ಮಂಗಳವಾರ, ಮಾರ್ಚ್ 9, 2021
18 °C
ಭದ್ರಾವತಿ: ಪ್ರಧಾನಿ ನರೇಂದ್ರ ಮೋದಿಯನ್ನು ಟೀಕಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ

56 ಇಂಚಿನ ಎದೆಯಲ್ಲಿ ಬಡವರ ಕಾಳಜಿ ಇಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

56 ಇಂಚಿನ ಎದೆಯಲ್ಲಿ ಬಡವರ ಕಾಳಜಿ ಇಲ್ಲ

ಭದ್ರಾವತಿ:  ‘ಕಳೆದ ಬಾರಿ ಸಂಗಮೇಶ್ವರ ಅವರಿಗೆ ಟಿಕೆಟ್ ತಪ್ಪಲು ನಾನು ಕಾರಣ. ಈ ಬಾರಿ ಕೊಟ್ಟಿದ್ದೇನೆ.  ಅದಕ್ಕೆ ತಕ್ಕಂತೆ ಗೆಲ್ಲಿಸುವ ಜವಾಬ್ದಾರಿ ನಿಮ್ಮ ಮೇಲಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಕನಕಮಂಟಪ ಮೈದಾನದಲ್ಲಿ ಶುಕ್ರವಾರ ನಡೆದ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ‘ನಮ್ಮ ಪಕ್ಷದ ಹಿರೀಕ ಸಿ.ಎಂ.ಇಬ್ರಾಹಿಂ ಕಳೆದ ಬಾರಿ ಸ್ಪರ್ಧಿಸಿದ್ದರು. ಆಗ ಸಂಗಮೇಶ್ವರನಿಗೆ ಅನ್ಯಾಯ ಆಗಿತ್ತು. ಈ ಬಾರಿ ಸರಿ ಮಾಡಿದ್ದೇನೆ. ಅದರಂತೆ ನೀವು ಈ ಸಲ ಅವರನ್ನು ಗೆಲ್ಲಿಸಬೇಕು’ ಎಂದು ಕರೆ ನೀಡಿದರು.

‘ಇಲ್ಲಿನ ವಿಐಎಸ್ಎಲ್ ಹಾಗೂ ಎಂಪಿಎಂ ವಿಚಾರವಾಗಿ ಶಾಸಕನಲ್ಲದಿದ್ದರೂ ಸಂಗಮೇಶ್ವರ ನೂರಾರು ಬಾರಿ ನನ್ನ ಬಳಿ ಬಂದು ಕೆಲಸ ಮಾಡಿಸಿದ್ದಾನೆ. ಎರಡು ಕಾರ್ಖಾನೆ ವಿಷಯದಲ್ಲಿ ಕೆಲಸ ಆಗಿದೆ ಎಂದರೆ ಅದು ಇವನಿಂದ ಮಾತ್ರ. ನಿಮ್ಮ ಈಗಿನ ಶಾಸಕರಿಂದಲ್ಲ’ ಎಂದರು.

56 ಇಂಚಿನ ಎದೆ: ‘ಮೋದಿಗೆ 56 ಇಂಚಿನ ಎದೆ ಇದೆ. ಒಳಗಡೆ ಬಡವರ ಪರ ಹೃದಯ ಇಲ್ಲ, ಆದರೆ ನಮ್ಮ ಅಭ್ಯರ್ಥಿಗೆ  ಬಡವರ ಕಣ್ಣೀರು ಒರೆಸುವ ಹೃದಯ ಇದೆ. ಕಳೆದ ಸಾರಿ ಮಾಡಿದ ತಪ್ಪನ್ನು ಈ ಬಾರಿ ಮಾಡದೆ  ಪಕ್ಷ ಗೆಲ್ಲಿಸಬೇಕು’ ಎಂದು ಮನವಿ ಮಾಡಿದರು.

‘ಈ ಹಿಂದೆ ಆಡಳಿತ ನಡೆಸಿದ ಬಿಜೆಪಿ, ಜೆಡಿಎಸ್ ಸರ್ಕಾರಗಳು ಯಾವುದೇ ಜನಪರ ಕಾಳಜಿ ಹೊಂದಿರದೆ ಕೇವಲ ಮೊಸಳೆ ಕಣ್ಣೀರಿನ ರಾಜಕಾರಣ ನಡೆಸಿದವು. ಆದರೆ, ನಾವು ನುಡಿದಂತೆ ನಡೆದು ಬಡವರ ಪರ ಕಾಳಜಿ ಇಟ್ಟು ಕೆಲಸ ಮಾಡಿದ್ದೇವೆ’ ಎಂದರು.‌

‘ ಜೆಡಿಎಸ್  20ರಿಂದ 25 ಸೀಟು ಪಡೆಯುವ ಪಕ್ಷ. ಕೇವಲ ಅವಕಾಶವಾದಿ ರಾಜಕಾರಣ ಮೂಲಕ ಮಗನನ್ನು ಮುಖ್ಯಮಂತ್ರಿ ಮಾಡಲು ದೇವೇಗೌಡರು ಕಣ್ಣೀರು ಸುರಿಸುತ್ತಾರೆ. ಇದನ್ನು ನಂಬಬೇಡಿ. ಅವರಿಗೆ ನೀವು ನೀಡುವ ಮತ ಬಿಜೆಪಿಗೆ ಕೊಟ್ಟಂತೆ ಈ ಕುರಿತು ಅಲ್ಪಸಂಖ್ಯಾತರು ಎಚ್ಚರ ವಹಿಸಬೇಕು’ ಎಂದು ಸಲಹೆ ನೀಡಿದರು.

‘ದೇವೇಗೌಡ, ಕುಮಾರಸ್ವಾಮಿ, ಯಡಿಯೂರಪ್ಪ ಮುಖ್ಯಮಂತ್ರಿ ಆದಾಗ ಏನು ಕೆಲಸ ಮಾಡಿದ್ದಾರೆ ಪಟ್ಟಿ ಕೊಡಲಿ. ನಾನು ಏನು ಮಾಡಿದ್ದೇನೆ ಪಟ್ಟಿ ಕೊಡುತ್ತೇನೆ. ಅಧಿಕಾರ ಇದ್ದಾಗ ಕೆಲಸ ಮಾಡದವರು ಈಗ ಮಾಡುತ್ತೇನೆ ಎಂದು ಪುಟಗಟ್ಟಲೆ ಜಾಹೀರಾತು ನೀಡುವುದು ಅವರ ಸುಳ್ಳಿನ ರಾಜಕಾರಣಕ್ಕೆ ಹಿಡಿದ ಕೈಗನ್ನಡಿ’ ಎಂದು ಲೇವಡಿ ಮಾಡಿದರು.

ಸದನದಲ್ಲಿ ಮಾತನಾಡದ ಶಾಸಕ: ‘ಇಲ್ಲಿ ಏನಿದ್ದರೂ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಹಣಾಹಣಿ ಇದೆ. ಬಿಜೆಪಿ ಲೆಕ್ಕಕ್ಕಿಲ್ಲ. ಇಲ್ಲಿನ ಶಾಸಕ ಅಪ್ಪಾಜಿ ಎಂದೂ ಯಾವತ್ತೂ ನನ್ನ ಹತ್ತಿರ ಬಂದಿಲ್ಲ. ಇಲ್ಲಿನ ಸಮಸ್ಯೆಗಳ ಕುರಿತು ಗಮನ ಸೆಳೆದಿಲ್ಲ. ಸದನದಲ್ಲೂ ಯಾವತ್ತೂ ಮಾತನಾಡಿಲ್ಲ. ಇಲ್ಲಿ ಏನಾದರೂ ಕೆಲಸ ಆಗಿದೆ ಎಂದರೆ ಅದು ನಮ್ಮ ಅಭ್ಯರ್ಥಿ ಸಂಗಮೇಶನಿಂದ’ ಎಂದು ಹೇಳಿದರು.

‘ಕರ್ನಾಟಕ ಜನ ಒಳ್ಳೆಯ ಕೆಲಸ ಮಾಡಿದ ನಾಯಕರನ್ನು ಎಂದೂ ಯಾವತ್ತೂ ಕೈಬಿಟ್ಟಿರುವ ಉದಾಹರಣೆ ಇಲ್ಲ. ಇಲ್ಲಿ ನಮ್ಮ ಅಭ್ಯರ್ಥಿ ಗೆಲ್ಲವುದು ಎಷ್ಟು ನಿಶ್ಚಿತವೋ, ನಾನು ಮುಖ್ಯಮಂತ್ರಿ ಆಗುವುದು ಅಷ್ಟೇ ನಿಶ್ಚಿತ’ ಎಂದು ಘೋಷಿಸಿದರು.

ಸಭೆಯಲ್ಲಿ ಸಚಿವ ಕಾಗೋಡು ತಿಮ್ಮಪ್ಪ, ಬಿ.ಕೆ. ಸಂಗಮೇಶ್ವರ,ಎಐಸಿಸಿ ಸದಸ್ಯ ಮಂಜುನಾಥ ಭಂಡಾರಿ, ಬಲ್ಕಿಷ್ ಬಾನು, ಮಹಮ್ಮದ್ ಸನಾವುಲ್ಲಾ, ಚನ್ನಪ್ಪ, ಸಿ.ಎಂ. ಖಾದರ್ ಮಾತನಾಡಿದರು. ನಗರಾಧ್ಯಕ್ಷ ಟಿ. ಚಂದ್ರೇಗೌಡ, ಗ್ರಾಮಾಂತರ ಅಧ್ಯಕ್ಷ ಎಚ್.ಎಲ್. ಷಡಕ್ಷರಿ, ಬಿ.ಟಿ. ನಾಗರಾಜ್, ಬಿ.ಕೆ. ಮೋಹನ್, ರೇಣುಕಮ್ಮ, ಸುಂದರೇಶ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಧು ಯಾಸ್ಕಿಗೌಡ ಅವರೂ ಉಪಸ್ಥಿತರಿದ್ದರು.

‘ಇವರ ಮನೆಯಲ್ಲಿ ಎಲ್ಲರೂ ಸಿ.ಎಂ’

‘ಇವರ ಮನೆಯವರು ಮಾತ್ರ ಯಾವಾಗ್ಲೂ ಸಿ.ಎಂ. ನಾವೆಲ್ಲಾ ಏನೂ ಲೆಕ್ಕಕ್ಕಿಲ್ವ’ ಎಂದು ಸಿದ್ದರಾಮಯ್ಯ ಇಬ್ರಾಹಿಂ ಸಹೋದರ ಸಿ.ಎಂ. ಖಾದರ್ ಅವರನ್ನು ನೋಡುತ್ತಾ ಹೇಳಿದರು.

ಸಂಗಮೇಶ್ವರ  ಖಾದರ್ ಹೆಸರು ಹೇಳುವಂತೆ ಮುಖ್ಯಮಂತ್ರಿ ಅವರ ಕಿವಿಯಲ್ಲಿ ಹೇಳಿದಾಗ ವೇದಿಕೆಯತ್ತ ತಿರುಗಿದ ಅವರು ‘ಏನಾಪ್ಪ ನೀವು ಮಾತ್ರ ಯಾವಾಗ್ಲೂ ಸಿ.ಎಂ.’ ಎಂದು ಕಿಚಾಯಿಸಿದರು.

ಅಜಾನ್ ಜ್ಞಾಪಿಸಿದ ಮುಖಂಡ

ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಷಣದ ವೇಳೆ ಮುಖಂಡ ಅಮೀರ್ ಜಾನ್ ಅವರು ಬಳಿ ತೆರಳಿ ಅಜಾನ್ ನಡೆದಿದೆ ಎಂದು ತಿಳಿಸಿದರು. ವಾಚ್ ನೋಡುತ್ತ ‘7 ಗಂಟೆಗಲ್ವ’ ಎಂದರು. ಆಗ ಸಂಗಮೇಶ್ವರ ‘6.50ಕ್ಕೆ ಸಾರ್’ ಎಂದಾಗ ಸಿ.ಎಂ. ಭಾಷಣ ನಿಲ್ಲಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.