ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಣ್ಣು ಮಕ್ಕಳನ್ನು ಪ್ರಶ್ನಿಸುವ ಮನೋಭಾವ ಬದಲಿಸಿಕೊಳ್ಳಿ

ಪೋಷಕರಿಗೆ ಪ್ರಧಾನಿ ನರೇಂದ್ರ ಮೋದಿ ಸಲಹೆ
Last Updated 5 ಮೇ 2018, 19:30 IST
ಅಕ್ಷರ ಗಾತ್ರ

ಮಂಗಳೂರು: ಸ್ತ್ರೀಯರ ಸುರಕ್ಷತೆಯೇ ನಮ್ಮ ಆದ್ಯತೆ. ಅದಕ್ಕಾಗಿಯೇ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸುವ ಕಾನೂನನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಶನಿವಾರ ಸಂಜೆ ಇಲ್ಲಿನ ನೆಹರೂ ಮೈದಾನದಲ್ಲಿ ನಡೆದ ಬಿಜೆಪಿ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ ಅವರು, ತಡವಾಗಿ ಬರುವ, ಮೊಬೈಲ್‌ನಲ್ಲಿ ಮಾತನಾಡುವ ಹೆಣ್ಣು ಮಕ್ಕಳನ್ನು ಪ್ರಶ್ನಿಸುವ ಮನೋಭಾವವನ್ನು ಪಾಲಕರು ಬದಲಿಸಬೇಕು. ಮನೆಗೆ ತಡವಾಗಿ ಬರುವ ಗಂಡು ಮಕ್ಕಳನ್ನು ಪ್ರಶ್ನಿಸಿ ಎಂದು ಸಲಹೆ ನೀಡಿದರು.

ಮಹಿಳೆಯರ ಸಬಲೀಕರಣದ ಬಗ್ಗೆ ಮಾತನಾಡುವ ಕಾಂಗ್ರೆಸ್‌, ತ್ರಿವಳಿ ತಲಾಖ್‌ ರದ್ದುಪಡಿಸುವ ಮಸೂದೆಗೆ ರಾಜ್ಯಸಭೆಯಲ್ಲಿ ಒಪ್ಪಿಗೆ ಕೊಡದೇ ಇರುವುದು ಏಕೆ ಎಂದು ಪ್ರಶ್ನಿಸಿದರು.

ಇವಿಎಂಗಳಲ್ಲಿಯೂ ದೋಷ ಹುಡುಕುವ ಕಾಂಗ್ರೆಸ್ಸಿಗರಿಗೆ ಕರ್ನಾಟಕದ ಮತದಾರರು ತಕ್ಕ ಉತ್ತರ ನೀಡಲಿದ್ದಾರೆ. ಎನರ್ಜಿ (ಮತದಾರರ ಶಕ್ತಿ), ವ್ಯಾಲ್ಯೂ ಅಡಿಶನ್‌ (ಮತದಾರರ ಮೌಲ್ಯವರ್ಧನೆ) ಹಾಗೂ ಮೋಟಿವೇಶನ್‌ (ಮತದಾರರ ಪರಿವರ್ತನೆ) ಇದು ಇವಿಎಂನ ನಿಜವಾದ ಅರ್ಥ ಎಂದು ಬಣ್ಣಿಸಿದರು.

ಜಾತಿ ಧರ್ಮದ ಆಧಾರದಲ್ಲಿ ಅಪರಾಧಿಗಳ ನಿರ್ಧಾರ

ಶಿವಮೊಗ್ಗ: ಜಾತಿ, ಧರ್ಮದ ಆಧಾರದ ಮೇಲೆ ಅಪರಾಧಿ, ನಿರಪರಾಧಿ ಎಂದು ನಿರ್ಧರಿಸುವ ಕೀಳು ಮನಸ್ಥಿತಿಗೆ ಕಾಂಗ್ರೆಸ್ ತಲುಪಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಆರೋಪಿಸಿದರು.

ಇಲ್ಲಿನ ಎನ್‌ಇಎಸ್ ಮೈದಾನದಲ್ಲಿ ಬಿಜೆಪಿ ಜಿಲ್ಲಾ ಘಟಕ ಶನಿವಾರ ಹಮ್ಮಿಕೊಂಡಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

ದೇಶ, ರಾಜ್ಯದಲ್ಲಿ ಬ್ರಿಟಿಷರ ರೀತಿ ಒಡೆದು ಆಳುವ ನೀತಿಯನ್ನು ಕಾಂಗ್ರೆಸ್ ಅನುಸರಿಸುತ್ತಿದೆ. ಸಿಮಿ, ಪಿಎಫ್ಐ ಮತ್ತಿತರ ಕೋಮುವಾದಿ ಸಂಘಟನೆಗ
ಳನ್ನು ಪೋಷಿಸುತ್ತಿದೆ. ಕಾಂಗ್ರೆಸ್ ಎಂದರೆ ಭ್ರಷ್ಟಾಚಾರಿ ಪಕ್ಷ ಎಂದು ಅರ್ಥ. ಅವರು ಯಾವುದಕ್ಕೂ ಲೆಕ್ಕ ಕೊಡುವುದಿಲ್ಲ. ಲೆಕ್ಕ ಬರೆಯುವುದೂ ಇಲ್ಲ. ರಾಜ್ಯ ಸರ್ಕಾರದ ಸಚಿವರೊಬ್ಬರು 2008ರ ಚುನಾವಣೆಯಲ್ಲಿ ₹ 75 ಕೋಟಿ ಆದಾಯ ತೋರಿಸುತ್ತಾರೆ. 2013ರಲ್ಲಿ ₹ 250 ಕೋಟಿ ಆಗುತ್ತದೆ. ಈ ಬಾರಿ ಅದು ₹ 800 ಕೋಟಿ ಆಗಿದೆ. ಇಷ್ಟೊಂದು ಆದಾಯ ಹೇಗೆ ಬಂತು? ಇದು ರಾಜ್ಯದ ಜನರ ದುಡ್ಡು. ನೋಟಿನ ಪಿಂಡಿಯ ಮೇಲೆ ಇಂತಹ ಹಲವು ಸಚಿವರು ಕುಳಿತಿದ್ದಾರೆ ಎಂದು ಲೇವಡಿ ಮಾಡಿದರು.

‘ಶೌಚಾಲಯ ನಿರ್ಮಿಸಿದರೂ ಟೀಕಿಸುತ್ತಾರೆ. ಬಡವರು, ದಲಿತರ ಮನೆಗಳಿಗೆ ಹೋಗಿ ಯಡಿಯೂರಪ್ಪ ಉಪಾಹಾರ ಸೇವಿಸಿದರೂ ಕುಹಕವಾಡುತ್ತಾರೆ. ಕಾಂಗ್ರೆಸ್‌ನ ಇಂಥ ನಡೆಯನ್ನು ಯಡಿಯೂರಪ್ಪ ವಿರುದ್ಧದ ಟೀಕೆ ಎಂದು ನಾನು ಭಾವಿಸುವುದಿಲ್ಲ. ಅದು ಬಡವರಿಗೆ, ದುರ್ಬಲರಿಗೆ ಮಾಡಿದ ಅವಮಾನ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದೇಶದ ಎಲ್ಲರ ಅಭಿವೃದ್ಧಿ ಬಿಜೆಪಿ ಮಂತ್ರ. ಈ ಧ್ಯೇಯದ ಮೂಲವು ಈ ನೆಲದ ಕವಿ ಕುವೆಂಪು ಅವರ ಸರ್ವರಿಗೂ ಸಮಪಾಲು, ಸಮಬಾಳು ಪರಿಕಲ್ಪನೆಯಲ್ಲಿ ಅಡಗಿದೆ ಎಂದು ಬಣ್ಣಿಸಿದರು.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಮಾತನಾಡಿ, ‘ರಾಜ್ಯದಲ್ಲಿ ಕಾಂಗ್ರೆಸ್ ಮನೆಯೊಂದು ಮೂರು ಬಾಗಿಲು ಎನ್ನುವಂತಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಡಾ. ಜಿ.ಪರಮೇಶ್ವರ ಮೂವರೂ ಒಂದೇ ವೇದಿಕೆಯಲ್ಲಿ 10 ನಿಮಿಷ ಮಾತನಾಡಲಿ ನೋಡೋಣ’ ಎಂದು ಸವಾಲು ಹಾಕಿದರು. ಮೇ 15ರ ಫಲಿತಾಂಶ ಕಾಂಗ್ರೆಸ್ ಹಣೆಬರಹವನ್ನು ನಿರ್ಧರಿಸುತ್ತದೆ. 50ರಿಂದ 55 ಸ್ಥಾನ ಗಳಿಸಿದರೆ ಅದೇ ಆ ಪಕ್ಷದ ಸಾಧನೆ ಎಂದು ಕುಹಕವಾಡಿದರು.

ಸಾಷ್ಟಾಂಗ ನಮಸ್ಕಾರ, ಕಣ್ಣೀರು ಹಾಕಿದ ಬಿಜೆಪಿ ಅಭ್ಯರ್ಥಿ

ಸೇಡಂ (ಕಲಬುರ್ಗಿ ಜಿಲ್ಲೆ): ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್‌ ಅವರಿದ್ದ ಪ್ರಚಾರ ಕಾರ್ಯಕ್ರಮದ ವೇದಿಕೆಯಲ್ಲಿ, ಸೇಡಂ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಜಕುಮಾರ ಪಾಟೀಲ ತೆಲ್ಕೂರ ಅವರು ಸಾಷ್ಟಾಂಗ ನಮಸ್ಕಾರ ಹಾಕಿ, ತಮ್ಮನ್ನು ಗೆಲ್ಲಿಸುವಂತೆ ಕಣ್ಣೀರು ಹಾಕಿದರು.

ಪ್ರಾಸ್ತಾವಿಕ ಭಾಷಣ ಮಾಡಲು ಬಂದ ರಾಜಕುಮಾರ, ಏಕಾಏಕಿ ಹೀಗೆ ಮಾಡಿದರು. ಈ ಅನಿರೀಕ್ಷಿತ ಪ್ರಸಂಗದಿಂದ ಮುಖಂಡರು ಹಾಗೂ ಕಾರ್ಯಕರ್ತರು ವಿಚಲಿತರಾದರು.

‘ಸತತ 3 ಬಾರಿ ಚುನಾವಣೆಯಲ್ಲಿ ಸೋತು ಹಣ ಖಾಲಿಯಾಗಿದೆ. ಕಾರ್ಯಕರ್ತರ ವಿಶ್ವಾಸ, ನಂಬಿಕೆ ಮತ್ತು ಅಭಿಮಾನದ ಮೇಲೆ ಈ ಚುನಾವಣೆ ನಡೆಯುತ್ತಿದೆ. ಕಾರ್ಯಕರ್ತರ ಪ್ರೀತಿ ಬಿಟ್ಟರೆ ನನ್ನಲ್ಲಿ ಏನೂ ಉಳಿದಿಲ್ಲ’ ಎನ್ನುತ್ತಾ ಕಣ್ಣೀರು ಹಾಕಿದರು.

ರಾಜನಾಥ ಸಿಂಗ್‌ ಮಾತನಾಡಿ, ‘ರಾಜಕುಮಾರ ಪಾಟೀಲ ಗೆದ್ದೇ ಗೆಲ್ಲುತ್ತಾರೆ. 4-5 ತಿಂಗಳ ನಂತರ ನಾನು ಅಭಿನಂದನೆ ಸಲ್ಲಿಸಲು ಸೇಡಂಗೆ ಬರುತ್ತೇನೆ. ಆಗ ರಾಜಕುಮಾರ ಸಾಷ್ಟಾಂಗ ನಮಸ್ಕಾರ ಹಾಕಿ ಧನ್ಯವಾದ ಹೇಳುವುದು ಖಚಿತ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT