ವಿಸ್ತಾರವಾದ ಕ್ಷೇತ್ರದಲ್ಲಿ ಕಾಲ್ನಡಿಗೆಯಲ್ಲೇ ಪ್ರಚಾರ!

7
ಹನೂರು ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರ ನಡೆಸಿದ ಪ್ರೀತನ್‌ ನಾಗಪ್ಪ

ವಿಸ್ತಾರವಾದ ಕ್ಷೇತ್ರದಲ್ಲಿ ಕಾಲ್ನಡಿಗೆಯಲ್ಲೇ ಪ್ರಚಾರ!

Published:
Updated:
ವಿಸ್ತಾರವಾದ ಕ್ಷೇತ್ರದಲ್ಲಿ ಕಾಲ್ನಡಿಗೆಯಲ್ಲೇ ಪ್ರಚಾರ!

ಹನೂರು: ಈ ಬಾರಿಯ ಚುನಾವಣೆಯಲ್ಲಿ ಜಿಲ್ಲೆಯಲ್ಲಿಯೇ ಹೆಚ್ಚು ವಿಸ್ತಾರ ಹೊಂದಿರುವ ಹನೂರು ವಿಧಾನಸಭಾ ಕ್ಷೇತ್ರವು ಸಾಕಷ್ಟು ಕುತೂಹಲ ಕೆರಳಿಸಿದ್ದು, ಅಭ್ಯರ್ಥಿಗಳು ತಮ್ಮ ಕಾರ್ಯಕರ್ತರೊಂದಿಗೆ ಬಿರುಸಿನ ಪ್ರಚಾರದಲ್ಲಿ ತಲ್ಲೀನರಾಗಿದ್ದಾರೆ.

ಇದೇ ಮೊದಲ ಬಾರಿಗೆ ರಾಜಕೀಯ ಜೀವನಕ್ಕೆ ಕಾಲಿಟ್ಟಿರುವ, ದಿ.ಎಚ್.ನಾಗಪ್ಪ ಅವರ ಪುತ್ರ ಡಾ.ಪ್ರೀತನ್‍ ನಾಗಪ್ಪ ಸಹ ಕ್ಷೇತ್ರದಾದ್ಯಂತ ವ್ಯಾಪಕ ಪ್ರಚಾರ ನಡೆಸುತ್ತಿದ್ದಾರೆ. ಇವರ ಜತೆ ಪ್ರಚಾರಕ್ಕೆ ತೆರಳಿದ್ದಾಗ ಹಲವು ವಿಶೇಷಗಳು ಗಮನ ಸೆಳೆದವು.

ರಾಜಕಾರಣ ಕುಟುಂಬದ ಹಿನ್ನೆಲೆಯಿರುವ ಇವರು ಬೆಂಗಳೂರಿನ ಪ್ರತಿಷ್ಠಿತ ಕೆಂಪೇಗೌಡ ಆಸ್ಪತ್ರೆಯಲ್ಲಿ ಗ್ಯಾಸ್ಟ್ರಂತಾಲಜಿ ವೈದ್ಯರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಎರಡು ತಿಂಗಳಿನಿಂದ ಕ್ಷೇತ್ರದಾದ್ಯಂತ ಪ್ರಚಾರದಲ್ಲಿ ತೊಡಗಿದ್ದಾರೆ. ಹನೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಘೋಷಣೆಯಾದ ಮೇಲೆ ಮತ್ತಷ್ಟು ಹುರುಪಿನಿಂದ ಪ್ರಚಾರದಲ್ಲಿ ತೊಡಗಿಸಿ ಕೊಂಡಿದ್ದಾರೆ.

ಇವರ ತಂದೆ ಎಚ್.ನಾಗಪ್ಪ ಅವರು 1967 ಹಾಗೂ 1994ರಲ್ಲಿ ಎರಡು ಬಾರಿ ಕ್ಷೇತ್ರದ ಅಭ್ಯರ್ಥಿಯಾಗಿ ಜಯಗಳಿಸಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. ಬಳಿಕ ವೀರಪ್ಪನ್‍ನಿಂದ ಅಪಹರಣಕ್ಕೊಳಗಾಗಿ ಆತನಿಂದ ಹತ್ಯೆಗೊಳಗಾಗಿದ್ದರು. 2004ರಲ್ಲಿ ಪರಿಮಳಾ ನಾಗಪ್ಪ ಅವರು ಸ್ಪರ್ಧಿಸಿ ಜಯಗಳಿಸಿದ್ದರು. ಈ ಬಾರಿ ಪುತ್ರ ಪ್ರೀತನ್‍ನಾಗಪ್ಪ ಅಭ್ಯರ್ಥಿಯಾಗಿದ್ದಾರೆ.

‘ಬೆಳಿಗ್ಗೆ 5:30ಕ್ಕೆ ಏಳುವುದು ನಿತ್ಯಕರ್ಮಗಳನ್ನು ಮುಗಿಸಿ, 7 ಗಂಟೆಗೆ ಕಾರ್ಯಕರ್ತರ ಭೇಟಿ, 8 ಗಂಟೆಗೆ ಲಘು ಉಪಹಾರ ಮುಗಿಸಿ ಪ್ರಚಾರ ಆರಂಭಿಸುತ್ತೇನೆ. ಹೋದ ಕಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ನನ್ನ ನೋಡಿದ ಕೂಡಲೇ ಕೆಲವರು ನಾಗಪ್ಪನ ಕುಡಿ ಎಂದು ಭಾವನಾತ್ಮಕವಾಗಿ ಗದ್ಗದಿತರಾಗುತ್ತಾರೆ. ಗ್ರಾಮಕ್ಕೆ ಭೇಟಿ ನೀಡುತ್ತಿದ್ದಂತೆ ಆರತಿ ಬೆಳಗಿಸಿ ಆತ್ಮೀಯವಾಗಿ ಬರಮಾಡಿಕೊಳ್ಳುತ್ತಿದ್ದಾರೆ. ಇದು ಕ್ಷೇತ್ರದ ಜನತೆ ನಮ್ಮ ತಂದೆಯ ಇಂದಿಗೂ ಇಟ್ಟುಕೊಂಡಿರುವ ಪ್ರೀತಿಯನ್ನು ಪ್ರತಿನಿಧಿಸುತ್ತದೆ’ ಎನ್ನುತ್ತಾರೆ ಇವರು.

‘ತಾಯಿ ಸ್ಫರ್ಧಿಸಿದ್ದ 2004, 2008 ಹಾಗೂ 2013ರ ಚುನಾವಣೆಯಲ್ಲಿ ಅವರ ಪರವಾಗಿ ಮತಯಾಚನೆ ಮಾಡಿದ್ದೆ. ಇದರಿಂದ ಇಲ್ಲಿನ ವಾತಾವರಣ ಹೊಂದಿಕೆಯಾಗಿದೆ. ಜತೆಗೆ, ಹೋದ ಕಡೆಯಲ್ಲೆಲ್ಲಾ ಕಾರ್ಯಕರ್ತರು ಹಾಗೂ ನಾಗಪ್ಪ ಅಭಿಮಾನಿಗಳು ಬರಮಾಡಿಕೊಳ್ಳುವ ರೀತಿ ನನ್ನಲ್ಲಿ ಮತ್ತಷ್ಟು ಹುರುಪು ತುಂಬಿದೆ. ಟಿಕೆಟ್ ನೀಡುವುದಕ್ಕಿಂತ ಮುಂಚೆಯಿಂದಲೂ ಕ್ಷೇತ್ರ ಸಂಚಾರ ಮಾಡಿದ್ದೇನೆ. ಎಲ್ಲಾ ಕಡೆಯಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ’ ಎಂದು ಅವರು ಹೇಳುತ್ತಾರೆ.

ವಾತಾವರಣಕ್ಕೆ ಹೊಂದಿಕೊಳ್ಳುವ ಹಾಗೇ ನಿತ್ಯ ಆಹಾರದಲ್ಲಿ ಕೊಂಚ ಬದಲಾವಣೆ ಮಾಡಿಕೊಂಡಿರುವ ಇವರು, ಕಳೆದ ಎರಡು ವಾರದಿಂದ ಪ್ರಚಾರವನ್ನು ಮತ್ತಷ್ಟು ಬಿರುಸುಗೊ ಳಿಸಿದ್ದಾರೆ. ಇದಕ್ಕೆ ಕಾರ್ಯಕರ್ತರು ಹಾಗೂ ಮತದಾರರು ಸಹಕರಿ ಸುತ್ತಿದ್ದಾರೆ. ಬಹುತೇಕ ಕಾಡಂಚಿನ ಗ್ರಾಮಗಳಿಂದಲೇ ಆವೃತ್ತವಾಗಿರುವ ಕೆಲವು ಕಡೆ ನಡೆದುಕೊಂಡೇ ಪ್ರಚಾರ ಮಾಡಬೇಕಾಗುತ್ತದೆ.

ಕ್ಷೇತ್ರ ಹೆಚ್ಚು ವಿಸ್ತಾರವಾಗಿರುವುದರಿಂದ ಬೆಳಿಗ್ಗೆ ಆರಂಭವಾದ ಪ್ರಚಾರ ಕಾರ್ಯ ರಾತ್ರಿ 10 ಗಂಟೆಯಾದರೂ ಮುಗಿಯುವುದಿಲ್ಲ. ಒತ್ತಡದಲ್ಲೇ ನಾಳೆಯ ಪ್ರಚಾರ ಕಾರ್ಯದ ಬಗ್ಗೆ ಯೋಜನೆಗಳನ್ನು ರೂಪಿಸಬೇಕಾಗುತ್ತದೆ. ‘ವೈದ್ಯ ವೃತ್ತಿಯಿಂದ ರಾಜಕೀಯ ವೃತ್ತಿಗೆ ಪ್ರವೇಶ ಮಾಡಿದಾಗ ಕೊಂಚ ಒತ್ತಡ ಜಾಸ್ತಿಯಾಗಿತ್ತು. ಆದರೆ, ಕಾರ್ಯಕರ್ತರ ಹಾಗೂ ಕ್ಷೇತ್ರದ ಜನತೆಯ ಪ್ರೀತಿ ಒತ್ತಡವನ್ನು ನಿವಾರಣೆ ಮಾಡಿದೆ’ ಎನ್ನುತ್ತಾರೆ ಪ್ರೀತನ್.

ಬಿ.ಬಸವರಾಜು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry