ಪುಟ್ಟರಾಜು ವಿರುದ್ಧ ದರ್ಶನ್‌ ನೇರ ಹೋರಾಟ

7
ಮೇಲುಕೋಟೆ ಕ್ಷೇತ್ರ: ವಿಶೇಷ ಪ್ರಚಾರದಿಂದ ಗಮನ ಸೆಳೆಯುತ್ತಿರುವ ಸ್ವರಾಜ್‌ ಇಂಡಿಯಾ ಪಕ್ಷದ ಅಭ್ಯರ್ಥಿ

ಪುಟ್ಟರಾಜು ವಿರುದ್ಧ ದರ್ಶನ್‌ ನೇರ ಹೋರಾಟ

Published:
Updated:

ಮಂಡ್ಯ: ಜಿಲ್ಲೆಯಲ್ಲಿ ಏಕೈಕ ರೈತ ಜನಪ್ರತಿನಿಧಿಯನ್ನು ಹೊಂದಿದ್ದ ಮೇಲುಕೋಟೆ ವಿಧಾನಸಭಾ ಕ್ಷೇತ್ರ ಈ ಚುನಾವಣೆಯಲ್ಲಿ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆಯುತ್ತಿದೆ. ಕಣದಲ್ಲಿರುವ ಪುಟ್ಟಣ್ಣಯ್ಯ ಪುತ್ರ, ಸ್ವರಾಜ್‌ ಇಂಡಿಯಾ ಪಕ್ಷದ ಅಭ್ಯರ್ಥಿ ದರ್ಶನ್‌ ಪುಟ್ಟಣ್ಣಯ್ಯ ಹಾಗೂ ಜೆಡಿಎಸ್‌ ಅಭ್ಯರ್ಥಿ, ಸಂಸದ ಸಿ.ಎಸ್‌.ಪುಟ್ಟರಾಜು ಅವರ ನಡುವೆ ನೇರ ಹಣಾಹಣಿ ನಡೆಯುತ್ತಿದೆ.

ರಾಷ್ಟ್ರ ರಾಜಕಾರಣದಿಂದ ರಾಜ್ಯ ರಾಜಕಾರಣಕ್ಕೆ ಮರಳಲು ಯತ್ನಿಸುತ್ತಿರುವ ಸಿ.ಎಸ್‌.ಪುಟ್ಟರಾಜು ಸಂಸತ್‌ ಸದಸ್ಯತ್ವ ಸ್ಥಾನ ಇನ್ನೂ ಒಂದು ವರ್ಷ ಇರುವಾಗಲೇ ವಿಧಾನಸಭಾ ಚುನಾವಣಾ ಕಣಕ್ಕೆ ಧುಮುಕಿದ್ದಾರೆ.

ಮುಂದೆ ಜೆಡಿಎಸ್‌ ಸರ್ಕಾರ ಬಂದರೆ ಪುಟ್ಟರಾಜು ಮಂತ್ರಿಯಾಗುತ್ತಾರೆ ಎಂಬ ವಿಷಯವನ್ನು ಮುಂದಿಟ್ಟುಕೊಂಡು ಜೆಡಿಎಸ್‌ ಕಾರ್ಯಕರ್ತರು ಪ್ರಚಾರ ನಡೆಸುತ್ತಿದ್ದಾರೆ. ಪುಟ್ಟರಾಜು ಗೆಲ್ಲಿಸಿ ಕೊಳ್ಳಲು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡರ ಇಡೀ ಕುಟುಂಬ ಪಾಂಡವಪುರದಲ್ಲಿ ಪ್ರಚಾರ ನಡೆ ಸುತ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ.

‘ಇತಿಹಾಸದಲ್ಲಿ ಮೇಲುಕೋಟೆ ಕ್ಷೇತ್ರದಿಂದ ಯಾರೂ ಮಂತ್ರಿಯಾಗಿಲ್ಲ. ಕ್ಷೇತ್ರಕ್ಕೆ ಶಾಪ ಇದೆ. ಇದರ ವಿಮೋಚನೆಗೆ ನನ್ನನ್ನು ಗೆಲ್ಲಿಸಿ ಮಂತ್ರಿಯಾಗಲು ಅವಕಾಶ ಕೊಡಿ’ ಎಂದು ಹೇಳುತ್ತಾ ಪುಟ್ಟರಾಜು ಪ್ರಚಾರದಲ್ಲಿ ನಿರತರಾಗಿದ್ದಾರೆ.

ಕುಮಾರಪರ್ವ, ವಿಕಾಸಪರ್ವ, ಮನೆಮನೆಗೆ ಕುಮಾರಣ್ಣ ಕಾರ್ಯಕ್ರಮಗಳ ಮೂಲಕ ಸಾವಿರಾರು ಜನರನ್ನು ಸೇರಿಸಿರುವ ಪುಟ್ಟರಾಜು ಕ್ಷೇತ್ರದಾದ್ಯಂತ ಶಕ್ತಿ ಪ್ರದರ್ಶನ ಮಾಡಿದ್ದಾರೆ. ಜನಸಾಗರದ ನಡುವೆ ರೋಡ್‌ ಷೋ ಮಾಡುತ್ತಿರುವ ಸಂಸದರು ಪ್ರತಿಷ್ಠೆಯನ್ನು ಪಣಕ್ಕಿಟ್ಟು ಮತಯಾಚನೆ ಮಾಡುತ್ತಿದ್ದಾರೆ.

ಇದರ ನಡುವೆ ಪುಟ್ಟರಾಜು ಅವರ ಸಂಸತ್‌ ಸದಸ್ಯತ್ವ ಇನ್ನೂ ಒಂದು ವರ್ಷ ಬಾಕಿ ಇರುವಾಗಲೇ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿರುವುದು ಕೆಲವರ ವಿರೋಧಕ್ಕೆ ಕಾರಣವಾಗಿದೆ. ಅಲ್ಲದೆ ಅಕ್ರಮ ಕಲ್ಲು ಗಣಿಗಾರಿಕೆಯಲ್ಲಿ ದಾಖಲಾಗಿರುವ ಪ್ರಕರಣಗಳು, ಆಸ್ತಿ ಮುಚ್ಚಿಟ್ಟು ಚುನಾವಣೆ ಪ್ರಮಾಣ ಪತ್ರ ಸಲ್ಲಿಸಿದ್ದಾರೆ ಎಂದು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಕೆಯಾಗಿರುವುದು ಪುಟ್ಟರಾಜು ಅವರಿಗೆ ತಲೆನೋವಾಗಿವೆ.

ದರ್ಶನ್‌ ಪರ ವಿಶೇಷ ಪ್ರಚಾರ: ಸ್ವರಾಜ್‌ ಇಂಡಿಯಾ ಪಕ್ಷದ ಅಭ್ಯರ್ಥಿ ದರ್ಶನ್‌ ಪುಟ್ಟಣ್ಣಯ್ಯ ಅವರೂ ಪ್ರಚಾರದಲ್ಲಿ ಹಿಂದೆ ಬಿದ್ದಿಲ್ಲ. ಹಲವು ವಿಶೇಷತೆಯೊಂದಿಗೆ ಕ್ಷೇತ್ರದಾದ್ಯಂತ ಪ್ರಚಾರ ನಡೆಯುತ್ತಿದೆ. ಜೊತೆಗೆ ಕೆ.ಎಸ್‌.ಪುಟ್ಟಣ್ಣಯ್ಯ ಸಾವಿನಿಂದ ಕ್ಷೇತ್ರದಲ್ಲಿ ಸೃಷ್ಟಿಯಾಗಿರುವ ಅನುಕಂಪದ ಅಲೆಯೂ ದರ್ಶನ್‌ ಬೆನ್ನಿಗಿದೆ. ಸ್ವರಾಜ್‌ ಇಂಡಿಯಾ ಪಕ್ಷದ ಸಂಸ್ಥಾಪಕ ಅಧ್ಯಕ್ಷ ಯೋಗೇಂದ್ರ ಯಾದವ್‌ ಸೇರಿ ರಾಷ್ಟ್ರಮಟ್ಟದ ಮುಖಂಡರು ದರ್ಶನ್‌ ಪರ ಕೆಲಸ ಮಾಡುತ್ತಿದ್ದಾರೆ. ಕ್ಷೇತ್ರದ ವಿವಿಧ ಸಂಘಟನೆಗಳ ಮುಖಂಡರು ದರ್ಶನ್‌ಗೆ ಬೆಂಬಲ ಘೋಷಣೆ ಮಾಡಿದ್ದಾರೆ. ದೇವನೂರ ಮಹಾದೇವ ಅವರೂ ಕ್ಷೇತ್ರದಾದ್ಯಂತ ಸಂಚಾರ ನಡೆಸಿ ಮತಯಾಚನೆ ಮಾಡುತ್ತಿದ್ದಾರೆ. ವೀರಶೈವ ಲಿಂಗಾಯತ, ವಿಶ್ವಕರ್ಮ ಸಮಾಜದ ಮುಖಂಡರೂ ದರ್ಶನ್‌ಗೆ ಬೆಂಬಲ ನಿಡಿದ್ದಾರೆ. ದಲಿತ ಸಂಘರ್ಷ ಸಮಿತಿ ಸೇರಿ ಹಲವು ಸಂಘಟನೆಗಳೂ ಬೆಂಬಲ ಘೋಷಣೆ ಮಾಡಿವೆ.

ಇದರ ಜೊತೆಗೆ ದರ್ಶನ್‌ ಪರ ಪ್ರಚಾರಕ್ಕೆ ಜಿಗ್ನೇಶ್‌ ಮೇವಾನಿ ಬಂದು ಹೋಗಿದ್ದು, ಪರ್ಯಾಯ ರಾಜಕಾರಣಕ್ಕೆ ಜನರು ಬೆಂಬಲ ನೀಡಬೇಕು ಎಂದು ಮನವಿ ಮಾಡಿದ್ದಾರೆ. ಸ್ವರಾಜ್‌ ಇಂಡಿಯಾ ಪಕ್ಷದ ಅಭ್ಯರ್ಥಿಗೆ ಚುನಾವಣೆ ಎರಡು ತಿಂಗಳು ಇರುವಾಗಲೇ ಕಾಂಗ್ರೆಸ್‌ ಬೆಂಬಲ ಘೋಷಿಸಿದೆ. ಕಾಂಗ್ರೆಸ್‌ ಮುಖಂಡರೂ ದರ್ಶನ್‌ ಪರ ಕೆಲಸ ಮಾಡುತ್ತಿದ್ದಾರೆ. ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಪಾಂಡವಪುರದಲ್ಲಿ ದರ್ಶನ್‌ ಪತ ಮತಯಾಚನೆ ಮಾಡಿದ್ದಾರೆ. ಈಚೆಗೆ ಇಂಧನ ಸಚಿವ ಡಿ.ಕೆ.ಶಿವಕುಮಾರ್‌ ರೋಡ್‌ಷೋ ನಡೆಸಿದ್ದಾರೆ. ದರ್ಶನ್‌ ಗೆಲುವಿಗಾಗಿ ಇಡೀ ರೈತಸಂಘ ಒಗ್ಗಟ್ಟಿನಿಂದ ಪ್ರಚಾರ ನಡೆಸುತ್ತಿದ್ದು ಹಳೆಯ ಮತ್ತು ಹೊಸ ತಲೆಮಾರಿನ ಮುಖಂಡರು ಕ್ಷೇತ್ರದಲ್ಲಿ ಸಂಚಾರ ಮಾಡುತ್ತಿದ್ದಾರೆ.

ಸಾಮಾಜಿಕ ಜಾಲ ತಾಣ ಬಳಕೆ:

ದರ್ಶನ್‌ ಪುಟ್ಟಣ್ಣಯ್ಯ ಕ್ಷೇತ್ರದಾದ್ಯಂತ ಯುವಜನರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅವರ ಬಗ್ಗೆ ಯುವಜನರು ಸಾಮಾಜಿಕ ಜಾಲತಾಣಗಳಲ್ಲಿ ಗುಣಗಾನ ಮಾಡುತ್ತಿದ್ದಾರೆ. ದರ್ಶನ್‌ ಮಾತುಗಳನ್ನು ಫೇಸ್‌ಬುಕ್‌ ಲೈವ್‌ ಮಾಡಿ ಗಮನ ಸೆಳೆಯುತ್ತಿದ್ದಾರೆ. ಅವರ ಗಾಂಭೀರ್ಯ ಹಾಗೂ ಸೌಮ್ಯ ಸ್ವರೂಪದ ಮಾತುಗಳು ಮಹಿಳೆಯರಿಗೆ ಇಷ್ಟವಾಗಿದ್ದು ‘ದರ್ಶನ್‌ ಒಳ್ಳೆಯ ಹುಡುಗ’ ಎಂಬ ಅಭಿಪ್ರಾಯ ಎಲ್ಲೆಡೆ ಇದೆ.

ಇತರ ರಾಜಕಾರಣಿಗಳ ಹಾಗೆ ದರ್ಶನ್‌ ಪ್ರಚಾರದ ವೇಳೆ ಯಾವುದೇ ಭರವಸೆ ಕೊಡುತ್ತಿಲ್ಲ. ‘ನಾನು ಭರವಸೆ ಕೊಡುವುದಿಲ್ಲ, ಮುಂದೆ ಕೆಲಸ ಮಾಡಿ ತೋರಿಸುತ್ತೇನೆ. ತಂದೆ ಹಾದಿಯಲ್ಲಿ ಹೋರಾಟ ಮಾಡುವ ಜೊತೆಗೆ ನೀತಿಯುತ ರಾಜಕಾರಣ ಮಾಡುತ್ತೇನೆ’ ಎಂದು ಜನರ ಮನಸೂರೆಗೊಳ್ಳುತ್ತಿದ್ದಾರೆ.

ಕ್ಷೇತ್ರದಲ್ಲಿ ಸುಂಡಹಳ್ಳಿ ಸೋಮಶೇಖರ್‌ ಬಿಜೆಪಿಯಿಂದ ಕಣಕ್ಕಿಳಿದಿದ್ದಾರೆ. ಪಾಂಡವಪುರ ತಾಲ್ಲೂಕಿನ ಮಾಜಿ ಶಾಸಕ ಡಿ.ಹಲಗೇಗೌಡ ಅವರ ಮಗ ಮಂಜುನಾಥ್‌ ಅವರಿಗೆ ಬಿಜೆಪಿ ಟಿಕೆಟ್‌ ನೀಡಿತ್ತು. ಅವರು ‘ಚುನಾವಣೆಗೆ ಸಿದ್ಧನಾಗಿಲ್ಲ’ ಎಂಬ ಕಾರಣ ನೀಡಿ ಟಿಕೆಟ್‌ ನಿರಾಕರಿಸಿದ ಕಾರಣ ಪಕ್ಷ ಸುಂಡಹಳ್ಳಿ ಸೋಮಶೇಖರ್‌ ಅವರಿಗೆ ಟಿಕೆಟ್‌ ನೀಡಿತು.

ದರ್ಶನ್‌ ಪರ ಹೊರರಾಜ್ಯಗಳ ರೈತರ ಪ್ರಚಾರ

ದರ್ಶನ್‌ ಪುಟ್ಟಣ್ಣಯ್ಯ ಅವರ ಪರ ತಮಿಳುನಾಡು, ಆಂಧ್ರಪ್ರದೇಶ ಸೇರಿ ಹಲವು ರಾಜ್ಯಗಳ ರೈತ ಸಂಘಟನೆಗಳ ಮುಖಂಡರು ಪ್ರಚಾರ ನಡೆಸುತ್ತಿದ್ದಾರೆ. ರೈತರ ಪ್ರತಿನಿಧಿಯಾಗಿ ಯುವ ಮುಖಂಡನನ್ನು ವಿಧಾನಸೌಧಕ್ಕೆ ಕಳುಹಿಸಬೇಕು ಎಂಬ ಉದ್ದೇಶದಿಂದ ಪ್ರಚಾರ ನಡೆಸುತ್ತಿರುವ ಅವರು ಸ್ಥಳೀಯರ ಗಮನ ಸೆಳೆದಿದ್ದಾರೆ. ಜೊತೆಗೆ ವಿವಿಧ ರಾಜ್ಯಗಳ ಪ್ರಗತಿಪರ ಸಂಘಟನೆಗಳ ಮುಖಂಡರೂ ಕ್ಷೇತ್ರದಲ್ಲಿದ್ದು ನಿತ್ಯ ಪ್ರಚಾರದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಉತ್ತರ ಕರ್ನಾಟಕ ಭಾಗದ ರೈತ ಮಹಿಳೆಯರ ತಂಡವೊಂದು ಪಾಂಡವಪುರಕ್ಕೆ ಬಂದಿದ್ದು ದರ್ಶನ್‌ ಪರ ಮನೆಮನೆಗೆ ತೆರಳಿ ಮಹಿಳೆಯರನ್ನು ಮನವೊಲಿಸುವ ಕೆಲಸ ಮಾಡುತ್ತಿದ್ದಾರೆ. ಪುಟ್ಟಣ್ಣಯ್ಯ ಅವರ ಬಗ್ಗೆ ಮಾತನಾಡುತ್ತಾ ಮಹಿಳೆಯರ ಮನಸ್ಸಿನಲ್ಲಿ ಅನುಕಂಪದ ಅಲೆ ಉಕ್ಕಿಸುವಲ್ಲಿ ಅವರು ಯಶಸ್ವಿಯಾಗುತ್ತಿದ್ದಾರೆ.

ಕಣದಲ್ಲಿರುವ 13 ಅಭ್ಯರ್ಥಿಗಳು

ಪಕ್ಷ ಅಭ್ಯರ್ಥಿ

ಜೆಡಿಎಸ್‌ ಸಿ.ಎಸ್‌.ಪುಟ್ಟರಾಜು

ಎಸ್‌ಐಪಿ ದರ್ಶನ್‌ ಪುಟ್ಟಣ್ಣಯ್ಯ

ಬಿಜೆಪಿ ಸುಂಡಹಳ್ಳಿ ಸೋಮಶೇಖರ್‌

ಜೆಎಸ್‌ಪಿ ಎ.ಐ. ಮಹೇಶ

ಎಂಇಪಿ ಮಹೇಶ್‌

ಕೆಜೆಪಿ ಜಿ.ಎಂ.ರಮೇಶ್

ಸಮಾಜವಾದಿ ಪಕ್ಷ ರೋಹಿಣಿ

ಪಕ್ಷೇತರರು ಅರುಣ್ ಕುಮಾರ್, ಕೆ.ಎಸ್.ದರ್ಶನ್, ಎಚ್.ನಾರಾಯಣ, ಪುಟ್ಟರಾಜು, ಬಿ.ಕೆ.ಪುಟ್ಟರಾಜು, ಡಿ.ಕೆ.ರವಿಕುಮಾರ್

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry