ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಲಮನ್ನಾಕ್ಕೆ ಪೈಪೋಟಿ

Last Updated 4 ಮೇ 2018, 22:09 IST
ಅಕ್ಷರ ಗಾತ್ರ

ಬೆಂಗಳೂರು/ಕಲಬುರ್ಗಿ: ವಿಧಾನಸಭಾ ಚುನಾವಣೆಯ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸುವ ‘ನೇಗಿಲ ಯೋಗಿ’ಗಳನ್ನು ಓಲೈಸಲು ಮುಂದಾಗಿರುವ ಮೂರು ರಾಜಕೀಯ ಪಕ್ಷಗಳು ‘ಸಾಲ ಮನ್ನಾದ ಸುಗ್ಗಿ’ಯನ್ನೇ ಧರೆಗಿಳಿಸುವುದಾಗಿ ಭರವಸೆ ನೀಡಿವೆ.

ಬಿಜೆಪಿ ಶುಕ್ರವಾರ ಬಿಡುಗಡೆ ಮಾಡಿರುವ ಪ್ರಣಾಳಿಕೆಯಲ್ಲಿ, ರಾಷ್ಟ್ರೀಕೃತ ಬ್ಯಾಂಕುಗಳು ಹಾಗೂ ಸಹಕಾರಿ ಸಂಘಗಳಲ್ಲಿರುವ ₹1 ಲಕ್ಷ ವರೆಗಿನ ಬೆಳೆ ಸಾಲ ಮನ್ನಾ ಮಾಡಲಾಗುವುದು. ಮೊದಲ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಲಾಗಿದೆ.

ಕಲಬುರ್ಗಿ ಜಿಲ್ಲೆ ಕಾಳಗಿಯಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ‘2019ರ  ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಲಿದೆ. ಅಧಿಕಾರಕ್ಕೆ ಬಂದ 10 ದಿನಗಳಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ರೈತರ ಸಾಲವನ್ನು ಮನ್ನಾ ಮಾಡಲಾಗುವುದು’ ಎಂದು ಘೋಷಿಸಿದರು.

‘ದೇಶದಲ್ಲಿರುವ ರೈತರ ಸಾಲ ಮನ್ನಾ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ಕೇಳಿದೆ. ಅವರು ಆಗುವುದಿಲ್ಲ ಎಂದರು. ಆದರೆ, ಕಾರ್ಪೋರೇಟ್ ಕ್ಷೇತ್ರದ ₹2.5 ಲಕ್ಷ ಕೋಟಿ ಸಾಲ ಮನ್ನಾ ಮಾಡಿದರು. ಸಿದ್ದರಾಮಯ್ಯ ಅವರಿಗೆ ಈ ಬಗ್ಗೆ ಹೇಳಿದಾಗ 10 ದಿನದಲ್ಲಿ ಅವರು ರಾಜ್ಯದ ರೈತರ ₹50,000ದವರೆಗಿನ ಸಾಲ ಮನ್ನಾ ಮಾಡಿದರು’ ಎಂದು ಅವರು ನೆನಪಿಸಿಕೊಂಡರು.

ಜೆಡಿಎಸ್‌ ಪ್ರಣಾಳಿಕೆ ಇನ್ನೂ ಬಿಡುಗಡೆಯಾಗಿಲ್ಲ. ಆದರೆ, ಆ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರು, ರಾಜ್ಯದಾದ್ಯಂತ ನಡೆಸಿದ ವಿಕಾಸ ಪರ್ವ ಸಮಾವೇಶದಲ್ಲಿ ಸಾಲಮನ್ನಾದ ಬಗ್ಗೆ ಆಶ್ವಾಸನೆ ನೀಡುತ್ತಲೇ ಬಂದಿದ್ದಾರೆ.

‘ರಾಷ್ಟ್ರೀಕೃತ, ಸಹಕಾರಿ ಬ್ಯಾಂಕ್ ಮತ್ತು ಸಂಘಗಳಲ್ಲಿ ರೈತರು ಮಾಡಿರುವ ಸಾಲದ ಮೊತ್ತ ₹58,000 ಕೋಟಿಯಷ್ಟಿದೆ. ಅಧಿಕಾರಕ್ಕೆ ಬಂದ ಕೂಡಲೇ ರೈತರು ಮಾಡಿರುವ ಸಂಪೂರ್ಣ ಸಾಲಮನ್ನಾ ಮಾಡಿ, ಅನ್ನದಾತರನ್ನು ಸಾಲಮುಕ್ತರನ್ನಾಗಿಸುತ್ತೇನೆ. ಇದಕ್ಕಾಗಿ ಎಲ್ಲಿಂದ ಹಣ ಹೊಂದಿಸಬೇಕು ಎಂಬ ಬಗ್ಗೆಯೂ ಈಗಾಗಲೇ ಯೋಜನೆ ರೂಪಿಸಿದ್ದೇನೆ’ ಎಂದು ಅವರು ಪ್ರತಿಪಾದಿಸಿದ್ದಾರೆ.

ಬಿಜೆಪಿಯವರು ಬರೀ ಸುಳ್ಳು ಹೇಳುತ್ತಾರೆ. ಈಗ ಸಾಲ ಮನ್ನಾ ಬಗ್ಗೆ ಮಾತನಾಡುವವರು ಯಡಿಯೂರಪ್ಪ ಅಧಿಕಾರದಲ್ಲಿದ್ದಾಗ ಏಕೆ ಅದನ್ನು ಮಾಡಲಿಲ್ಲ
–ಸಿದ್ದರಾಮಯ್ಯ, ಮುಖ್ಯಮಂತ್ರಿ

ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿರುವ ಸಾಲ ಮನ್ನಾ ಮಾಡಿ ಎಂದು ಆಗ್ರಹಿಸಿದರೆ ಸಿದ್ದರಾಮಯ್ಯ ಕೇಂದ್ರದ ಕಡೆ ಬೊಟ್ಟು ತೋರಿಸುತ್ತಿದ್ದರು. ಈ ಸವಾಲು ಸ್ವೀಕರಿಸಿದ್ದೇನೆ

–ಬಿ.ಎಸ್. ಯಡಿಯೂರಪ್ಪ,ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ

ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ 24 ಗಂಟೆಯೊಳಗೆ ರೈತರು ಮಾಡಿರುವ ಸಾಲವನ್ನು ಮನ್ನಾ ಮಾಡುತ್ತೇನೆ. ಇದು ನನ್ನ ವಾಗ್ದಾನ

–ಎಚ್.ಡಿ.ಕುಮಾರಸ್ವಾಮಿ, ರಾಜ್ಯ ಜೆಡಿಎಸ್‌ ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT