ಶನಿವಾರ, ಫೆಬ್ರವರಿ 27, 2021
31 °C

ಶ್ರೀಗಂಧದ ರಕ್ಷಣೆಗೆ ವಿ.ವಿ ಸಂಕಲ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶ್ರೀಗಂಧದ ರಕ್ಷಣೆಗೆ ವಿ.ವಿ ಸಂಕಲ್ಪ

ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿ ಶ್ರೀಗಂಧದ ಮರಗಳ ಕಳ್ಳತನ ತಡೆಗಟ್ಟಲು ವಿ.ವಿ ಸಂಕಲ್ಪ ತೊಟ್ಟಿದೆ. ಗಂಧದ ಗಿಡ, ಮರಗಳ ರಕ್ಷಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಉನ್ನತ ಮಟ್ಟದ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.

‘ವಿ.ವಿ.ಯಲ್ಲೂ ಗಂಧದ ಕಳವು’ ಶೀರ್ಷಿಕೆಯಡಿ ಏಪ್ರಿಲ್‌ 26ರಂದು ‘ಮೆಟ್ರೊ’ದಲ್ಲಿ ಪ್ರಕಟವಾದ ‘ಇದು ವಾಸ್ತವ’ ವರದಿಯಿಂದ ಎಚ್ಚೆತ್ತ ವಿಶ್ವವಿದ್ಯಾಲಯ ಈ ಕುರಿತು ಕುಲಪತಿ, ಕುಲಸಚಿವರ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆಸಿ ಕೆಲ ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದೆ. ಅವೆಂದರೆ–

* ಜ್ಞಾನಭಾರತಿ ಆವರಣದಲ್ಲಿನ ಭದ್ರತಾ ವ್ಯವಸ್ಥೆಯನ್ನು ಬಲಪಡಿಸಲು ನಿವೃತ್ತ ಯೋಧರ ಗಸ್ತುಪಡೆ ರಚಿಸುವುದು.

* ಆವರಣದ ಗಡಿ ರಕ್ಷಣೆಗೆ ಪ್ರತ್ಯೇಕ ವಾಹನ ವ್ಯವಸ್ಥೆ ಒದಗಿಸಿ, ರಾತ್ರಿ, ಹಗಲು ವಿ.ವಿ ಆವರಣದಲ್ಲಿ ಗಸ್ತು ತಿರುಗುತ್ತಿರುವಂತೆ ವ್ಯವಸ್ಥೆ ಕಲ್ಪಿಸುವುದು.

* ವಿಶಾಲ ಆವರಣದಲ್ಲಿನ ಬಯೋ ಪಾರ್ಕ್‌, ಅಮೂಲ್ಯ ಸಸ್ಯ ಮತ್ತು ಪ್ರಾಣಿ ಸಂಪತ್ತಿನ ರಕ್ಷಣೆಗಾಗಿ ಅಗತ್ಯ ರಕ್ಷಣಾ ಆಯುಧಗಳನ್ನು (ಪಿಸ್ತೂಲ್‌, ಬಂದೂಕು) ಪಡೆಯುವುದು. ಇದಕ್ಕಾಗಿ ಸರ್ಕಾರದ ಅನುಮತಿ ಮತ್ತು ಪರವಾನಗಿ ಪಡೆಯುವುದು.

* ಬಯೋ ಪಾರ್ಕ್‌ನಲ್ಲಿ ಅನುಮತಿ ಇಲ್ಲದೆ ಪ್ರವೇಶ ನಿರಾಕರಿಸುವುದು.

* ಸಿಸಿಟಿವಿ ಕ್ಯಾಮೆರಾ, ವೀಕ್ಷಣಾ ಕೊಠಡಿ ವ್ಯವಸ್ಥೆ, ವೈರ್‌ಲೆಸ್‌ ಸಂವಹನ ಪರಿಕರ ವ್ಯವಸ್ಥೆ ಕಲ್ಪಿಸಿ ಪಹರೆಯನ್ನು ಬಲಗೊಳಿಸುವುದು. ಜತೆಗೆ ಪೊಲೀಸ್‌ ಠಾಣೆ ಸಂಪರ್ಕ ಇರುವಂತೆ ನೋಡಿಕೊಳ್ಳುವುದು.

* ಜ್ಞಾನಭಾರತಿ ಆವರಣದಲ್ಲಿ ಆಯಕಟ್ಟಿನ ಐದು ಕಡೆ ಎತ್ತರದ ವೀಕ್ಷಣಾ ಗೋಪುರಗಳನ್ನು ಕಟ್ಟಿಸುವುದು.

* ರಾತ್ರಿ ವೇಳೆ ತಿಂಗಳಿಗೆ ಒಂದು ಬಾರಿ ಸರದಿಯಂತೆ ಸ್ವಯಿಚ್ಛೆ ಮೇರೆಗೆ ವಿ.ವಿ ಅಧಿಕಾರಿಗಳು/ ವಿಭಾಗಗಳ ಮುಖ್ಯಸ್ಥರು ಪಹರೆಯ ಮೇಲುಸ್ತುವಾರಿ ನಿರ್ವಹಿಸಲು ಕ್ರಮ ತೆಗೆದುಕೊಳ್ಳುವುದು.

* ಆವರಣದ ಸುತ್ತ ಕಾಂಪೌಂಡ್‌ ಇದ್ದು, ಕೆಲವೆಡೆ ನಿರ್ಮಿಸಲಾಗಿಲ್ಲ. ಅಂಥ ಕಡೆಗಳಲ್ಲಿ ಕಾಂಪೌಂಡ್‌ ನಿರ್ಮಿಸುವುದು.

* ಜ್ಞಾನಭಾರತಿ ಆವರಣದ ಪ್ರವೇಶಕ್ಕೆ ಇರುವ ಕೆಲ ಮುಖ್ಯ ರಸ್ತೆಗಳನ್ನು ಬಿಟ್ಟು, ಕಾಲು ರಸ್ತೆಗಳನ್ನು ಮುಚ್ಚುವುದು. ಕೆಲವೆಡೆ ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸುವುದು.

* ಭಾರತೀಯ ಕ್ರೀಡಾ ಪ್ರಾಧಿಕಾರದ ಗೋಡೆ ಮತ್ತು ವೃಷಭಾವತಿ ನಾಲೆಯ ಅಂಚಿನಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಹಾಕಿ ಕಣ್ಗಾವಲು ಇಡುವುದು. 

*

ಜ್ಞಾನಭಾರತಿ ಆವರಣದಲ್ಲಿ ಗಿಡ, ಮರ, ಪ್ರಾಣಿ, ಪಕ್ಷಿಗಳ ರಕ್ಷಣಾ ವಿಷಯವನ್ನು ವಿ.ವಿ ಆಡಳಿತ ಅತ್ಯಂತ ಗಂಭೀರವಾಗಿ ಪರಿಗಣಿಸುತ್ತದೆ. ಈ ಕುರಿತು ತುರ್ತಾಗಿ ಸಭೆ ನಡೆಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ನಿರ್ಣಯ ತೆಗೆದುಕೊಳ್ಳಲಾಗಿದೆ. 

-ಬಿ.ಕೆ.ರವಿ, ಕುಲಸಚಿವ, ಬೆಂಗಳೂರು ವಿ.ವಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.