷಣ, ಮೂಲಸೌಕರ್ಯ ಕಂಡ ಕೆಲ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಬದಲಾಗಿ ನಮ್ಮ ಶಾಲೆಗಳಿಗೆ ಸೇರಿಸಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು ತಿಗಳ ಚೌಡದೇನಹಳ್ಳಿ ಶಾಲೆಯ ಮುಖ್ಯೋಪಾಧ್ಯಾಯ ಎನ್.ಲಕ್ಷ್ಮೀಪತಿ.

ಖಾಸಗಿ ಶಾಲೆ ತೊರೆದು ಸರ್ಕಾರಿ ಶಾಲೆ ಸೇರಿದ ವಿದ್ಯಾರ್ಥಿನಿ ದಿವ್ಯಾಶ್ರೀ, ‘ನಾನು ಹೋಗುತ್ತಿದ್ದ ಪ್ರವೈಟ್‌ ಸ್ಕೂಲ್‌ನಲ್ಲಿ ಸರಿಯಾಗಿ ಪಾಠ ಮಾಡ್ತಾ ಇರಲಿಲ್ಲ. ಶುಲ್ಕ ಕಟ್ಟದಿದ್ದರೆ ಹೊರಗಡೆ ನಿಲ್ಲಿಸಿ ಬೈಯುತ್ತಿದ್ದರು. ಈ ಶಾಲೆಯಲ್ಲಿ ನಮ್ ಸಮಸ್ಯೆಗಳನ್ನು ಕೇಳಿ, ಅರ್ಥವಾಗುವ ಹಾಗೆ ಪಾಠ ಮಾಡ್ತಾರೆ’ ಎಂದಳು.

4ನೇ ತರಗತಿಯ ಭರತ್, ‘ಪ್ರವೈಟ್ ಸ್ಕೂಲ್‌ನ ವಾತಾವರಣವೇ ನನಗೆ ಹಿಡಿಸುತ್ತಿರಲಿಲ್ಲ. ನಮ್ಮನ್ನು ಅಲ್ಲಿನವರು ಬೇರೆ ದೃಷ್ಟಿಯಿಂದ ನೋಡುತ್ತಿದ್ದರು. ಈ ಶಾಲೆಯಲ್ಲಿ ಚೆನ್ನಾಗಿ ಹೇಳಿ ಕೊಡುತ್ತಾರೆ. ಅಂತ ಫ್ರೆಂಡ್ಸ್ ಹೇಳ್ತಾ ಇದ್ರೂ. ಅವರ ಮಾತ್ ಕೇಳಿ ಮನೆಯಲ್ಲಿ ಹಠ ಮಾಡಿ ಈ ಶಾಲೆಗೆ ಬಂದೆ. ನಮ್ ಮೇಷ್ಟ್ರು ತುಂಬಾ ಚೆನ್ನಾಗಿ ಪಾಠ ಮಾಡ್ತಾರೆ’ ಎಂದ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.