ಮಂಗಳವಾರ, ಮಾರ್ಚ್ 9, 2021
30 °C
ದಾವಣಗೆರೆ: ಸಂಕಲ್ಪ ಸಮಾವೇಶದಲ್ಲಿ ನಟ ಪ್ರಕಾಶ್‌ ರೈ ಆರೋಪ

ದೇಶದಲ್ಲಿ ಬೇಕೆಂದೇ ನಿರುದ್ಯೋಗ ಸೃಷ್ಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೇಶದಲ್ಲಿ ಬೇಕೆಂದೇ ನಿರುದ್ಯೋಗ ಸೃಷ್ಟಿ

ದಾವಣಗೆರೆ: ದೇಶದಲ್ಲಿ ಉದ್ದೇಶ ಪೂರ್ವಕವಾಗಿ ನಿರುದ್ಯೋಗ ಉಳಿಸಿ, ಹತಾಶೆ ಬೆಳೆಸಿ, ಯುವಕರಲ್ಲಿ ಇಲ್ಲದ–ಸಲ್ಲದ ಗುಣಗಳನ್ನು ಬೆಳೆಸಿ ಅಶಾಂತಿಯ ವಾತಾವರಣ ಸೃಷ್ಟಿಸಲಾಗುತ್ತಿದೆ ಎಂದು ನಟ ಪ್ರಕಾಶ್‌ ರೈ ಆರೋಪಿಸಿದರು.

ಇಲ್ಲಿನ ಹೋಟೆಲ್ ಶಾಂತಿ ಪಾರ್ಕ್‌ ಸಭಾಂಗಣದಲ್ಲಿ ಶನಿವಾರ ಸಂವಿಧಾನ ಉಳಿವಿಗಾಗಿ ನೇತೃತ್ವದಲ್ಲಿ ಪ್ರಗತಿಪರ ಸಂಘಟನೆಗಳು ಏರ್ಪಡಿಸಿದ್ದ ಸಂಕಲ್ಪ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಜನರನ್ನು ಕೊಲ್ಲಿಸುವ ಮೂಲಕ ಅಧಿಕಾರ ಹಿಡಿಯಲು ಸಂಚು ರೂಪಿಸಲಾಗುತ್ತಿದೆ. ಮುಗ್ಧರನ್ನು ಬಳಸಿಕೊಂಡು ಮನುಷ್ಯರನ್ನು ಕೊಲ್ಲಲಾಗುತ್ತಿದೆ. ಮುಗ್ಧರು ಜೈಲು ಸೇರುತ್ತಿದ್ದಾರೆ. ಅವರ ಪೋಷಕರು ಸಮಾಜದಲ್ಲಿ ತಲೆ ತಗ್ಗಿಸುತ್ತಿದ್ದಾರೆ ಎಂದು ಪ್ರಕಾಶ್‌ ರೈ ಆತಂಕ ವ್ಯಕ್ತಪಡಿಸಿದರು.

‘ಕಾಂಗ್ರೆಸ್‌, ಜೆಡಿಎಸ್‌ ಯೋಗ್ಯವೆಂದು ಹೇಳಿಲ್ಲ’

‘ಕಾಂಗ್ರೆಸ್‌, ಜೆಡಿಎಸ್‌ನವರು ಯೋಗ್ಯರೆಂದು ನಾನು ಹೇಳುತ್ತಿಲ್ಲ. ಆದರೆ, ತಕ್ಷಣಕ್ಕೆ ಆತಂಕಕಾರಿಯಾಗಿರುವ ಕೋಮುವಾದಿಗಳಿಗೆ ಮತ ನೀಡಬೇಡಿ. ಯಾರನ್ನು ತಡೆಯಬೇಕಿದೆ ಎಂಬ ಉತ್ತರವನ್ನು ಕರ್ನಾಟಕ ದೇಶಕ್ಕೆ ನೀಡಬೇಕಿದೆ. ಯೋಚಿಸಿ ಮತ ನೀಡಿ. ನಾನು ಚುನಾವಣೆ ನಂತರ ಮನೆಗೆ ಹೋಗಲ್ಲ. ಯಾವುದೇ ಸರ್ಕಾರ ಬಂದರೂ ಐದು ವರ್ಷ ಪ್ರಶ್ನಿಸುತ್ತೇನೆ’ ಎಂದು ಹೇಳಿದರು.

ಸಂವಿಧಾನ ಉಳಿವಿಗಾಗಿ ಕರ್ನಾಟಕದ ಸಂಚಾಲಕರಾದ ಅನೀಸ್‌ ಪಾಷಾ, ಕೆ.ಎಲ್‌. ಅಶೋಕ್‌ ಮಾತನಾಡಿದರು.

ಕಾರ್ಮಿಕ ಮುಖಂಡ ಎಚ್‌.ಕೆ. ರಾಮಚಂದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ಸಿಐಟಿಯು ಮುಖಂಡ ಕೆ.ಎಲ್‌. ಭಟ್ ಅವರೂ ಇದ್ದರು. ಉಷಾ ಕೈಲಾಸದ್‌ ನಿರೂಪಿಸಿದರು. ಜಬೀನಾ ಖಾನಂ ನಿರೂಪಿಸಿದರು.

ಬೇರೆ ದೇಶದವರೂ ತಿರುಗಿ ಬಿದ್ದರೆ ಏನು ಮಾಡುತ್ತೀರಿ?

ಬಲಪಂಥೀಯರ ಆಸೆಯಂತೆ ಭಾರತವನ್ನು ಹಿಂದೂ ರಾಷ್ಟ್ರ ಮಾಡೋಣ. ಎಲ್ಲಾ ಅಲ್ಪಸಂಖ್ಯಾತರನ್ನು ಹೊರಹಾಕೋಣ. ಅವರಿಗೆ ಯಾವ ಹಕ್ಕೂ ಕೊಡುವುದೂ ಬೇಡ. ಆದರೆ, ಇದೇ ಚಿಂತನೆಯನ್ನು ಬೇರೆ ದೇಶದವರೂ ಮಾಡಿದರೆ ಏನು ಮಾಡುತ್ತೀರಿ ಎಂದು ಪ್ರಕಾಶ್‌ ರೈ ಪ್ರಶ್ನಿಸಿದರು.

ಎಲ್ಲಾ ಅರಬ್‌ ದೇಶಗಳೂ ಹಿಂದೂಗಳನ್ನು ಹೊರ ಹಾಕಿದರೆ ಏನು ಮಾಡುವಿರಿ? ಪೆಟ್ರೋಲ್‌ ಕೊಡದಿದ್ದರೆ ಎತ್ತಿನ ಗಾಡಿಯಲ್ಲಿ ಓಡಾಡುವಿರಾ ಎಂದು ಕೇಳಿದರು.

ಹೊರನಡೆದ ರೈ

ಪ್ರಕಾಶ್‌ ರೈ ಭಾಷಣ ಮುಗಿಯುತ್ತಿದ್ದಂತೆ ಉಡುಪ ಎಂಬುವವರು ಪ್ರಶ್ನೆ ಕೇಳಲು ಎದ್ದು ನಿಂತರು. ಕಾರ್ಯಕ್ರಮ ಮುಗಿದ ನಂತರ ಅವಕಾಶ ನೀಡಲಾಗುವುದು ಎಂದರೂ ಉಡುಪ ಹಠ ಹಿಡಿದರು.

ಗೊಂದಲ ಹೆಚ್ಚಾಗುತ್ತಿದ್ದಂತೆ ಪ್ರಕಾಶ್‌ ರೈ ಹೊರಟು ಹೋದರು. ಆಯೋಜಕರ ಮಾತು ಕೇಳದ ಉಡುಪ ಅವರನ್ನು ಹೊರಗೆ ಕಳುಹಿಸಲಾಯಿತು. ‘ಮೀಸಲಾತಿ ವಿರುದ್ಧ ಪ್ರಶ್ನೆ ಕೇಳಲು ನಿನಗೆ ಎಷ್ಟು ಧೈರ್ಯ’ ಎಂದು ಕಾರ್ಯಕ್ರಮದಲ್ಲಿ ಹಾಜರಿದ್ದವರು ಉಡುಪ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

**

ಸತ್ತವನು ಮನುಷ್ಯ, ಮನುಷ್ಯತ್ವದ ಸಾವು ಎಂದು ಗುರುತಿಸುವ ಸೂಕ್ಷ್ಮ ಕಳೆದು ಹೋಗಿದೆ. ಹಿಂದೂವಿನ ಸಾವು, ಮುಸ್ಲಿಂನ ಸಾವು ಎಂದು ಭೇದ ಸೃಷ್ಟಿಸುವುದು ಅಪಾಯಕಾರಿ

- ಪ್ರಕಾಶ್‌ ರೈ, ನಟ 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.