ಭಾನುವಾರ, ಫೆಬ್ರವರಿ 28, 2021
23 °C
ಕಾರ್ಯಕ್ರಮದಲ್ಲಿ ರಾಜಕೀಯ ಚರ್ಚೆ : ವೇದಿಕೆ ಬಿಟ್ಟು ಹೊರನಡೆದ ಎ.ಜೆ.ಸದಾಶಿವ

ಚಿಂತನ ಮಂಥನದಲ್ಲಿ ಮತ ಮಾತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಂತನ ಮಂಥನದಲ್ಲಿ ಮತ ಮಾತು

ಬೆಂಗಳೂರು: ‘ಯಾರು ಏನೇ ಹೇಳಿದ್ರೂ ತಲೆಕೆಡಿಸಿಕೊಳ್ಳದೆ ಬಿ.ಎಸ್‌. ಯಡಿಯೂರಪ್ಪ ಲಿಂಗಾಯತರಿಗೆ ಒಳಿತು ಮಾಡಿದ್ರು. ಸಿದ್ದರಾಮಯ್ಯ ಬಾಯಿ ಬಿಟ್ಟು ಹೇಳಲಿಲ್ಲ, ಆದರೆ, ಎಲ್ಲೆಲ್ಲಿ ಕು... ಕು... ಎಂದು ಬರುತ್ತೋ ಅಲ್ಲೆಲ್ಲಾ ಸಹಾಯಕ್ಕೆ ನಿಂತರು. ಇನ್ನು ಮುಂದಾದರೂ ಒಕ್ಕಲಿಗರಿಗೆ ನೆರವಾಗುವವರು ಅಧಿಕಾರದ ಚುಕ್ಕಾಣಿ ಹಿಡಿಯುವುದು ಬೇಡವೇ?’

ಹೀಗೆಂದು ಸಭಿಕರನ್ನು ಪ್ರಶ್ನಿಸಿದ್ದು ಕೆಂಗೇರಿಯ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಚಂದ್ರಶೇಖರನಾಥ ಸ್ವಾಮೀಜಿ. ಒಕ್ಕಲಿಗರ ಜಾಗೃತಿ ಸಮಿತಿಯು ಕುವೆಂಪು ಕಲಾಕ್ಷೇತ್ರದಲ್ಲಿ ಶುಕ್ರವಾರ ಆಯೋಜಿಸಿದ್ದ ‘ನಮ್ಮ ಕಾಲ, ನಮ್ಮ ಸಮುದಾಯ ಹೊಸ ನೋಟಗಳು‘ ಚಿಂತನ ಮಂಥನ ಕಾರ್ಯಕ್ರಮ ಇಂಥದ್ದೇ ಮಾತುಗಳ ಅಬ್ಬರಕ್ಕೆ ಸಾಕ್ಷಿಯಾಯಿತು.

‘ಬಿಜೆಪಿ ಹಾಗೂ ಕಾಂಗ್ರೆಸ್‌ ರಾಷ್ಟ್ರೀಯ ಪಕ್ಷಗಳು. ಪ್ರಾದೇಶಿಕ ಪಕ್ಷವೇ ಗೆಲ್ಲಬೇಕು ಎನ್ನುವ ಮನೋಧರ್ಮವನ್ನು ಎಲ್ಲರಲ್ಲಿ ಬಿತ್ತಬೇಕಿದೆ. ಭಾರತದ ರಾಜಕೀಯ ಇತಿಹಾಸದಲ್ಲಿ ಮೊದಲಿನಿಂದಲೂ ನಡೆದು ಬಂದಿರುವುದು ಕುಟುಂಬ ರಾಜಕೀಯವೇ. ಆದರೆ, ಜೆಡಿಎಸ್‌ನತ್ತ ಮಾತ್ರ ಬೊಟ್ಟು ಮಾಡಿ ತೋರಿಸಲಾಗುತ್ತಿದೆ’ ಎಂದು ಹೇಳಿದ ಅವರು, ‘ಕಳ್ಳಕಾಕರರು ಬೇಡ, ರೈತರ ಸಂಕಷ್ಟಕ್ಕೆ ಆಗುವ, ನಮ್ಮ ಜನಾಂಗದವರಿಗೇ ಮತ ಹಾಕಿ’ ಎಂದರು.

ಕಾರ್ಯಕ್ರಮದ ಪ್ರಾರಂಭದಿಂದಲೂ ನಿರೂಪಣೆಯಿಂದ ಹಿಡಿದು ಎಲ್ಲರ ಮಾತಿನ ಧಾಟಿ ಜೆಡಿಎಸ್‌ಗೆ ಮತ ಯಾಚಿಸಿದ ರೀತಿಯಲ್ಲಿಯೇ ಇತ್ತು. ಸಭೆಯಲ್ಲಿದ್ದ ಕೆಲವರು ‘ನೇರವಾಗಿ ಚರ್ಚಾ ವಿಷಯಕ್ಕೆ ಬನ್ನಿ’ ಎಂದು ಚೀಟಿಯನ್ನೂ ವೇದಿಕೆಗೆ ರವಾನಿಸುತ್ತಿದ್ದರು.

ವೇದಿಕೆಯಲ್ಲಿದ್ದ ಪ್ರೊ.ಎಂ.ಎಚ್‌.ಕೃಷ್ಣಯ್ಯ, ಟಿ.ತಿಮ್ಮೇಗೌಡ, ವೈ.ಕೆ. ಪುಟ್ಟಸ್ವಾಮೇಗೌಡ ಹಾಗೂ ವಿಶ್ರಾಂತ ನ್ಯಾಯಮೂರ್ತಿ ಎ.ಜೆ.ಸದಾಶಿವ ಕಾರ್ಯಕ್ರಮದ ಮೂಲ ಉದ್ದೇಶವನ್ನೇ ಚರ್ಚೆಗೆ ತರಬೇಕು ಎಂದು ಸಾಕಷ್ಟು ಪ್ರಯತ್ನ ಪಟ್ಟರು. ಆದರೆ, ಭಾಷಣಕಾರರ ಮುಂದಿನ ಮಾತಿನಲ್ಲಿ ಪುನಃ ಜೆಡಿಎಸ್‌ ಪರ ಮಾತುಗಳೇ ಪ್ರತಿಧ್ವನಿಸಿದವು. ಕೆಲ ಸಮಯ ಬಿಟ್ಟು ಎ.ಜೆ.ಸದಾಶಿವ ವೇದಿಕೆಯಿಂದ ಹೊರ ನಡೆದರು.

ಸಭಾಂಗಣ ತುಂಬಿದ್ದ ಅನೇಕರು ‘ಮಾತನಾಡಲು ಅವಕಾಶ ಬೇಕು, ಸಾಕಷ್ಟು ಪ್ರಶ್ನೆಗಳಿವೆ’ ಎಂದು ದುಂಬಾಲು ಬಿದ್ದು ಮೈಕ್‌ ತೆಗೆದುಕೊಂಡು, ‘ಇದು ಸುವರ್ಣಾವಕಾಶ, ಇಂಥ ಅವಕಾಶ ಮತ್ತೆ ಬರುವುದಿಲ್ಲ. ಎಲ್ಲರೂ ಜೆಡಿಎಸ್‌ಗೇ ಮತ ಹಾಕಬೇಕು. ಬಡವರು, ಒಕ್ಕಲಿಗರಿಗೆ ಯಾವುದೇ ರೀತಿಯಲ್ಲಿ ಸಹಾಯ ಮಾಡದ ಸರ್ಕಾರವನ್ನು ಕೆಳಗಿಳಿಸಿ ವಿಧಾನಸೌಧದಲ್ಲಿ ನೇಗಿಲ ಹೊತ್ತ ರೈತರು ಕಾಲಿಡುವಂತೆ ಮಾಡಬೇಕು. ರೈತರ ಸಮಸ್ಯೆ ಕೇಳುವ, ರೈತರ ಸಾಲ ಮನ್ನಾ ಮಾಡುವ ಜನಪ್ರತಿನಿಧಿ ನಮಗೆ ಬೇಕು. ಲಿಂಗಾಯತರು ಆಳಿದ್ರು, ಕುರುಬರು ಆಳಿದ್ರು, ಇನ್ನು ಮುಂದೆ ಗೌಡ್ರು ಆಳಲಿ’ ಎಂದು ರೋಷಾವೇಷದಿಂದ ತೋರಿದರು.

ಕೃಷಿ ಸಮುದಾಯ ಫೌಂಡೇಷನ್‌ನಲ್ಲಿ ಓದುತ್ತಿರುವ ಒಬ್ಬ ವಿದ್ಯಾರ್ಥಿಯ ಖರ್ಚುವೆಚ್ಚಕ್ಕೆ ಸಹಾಯ ಮಾಡುವ ಉದ್ದೇಶದಿಂದ ಒಕ್ಕಲಿಗರ ಜಾಗೃತಿ ಸಮಿತಿ ಮುಖಂಡ ಮಹಾಲಿಂಗೇಗೌಡ ಅವರು ಖಾಲಿ ಚೆಕ್‌ ಒಂದನ್ನು ಸ್ಫಟಿಕಪುರಿ ಸಂಸ್ಥಾನದ ನಂಜಾವಧೂತ ಸ್ವಾಮೀಜಿ ಅವರಿಂದ ಕೊಡಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.