‘ಕನಿಮೋಳಿ ಕರುಣಾನಿಧಿಯ ಅನೈತಿಕ ಸಂಬಂಧದ ಮಗು’

7
ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಎಚ್‌. ರಾಜಾ ಹೇಳಿಕೆಗೆ ಆಕ್ರೋಶ

‘ಕನಿಮೋಳಿ ಕರುಣಾನಿಧಿಯ ಅನೈತಿಕ ಸಂಬಂಧದ ಮಗು’

Published:
Updated:

ಚೆನ್ನೈ: ಡಿಎಂಕೆ ಸಂಸದೆ ಕನಿಮೋಳಿ ‘ಅನೈತಿಕ ಸಂಬಂಧದ ಮಗು’ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಎಚ್‌. ರಾಜಾ ನೀಡಿರುವ ಹೇಳಿಕೆ ವಿವಾದಕ್ಕೀಡಾಗಿದೆ.

‌ಪತ್ರಕರ್ತೆಯೊಬ್ಬರ ಕೆನ್ನೆಯನ್ನು ತಮಿಳುನಾಡು ರಾಜ್ಯಪಾಲ ಬನವರಿಲಾಲ್‌ ಪುರೋಹಿತ್‌ ಅವರು ಸವರಿದ್ದಕ್ಕೆ ಕನಿಮೋಳಿ ಸಹ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಬಗ್ಗೆ ಪತ್ರಕರ್ತೆಯ ನಿಲುವಿಗೂ ಅವರು ಬೆಂಬಲ ಸೂಚಿಸಿದ್ದರು.

'ರಾಜ್ಯಪಾಲರ ಉದ್ದೇಶವೂ ಅನುಮಾನಕ್ಕೀಡು ಮಾಡುವಂತಿರದಿದ್ದರೂ, ಉನ್ನತ ಹುದ್ದೆಯಲ್ಲಿರುವವರು ಘನತೆ ಕಾಪಾಡಬೇಕು. ಜತೆಗೆ ಪತ್ರಕರ್ತೆಯ ವೈಯಕ್ತಿಕ ಸ್ವಾತಂತ್ರಕ್ಕೆ ಧಕ್ಕೆ ತರಬಾರದಿತ್ತು. ಪ್ರತಿಯೊಬ್ಬರಿಗೂ ಗೌರವ ನೀಡುವ ರೀತಿಯಲ್ಲಿ ವರ್ತಿಸಬೇಕು’ ಎಂದು ಕನಿಮೋಳಿ ಟ್ವೀಟ್‌ ಮಾಡಿದ್ದರು.

ಡಿಎಂಕೆ ಮುಖ್ಯಸ್ಥ ಎಂ. ಕರುಣಾನಿಧಿ ಮತ್ತು ಕನಿಮೋಳಿ ಅವರ ಹೆಸರು ಪ್ರಸ್ತಾಪಿಸದೆ ಈ ಪ್ರಕರಣದ ಬಗ್ಗೆ ಟ್ವೀಟ್‌ ಮೂಲಕ ರಾಜಾ ಕಟುವಾಗಿ ಪ್ರತಿಕ್ರಿಯಿಸಿದ್ದಾರೆ.

‘ಅನೈತಿಕ ಸಂಬಂಧದ ಮಗುವನ್ನು ರಾಜ್ಯಸಭಾ ಸದಸ್ಯರನ್ನಾಗಿ ಮಾಡಿದ ನಾಯಕನಿಗೂ ಪತ್ರಕರ್ತರು ರಾಜ್ಯಪಾಲರಿಗೆ ಪತ್ರಿಕಾಗೋಷ್ಠಿಯಲ್ಲಿ ಕೇಳಿದ ರೀತಿಯಲ್ಲೇ ಪ್ರಶ್ನೆಗಳನ್ನು ಕೇಳುತ್ತಾರೆಯೇ? ಅವರು ಪ್ರಶ್ನೆಗಳನ್ನು ಕೇಳುವುದಿಲ್ಲ. ಜತೆಗೆ ಚಿದಂಬರಂ ಉದಯಕುಮಾರ್‌,  ಅಣ್ಣಾನಗರ ರಮೇಶ್‌ ಮತ್ತು ಪೆರಂಬಲೂರು ಸಾಧಿಕ್‌ ಬಾಷಾ ನೆನಪುಗಳು ಅವರನ್ನು ಕಾಡುತ್ತವೆ’ ಎಂದು ಟ್ವೀಟ್‌ ಮಾಡಿದ್ದಾರೆ.

ಕರುಣಾನಿಧಿ ಕುಟುಂಬಕ್ಕೆ ಆಪ್ತರಾಗಿದ್ದ ರಮೇಶ್‌ ಮತ್ತು ಬಾಷಾ ಅನುಮಾನಸ್ಪದವಾಗಿ ಸಾವಿಗೀಡಾಗಿದ್ದರು.

ರಾಜಾ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕನಿಮೋಳಿ, ‘ಇದು ಕೊಳಕು ಮನಸ್ಥಿತಿ ತೋರಿಸುತ್ತದೆ’ ಎಂದು ಹೇಳಿದ್ದಾರೆ.

ಕಾಂಗ್ರೆಸ್‌ ಪಕ್ಷದ ಹಿರಿಯ ಮುಖಂಡ ಪಿ. ಚಿದಂಬರಂದ ಅವರು ಕನಿಮೋಳಿ ಅವರಿಗೆ ಬೆಂಬಲ ವ್ಯಕ್ತಪಡಿಸಿ ಟ್ವೀಟ್‌ ಮಾಡಿದ್ದು, ‘ಅನೈತಿಕ ಸಂಬಂಧದ ಮಗು ಎನ್ನುವುದು ಇಲ್ಲ. ಎಲ್ಲ ಮಕ್ಕಳು ನೈತಿಕವಾಗಿಯೇ ಜನಿಸಿದ್ದಾರೆ. ಬಿಜೆಪಿಯು ಈ ವಿಷಯದ ಬಗ್ಗೆ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು’ ಎಂದಿದ್ದಾರೆ.

ತಮಿಳುನಾಡಿನ ವಿವಿಧೆಡೆ ಡಿಎಂಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಎಚ್‌. ರಾಜಾ ಅವರನ್ನು ಬಂಧಿಸುವಂತೆ ಒತ್ತಾಯಿಸಿದರು. ರಾಜಾ ಅವರ ಪ್ರತಿಕೃತಿಯನ್ನು ಸಹ ದಹಿಸಿದರು.

’ಪ್ರಚಾರಕ್ಕಾಗಿ ವಿವಾದ’

ಕನಿಮೋಳಿ ಅವರ ಟ್ವೀಟ್‌ಗೆ ಹಲವರು ವಿಭಿನ್ನ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

‘ರಾಜ್ಯಪಾಲರು ಕೆನ್ನೆ ಸವರಿದ ವಿಷಯವನ್ನು ಪತ್ರಕರ್ತೆಯು ಕೇವಲ ಪ್ರಚಾರಕ್ಕೆ ದೊಡ್ಡ ವಿಷಯವನ್ನಾಗಿ ಮಾಡಿದ್ದಾರೆ. ಸಾರ್ವಜನಿಕ ಜೀವನದ ಅನುಭವ  ಹೊಂದಿರುವ ಕನಿಮೋಳಿ ಅವರಿಗೆ ಇದು ಗೊತ್ತಾಗದಿರುವುದು ಅಚ್ಚರಿ’ ಎಂದು ವ್ಯಕ್ತಿಯೊಬ್ಬರು ಟ್ವೀಟ್‌ ಮಾಡಿದ್ದಾರೆ.

ರಾಜ್ಯಪಾಲರ ಘನತೆ ಕುರಿತು ಕನಿಮೋಳಿ ಹೇಳಿಕೆಗೆ ಟ್ವೀಟ್‌ ಮಾಡಿರುವ ಇನ್ನೊಬ್ಬರು, ‘ಕರುಣಾನಿಧಿ ಅವರು ಮುಖ್ಯಮಂತ್ರಿಯಾಗಿದ್ದಾಗ ಉತ್ತಮ ಶೈಕ್ಷಣಿಕ ಸಾಧನೆ ಮಾಡಿದ್ದ ಬಾಲಕಿಯ ತಲೆ ಸವರಿದ್ದರು’ ಎಂದು ನೆನಪಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry