ಶನಿವಾರ, ಫೆಬ್ರವರಿ 27, 2021
30 °C
ಬಿಜೆಪಿ ಅಭ್ಯರ್ಥಿ ಬಿ.ಶ್ರೀರಾಮುಲು ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ: ರಸ್ತೆ ಬಂದ್ ಸಾರ್ವಜನಿಕರ ಪರದಾಟ

ಬಾದಾಮಿ ಬೆಟ್ಟ ನಾಶ: ಸಿ.ಎಂ ಕಳವಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾದಾಮಿ ಬೆಟ್ಟ ನಾಶ: ಸಿ.ಎಂ ಕಳವಳ

ಬಾದಾಮಿ/ಬೇಲೂರ/ಗುಳೇದಗುಡ್ಡ: ‘ರೆಡ್ಡಿ ಸಹೋದರರ ಜೊತೆ ಸೇರಿ ಬಳ್ಳಾರಿ, ಹೊಸಪೇಟೆಯ ಗುಡ್ಡಗಳನ್ನು ಖಾಲಿ ಮಾಡಿ ಬಂದಿರುವ ಸಂಸದ ಶ್ರೀರಾಮುಲು ಈಗ ಬಾದಾಮಿಯ ಬೆಟ್ಟಗಳನ್ನು ನಾಶ ಮಾಡಲು ಬಂದಿದ್ದಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಬಾದಾಮಿಯಲ್ಲಿ ಶನಿವಾರ ವಿವಿಧ ಸಮಾಜದ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಬಳ್ಳಾರಿಯ ಶ್ರೀರಾಮುಲುಗೂ ಬಾದಾಮಿಗೂ ಏನು ಸಂಬಂಧ ಎಂದು ಪ್ರಶ್ನಿಸಿದರು.

ಮುಖ್ಯಮಂತ್ರಿಗಳಾಗಿ ಯಡಿಯೂರಪ್ಪ ಹಾಗೂ ಕುಮಾರಸ್ವಾಮಿ ಸಾಧನೆ ಶೂನ್ಯ ಎಂದು ಟೀಕಿಸಿದ ಸಿದ್ದರಾಮಯ್ಯ, ರಾಜ್ಯದಲ್ಲಿ ಶೇ 100ರಷ್ಟು ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬರಲಿದೆ. ನಾನೇ ಮುಖ್ಯಮಂತ್ರಿಯಾಗಿ ಮುಂದುವರೆಯುವೆ ಎಂದು ಪುನರುಚ್ಚರಿಸಿದರು.

ಸಾಮಾಜಿಕ ನ್ಯಾಯದಲ್ಲಿ ನಂಬಿಕೆ ಇಟ್ಟಿರುವ ಕಾಂಗ್ರೆಸ್ ಪಕ್ಷ ವಿಧಾನಸಭೆಗೆ ಟಿಕೆಟ್ ಹಂಚಿಕೆ ವೇಳೆಯೂ ಸಣ್ಣ ಸಣ್ಣ ಸಮುದಾಯಗಳಿಗೂ ಆದ್ಯತೆ ನೀಡಿದೆ. ಶಾಸಕನಾಗಿ ಆಯ್ಕೆಯಾದಲ್ಲಿ ವಿಶೇಷ ಆದ್ಯತೆ ನೀಡಿ ಬಾದಾಮಿ ಅಭಿವೃದ್ಧಿಪಡಿಸುವೆ. ಸ್ಥಳೀಯ ನಾಯಕರನ್ನು ಮುಂದಿಟ್ಟುಕೊಂಡು ಎಲ್ಲಾ ಸವಲತ್ತು ಕಲ್ಪಿಸುವೆ ಎಂದು ತಿಳಿಸಿದರು.

ಸಭೆಯಲ್ಲಿ ಸಚಿವ ಆರ್.ಬಿ.ತಿಮ್ಮಾಪುರ, ಶಾಸಕ ಸತೀಶ ಜಾರಕಿಹೊಳಿ, ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್.ಆರ್.ಪಾಟೀಲ, ಕೇಂದ್ರದ ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ಇದ್ದರು.

ಬೇಲೂರು ವರದಿ: ‘ಐದು ವರ್ಷದ ಆಡಳಿತದ ಅವಧಿಯಲ್ಲಿ ಕಾಂಗ್ರೆಸ್‌ ಸರ್ಕಾರ ನುಡಿದಂತೆ ನಡೆದಿದೆ. ಅಭಿವೃದ್ಧಿ ಹೊಳೆ ಹರಿಸಿದೆ. ಈ ಬಾರಿಯೂ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಬರುತ್ತಿದೆ. ಜನತೆ ಆಶೀರ್ವಾದ ಮಾಡಿ ನನ್ನನ್ನು ಚುನಾವಣೆ ಯಲ್ಲಿ ಗೆಲ್ಲಿಸಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದರು.

ಬೇಲೂರ ಗ್ರಾಮದ ಅನ್ನದಾನೇಶ್ವರ ಕಾಲೇಜು ಮೈದಾನದಲ್ಲಿ ಶುಕ್ರವಾರ ಜರುಗಿದ ಕಾಂಗ್ರೆಸ್‌ ಪಕ್ಷದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಬಾದಾಮಿ ಐತಿಹಾಸಿಕ ತಾಣವಾಗಿದೆ. ಈ ಕ್ಷೇತ್ರಕ್ಕೆ ವಿಶೇಷ ಪ್ಯಾಕೇಜ್‌ ಕಲ್ಪಿಸುವ ಮೂಲಕ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವುದಾಗಿ ಭರವಸೆ ವ್ಯಕ್ತಪಡಿಸಿದರು.

ಹಿಂದಿನ ಬಿಜೆಪಿ ಸರ್ಕಾರದ ಸಾಧನೆ ನಿಮಗೆಲ್ಲ ಗೊತ್ತಿದೆ. ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲಿಗೆ ಹೋದವರು. ಜನಾರ್ದನರೆಡ್ಡಿ, ಕಟ್ಟಾಸುಬ್ರಹ್ಮಣ್ಯ ನಾಯ್ಡು, ಹಾಲಪ್ಪ ಹೀಗೆ ಹಲವು ಸಚಿವರು ಜೈಲಿಗೆ ಹೋಗಿದ್ದರು. ಅವರೇನು ಅಲ್ಲಿಗೆ ಬೀಗತನ ಮಾಡಲು ಹೋಗಿದ್ದರೆ ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

‘ಕಾಂಗ್ರೆಸ್‌ ಸರ್ಕಾರ ರೈತರ ಸಾಲ ಮನ್ನಾ ಮಾಡಿದೆ. ಅನ್ನಭ್ಯಾಗ್ಯ, ಕೃಷಿ ಭಾಗ್ಯ, ಕ್ಷೀರಭಾಗ್ಯ,ಮನಸ್ವಿನಿ, ಮಹಿಳೆಯರಿಗೆ ಉಚಿತ ಶಿಕ್ಷಣ, ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌, ಉಚಿತ ಬಸ್‌ ಪಾಸ್‌ ಅನೇಕ ಯೋಜನೆಗಳನ್ನು ಕೊಟ್ಟಿದ್ದೇವೆ’ ಎಂದು ತಮ್ಮ ಸರ್ಕಾರದ ಸಾಧನೆ ಬಿಚ್ಚಿಟ್ಟರು.

ನಂದಿಕೇಶ್ವರ ವರದಿ: ನಂದಿಕೇಶ್ವರ ಗ್ರಾಮದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ವೀಣಾ ಕಾಶಪ್ಪನವರ, ಅನ್ನ ಭಾಗ್ಯದ ಮೂಲಕ ಬಡವರ ಹೊಟ್ಟೆಯ ಹಸಿವನ್ನು ರಾಜ್ಯ ಸರ್ಕಾರ ನೀಗಿಸಿದೆ. ಕಾಂಗ್ರೆಸ್, ಬಿಜೆಪಿ ಎನ್ನದೇ ಎಲ್ಲಾ ಪಕ್ಷ, ಪಂಥ, ಧರ್ಮ, ಜಾತಿಗಳ ಬಡವರು ಅನ್ನಭಾಗ್ಯದ ಫಲಾನುಭವಿಗಳಿದ್ದಾರೆ. ಈಗ ಹಸಿವು ನೀಗಿಸಿದ ಸರ್ಕಾರದ ಋಣ ತೀರಿಸಲು ಮತ ಹಾಕಿ ಮತ್ತೊಮ್ಮೆ ಕಾಂಗ್ರೆಸ್ ಪಕ್ಷ ಗೆಲ್ಲಿಸಿ ಎಂದು ಮನವಿ ಮಾಡಿದರು.

ಸಚಿವರಾದ ಆರ್‌.ಬಿ. ತಿಮ್ಮಾಪುರ, ಮಾಜಿ ಸಚಿವ ಸಿ.ಎಂ. ಇಬ್ರಾಹಿಂ, ಎಐಸಿಸಿ ಕಾರ್ಯದರ್ಶಿ ಸತೀಶ ಜಾರಕಿಹೊಳಿ, ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್‌.ಆರ್‌. ಪಾಟೀಲ, ಜಮೀರ್ ಅಹ್ಮದ್‌, ಶಾಸಕರಾದ ಬಿ.ಬಿ.ಚಿಮ್ಮನಕಟ್ಟಿ, ಸಿದ್ದು ನ್ಯಾಮಗೌಡ ಇದ್ದರು.

ಗುಳೇದಗುಡ್ಡ: ಭರ್ಜರಿ ರೋಡ್ ಷೋ...

ಗುಳೇದಗುಡ್ಡ ಹಾಗೂ ನಂದಿಕೇಶ್ವರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರ್ಜರಿ ರೋಡ್ ಷೋ ನಡೆಸಿದರು. ಶಿವಯೋಗಮಂದಿರ, ನಂದಿಕೇಶ್ವರ, ಹನಾಪುರ ತಾಂಡಾ, ಹನಾಪುರ, ಮುರಡಿ ಮಾರ್ಗವಾಗಿ ಗುಳೇದಗುಡ್ಡಕ್ಕೆ ಕಾರಿನಲ್ಲಿ ಸಿ.ಎಂ. ಕಾರಿನಲ್ಲಿ ತೆರಳಿದ ವೇಳೆ ರಸ್ತೆ ಅಕ್ಕಪಕ್ಕದಲ್ಲಿ ನಿಂತ ಗ್ರಾಮೀಣರು, ಸಿಎಂ ಕಾರಿನತ್ತ ಕೈ ಬೀಸಿದರು. ಹನಾಪುರ, ಮುರಡಿಯಲ್ಲಿ ಸಿ.ಎಂಗಾಗಿ ಕಾದು ನಿಂತು ಡೊಳ್ಳು–ಬಾಜಾ ಭಜಂತ್ರಿಯ ಮೂಲಕ ಬರಮಾಡಿಕೊಂಡರು. ಮಹಿಳೆಯರು ಆರತಿ ಬೆಳಗಿ ಸಂಭ್ರಮಿ ಸಿದರು. ಎಲ್ಲೆಲ್ಲೂ ಕಾಂಗ್ರೆಸ್ ಧ್ವಜಗಳು ಹಾರಾಡಿದವು. ಗುಳೇದಗುಡ್ಡದ ಬಾದಾಮಿ ನಾಕದಲ್ಲಿರುವ ಗುರುಸಿದ್ದೇಶ್ವರ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದ ಸಿದ್ದರಾಮಯ್ಯ ಅಲ್ಲಿಂದ ಭಂಡಾರಿ ಕಾಲೇಜು ಮೈದಾನದವರೆಗ ರೋಡ್ ಷೋ ನಡೆಸಿದರು. ಈ ವೇಳೆ ಸಾವಿರಾರು ಮಂದಿ ಪಾಲ್ಗೊಂಡಿದ್ದರಿಂದ ಇಡೀ ಪಟ್ಟಣ ಜನರಿಂದ ತುಂಬಿ ತಳುಕಿತು. ನಂತರ ಭಂಡಾರಿ ಕಾಲೇಜು ಮೈದಾನದಲ್ಲಿ ಸಿ.ಎಂ ಸಾರ್ವಜನಿಕ ಸಭೆ ನಡೆಸಿದರು.

ಗುಳೇದಗುಡ್ಡದಲ್ಲಿ ಸಿ.ಎಂ ರೋಡ್ ಷೋ ವೇಳೆ ಶಾಸಕರಾದ ಬಿ.ಬಿ.ಚಿಮ್ಮನಕಟ್ಟಿ, ಎಚ್.ವೈ.ಮೇಟಿ, ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್.ಆರ್.ಪಾಟೀಲ, ಮುಖಂಡರಾದ ಡಾ.ದೇವರಾಜ ಪಾಟೀಲ, ಹೊಳೆಬಸು ಶೆಟ್ಟರ, ರಕ್ಷಿತಾ ಈಟಿ ಹಾಜರಿದ್ದರು.

ರಸ್ತೆ ಬಂದ್: ನಂದಿಕೇಶ್ವರದಲ್ಲಿ ಸಾರ್ವಜನಿಕ ಸಭೆ ಹಾಗೂ ರೋಡ್ ಷೋ ವೇಳೆ ಎರಡು ತಾಸು ರಸ್ತೆ ಬಂದ್ ಆಗಿ ಸಾರ್ವಜನಿಕರು ಹಾಗೂ ಪ್ರವಾಸಿಗರು ರಸ್ತೆಯಲ್ಲಿಯೇ ಉಳಿದು ಪಡಿಪಾಟಲುಪಟ್ಟರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.