ಭಾನುವಾರ, ಡಿಸೆಂಬರ್ 8, 2019
20 °C

ಚುನಾವಣಾ ಸುತ್ತಣ ಈ ಹೊತ್ತಿನ ಸತ್ಯಗಳು

ನಾರಾಯಣ ಎ
Published:
Updated:
ಚುನಾವಣಾ ಸುತ್ತಣ ಈ ಹೊತ್ತಿನ ಸತ್ಯಗಳು

ಚುನಾವಣಾ ಫಲಿತಾಂಶಗಳು ಸಾರುವ ಸತ್ಯಗಳಿಗಿಂತ ಪ್ರಖರವಾದ ಸತ್ಯಗಳನ್ನು ಪಕ್ಷಗಳು ಚುನಾವಣೆಗೆ ಸಜ್ಜುಗೊಳ್ಳುವ ರೀತಿಯಲ್ಲಿ ಕಾಣಿಸುತ್ತವೆ. ಒಂದು ಪ್ರಮುಖ ಘಟ್ಟಕ್ಕೆ ತಲುಪಿರುವ ಕರ್ನಾಟಕದ ಚುನಾವಣಾ ಕಣದಲ್ಲಿ ಯಾವ ಯಾವ ಪಕ್ಷಗಳಿಂದ ಯಾರ‍್ಯಾರು ಸ್ಪರ್ಧಿಸಲಿದ್ದಾರೆ ಎನ್ನುವುದು ಹೆಚ್ಚು ಕಡಿಮೆ ನಿರ್ಣಯವಾಗಿ ಹೋಗಿದೆ. ಕಾಲ ಬದಲಾಗಿದೆ, ತಂತ್ರಜ್ಞಾನ ಬದಲಾಗಿದೆ, ಮತದಾರರ ಒಲವು ನಿಲುವುಗಳು ಬದಲಾಗಿವೆ, ಚುನಾವಣಾ ಪ್ರಚಾರದ ವೈಖರಿ ಬದಲಾಗಿದೆ, ಕೆಲವು ಪಕ್ಷಗಳ ನಾಯಕತ್ವದ ಶೈಲಿಯಲ್ಲಿ ಕಂಡುಕೇಳರಿಯದ ಬದಲಾವಣೆಗಳಾಗಿವೆ. ಆದರೆ ಈ ಬಾರಿಯೂ ಮೂರೂ ಮುಖ್ಯ ಪಕ್ಷಗಳು ಅಳೆದು ಸುರಿದು ತಮ್ಮ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ ಪ್ರಕ್ರಿಯೆಯಲ್ಲಿ ಭಿನ್ನವಾದದ್ದು, ಹೊಸತನದ್ದು ಅಂತ ಏನೂ ಕಾಣಿಸಲಿಲ್ಲ. ಹಿಂದಿನ ಚುನಾವಣೆಗಳಲ್ಲಿ ಕಂಡ ಆಗುಹೋಗುಗಳೇ ಮತ್ತೊಮ್ಮೆ ನಮ್ಮ ಕಣ್ಣಮುಂದೆ ನಡೆದು ಹೋದವು. ಆದರೂ ಅಭ್ಯರ್ಥಿ ಆಯ್ಕೆಯ ಸುತ್ತಣ ಜರುಗಿದ ವಿದ್ಯಮಾನಗಳನ್ನೆಲ್ಲಾ ಸೂಕ್ಷ್ಮವಾಗಿ ಅರ್ಥೈಸಿಕೊಂಡರೆ ಗಮನಿಸಬೇಕಾದ ಕೆಲ ಪ್ರಮುಖ ವಿಚಾರಗಳಿವೆ. ಈ ಮೂರೂ ಪಕ್ಷಗಳಲ್ಲಿ ಅವುಗಳು ಏನೇನು ಎಂದು ಒಂದೊಂದಾಗಿ ನೋಡೋಣ.

ಬಿಜೆಪಿ ಈ ಬಾರಿ, ಭಾರೀ ಸಂಖ್ಯೆಯ ಹೊಸ ಮುಖಗಳನ್ನು ಕಣಕ್ಕಿಳಿಸಬಹುದು ಎನ್ನುವ ನಿರೀಕ್ಷೆ ಇತ್ತು. ಯಾಕೆಂದರೆ, ಆ ಪಕ್ಷ ಈ ಚುನಾವಣೆಯಲ್ಲಿ ಬಹುವಾಗಿ ಅವಲಂಬಿಸಿರುವುದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಪ್ರಭಾವಳಿಯನ್ನು. ಜನರು ಮೋದಿಯವರ ಮೋಡಿಗೆ ಮರುಳಾಗಿ ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸಿದ್ದೇ ಆದಲ್ಲಿ ಹೊಸಬರಿಗೆ ಗೆಲ್ಲುವುದು ಸುಲಭ. ಮೋದಿಯವರ ಜನಪ್ರಿಯತೆಯ ಚುಂಗು ಹಿಡಿದು ವಿಧಾನಸಭೆ ಪ್ರವೇಶಿಸಿಯೇ ತೀರಬೇಕು ಎಂದು ಹತ್ತು ಹಲವು ಹೊಸ ಮುಖಗಳು ಆ ಪಕ್ಷದ ಸುತ್ತ ಗಿರಕಿ ಹೊಡೆಯುತ್ತಲೂ ಇದ್ದವು. ಆದರೆ ಬಿಜೆಪಿಯ ಅಭ್ಯರ್ಥಿಗಳ ಆಯ್ಕೆಯಲ್ಲಿ ನಿರ್ಣಾಯಕವಾದದ್ದು ಮೋದಿಯವರ ಜನಪ್ರಿಯತೆಗಿಂತ ಹೆಚ್ಚಾಗಿ ಆಯಾ ಕ್ಷೇತ್ರಗಳ ಅಭ್ಯರ್ಥಿಗಳ ಪ್ರಭಾವ ಮತ್ತು ಗೆಲ್ಲುವ ಶಕ್ತಿ. ಆರಂಭದಲ್ಲಿ ನಮಗೆ ಸಂಬಂಧವೇ ಇಲ್ಲ ಎನ್ನುತಿದ್ದ ವ್ಯಕ್ತಿಗಳಿಗೆಲ್ಲಾ ಈಗ ಆ ಪಕ್ಷ ಕರೆದು ಟಿಕೆಟ್ ನೀಡಿದೆ. ಅಭ್ಯರ್ಥಿಗಳು ಪಕ್ಷಗಳ ಮೇಲೆ ಅವಲಂಬಿಸಿರುವುದಕ್ಕಿಂತ ಹೆಚ್ಚಾಗಿ ಪಕ್ಷಗಳು ಅಭ್ಯರ್ಥಿಗಳ ಮೇಲೆ ಅವಲಂಬಿಸುತ್ತಿರುವ ವಿದ್ಯಮಾನ ದೇಶದಲ್ಲಿ ಹೊಸತೇನೂ ಅಲ್ಲ. ಆದರೆ ಕರ್ನಾಟಕದ ಬಿಜೆಪಿಯಲ್ಲಿ ಅದು ಸ್ವಲ್ಪ ಹೆಚ್ಚೇ ಇದ್ದಂತಿದೆ. ಮೋದಿಯವರ ಕಾಲದಲ್ಲೂ ಅದು ಬದಲಾಗುವ ಸೂಚನೆಗಳಿಲ್ಲ ಎನ್ನುವುದು ಈ ಬಾರಿಯ ಟಿಕೆಟ್ ಹಂಚಿಕೆಯಲ್ಲಿ ಸಾಬೀತಾಗಿ ಹೋಗಿದೆ.

2008ರ ಚುನಾವಣೆಯಲ್ಲಿ ಬಿಜೆಪಿ ಹೀಗೇ ಅಭ್ಯರ್ಥಿಗಳ ಮೇಲೆಯೇ ಅವಲಂಬಿಸಿ ಗೆದ್ದ ಪರಿಣಾಮ ಏನೆಲ್ಲಾ ಆಯಿತು ಎನ್ನುವ ಕತೆ ಈಗ ರಾಜ್ಯದ ಮುಂದಿದೆ. ಪಕ್ಷದ ಹಂಗಿಲ್ಲದೆ ಗೆದ್ದ ಮಂದಿಯೇ ಅಧಿಕ ಇದ್ದ ಕಾರಣ ಪ್ರಬಲ ನಾಯಕ ಎಂದು ಕರೆಸಿಕೊಳ್ಳುವ ಯಡಿಯೂರಪ್ಪ ಅಂತಹವರಿಗೆ ಕೂಡಾ ಒಂದೇ ಒಂದು ದಿನ ನೆಮ್ಮದಿಯಿಂದ ಸರ್ಕಾರ ನಡೆಸಲಾಗದ ಸ್ಥಿತಿ ಆಗ ನಿರ್ಮಾಣವಾಗಿತ್ತು. ಬಿಜೆಪಿ ಈಗಲೂ ಮತ್ತೆ ಅದೇ ದಾರಿಯಲ್ಲಿದೆ. ಬಹುಶಃ ಹೀಗೆ ಮಾಡದೆ ಇರಲಾರದ ಅನಿವಾರ್ಯ ಸ್ಥಿತಿಯನ್ನು ಬಿಜೆಪಿ ಎದುರಿಸುತ್ತಿದೆ.

ಪಕ್ಷವೊಂದು ಸಹಜವಾಗಿ ಬೆಳೆಯದೇ ಹೋದಾಗ ಅದು ಈ ರೀತಿಯಲ್ಲಿ ಚುನಾವಣೆ ಗೆಲ್ಲಲೆಂದೇ ಹೊರಗಿನಿಂದ ಬಂದವರನ್ನೇ ಆಶ್ರಯಿಸಿ ಗೆಲ್ಲಬೇಕಾಗುತ್ತದೆ. ಇದು ಕೃತಕ ಬೆಳವಣಿಗೆ. ಬಿಜೆಪಿಯು ಚರಿತ್ರೆಯಿಂದ ಪಾಠ ಕಲಿಯಲಿಲ್ಲ ಎಂದು ಹಂಗಿಸುವುದು ಸುಲಭ. ವಾಸ್ತವದಲ್ಲಿ ಚರಿತ್ರೆಯಿಂದ ಪಾಠ ಕಲಿಯಬೇಕೆಂದರೂ ಕಲಿಯಲಾಗದ ಸ್ಥಿತಿಯಲ್ಲಿ ಆ ಪಕ್ಷ ಇದೆ. ಈಗ ಅದಕ್ಕೆ ಗೆಲ್ಲಬೇಕು. ಹೇಗಾದರೂ ಗೆಲ್ಲಬೇಕು. ಹೇಗೆ ಗೆದ್ದರೂ ಅದು ಗೆಲುವೇ. ಎಷ್ಟೇ ಮರ್ಯಾದೆಯಿಂದ ಸೋತರೂ ಅದು ಸೋಲೇ. ಮೋದಿಯವರ ಹೆಸರು ಹೇಳಿ ಎಲ್ಲಯ್ಯ, ಮಲ್ಲಯ್ಯ, ಪುಲ್ಲಯ್ಯ ಯಾರನ್ನೂ ನಿಲ್ಲಿಸಿದರೂ ಗೆಲ್ಲುತ್ತಾರೆಂಬಷ್ಟಕ್ಕೆ ಅವರ ಜನಪ್ರಿಯತೆ ಕರ್ನಾಟಕದಲ್ಲಿ ನೆಲೆಯೂರಿದ್ದೇ ಆಗಿದ್ದಲ್ಲಿ ಕಂಡ-ಕಂಡವರನ್ನೆಲ್ಲಾ ಕೈಹಿಡಿದು ತರುವ ಪರಿಸ್ಥಿತಿ ಬಿಜೆಪಿಗೆ ಬರುತ್ತಿರಲಿಲ್ಲ. ಹೋದ ಚುನಾವಣೆಯಲ್ಲಿ ಟಿಕೆಟ್‌ ಪಡೆಯಲು ನಾಲಾಯಕ್ಕು ಅಂತ ಬದಿಗಿರಿಸಿದವರನ್ನು ಮತ್ತೆ ಕರೆತಂದು ಪೀಠ ನೀಡುವ ಅಗತ್ಯ ಬೀಳುತ್ತಿರಲಿಲ್ಲ.

ಜವಾಹರಲಾಲ್ ನೆಹರೂ ಮತ್ತು ಇಂದಿರಾ ಗಾಂಧಿ ಕಾಲದಲ್ಲಿ ಕಾಂಗ್ರೆಸ್ ಟಿಕೆಟ್ ಪಡೆದ ಅದೆಂತಹ ಅನಾಮಿಕ ವ್ಯಕ್ತಿಯೇ ಆದರೂ ದೇಶದ ಯಾವುದೇ ಮೂಲೆಯಿಂದ ಗೆಲ್ಲುತ್ತಾರೆ ಎನ್ನುವ ಸ್ಥಿತಿ ಇತ್ತು ಎನ್ನುವುದನ್ನು ಹಳೆಯ ಕಾಲದ ರಾಜಕೀಯ ವಿಶ್ಲೇಷಕರು ಹೇಳುತ್ತಿರುತ್ತಾರೆ. ಮೋದಿಯವರ ನಾಯಕತ್ವದಲ್ಲಿ ಬಿಜೆಪಿ ಈಗ 20 ರಾಜ್ಯಗಳಲ್ಲಿ ನೇರವಾಗಿ ಅಥವಾ ಮೈತ್ರಿಪಕ್ಷಗಳೊಡಗೂಡಿ ಸರ್ಕಾರ ನಡೆಸುತ್ತಿದೆ. ಅಂದರೆ ಇದು ಇಂದಿರಾ ಗಾಂಧಿಯವರನ್ನೂ ಮೀರಿ ಮೋದಿಯವರು ಬೆಳೆದ ಎತ್ತರ ಎಂದು ಅವರ ಪಕ್ಷದವರು ಹೇಳುತ್ತಿರುತ್ತಾರೆ. ಇಲ್ಲಿ ಲೆಕ್ಕಾಚಾರದಲ್ಲಿ ತಪ್ಪಿದೆ. ಅದಿರಲಿ, ಮುಖ್ಯವಾದ ವಿಷಯ ಏನು ಎಂದರೆ ಮೋದಿಯವರ ಹೆಸರು ಹೇಳಿ ಹೊಸ ಮುಖಗಳನ್ನು ಸಲೀಸಾಗಿ ಗೆಲ್ಲಿಸಿಕೊಳ್ಳಬಹುದು ಎನ್ನುವ ಭರವಸೆ ಕರ್ನಾಟಕದಲ್ಲಿ ಬಿಜೆಪಿಗೆ ಇನ್ನೂ ಬಂದಿಲ್ಲ ಎನ್ನುವುದು. ಈ ಚುನಾವಣೆಯ ಟಿಕೆಟ್‌ ಹಂಚಿಕೆ ಈ ಅಂಶವನ್ನು ಎತ್ತಿ ತೋರಿಸುತ್ತದೆ.

ಈಗ ಈ ತನಕದ ಬೆಳವಣಿಗೆಗಳು ಕಾಂಗ್ರೆಸ್ ಬಗ್ಗೆ ಏನು ಸೂಚಿಸುತ್ತವೆ ಎಂದು ನೋಡೋಣ. ಒಂದರ್ಥದಲ್ಲಿ ಭಾರತೀಯ ಜನತಾ ಪಕ್ಷಕ್ಕಿಂತ ತಾನು ಹೆಚ್ಚು ‘ಭಾರತೀಯ’ ಎಂದು ಕರ್ನಾಟಕದಲ್ಲಿ ಕಾಂಗ್ರೆಸ್ ಸಾಬೀತುಪಡಿಸುತ್ತಿರುವಂತಿದೆ. ಯಾವ ಅರ್ಥದಲ್ಲಿ ಅಂತ ಕೇಳಿ. ಭಾರತೀಯತೆಯ ಬಗ್ಗೆ, ಭಾರತೀಯ ಸಂಸ್ಕೃತಿಯ ಬಗ್ಗೆ ಬಿಜೆಪಿ ಹೇಳುವ ಕತೆ ಏನಾದರೂ ಇರಲಿ. ಆಧುನಿಕ ಭಾರತದ ನಿಜವಾದ ಸಂಸ್ಕೃತಿ ಅಂತ ಒಂದು ಇದ್ದರೆ ಅದು ಅವ್ಯವಸ್ಥೆಯ ಸಂಸ್ಕೃತಿ. ಇಂಗ್ಲಿಷ್‌ನಲ್ಲಿ ಹೇಳುವುದಾದರೆ ಕೆವೊಸ್ (chaos). ಅಗಾಧವಾದ ಅವ್ಯವಸ್ಥೆಯ ಮಧ್ಯೆ ಅದ್ಯಾವುದೋ ನಿಗೂಢ ಶಕ್ತಿಯೊಂದು ಹೇಗೋ ಒಂದಷ್ಟು ವ್ಯವಸ್ಥೆಯನ್ನು ಪ್ರತಿಷ್ಠಾಪಿಸಿ ಈ ದೇಶವನ್ನು ಮುನ್ನಡೆಸುತ್ತಿದೆ. ಟ್ರಾಫಿಕ್ ಜಂಕ್ಷನ್‌ಗಳಿಂದ ಹಿಡಿದು ಉನ್ನತೋನ್ನತ ಸರ್ಕಾರಿ ವ್ಯವಹಾರಗಳೆಲ್ಲಾ ಅವ್ಯವಸ್ಥೆಯ ಆಗರದ ನಡುವೆ ವ್ಯವಸ್ಥಿತ ಎನ್ನುವಂತಹ ಒಂದು ಅಸ್ತಿತ್ವವನ್ನು ಕಂಡುಕೊಳ್ಳುತ್ತಿರುತ್ತವೆ. ಹಿಂದಿ ಭಾಷೆಯ ‘ಜುಗಾಡ್’ ಎನ್ನುವ ಪದ ಈಗ ಭಾರತದಲ್ಲಿ ಆಡಳಿತ ಅಧ್ಯಯನದಲ್ಲಿ ಬಳಕೆಯಾಗುವ ಪರಿಕಲ್ಪನೆಗಳಲ್ಲಿ ಒಂದು. ಕಾಂಗ್ರೆಸ್ ಪಕ್ಷ ಎನ್ನುವುದು ಭಾರತದ ಈ ಅವ್ಯವಸ್ಥೆಯ ಸಂಸ್ಕೃತಿಯ ರಾಜಕೀಯ ಅಪರಾವಾತಾರ ಎನ್ನುವುದು ಕರ್ನಾಟಕದ ಚುನಾವಣೆಯ ಈತನಕದ ಬೆಳವಣಿಗೆಗಳು ತೋರಿಸುತ್ತವೆ.

ಹೇಳಿ ಕೇಳಿ ಕಾಂಗ್ರೆಸ್ ಪಕ್ಷ ಕರ್ನಾಟಕದಲ್ಲಿ ಎದುರಿಸುತ್ತಿರುವುದು ಕೇವಲ ಒಂದು ವಿಧಾನಸಭಾ ಚುನಾವಣೆಯನ್ನಷ್ಟೇ ಅಲ್ಲ. ಅದು ಎದುರಿಸುತ್ತಿರುವುದು ಅಸ್ತಿತ್ವದ ಸಮರವನ್ನು. ಕರ್ನಾಟಕದಲ್ಲಿ ಮಾತ್ರವಲ್ಲ, ದೇಶದಲ್ಲಿ ಕೂಡಾ ಅದರ ಅಳಿವು ಉಳಿವಿನ ಪ್ರಶ್ನೆ ಈ ಚುನಾವಣೆಯ ಫಲಿತಾಂಶದ ಮೇಲೆ ಬಹುಮಟ್ಟಿಗೆ ಅವಲಂಬಿಸಿದೆ. ಈ ಸ್ಥಿತಿಯಲ್ಲಿ ಆ ಪಕ್ಷದ ಒಂದೊಂದು ನಡೆಯೂ ಅಪ್ಪಟ ವೃತ್ತಿಪರತೆಯಿಂದ ಕೂಡಿರಬೇಕಿತ್ತು. ಆದರೆ ಕಾಂಗ್ರೆಸ್ ಪಾಳಯವನ್ನೊಮ್ಮೆ ನೋಡಿ. ಅಲ್ಲಿ ಪಕ್ಷದ ಚುನಾವಣಾ ಮುಖ ಎಂದರೆ ಮುಖ್ಯಮಂತ್ರಿ ಸಿದ್ದರಾಮಯ್ಯ. ಕಾಲಿಗೆ ಚಕ್ರ ಕಟ್ಟಿಕೊಂಡು ಇಡೀ ರಾಜ್ಯ ಸುತ್ತಾಡಿ ಪಕ್ಷವನ್ನು ಗೆಲ್ಲಿಸುವ ಜವಾಬ್ದಾರಿ ಅವರ ಮೇಲಿತ್ತು. ಅದನ್ನವರು ಮಾಡುತ್ತಿರುವಂತೆಯೂ ಕಂಡಿತು. ಆದರೆ ಈ ಸೇನಾನಿಗೆ ಯುದ್ಧಕಾಲದಲ್ಲಿ ಅದೆಂತಹ ಪುತ್ರವ್ಯಾಮೋಹ ಆವರಿಸಿತೋ? ಇದ್ದ ಸುರಕ್ಷಿತ ಕ್ಷೇತ್ರವನ್ನು ಮಗನಿಗೆ ಬಿಟ್ಟುಕೊಟ್ಟು ತನ್ನ ಗೆಲುವಿಗಾಗಿ ಅವರೀಗ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಹೊರಟಿರುವಂತಿದೆ. ತವರು ಜಿಲ್ಲೆಯಲ್ಲೇ ಗೆಲ್ಲುವ ಧೈರ್ಯವಿಲ್ಲದೆ ಹೀಗೆ ಮಾಡುತ್ತಿದ್ದಾರೆ ಎನ್ನುವ ಅನಗತ್ಯ ಋಣಾತ್ಮಕ ಪ್ರಚಾರವನ್ನು ಅವರು ಮೈಮೇಲೆ ಎಳೆದುಕೊಂಡಿದ್ದಾರೆ. ಈಗ ಎಲ್ಲವೂ ಅಸ್ತವ್ಯಸ್ತವಾದಂತೆ ಕಾಣಿಸಲಾರಂಭಿಸಿವೆ. ಪುತ್ರನ ರಾಜಕೀಯ ಭವಿಷ್ಯಕ್ಕಾಗಿ ಬಹಳ ಸಂದಿಗ್ಧ ಸ್ಥಿತಿಯಲ್ಲಿರುವ ಪಕ್ಷದ ಭವಿಷ್ಯವನ್ನು ಸ್ವತಃ ದಂಡನಾಯಕನಾದವನೇ ಪಣಕ್ಕಿಟ್ಟಂತೆ ತೋರುತ್ತದೆ. ಇದರ ಜತೆಗೆ ಪಕ್ಷದ ಟಿಕೆಟ್ ಪಡೆದ ಈರ್ವರು ಹಿರಿಯ ನಾಯಕರು ‘ನಾವು ಸ್ಪರ್ಧಿಸುವುದಿಲ್ಲ’ ಎಂದು ಶಸ್ತ್ರ ಸನ್ಯಾಸ ಘೋಷಿಸಿದ್ದಾರೆ. ಸ್ಪರ್ಧಿಸಲು ಉತ್ಸಾಹವಿಲ್ಲದೆ ಟಿಕೆಟ್ ಪಡೆದುಕೊಂಡ ಇನ್ನಷ್ಟು ಮಂದಿ ಕಣದಲ್ಲಿದ್ದಾರೆ ಎನ್ನುವ ಸುದ್ದಿಯಿದೆ. ಪ್ರಬಲ ಪ್ರತಿಸ್ಪರ್ಧಿಗಳಿರುವ ಎಷ್ಟೋ ಕಡೆ ಹೇಳ ಹೆಸರಿಲ್ಲದ ಕಾಂಗ್ರೆಸ್ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇವೆಲ್ಲವುಗಳ ಹಿಂದೆ ಅದ್ಯಾವುದೋ ಲೆಕ್ಕಾಚಾರ, ತಂತ್ರಗಾರಿಕೆ ಇದ್ದೀತೆ? ಹಾಗಂತ ಅನ್ನಿಸುವುದಿಲ್ಲ. ಈ ತನಕ ಇವೆಲ್ಲಾ ಸೃಷ್ಟಿಸಿದ್ದು ಪಕ್ಷದ ವರ್ಚಸ್ಸಿಗೆ ಧಕ್ಕೆ ತರುವಂತಹ ಮಾಧ್ಯಮ ಪ್ರಚಾರವನ್ನು ಮಾತ್ರ.

ಇನ್ನೇನು ನಾಮಪತ್ರ ಸಲ್ಲಿಸುವ ಪ್ರಕ್ರಿಯೆಯೆಲ್ಲಾ ಮುಗಿದು ಪ್ರಚಾರದ ಅವಧಿ ಪ್ರಾರಂಭವಾಗಲಿದೆ. ಈ ಹಂತದಲ್ಲೂ ಕಾಂಗ್ರೆಸ್ ಬಳಿ ಇಡೀ ರಾಜ್ಯದ ಮತದಾರರನ್ನು ತಟ್ಟುವ ನುಡಿಗಟ್ಟೊಂದು ಇದೆ ಅಂತ ಅನ್ನಿಸುತ್ತಿಲ್ಲ. ಅದು ಬಿಜೆಪಿಯ ಬಳಿ ಕೂಡಾ ಇಲ್ಲ ಎನ್ನುವ ವಸ್ತುಸ್ಥಿತಿ ಕಾಂಗ್ರೆಸ್ಸಿನ ಚುನಾವಣಾ ತಂತ್ರ ಆಗಲಾರದು. ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಸರ್ಕಾರ ರೂಪಿಸಿದ ‘ಕರ್ನಾಟಕ ಮಿಷನ್- 2025’ ಚುನಾವಣಾ ಅಸ್ತ್ರವಾಗಿ ಮಾರ್ಪಟ್ಟಂತೆ ಕಾಣುವುದಿಲ್ಲ.

ನಿಜ. ಕಾಂಗ್ರೆಸ್ ಎಂದಿಗೂ, ಯಾವ ರಾಜ್ಯದಲ್ಲೂ, ಯಾವ ಚುನಾವಣೆಯಲ್ಲೂ ವ್ಯವಸ್ಥಿತವಾದ ತಂತ್ರ ರೂಪಿಸಿ ಗೆದ್ದ ಚರಿತ್ರೆ ಇಲ್ಲ. ಅದು ವಿರೋಧ ಪಕ್ಷಗಳ ಜನಪ್ರಿಯತೆ ಕುಗ್ಗಿದ ಕಾಲಕ್ಕೆ ತನ್ನತ್ತ ಅನಾಯಾಸವಾಗಿ ಹರಿದುಬರುವ ಜನಬೆಂಬಲವನ್ನೇ ನಂಬಿ ಇತ್ತೀಚೆಗಿನ ದಶಕಗಳಲ್ಲಿ ರಾಜಕೀಯ ಮಾಡುತ್ತಾ ಬಂದಿರುವುದು. ಅದರ ಬಳಿ ಯುದ್ಧ ಸನ್ನದ್ಧತೆ ಎನ್ನುವುದೇ ಇಲ್ಲ. ಇಷ್ಟನ್ನು ಅರ್ಥ ಮಾಡಿಕೊಳ್ಳಬಹುದು. ಆದರೆ ತನ್ನ ಅಳಿವು ಉಳಿವಿನ ಕಾಲದಲ್ಲೂ ಬದಲಾಗದೆ ಇರುವ ಆ ಪಕ್ಷದ ಸ್ಥಿತಪ್ರಜ್ಞತೆಯನ್ನು ಮತ್ತು ಸಣ್ಣತನವನ್ನು ಮೀರಲಾರದ ಅದರ ದೊಡ್ಡ ದೊಡ್ಡ ನಾಯಕರ ಮನಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಅಂತಿಂಥ ಸಂಶೋಧನೆ ಸಾಲದು.

ಕೊನೆಯದಾಗಿ ಜನತಾ ದಳ (ಜಾತ್ಯತೀತ). ಅದು ಚುನಾವಣೆಯ ಕಾಲಕ್ಕೆ ಮಾತ್ರ ಚಿಗುತುಕೊಳ್ಳುವ ಪಕ್ಷ. ಈ ಬಾರಿ ಟಿಕೆಟ್ ಹಂಚಿಕೆಯ ಸುತ್ತ ನಡೆದ ವಿದ್ಯಮಾನಗಳನ್ನು ಗಮನಿಸಿದರೆ ಅದು ಚೆನ್ನಾಗಿಯೇ ಚಿಗುತುಕೊಂಡಂತೆ ಕಾಣಿಸುತ್ತದೆ. ಚುನಾವಣೆಗೆ ಮುನ್ನ ಆ ಪಕ್ಷವನ್ನು ಬಿಟ್ಟು ಹೋದದಕ್ಕಿಂತ ಹೆಚ್ಚಿನ ಸಂಖ್ಯೆಯ ಶಾಸಕರು ಮತ್ತು ನಾಯಕರು ಬೇರೆ ಪಕ್ಷಗಳಿಂದ ಈಗ ಜನತಾದಳಕ್ಕೆ ವಲಸೆ ಬಂದಿದ್ದಾರೆ. ಅವರೆಲ್ಲಾ ಈಗ ಪಕ್ಷದ ಅಭ್ಯರ್ಥಿಗಳು. ಪ್ರತೀ ಕ್ಷೇತ್ರದಲ್ಲೂ ಕಾಂಗ್ರೆಸ್ ಮತ್ತು ಬಿಜೆಪಿಯ ಟಿಕೆಟ್‌ಗಾಗಿ ಚಾತಕಪಕ್ಷಿಗಳಂತೆ ಕಾಯುವ ಹತ್ತಾರು ಮಂದಿ ಇರುತ್ತಾರೆ. ಟಿಕೆಟ್‌ ಸಿಗುವುದು ಒಬ್ಬರಿಗೆ ಮಾತ್ರ. ಉಳಿದವರಿಗೆ ಸ್ಪರ್ಧಿಸಲೇಬೇಕೆಂದಿದ್ದರೆ ಜನತಾದಳದ ಟಿಕೆಟ್‌ ಸದಾ ಕಾಯುತ್ತಿರುತ್ತದೆ. ಅದು ನಿಜಕ್ಕೂ ಜಾತ್ಯತೀತ ಪಕ್ಷ ಹೌದೋ ಅಲ್ಲವೋ ಎನ್ನುವುದು ಚರ್ಚಾಸ್ಪದ ವಿಷಯ. ಆದರೆ ಅದು ಟಿಕೆಟ್‌ ಸಿಗದವರ ಆಶ್ರಯದಾತ ಪಕ್ಷ ಎನ್ನುವುದು ನಿಸ್ಸಂಶಯ. ಚುನಾವಣಾನಂತರದ ಕಾಲದಲ್ಲಿ ಅದು ತನ್ನ ನೋಂದಣಿಯನ್ನು ಮಾತ್ರ ಉಳಿಸಿಕೊಂಡರೆ ಸಾಕು. ಚುನಾವಣೆಯ ಕಾಲಕ್ಕೆ ವ್ಯಾಪಾರ ನಡೆಸಲು ಬೇಕಾದಷ್ಟು ರಾಜಕೀಯ ಶಕ್ತಿ ಅದಕ್ಕೆ ತನ್ನಿಂದತಾನೇ ಸಂಚಯನವಾಗುತ್ತದೆ. ಆಧುನಿಕ ಭಾರತದ ರಾಜಕೀಯದಲ್ಲಿ ಇದರದ್ದೂ ಒಂದು ವಿಶಿಷ್ಟ ಮಾದರಿ.

ಪ್ರತಿಕ್ರಿಯಿಸಿ (+)