ಅಭಿವೃದ್ಧಿ ಆಧಾರದಲ್ಲಿ ಚುನಾವಣೆ ನಡೆಯಲಿ–ಯೋಗೇಶ್ವರ್‌

7
ಚನ್ನಪಟ್ಟಣ ತಾಲ್ಲೂಕಿನ ಹಲವೆಡೆ ಯೋಗೇಶ್ವರ್‌ ಬಿರುಸಿನ ಪ್ರಚಾರ

ಅಭಿವೃದ್ಧಿ ಆಧಾರದಲ್ಲಿ ಚುನಾವಣೆ ನಡೆಯಲಿ–ಯೋಗೇಶ್ವರ್‌

Published:
Updated:

ಚನ್ನಪಟ್ಟಣ: ‘ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯ ಹಾಗೂ ನೀರಾವರಿ ಯೋಜನೆಗಳೇ ನನ್ನ ಗೆಲುವಿನ ರಹದಾರಿಯಾಗಲಿದೆ’ ಎಂದು ಬಿಜೆಪಿ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ವಿಶ್ವಾಸ ವ್ಯಕ್ತಪಡಿಸಿದರು.

ತಾಲ್ಲೂಕಿನ ಸುಳ್ಳೇರಿ, ಚಕ್ಕೆರೆ, ಕೋಟಮಾರನಹಳ್ಳಿ, ಅಕ್ಕೂರು ಹೊಸಹಳ್ಳಿ, ಮೈಲನಾಯಕನಹಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಶನಿವಾರ ಬಿರುಸಿನ ಪ್ರಚಾರ ನಡೆಸಿ ಮಾತನಾಡಿದ ಅವರು, ಚುನಾವಣೆಗಳು ಕ್ಷೇತ್ರದ ಅಭ್ಯರ್ಥಿ ಹಾಗೂ ಅಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳ ಮೇಲೆ ನಡೆಯಬೇಕೆ ಹೊರತು ಜಾತಿ, ಧರ್ಮದ ಮೇಲೆ ನಡೆಯಬಾರದು ಎಂದರು.

‘ನನ್ನ ವಿರುದ್ಧ ಸ್ಪರ್ಧಿಸಿರುವ ಎರಡು ಪಕ್ಷಗಳ ಅಭ್ಯರ್ಥಿಗಳು ಜಾತಿ, ಧರ್ಮದ ಹೆಸರು ಹೇಳಿಕೊಂಡು ಮತದಾರರನ್ನು ಭಾವನಾತ್ಮಕವಾಗಿ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಇದು ಫಲ ನೀಡುವುದಿಲ್ಲ. ನನ್ನ ಇಪ್ಪತ್ತು ವರ್ಷಗಳ ಸುಧೀರ್ಘ ರಾಜಕೀಯ ಜೀವನದಲ್ಲಿ ಯಾವುದೇ ಜಾತಿ, ಧರ್ಮ ಭೇದ ಮಾಡದೆ ರಾಜಕಾರಣ ಮಾಡುತ್ತಿದ್ದೇನೆ’ ಎಂದರು.

ಈ ಸತ್ಯವನ್ನು ತಾಲ್ಲೂಕಿನ ಸ್ವಾಭಿಮಾನಿ ಜನತೆ ತಿಳಿದಿದ್ದಾರೆ. ಜಾತಿ, ಧರ್ಮದ ಹೆಸರೇಳಿಕೊಂಡು ರಾಜಕಾರಣ ಮಾಡುವವರಿಗೆ ಕ್ಷೇತ್ರದ ಪ್ರಬುದ್ಧ ಮತದಾರರು ತಕ್ಕ ಪಾಠ ಕಲಿಸುತ್ತಾರೆ ಎಂದರು.

‘ತಾಲ್ಲೂಕಿನ ಮುಸ್ಲಿಮರು ಸದಾ ನನ್ನ ರಾಜಕೀಯ ಏಳಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದ್ದಾರೆ. ಪ್ರತಿ ಬಾರಿಯಂತೆ ಈ ಬಾರಿಯೂ ಬಾಂಧವರು ಈ ಚುನಾವಣೆಯಲ್ಲೂ ನನಗೆ ಆಶೀರ್ವಾದ ಮಾಡುತ್ತಾರೆ ಎಂಬ ನಂಬಿಕೆ ಇದೆ. ನನ್ನ ಬಗ್ಗೆ ಕೆಲವರು ಇಲ್ಲಸಲ್ಲದ ಸುದ್ದಿಗಳನ್ನು ಹಬ್ಬಿಸುತ್ತಿದ್ದು ಇದಕ್ಕೆಲ್ಲಾ ತಾಲ್ಲೂಕಿನ ಮುಸಲ್ಮಾನ ಬಂಧುಗಳು ಕಿವಿಗೊಡಬಾರದು’ ಎಂದು ಮನವಿ ಮಾಡಿದರು.

ಮುಖಂಡರಾದ ಮಲವೇಗೌಡ, ಕುಳ್ಳಪ್ಪ, ಪದ್ಮಾ ಕೃಷ್ಣಯ್ಯ, ವಿ.ಬಿ.ಚಂದ್ರು, ಪ್ರಸನ್ನ, ದಲಿತ ಮುಖಂಡರಾದ ಸದಾನಂದ, ವಂದಾರಗುಪ್ಪೆ ರಾಜೇಶ್, ಶಿವಮೂರ್ತಿ, ಚಕ್ಕಲೂರು ಚೌಡಯ್ಯ, ಸೋಗಾಲ ವಿಷಕಂಠು, ಶಿವಣ್ಣ, ತಾರಕೇಶ್ ಭಾಗವಹಿಸಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry