ಹಕ್ಕಿಗೊಂದಿಷ್ಟು ಅರವಟ್ಟಿಗೆ

7

ಹಕ್ಕಿಗೊಂದಿಷ್ಟು ಅರವಟ್ಟಿಗೆ

Published:
Updated:
ಹಕ್ಕಿಗೊಂದಿಷ್ಟು ಅರವಟ್ಟಿಗೆ

ಸಂಗಮೇಶ ಗುಜಗೊಂಡ, ಮೂಡಲಗಿ

ಅಂಗಳ ಮರದಲಿ ಅಮ್ಮನು ಕಟ್ಟಿಹ
ನೀರಿನ ತೊಟ್ಟಿಯು ಹಲವಿಹವು
ಬಿರುಬಿರು ಬಿಸಿಲಲಿ ದಾಹವ ತಣಿಸಲು‌
ತರತರ ಪಕ್ಷಿಯು ಬರುತಿಹವು!

ಸರಸರ ಹೀರುತ ಗುಟುಗುಟು ಕುಡಿಯುತ  
ಕತ್ತನು ಕೊಂಕಿಸಿ ನೋಡುವವು
ತೊಂದರೆ ಇಲ್ಲದೆ ನೀರಡಿಕೆ ನೀಗಿಸಿ
ಮೊಗದಲಿ ತೃಪ್ತಿಯ ತೋರುವವು!

ದೂರದ ಸನಿಹದ ಬಗೆ ಬಗೆ ಖಗಗಳು
ನಮ್ಮಯ ಕಣ್ಮನ ಸೆಳೆಯುವವು
ಚಿಲಿಪಿಲಿ ಇಂಚರ ಗೈಯುತ ಅನುದಿನ
ತೋಟಕೆ ಮೆರುಗನು ನೀಡುವವು!

ಚೆಲ್ಲಿದ ಕಾಳನು ಹುಳುಹುಪ್ಪಡಿಯನು
ಪಕಪಕ ಮುಕ್ಕುತ ನೆಗೆಯುವವು
ಅಣ್ಣನು ತೆಗೆಯುವ ಫೋಟೊ ಶೂಟ್‌ಗೆ
ಒಳ್ಳೆಯ ಪೋಜನು ಕೊಡುತಿಹವು!

ಹಕ್ಕಿಯ ಬಳಗದ ಸಖ್ಯವ ಗಳಿಸುತ
ಮನಸಿಗೆ ಮುದವನು ಪಡೆಯುವೆವು
ಹಕ್ಕಿಯ ಮೇಲಿನ ಅಮ್ಮನ ಪ್ರೀತಿಗೆ
ಎಲ್ಲರೂ ತಲೆಯನು ಬಾಗಿಹೆವು!

 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry