ರೈತರೆ ನನಗೆ ಹೈಕಮಾಂಡ್‌: ಕುಮಾರಸ್ವಾಮಿ

7
ರಾಯಚೂರು ತಾಲ್ಲೂಕು ಗಿಲ್ಲೇಸುಗೂರಿನಲ್ಲಿ ಜೆಡಿಎಸ್‌ ಬಹಿರಂಗ ಪ್ರಚಾರ ಸಭೆ

ರೈತರೆ ನನಗೆ ಹೈಕಮಾಂಡ್‌: ಕುಮಾರಸ್ವಾಮಿ

Published:
Updated:
ರೈತರೆ ನನಗೆ ಹೈಕಮಾಂಡ್‌: ಕುಮಾರಸ್ವಾಮಿ

ರಾಯಚೂರು: ‘ಕಾಂಗ್ರೆಸ್‌ ಪಕ್ಷ ರಾಜ್ಯದ ಹಣ ಲೂಟಿ ಮಾಡುತ್ತಿದೆ ಎಂದು ಬಿಜೆಪಿ ಆರೋಪಿಸುತ್ತಿದೆ. ಅದೇ ರೀತಿ ಕಾಂಗ್ರೆಸ್‌ ಪಕ್ಷವು ಬಿಜೆಪಿ ಲೂಟಿಕೋರ ಪಕ್ಷ ಎಂದು ಆರೋಪಿಸುತ್ತಿದೆ. ಆದರೆ ಈ ಎರಡು ಪಕ್ಷಗಳು ಜನರ ಹಣ ಲೂಟಿ ಮಾಡಿ ಪ್ರತಿ ತಿಂಗಳು ಹೈಕಮಾಂಡ್‌ಗೆ ಕಳುಹಿಸಬೇಕು. ಈ ಅಗತ್ಯ ಜೆಡಿಎಸ್‌ಗೆ ಇಲ್ಲ. ಜೆಡಿಎಸ್‌ನಲ್ಲಿ ಹೈಕಮಾಂಡ್‌ ಯಾರೂ ಇಲ್ಲ. ನನಗೆ ರೈತರೆ ಹೈಕಮಾಂಡ್‌’ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

ತಾಲ್ಲೂಕಿನ ಗಿಲ್ಲೇಸುಗೂರಿನಲ್ಲಿ ಶುಕ್ರವಾರ ಆಯೋಜಿಸಿದ್ದ ರಾಯಚೂರು ಗ್ರಾಮೀಣ ಕ್ಷೇತ್ರದ ಬಹಿರಂಗ ಪ್ರಚಾರಸಭೆಯಲ್ಲಿ ಮಾತನಾಡಿದರು. ಎರಡು ರಾಷ್ಟ್ರೀಯ ಪಕ್ಷಗಳು ಪರಸ್ಪರ ಕಚ್ಚಾಟದಲ್ಲಿ ನಿರತವಾಗಿವೆ. ಆದರೆ ರೈತರಿಗೆ ನ್ಯಾಯ ದೊರಕಿಸುವ ಕೆಲಸ ಮಾಡುತ್ತಿಲ್ಲ. ರೈತರನ್ನು ಸಾಲಮುಕ್ತರನ್ನಾಗಿ ಮಾಡಿ, ಮತ್ತೆ ಸಾಲ ಮಾಡದಂತಹ ಕೃಷಿ ನೀತಿಯ ಬಗ್ಗೆ ರೂಪುರೇಷೆಯನ್ನು ಜೆಡಿಎಸ್‌ ರೂಪಿಸಿದೆ ಎಂದು ಹೇಳಿದರು.

ಬೆಳೆ ಬೆಳೆಯುವುದಕ್ಕೆ ರೈತರಿಗೆ ಬೇಕಾಗುವ ಎಲ್ಲ ಸಂಪನ್ಮೂಲಗಳನ್ನು ಸರ್ಕಾರದಿಂದಲೇ ಒದಗಿಸಲಾಗುವುದು. 65 ವರ್ಷ ಮೇಲ್ಪಟ್ಟ ರೈತರಿಗೆ ಪ್ರತಿ ತಿಂಗಳು ₹5 ಸಾವಿರ ಮಾಸಾಶನ, ಮಹಿಳೆಯರಿಗೆ ಹೆರಿಗೆ ಪೂರ್ವ ಆರು ತಿಂಗಳು ಮತ್ತು ಹೆರಿಗೆ ನಂತರ ಆರು ತಿಂಗಳುಗಳವರೆಗೆ ₹6 ಸಾವಿರ ಧನಸಹಾಯ, ಅಂಗವಿಕಲರಿಗೆ, ವಿಧವೆಯರ ಮಾಸಿನ ವೇತನವನ್ನು ₹500 ರಿಂದ ₹2 ಸಾವಿರಕ್ಕೆ ಹೆಚ್ಚಿಸಲಾಗುವುದು ಎಂದು ತಿಳಿಸಿದರು.

ಬೆಳೆನಷ್ಟದಿಂದ ರೈತರು ರಾಜ್ಯದಾದ್ಯಂತ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೂ ಯಾವುದೇ ಪರಿಹಾರ ಕಲ್ಪಿಸುವ ಕೆಲಸವನ್ನು ಕಾಂಗ್ರೆಸ್‌ ಮಾಡಿಲ್ಲ. ಸರ್ಕಾರವು ₹50 ಸಾವಿರ ಸಾಲಮನ್ನಾ ಘೋಷಿಸಿ ಒಂದು ವರ್ಷವಾಗುತ್ತಿದ್ದು, ಇನ್ನೂ ಬ್ಯಾಂಕುಗಳಿಗೆ ಸಾಲಮೊತ್ತ ಜಮಾ ಆಗಿಲ್ಲ ಎಂದರು.

ಮೇ 17 ರಂದು ಕಂಠೀರವ ಸ್ಟುಡಿಯೋದಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತೇನೆ ಎಂದು ಬಿ.ಎಸ್‌.ಯಡಿಯೂರಪ್ಪ ಘೋಷಿಸಿದ್ದಾರೆ. ಮತ್ತೊಮ್ಮೆ ನಾನೇ ಮುಖ್ಯಮಂತ್ರಿಯಾಗುತ್ತೇನೆ ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಇಂತಹ ಭ್ರಮೆ ಜೆಡಿಎಸ್‌ ಪಕ್ಷಕ್ಕೆ ಇಲ್ಲ. ಮುಖ್ಯಮಂತ್ರಿ ಯಾರಾಗಬೇಕೆಂದು ಜನರು ಆಯ್ಕೆ ಮಾಡುತ್ತಾರೆ. ಜೆಡಿಎಸ್‌ ಯೋಜನೆಗಳನ್ನು ಮಾತ್ರ ನಾನು ಹೇಳುತ್ತಿದ್ದೇನೆ. ಜನರು ಜೆಡಿಎಸ್‌ ಪಕ್ಷಕ್ಕೆ ಬಹುಮತ ಕೊಟ್ಟರೆ, 24 ಗಂಟೆಯೊಳಗಾಗಿ ಎಲ್ಲ ರೀತಿಯ ಸಾಲಮನ್ನಾ ಮಾಡುತ್ತೇನೆ ಎಂದು ಹೇಳಿದರು.

ವಿಧಾನ ಪರಿಷತ್‌ ಸದಸ್ಯ ಟಿ.ಎ. ಶರವಣ, ಜಿಲ್ಲಾ ಜೆಡಿಎಸ್‌ ಅಧ್ಯಕ್ಷ ಎಂ.ವಿರೂಪಾಕ್ಷಿ, ಸಿಂಧನೂರು ಜೆಡಿಎಸ್‌ ಅಭ್ಯರ್ಥಿ ವೆಂಕಟರಾವ್‌ ನಾಡಗೌಡ, ಮುಖಂಡ ಜಾಫರಅಲಿ ಪಾಟೀಲ ಇದ್ದರು.

**

ಎರಡು ರಾಷ್ಟ್ರೀಯ ಪಕ್ಷಗಳು ಗ್ರಾಮೀಣ ಕ್ಷೇತ್ರದಲ್ಲಿ ಹೊಂದಾಣಿಕೆ ಮಾಡಿಕೊಂಡಿದ್ದರಿಂದ ಅಭಿವೃದ್ಧಿ ಮಾಡಿಲ್ಲ

– ರವಿ ಪಾಟೀಲ,ರಾಯಚೂರು ಗ್ರಾಮೀಣ ಜೆಡಿಎಸ್‌ ಅಭ್ಯರ್ಥಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry