3

ದೇಶದಾದ್ಯಂತ ಕಾಲ್ನಡಿಗೆ ಯಾತ್ರೆ ಮೂಲಕ ರಕ್ತದಾನ ಜಾಗೃತಿ ಮೂಡಿಸಿದ ಯುವಕ; ಇಲ್ಲಿವರೆಗೆ ಕ್ರಮಿಸಿದ್ದು 6,000 ಕಿಮೀ!

Published:
Updated:
ದೇಶದಾದ್ಯಂತ ಕಾಲ್ನಡಿಗೆ ಯಾತ್ರೆ ಮೂಲಕ ರಕ್ತದಾನ ಜಾಗೃತಿ ಮೂಡಿಸಿದ ಯುವಕ; ಇಲ್ಲಿವರೆಗೆ ಕ್ರಮಿಸಿದ್ದು 6,000 ಕಿಮೀ!

ತಿರುವನಂತಪುರಂ: ದೇಶದಾದ್ಯಂತ ಕಾಲ್ನಡಿಗೆ ಯಾತ್ರೆ ಕೈಗೊಂಡು 33ರ ಹರೆಯದ ಕಿರಣ್ ವರ್ಮಾ ಎಂಬ ಯುವಕ ಜನರಲ್ಲಿ ರಕ್ತದಾನದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ರಕ್ತದಾನದ ಬಗ್ಗೆ ಜಾಗೃತಿ ಮತ್ತು ರಕ್ತದಾನದ ಮೂಲಕ ಹೇಗೆ ಪ್ರಾಣ ಉಳಿಸಬಹುದು ಎಂದು ಅರಿವು ಮೂಡಿಸಲು ಕಿರಣ್ ಈ ಯಾತ್ರೆ ಕೈಗೊಂಡಿದ್ದರು. ಶ್ರೀನಗರದಿಂದ ತಿರುವನಂತಪುರಂವರೆಗೆ ಸಂಚರಿಸಿ ಜಾಗೃತಿ ಮೂಡಿಸುತ್ತಿರುವ ಈ ಯುವಕ ಈಗಾಗಲೇ 6,000 ಕಿಮೀ ಕ್ರಮಿಸಿದ್ದಾರೆ.

ಅಂದ ಹಾಗೆ ಕಿರಣ್ ಈ ರೀತಿಯ ಜಾಗೃತಿ ಕಾರ್ಯ ಕೈಗೊಂಡಿರುವುದರ ಹಿಂದೆ ಒಂದು ಕತೆ ಇದೆ. ಕಿರಣ್ ಅವರ ಅಮ್ಮ ಕ್ಯಾನ್ಸರ್‍‍ನಿಂದಾಗಿ ಮರಣಹೊಂದಿದ್ದರು. ಆನಂತರ ಕಿರಣ್ ರಕ್ತದಾನದ ಬಗ್ಗೆ ಜಾಗೃತಿ ಮೂಡಿಸಲು ಸಿಂಪ್ಲಿ ಬ್ಲಡ್ ಎಂಬ ಆ್ಯಪ್ ತಯಾರಿಸಿ ಅದರಲ್ಲಿ ವರ್ಚ್ಯುವಲ್ ರಕ್ತದಾನ ಮಾಡುವಂತೆ ಪ್ರೇರೇಪಿಸಿದ್ದರು. ಈ ಆ್ಯಪ್ ಬಗ್ಗೆಯೂ ಜನರಿಗೆ ಮಾಹಿತಿ ನೀಡುತ್ತಾ ಕಿರಣ್ ದೇಶದಾದ್ಯಂತ ಸಂಚರಿಸಿದ್ದಾರೆ.

ಹೀಗೆ ಸಂಚರಿಸುವಾಗ ತಮ್ಮ ಅನುಭವಗಳನ್ನು ಅವರು ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್ ಮಾಡುತ್ತಾ ಹೋಗಿದ್ದಾರೆ. ಉತ್ತರದಿಂದ ಪೂರ್ವ, ಪಶ್ಚಿಮದಿಂದ ದಕ್ಷಿಣದ ರಾಜ್ಯಗಳಿಗೆ ಸಂಚರಿಸುತ್ತಾ ನಾನೀಗ ಇಲ್ಲಿಯವರೆಗೆ 6000 ಕಿಮೀ ಕ್ರಮಿಸಿದ್ದೇನೆ, ಇದರಲ್ಲಿ  2600 ಕಿಮೀಗಳನ್ನು ಕಾಲ್ನಡಿಗೆಯಲ್ಲೇ ಕ್ರಮಿಸಿದರೆ 3400 ಕಿಮೀ ಕ್ರಮಿಸಲು ಇತರ ಸಾರಿಗೆ ವ್ಯವಸ್ಥೆಯನ್ನು ಬಳಸಿರುವುದಾಗಿ ಕಿರಣ್ ಟ್ವೀಟ್ ಮಾಡಿದ್ದಾರೆ.

ರಾಜಸ್ತಾನ, ಕರ್ನಾಟಕ, ಜಮ್ಮು ಕಾಶ್ಮೀರ ಮತ್ತು ಕೇರಳ ಹೀಗೆ ಹಲವಾರು ರಾಜ್ಯಗಳಲ್ಲಿ ಸಂಚರಿಸಿ ಸಿಂಪ್ಲಿ ಬ್ಲಡ್ ಆ್ಯಪ್ ಬಗ್ಗೆ ಜನರಿಗೆ ಅರಿವು ಮೂಡಿಸಿದ್ದಾರೆ.

ಶ್ರೀನಗರದ ಲಾಲ್ ಚೌಕ್ ನಿಂದ ಜನವರಿ 26, 2018ರಂದು ನಾನು ನನ್ನ ಪ್ರಯಾಣ ಆರಂಭಿಸಿದೆ .ಕಳೆದ ಎರಡು ತಿಂಗಳುಗಳಲ್ಲಿ ತಿರುವನಂತಪುರಂವರೆಗೆ ನಾನು ಕ್ರಮಿಸಿದ್ದು 6500 ಕಿಮೀ. ದೇಶದಾದ್ಯಂತ ಸಂಚಾರ ಮಾಡಿದಾಗ ನಾನು 600,000 ಜನರನ್ನು ಭೇಟಿ ಮಾಡಿದ್ದೀನಿ. ನಾನು ನನ್ನ ಉದ್ದೇಶಗಳನ್ನು ಕಾಲೇಜು, ವಿಶ್ವವಿದ್ಯಾನಿಲಯ ಸೇರಿದಂತೆ  ಮಾಲ್, ರೆಸ್ಟುರಾ , ರೈಲ್ವೇ ನಿಲ್ದಾಣ, ಬಸ್ ನಿಲ್ದಾಣಗಳಲ್ಲಿ ಸಿಕ್ಕ ಜನರಿಗೆ ತಿಳಿಸಿ, ಅವರಲ್ಲಿ ರಕ್ತದಾನದ ಬಗ್ಗೆ ಜಾಗೃತಿ ಮೂಡಿಸಿದ್ದೇನೆ ಎಂದಿದ್ದಾರೆ ವರ್ಮಾ.

ಭಾರತ ಮಾತ್ರ ಅಲ್ಲ ನೇಪಾಳ, ಭೂತಾನ್‍ಗೂ ತೆರಳಿ ವರ್ಮಾ ಈ ಜಾಗೃತಿ ಕಾರ್ಯಕ್ರಮ ಮಾಡಿದ್ದಾರೆ.

ಪ್ರತಿದಿನ ಭಾರತದಲ್ಲಿ  12,000ಕ್ಕಿಂತಲೂ ಹೆಚ್ಚು ಮಂದಿ ರಕ್ತದ ಅಭಾವದಿಂದ ಅಸುನೀಗುತ್ತಿದ್ದಾರೆ. ಪ್ರತಿ ಕಿಮೀಗೂ ಕನಿಷ್ಠ 10 ಮಂದಿಗೆ ರಕ್ತದಾನದ ಬಗ್ಗೆ ಅರಿವು ಮೂಡಿಸಿ, ಅವರೂ ರಕ್ತದಾನ ಮಾಡುವಂತೆ ಪ್ರೇರೇಪಿಸುವುದೇ ನನ್ನ ಉದ್ದೇಶ ಅಂದಿದ್ದಾರೆ ಕಿರಣ್ ವರ್ಮಾ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry