ಶುಕ್ರವಾರ, ಡಿಸೆಂಬರ್ 6, 2019
26 °C
ಒಂದಕ್ಕೊಂದು ಪೂರಕವಾಗಿಲ್ಲ ಸಮೂಹ ಸಾರಿಗೆ * ರೈಲು – ಮೆಟ್ರೊ ನಿಲ್ದಾಣದ ನಡುವೆ ಸಂಪರ್ಕ ಕೊರತೆ

ಉಪನಗರ ರೈಲು – ಮೆಟ್ರೊ ‘ನಂಟು’ ಹೇಗೆ?

Published:
Updated:
ಉಪನಗರ ರೈಲು – ಮೆಟ್ರೊ ‘ನಂಟು’ ಹೇಗೆ?

ಬೆಂಗಳೂರು: ಮಹಾನಗರದಲ್ಲಿ ವಾಹನಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಜೊತೆ ಜೊತೆಗೇ ಪ್ರಯಾಣಕ್ಕೆ ತಗಲುವ ಅವಧಿಯೂ ಗಣನೀಯವಾಗಿ ಹೆಚ್ಚಾಗಿದೆ. ಸಂಚಾರ ದಟ್ಟಣೆ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಆರಂಭಿಸಿದ ‘ನಮ್ಮ ಮೆಟ್ರೊ’ ಯೋಜನೆಯ ಮೊದಲ ಹಂತ ಪೂರ್ಣಗೊಂಡಿದೆ. ಆ ಬಳಿಕವೂ ಪರಿಸ್ಥಿತಿ ಸುಧಾರಿಸಿಲ್ಲ. ರೈಲು, ಮೆಟ್ರೊ ಹಾಗೂ ಬಸ್‌ ಸೇವೆಗಳನ್ನು ಒಂದಕ್ಕೊಂದು ಪೂರಕವಾಗಿ ಬಳಸುವ ಸಾಧ್ಯತೆ ಇದ್ದರೂ ಈ ನಿಟ್ಟಿನಲ್ಲಿ ಪರಿಣಾಮಕಾರಿ ಪ್ರಯತ್ನಗಳು ನಡೆದಿಲ್ಲ.

‘ನಮ್ಮ ಮೆಟ್ರೊ’ ಮೊದಲ ಹಂತದ ಕಾಮಗಾರಿಗೆ 2006ರ ಜೂನ್‌ 24ರಂದು ಚಾಲನೆ ನೀಡಲಾಗಿತ್ತು. ಕುಂಟುತ್ತಾ ತೆವಳುತ್ತಾ ಸಾಗಿದ ಕಾಮಗಾರಿ ಕೊನೆಗೂ 2017ರ ಜೂನ್‌ನಲ್ಲಿ ಪೂರ್ಣಗೊಂಡಿತು. ಆರಂಭಿಕ ವಿಸ್ತೃತ ಯೋಜನಾ ವರದಿಯ (ಡಿಪಿಆರ್‌) ಪ್ರಕಾರ ಈ ಯೋಜನೆಗೆ ₹ 5,453 ಕೋಟಿ ವೆಚ್ಚ (2005ರ ದರಗಳ ಪ್ರಕಾರ) ನಿಗದಿಪಡಿಸಲಾಗಿತ್ತು. ಬಳಿಕ ಯೋಜನಾ ವೆಚ್ಚವನ್ನು ₹ 11,609 ಕೋಟಿಗೆ ಪರಿಷ್ಕರಿಸಲಾಗಿತ್ತು. ಕಾಮಗಾರಿ ಪೂರ್ಣಗೊಳ್ಳುವಾಗ ಇದಕ್ಕೆ ಹೆಚ್ಚೂ ಕಡಿಮೆ ₹14,000 ಕೋಟಿ ವೆಚ್ಚವಾಗಿತ್ತು.

ಮೆಟ್ರೊ ಎರಡನೇ ಹಂತದ ಯೋಜನೆಗೆ 2014ರ ಫೆಬ್ರುವರಿಯಲ್ಲಿ ಆಡಳಿತಾತ್ಮಕ ಮಂಜೂರಾತಿ ಸಿಕ್ಕಿದೆ. ₹26,405 ಕೋಟಿ ವೆಚ್ಚದಲ್ಲಿ 72 ಕಿ.ಮೀ ಉದ್ದದ ಮಾರ್ಗಗಳನ್ನು ನಿರ್ಮಿಸಲಾಗುತ್ತಿದೆ. ಎರಡನೇ ಹಂತದ ಕಾಮಗಾರಿಯನ್ನು 2015ರ ಅಕ್ಟೋಬರ್‌ನಲ್ಲಿ ಆರಂಭಿಸಲಾಗಿತ್ತು. 2020ರ ಒಳಗೆ ಈ ಯೋಜನೆಯನ್ನು ಪೂರ್ಣಗೊಳಿಸುವ ಉದ್ದೇಶವನ್ನು ನಿಗಮವು ಹೊಂದಿತ್ತು. ಆದರೆ, ಈ ಗಡುವನ್ನು ಪರಿಷ್ಕರಿಸಿ

ಕೊಂಡಿರುವ ನಿಗಮ 2021ರ ಮಾರ್ಚ್‌ಗೆ ಕಾಮಗಾರಿ ಪೂರ್ಣಗೊಳಿಸುವುದಾಗಿ ಹೇಳಿದೆ.

ಗೊಟ್ಟಿಗೆರೆಯಿಂದ ನಾಗವಾರದವರೆಗೆ ಹೊಸ ಮಾರ್ಗವನ್ನು ಎರಡನೇ ಹಂತದಲ್ಲಿ ಕೈಗೆತ್ತಿಕೊಳ್ಳಲಾಗುತ್ತಿದೆ. 21.25 ಕಿ.ಮೀ ಉದ್ದದ ಈ ಮಾರ್ಗ 13.79 ಕಿ.ಮೀ ಉದ್ದದ ಸುರಂಗವನ್ನೂ ಒಳಗೊಂಡಿದೆ. 2014ರಲ್ಲಿ ಈ ಯೋಜನೆಗೆ ಮಂಜೂರಾತಿ ಸಿಕ್ಕಿದ್ದರೂ ನಿಗಮವು ಸುರಂಗ ಮಾರ್ಗಕ್ಕೆ ಟೆಂಡರ್‌ ಆಹ್ವಾನಿಸಿದ್ದು 2017ರ ಜುಲೈನಲ್ಲಿ. ಟೆಂಡರ್‌ನಲ್ಲಿ ಭಾಗವಹಿಸಿದ್ದ ಕಂಪನಿಗಳು ಅಂದಾಜು ಮೊತ್ತಕ್ಕಿಂತ ಹೆಚ್ಚು ದರವನ್ನು ನಮೂದಿಸಿದ್ದರಿಂದ ನಿಗಮವು ಈ ಪ್ರಕ್ರಿಯೆ ರದ್ದುಪಡಿಸಿದೆ. ಮರು ಟೆಂಡರ್‌ ಕರೆಯಬೇಕಿರುವುದರಿಂದ ಕಾಮಗಾರಿ ಮತ್ತಷ್ಟು ವಿಳಂಬವಾಗಲಿದೆ.

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮೆಟ್ರೊ ಸಂಪರ್ಕ ಕಲ್ಪಿಸಲು ನಾಗವಾರದಿಂದ 29 ಕಿ.ಮೀ ಉದ್ದದ ಎತ್ತರಿಸಿದ ಮಾರ್ಗ ಎರಡನೇ ಹಂತದಲ್ಲೇ ಅನುಷ್ಠಾನವಾಗಲಿದೆ. ಇದರ ಟೆಂಡರ್‌ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ. ಸಿಲ್ಕ್‌ಬೋರ್ಡ್‌ನಿಂದ ಕೆ.ಆರ್‌.ಪುರ ನಡುವಿನ ಮೆಟ್ರೊ ಕಾಮಗಾರಿಗೆ ಇತ್ತೀಚೆಗಷ್ಟೇ ಟೆಂಡರ್‌ ಕರೆಯಲಾಗಿದೆ.

ಇನ್ನುಳಿದಂತೆ ಈಗಿರುವ ಮಾರ್ಗಗಳ ವಿಸ್ತರಣೆಯ ಹಾಗೂ ಆರ್‌.ವಿ.ರಸ್ತೆ– ಬೊಮ್ಮಸಂದ್ರ ನಡುವಿನ ಹೊಸ ಮಾರ್ಗದ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡಿದೆ. ಈ ಮಾರ್ಗದಲ್ಲಿ ಜಯದೇವ ಆಸ್ಪತ್ರೆ ಬಳಿಯ ಮೇಲ್ಸೇತುವೆಗಳನ್ನು ಕೆಡವಿ ಇಷ್ಟು ಹೊತ್ತಿಗಾಗಲೇ ಕಾಮಗಾರಿ ಆರಂಭವಾಗಬೇಕಿತ್ತು. ಇದೂ ಕೂಡ ವಿಳಂಬವಾಗುವ ಎಲ್ಲ ಲಕ್ಷಣಗಳು ಕಾಣಿಸುತ್ತಿವೆ.

ನಮ್ಮ ಮೆಟ್ರೊ ಎರಡನೇ ಹಂತದ ಯೋಜನೆಗೆ ₹4,105 ಕೋಟಿ ವೆಚ್ಚವಾಗಲಿದೆ ಎಂದು ಮೊದಲು ಅಂದಾಜಿಸಲಾಗಿತ್ತು. ಭೂಮಿಯ ಮಾರ್ಗಸೂಚಿ ದರ ಹೆಚ್ಚಳವಾಗಿದ್ದರಿಂದ ಹಾಗೂ ಕೇಂದ್ರ ಸರ್ಕಾರದ ನೂತನ ಭೂ ಪರಿಹಾರ ಕಾಯ್ದೆಯಡಿ ಪರಿಹಾರ ನೀಡಬೇಕಾಗಿರುವುದರಿಂದ ಇದಕ್ಕೆ ₹2,187 ಕೋಟಿಯಷ್ಟು ಹಣ ಹೆಚ್ಚುವರಿಯಾಗಿ ವೆಚ್ಚವಾಗಲಿದೆ.

ಮೂರನೇ ಹಂತದ ಮಾರ್ಗ ಹೊರ ವರ್ತುಲ ರಸ್ತೆಯಲ್ಲೇ ಹಾದುಹೋಗುವುದು ಹೌದಾದರೆ, ಕೆಲವು ಜಂಕ್ಷನ್‌ಗಳ ಬಳಿ ಕಾಮಗಾರಿ ಅನುಷ್ಠಾನ ಸವಾಲಿನಿಂದ ಕೂಡಿರಲಿದೆ. ಈ ಕಾಮಗಾರಿ ವಿಳಂಬವಾದಂತೆ ವೆಚ್ಚ ಹೆಚ್ಚಳವಾಗುತ್ತದೆ. ಹಾಗಾಗಿ ಸಕಾಲದಲ್ಲಿ ಯೋಜನೆಯನ್ನು ಪೂರ್ಣಗೊಳಿಸುವ ಸವಾಲು ನಿಗಮದ ಮೇಲಿದೆ.

ಮೆಟ್ರೊ ಎತ್ತರಿಸಿದ ಮಾರ್ಗ ನಿರ್ಮಾಣಕ್ಕೆ ಪ್ರತಿ ಕಿ.ಮೀ.ಗೆ ₹192 ಕೋಟಿ ಹಾಗೂ ಸುರಂಗ ಮಾರ್ಗ ನಿರ್ಮಾಣಕ್ಕೆ ಪ್ರತಿ ಕಿ.ಮೀ.ಗೆ ₹500 ಕೋಟಿ ವೆಚ್ಚವಾಗುತ್ತದೆ. ಇದಕ್ಕೆ ಹೋಲಿಸಿದರೆ ಸಬ್‌ ಅರ್ಬನ್‌ ರೈಲು ಯೋಜನೆಗೆ ತಗಲುವ ವೆಚ್ಚ ತುಂಬಾ ಕಡಿಮೆ. ಮೆಟ್ರೊಗೆ ತಗಲುವ ಮೂರನೇ ಒಂದರಷ್ಟು ವೆಚ್ಚ ಸಾಕಾಗುತ್ತದೆ.

ನಗರದಲ್ಲಿ ಉಪನಗರ ರೈಲು ಯೋಜನೆ ಜಾರಿಗೊಳಿಸಬೇಕು ಎಂಬುದು ಎರಡು ದಶಕಗಳ ಹಿಂದಿನ ಕೂಗು. ರೈಲ್ವೆ ಇಲಾಖೆ ಕೊನೆಗೂ ಈ ಯೋಜನೆಗೆ ಹಸಿರು ನಿಶಾನೆ ತೋರಿಸಿದೆ. ₹ 17 ಸಾವಿರ ಕೋಟಿ ವೆಚ್ಚದ ಯೋಜನೆಯನ್ನು ರೈಲ್ವೆ ಇಲಾಖೆ ಸಿದ್ಧಪಡಿಸಿದೆ. ಈ ಯೋಜನೆಗೆ ₹ 12,061 ಕೋಟಿ ಅನುದಾನ ಮೀಸಲಿಡಲಾಗಿದೆ. ಪಿಂಕ್‌ಬುಕ್‌ನಲ್ಲಿ ಸಾಂಕೇತಿಕವಾಗಿ ₹ 1 ಕೋಟಿ ಅನುದಾನವನ್ನೂ ಕಾದಿರಿಸಲಾಗಿದೆ.

ರೈಟ್ಸ್‌ ಸಂಸ್ಥೆಯ ಅಧ್ಯಯನ ವರದಿ ಪ್ರಕಾರ, ನಗರದಲ್ಲಿ ಉಪನಗರ ರೈಲು ಮಾರ್ಗದ ಉದ್ದ 142.8 ಕಿ.ಮೀ. ಇದರ ಜೊತೆಗೆ ಕಂಟೋನ್ಮೆಂಟ್‌ ಮತ್ತು ವೈಟ್‌ಫೀಲ್ಡ್‌ ನಡುವಿನ 19 ಕಿ.ಮೀ ಉದ್ದದ ಮಾರ್ಗವನ್ನು ನಾಲ್ಕು ಹಳಿಗಳ ಮಾರ್ಗವನ್ನಾಗಿ ಮೇಲ್ದರ್ಜೆಗೇರಿಸಲಾಗುತ್ತದೆ. ಈ ಯೋಜನೆಯಲ್ಲಿ ಈಗಿರುವ ಮಾರ್ಗಗಳನ್ನು ಮೇಲ್ದರ್ಜೆ ಗೇರಿಸಲು ₹ 7,223 ಕೋಟಿ ವೆಚ್ಚವಾಗಲಿದೆ. ಎತ್ತರಿಸಿದ ಮಾರ್ಗದ ನಿರ್ಮಾಣಕ್ಕಾಗಿ ₹ 4,480 ಕೋಟಿ ಆಗಲಿದೆ.

ನೈರುತ್ಯ ರೈಲ್ವೆಯು 9 ಪ್ರಮುಖ ಮಾರ್ಗಗಳನ್ನು ಸಬ್‌ ಅರ್ಬನ್‌ ರೈಲು ಜಾಲಕ್ಕಾಗಿ ಗುರುತಿಸಿದೆ. ವರ್ತುಲಾಕಾರದ, ಹಾಗೂ ಅದನ್ನು ಅಡ್ಡ ಹಾಯುವ (ಡಯಾಗೊನಲ್‌) ರೈಲ್ವೆ ಜಾಲವನ್ನು ಇದು ಹೊಂದಿರಲಿದೆ. ನೆಲಮಂಗಲ, ರಾಜಾನಕುಂಟೆ, ಕೆಂಗೇರಿ, ದೇವನಹಳ್ಳಿ, ವೈಟ್‌ಫೀಲ್ಡ್‌, ಹೀಲಳಿಗೆ, ಯಶವಂತಪುರ, ಹೆಬ್ಬಾಳ, ಬೈಯಪ್ಪನಹಳ್ಳಿ, ಯಲಹಂಕ, ಕಂಟೋನ್ಮೆಂಟ್‌ ನಿಲ್ದಾಣಗಳು ಈ ಜಾಲದಲ್ಲಿ ಸೇರಿವೆ. ಮೆಜೆಸ್ಟಿಕ್‌ನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣವು ಈ ರೈಲು ಜಾಲದ ಕೇಂದ್ರ ಸ್ಥಾನದಲ್ಲಿರಲಿದೆ.

ಪ್ರಮುಖ ಮಾಹಿತಿ ತಂತ್ರಜ್ಞಾನ ಕಾರಿಡಾರ್‌ಗಳಿಗೆ ಸಂಪರ್ಕ ಕಲ್ಪಿಸುವ ಬೈಯಪ್ಪನಹಳ್ಳಿ– ಹೊಸೂರು ಮಾರ್ಗದಲ್ಲಿ ಜೋಡಿಹಳಿ ನಿರ್ಮಾಣ ಕಾಮಗಾರಿಗಾಗಿ ಇಲಾಖೆ ಈಗಾಗಲೇ ₹ 375 ಕೋಟಿ ಬಿಡುಗಡೆ ಮಾಡಿದೆ. ವೈಟ್‌ಫೀಲ್ಡ್‌– ಕಂಟೋನ್ಮೆಂಟ್‌ ನಡುವಿನ ಮಾರ್ಗದಲ್ಲಿ ನಾಲ್ಕು ಹಳಿಗಳ ಸೌಕರ್ಯ ಕಲ್ಪಿಸಲಾಗುತ್ತಿದೆ.

ಸಬ್‌ ಅರ್ಬನ್‌ ಯೋಜನೆಗೆ ₹ 349 ಕೋಟಿ ಹೂಡಿಕೆಗೆ ರಾಜ್ಯ ಸಚಿವ ಸಂಪುಟವು ಈಗಾಗಲೇ ಮಂಜೂರಾತಿ ನೀಡಿತ್ತು. ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಯೊಜನೆ ವೆಚ್ಚವನ್ನು 50:50ರಂತೆ ಹಂಚಿಕೊಳ್ಳಲಿವೆ.

ಸಮನ್ವಯ ಕೊರತೆ: ಕಂಟೋನ್ಮೆಂಟ್‌ ರೈಲು ನಿಲ್ದಾಣದ ಸಮೀಪದಲ್ಲೇ ನೆಲದಡಿಯಲ್ಲಿ ಮೆಟ್ರೊ ಮಾರ್ಗ ಹಾದು ಹೋದರೂ ಅಲ್ಲಿಂದ 800 ಮೀಟರ್‌ ದೂರದಲ್ಲಿರುವ ಬ್ಯಾಂಬೂಬಜಾರ್‌ ಮೈದಾನದಲ್ಲಿ ಮೆಟ್ರೊ ನಿಲ್ದಾಣ ನಿರ್ಮಿಸಲು ನಿಗಮ ನಿರ್ಧರಿಸಿದೆ. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಗರದ ರೈಲು ನಿಲ್ದಾಣದಿಂದ ಮೆಟ್ರೊ ನಿಲ್ದಾಣಕ್ಕೆ ಪಾದಚಾರಿ ಮೇಲ್ಸೇತುವೆ ಕಾಮಗಾರಿ ಈ ಮೆಟ್ರೊ ಮಾರ್ಗದಲ್ಲಿ ಸಂಚಾರ ಆರಂಭವಾಗಿ ಎರಡು ವರ್ಷಗಳ ಬಳಿಕ ಪೂರ್ಣಗೊಳ್ಳುತ್ತಿದೆ.

ಮೆಜೆಸ್ಟಿಕ್‌ನ ನಾಡಪ್ರಭು ಕೆಂಪೇಗೌಡ ಮೆಟ್ರೊ ನಿಲ್ದಾಣದಿಂದ ರೈಲು ನಿಲ್ದಾಣಕ್ಕೆ ಇತ್ತೀಚೆಗಷ್ಟೇ ಸಬ್‌ವೇ ಆರಂಭಿಸಲಾಯಿತು. ಇಲ್ಲಿ ಪಾದಚಾರಿ ಮೇಲ್ಸೇತುವೆ ನಿರ್ಮಿಸುವ ಕೆಲಸ ಆರಂಭಿಸಲಾಗುತ್ತಿದೆ. ಯಶವಂತಪುರದಲ್ಲಿ ಮೆಟ್ರೊ ನಿಲ್ದಾಣ ಮತ್ತು ರೈಲು ನಿಲ್ದಾಣಗಳು ಅಕ್ಕಪಕ್ಕದಲ್ಲೇ ಇದ್ದರೂ ಇವುಗಳ ನಡುವೆ ನೇರ ಸಂಪರ್ಕ ವ್ಯವಸ್ಥೆ ಇಲ್ಲ.

ಮೆಟ್ರೊ ಮೂರನೇ ಹಂತಕ್ಕೆ ಡಿ‍ಪಿಆರ್‌ ಸಿದ್ಧಪಡಿಸಲಾಗುತ್ತಿದೆ. ಸಬ್‌ಅರ್ಬನ್‌ ರೈಲು ಮಾರ್ಗ–ಮೆಟ್ರೊ ಮಾರ್ಗಗಳನ್ನು ಒಂದಕ್ಕೊಂದು ಪೂರಕವಾಗಿ ನಿರ್ಮಿಸಿದರೆ ಹಣ ಹಾಗೂ ಪ್ರಯಾಣಿಕರ ಸಮಯ ಎರಡನ್ನೂ ಉಳಿಸಬಹುದು. ಮೆಟ್ರೊ ಪ್ರಯಾಣ ದರಕ್ಕೆ ಹೋಲಿಸಿದರೆ ರೈಲು ಪ್ರಯಾಣ ದರ ತುಂಬಾ ಅಗ್ಗ. ಪ್ರಯಾಣಿಕರು ಇವೆರಡನ್ನೂ ಒಂದಕ್ಕೊಂದು ಪೂರಕವಾಗಿ ಬಳಸಲು ಅನುಕೂಲವಾಗುವಂತೆ ಬಿಎಂಆರ್‌ಸಿಎಲ್‌ ಹಾಗೂ ರೈಲ್ವೆ ಇಲಾಖೆ ಯೋಜನೆ ರೂಪಿಸಬೇಕು. ಈ ಕುರಿತು ಅಧಿಕಾರಿಗಳ ನಡುವೆ ಸಮನ್ವಯ ಸಾಧಿಸುವ ಕೆಲಸವಾಗಬೇಕಿದೆ. ಇದಕ್ಕೆ ಬೇಕಿರುವುದು ಸಮರ್ಥ ರಾಜಕೀಯ ನಾಯಕತ್ವ. ಈ ಬಾರಿಯ ಚುನಾವಣೆ ಇಂತಹ ನಾಯಕತ್ವವನ್ನು ಒದಗಿಸುವುದೇ ಕಾದುನೋಡಬೇಕಿದೆ.

‘ಕೊನೆಯ ತಾಣದವರೆಗೆ ಸಂಪರ್ಕ –ಕಡೆಗಣನೆ’

ಮೆಟ್ರೊ ನಿಲ್ದಾಣದಿಂದ ಕೊನೆಯ ತಾಣದವರೆಗೆ ಸಂಪರ್ಕ ಕಲ್ಪಿಸುವುದಕ್ಕೆ ಸೂಕ್ತ ವ್ಯವಸ್ಥೆ ರೂಪಿಸುವ ಬಗ್ಗೆ ಸರ್ಕಾರ ಇನ್ನೂ ಸ್ಪಷ್ಟ ನಿಲುವು ಹೊಂದಿಲ್ಲ. ಹಾಗಾಗಿ ನಿಲ್ದಾಣ ತಲುಪಲು ಬೈಕ್‌ ಅಥವಾ ಕಾರನ್ನು ಬಳಸುವ ಅನಿವಾರ್ಯ ಪ್ರಯಾಣಿಕರದು.

ಮೆಟ್ರೊ ಸಾಧ್ಯವಿಲ್ಲದ ಕಡೆ ಮಾನೊ ರೈಲು ಯೋಜನೆ ರೂಪಿಸುವ ಸಾಧ್ಯತೆ ಬಗ್ಗೆಯೂ ಸರ್ಕಾರ ಪರಿಗಣಿಸಬೇಕು. ಮೆಟ್ರೊಗೆ ಹೋಲಿಸಿದರೆ ಮಾನೊ ರೈಲು ಮಾರ್ಗಕ್ಕೆ ಕಡಿಮೆ ಸ್ಥಳಾವಕಾಶ ಸಾಕು. ಈಗಿರುವ ಕೆಲವು ರಸ್ತೆಗಳ ವಿಭಜಕಗಳಲ್ಲೂ ಇದನ್ನು ಅನುಷ್ಠಾನಗೊಳಿಸಲು ಸಾಧ್ಯವಿದೆ.

ಬಿಎಂಟಿಸಿ ಮೆಟ್ರೊ ನಿಲ್ದಾಣದಿಂದ ಸಮೀಪದ ಪ್ರದೇಶಗಳಿಗೆ ‘ಮಿಡಿ’ ಬಸ್‌ ಸೌಕರ್ಯ ಆರಂಭಿಸಿತ್ತು. ಆದರೆ ಅದರಿಂದ ನಷ್ಟ ಅನುಭವಿಸಿದ್ದರಿಂದ ಕೆಲವೆಡೆ ಈ ಸೇವೆಯನ್ನು ಸ್ಥಗಿತಗೊಳಿಸಲಾಯಿತು. ಕೆಲವೆಡೆ ಬಾಡಿಗೆ ಬೈಕ್‌ ಸೇವೆ ಲಭ್ಯ. ಅದನ್ನು ಎಲ್ಲ ನಿಲ್ದಾಣಗಳಿಗೂ ವಿಸ್ತರಿಸಬೇಕು.

ಮೆಟ್ರೊ ನಿಲ್ದಾಣ ಆಸುಪಾಸಿನ ರಸ್ತೆಗಳಲ್ಲಿ ಸೈಕಲ್‌ ಪಥ ಅಭಿವೃದ್ಧಿಪಡಿಸುವ ಬಗ್ಗೆ ಚರ್ಚೆ ನಡೆದಿತ್ತು. ಒಂದೆರಡು ಕಡೆ ಮಾತ್ರ ಈ ಪ್ರಯತ್ನ ನಡೆದಿದ್ದು ಬಿಟ್ಟರೆ, ಬಿಎಂಆರ್‌ಸಿಎಲ್‌ ಆಗಲೀ ಬಿಬಿಎಂಪಿಯಾಗಲೀ ಈ ಬಗ್ಗೆ ಹೆಚ್ಚಿನ ಆಸ್ಥೆ ವಹಿಸಿಲ್ಲ.

*

‘ತಪ್ಪುಗಳಿಂದ ಪಾಠ ಕಲಿಯಲಿ’

ಬಿಎಂಆರ್‌ಸಿಎಲ್‌ ನಗರದಲ್ಲಿ ನಮ್ಮ ಮೆಟ್ರೊ ಯೋಜನೆ ಅನುಷ್ಠಾನಗೊಳಿಸುವಾಗ ಅನುಭವದ ಕೊರತೆ ಇತ್ತು. ಆದರೆ, ಮೊದಲ ಹಂತದಲ್ಲಿ ಆಗಿರುವ ತಪ್ಪುಗಳಿಂದ ನಿಗಮ ಪಾಠ ಕಲಿತಂತಿಲ್ಲ. ವಿಜಯನಗರ, ಯಶವಂತಪುರ, ಬನಶಂಕರಿಯಲ್ಲಿ ಟಿಟಿಎಂಸಿ ಬಳಿ ಮೆಟ್ರೊ ನಿಲ್ದಾಣ ನಿರ್ಮಿಸಲು ಅವಕಾಶವಿದ್ದರೂ ಬಳಸಿಕೊಂಡಿರಲಿಲ್ಲ. ರೈಲು ನಿಲ್ದಾಣವನ್ನು ಮೆಟ್ರೊ ಜೊತೆ ಜೋಡಿಸುವ ವಿಚಾರದಲ್ಲೂ ಅಸಡ್ಡೆ ಮುಂದುವರಿದಿದೆ. ಎರಡನೇ ಹಂತದಲ್ಲೂ ಅದೇ ತಪ್ಪುಗಳು ಮರುಕಳಿಸಿವೆ. ಕಾಮಗಾರಿ ವಿಳಂಬ ತಡೆಯಲು ನಿಗಮವು ಯಾವುದೇ ಯೋಜನೆ ಹೊಂದಿರುವಂತೆ ಕಾಣುತ್ತಿಲ್ಲ.

ಮೆಟ್ರೊ ನಿಲ್ದಾಣಗಳಲ್ಲಿ ಕನಿಷ್ಠ 4 ಬಸ್‌, 10 ಆಟೊರಿಕ್ಷಾ, 10 ಟ್ಯಾಕ್ಸಿ ನಿಲ್ದಾಣಕ್ಕೆ ಅವಕಾಶ ಕಲ್ಪಿಸಬೇಕು. ಸಮೀಪದಲ್ಲೇ ವಾಹನ ನಿಲುಗಡೆಗೂ ಅವಕಾಶ ಇರಬೇಕು. ಆಗ ಹೆಚ್ಚು ಮಂದಿ ಮೆಟ್ರೊ ಬಳಸಲು ಅನುಕೂಲವಾಗುತ್ತದೆ.

ರೈಲ್ವೆ ಇಲಾಖೆ ಏರಿಗೆಳೆದರೆ, ಬಿಎಂಆರ್‌ಸಿಎಲ್‌ ನೀರಿಗೆಳೆಯುತ್ತದೆ ಎಂಬ ಪರಿಸ್ಥಿತಿ ಇದೆ. ಹಾಗಾಗಬಾರದು. ಬಿಎಂಟಿಸಿ, ರೈಲ್ವೆ ಇಲಾಖೆ ಹಾಗೂ ಬಿಎಂಆರ್‌ಸಿಎಲ್‌ ಪರಸ್ಪರ ಸಮಾಲೋಚನೆ ನಡೆಸಿ ಯೋಜನೆ ರೂಪಿಸಬೇಕು. ವಿಮಾನ ನಿಲ್ದಾಣಕ್ಕೆ ಮೆಟ್ರೊ ಕಲ್ಪಿಸುವ ಯೋಜನೆ ತ್ವರಿತಗತಿಯಲ್ಲಿ ಅನುಷ್ಠಾನಗೊಳಿಸಬೇಕು. 

–ಸಂಜೀವ ದ್ಯಾಮಣ್ಣವರ್‌, ಪ್ರಜಾರಾಗ್‌ ಸಂಘಟನೆಯ ಸದಸ್ಯ

*‘ಗಡುವಿನೊಳಗೆ ಪೂರೈಸುತ್ತೇವೆ’

ನಮ್ಮ ಸರ್ಕಾರ ಬರುವವರೆಗೆ ‘ನಮ್ಮ ಮೆಟ್ರೊ’ ಮೊದಲ ಹಂತದಲ್ಲಿ ಕೇವಲ 6 ಕಿ.ಮೀ ಪೂರ್ಣಗೊಂಡಿತ್ತು. ನಾವು 35 ಕಿ.ಮೀ ಉದ್ದದ ಮಾರ್ಗವನ್ನು ಪೂರ್ಣಗೊಳಿಸಿದ್ದೇವೆ.

ಎರಡನೇ ಹಂತ‌ದ ಕಾಮಗಾರಿಯೂ ಚುರುಕಿನಿಂದ ನಡೆಯುತ್ತಿದೆ. ಅದನ್ನು ಗಡುವಿನೊಳಗೆ ಪೂರ್ಣಗೊಳಿಸುವುದು ನಮ್ಮ ಆದ್ಯತೆ.

ಸಬ್‌ ಅರ್ಬನ್‌ ರೈಲು ಯೋಜನೆ ಅನುಷ್ಠಾನ ರಾಜ್ಯ ಸರ್ಕಾರದ ಹತೋಟಿಯಲ್ಲಿಲ್ಲ. ಈ ಯೋಜನೆಗೆ ಕೇಂದ್ರ ಕೇವಲ ₹ 1 ಕೋಟಿ ಬಿಡುಗಡೆ ಮಾಡಿದೆ. ಇದಕ್ಕೆ ನಾವು ಮೂರು ವರ್ಷಗಳ ಹಿಂದೆಯೇ ವಿಶೇಷ ಉದ್ದೇಶದ ಘಟಕ (ಎಸ್‌ಪಿವಿ) ರಚಿಸಿದ್ದರೂ ಕೇಂದ್ರ ಅನುಮೋದನೆ ನೀಡಿಲ್ಲ. ಸಾಧ್ಯವಿರುವ ಕಡೆಯಲ್ಲೆಲ್ಲ ರೈಲು ನಿಲ್ದಾಣ ಹಾಗೂ ಮೆಟ್ರೊ ನಡುವೆ ನೇರ ಸಂಪರ್ಕ ಕಲ್ಪಿಸಲು ಕ್ರಮ ಕೈಗೊಳ್ಳುತ್ತೇವೆ

–ದಿನೇಶ್‌ ಗುಂಡೂರಾವ್‌, ಕೆಪಿಸಿಸಿ ಕಾರ್ಯಾಧ್ಯಕ್ಷ

*ಹೆಚ್ಚಿನ ಅನುದಾನ ಒದಗಿಸುತ್ತೇವೆ

ಮೆಟ್ರೊ ಯೋಜನೆಗೆ ಹೆಚ್ಚಿನ ಅನುದಾನ ಒದಗಿಸುತ್ತೇವೆ. ನಾಲ್ಕನೇ ಹಂತ ಹಾಗೂ ಐದನೇ ಹಂತಕ್ಕೂ ಯೋಜನೆ ರೂಪಿಸಿ ಇನ್ನಷ್ಟು ಹೊಸ ಮಾರ್ಗಗಳನ್ನು ಗುರುತಿಸುತ್ತೇವೆ. ಮೆಟ್ರೊಗೆ ಪೂರಕವಾಗಿ ಉಪನಗರ ರೈಲು ಜಾಲವನ್ನು ಅಭಿವೃದ್ಧಿಪಡಿಸುತ್ತೇವೆ.

–ಆರ್‌.ಪ್ರಕಾಶ್‌, ಜೆಡಿಎಸ್‌, ಬೆಂಗಳೂರು ನಗರ ಘಟಕದ ಅಧ್ಯಕ್ಷ

ಪ್ರತಿಕ್ರಿಯಿಸಿ (+)