ಡಿ.ಕೆ. ಚೌಟ ಮನದ ಮಾತು | ಮಣ್ಣು, ಅಕ್ಷರ ಕೃಷಿಯೇ ಜೀವಚೈತನ್ಯ

ಮಂಗಳವಾರ, ಜೂಲೈ 16, 2019
25 °C

ಡಿ.ಕೆ. ಚೌಟ ಮನದ ಮಾತು | ಮಣ್ಣು, ಅಕ್ಷರ ಕೃಷಿಯೇ ಜೀವಚೈತನ್ಯ

Published:
Updated:
‘ಮಣ್ಣು, ಅಕ್ಷರ ಕೃಷಿಯೇ ಜೀವಚೈತನ್ಯ’

ನಾನು ಡಿ.ಕೆ. ಚೌಟ. ದರ್ಬೆ ಕೃಷ್ಣಾನಂದ ಚೌಟ. ಹುಟ್ಟಿದ್ದು 1938ರ ಜೂನ್‌ ಒಂದರಂದು. ಈಗ ನನಗೆ ಭರ್ತಿ 80 ವರ್ಷ. ಕಾಸರಗೋಡು ಜಿಲ್ಲೆ ಮೀಯಪದವಿನ ದರ್ಬೆ ಮನೆತನದ ಮಗ ನಾನು. ಮಂಜೇಶ್ವರದಿಂದ ಏಳು ಕಿ.ಮೀ ದೂರದಲ್ಲಿದೆ ನಮ್ಮೂರು. ನಮ್ಮಪ್ಪ ನಾರಾಯಣ ಚೌಟ ಪಟೇಲರಾಗಿದ್ದರು. ಸಾಹಿತ್ಯ, ಸಂಗೀತ, ನಾಟಕ, ಯಕ್ಷಗಾನ, ತಾಳಮದ್ದಲೆಯ ಹುಚ್ಚು ಅವರಿಗೂ ಇತ್ತು. ಅಮ್ಮ ಮೋಹಿನಿ.

ಇದನ್ನೂ ಓದಿ: ಹಿರಿಯ ರಂಗಕರ್ಮಿ ಡಿ.ಕೆ.ಚೌಟ ನಿಧನ

ನಮ್ಮದು ಅಪ್ಪಟ ಕೃಷಿಕ ಕುಟುಂಬ. ನನ್ನ ಅಜ್ಜನ ಕಾಲದಿಂದಲೂ ‘ದರ್ಬೆ’ ಮನೆತನ ಪಟೇಲ ಮತ್ತು ಗುತ್ತಿನ ಮನೆತನವಾಗಿ ಹೆಸರು ಗಳಿಸಿದೆ. ಗಳಿಸೋಣ, ಬೆಳೆಸೋಣ, ಹಂಚಿ ತಿನ್ನೋಣ ಎಂಬುದು ನಮ್ಮ ಮನೆತನದಲ್ಲಿ ವಂಶಪಾರಂಪರ್ಯವಾಗಿ ನಡೆದುಬಂದಿರುವ ಪದ್ಧತಿ. ನಾನು ಸಾಹಿತ್ಯ, ಕೃಷಿ ಮತ್ತು ಸಾಮಾಜಿಕ ಕ್ಷೇತ್ರಗಳಿಗೆ ಕೈಲಾದ ಸಹಾಯ ಮಾಡಿದ್ದರೆ ಅದಕ್ಕೆ ಬಾಲ್ಯದಿಂದಲೇ ನನಗೆ ಸಿಕ್ಕಿದ ಈ ಸಂಸ್ಕಾರವೇ ಕಾರಣ ಎಂದು ಭಾವಿಸುತ್ತೇನೆ.

ಇದನ್ನೂ ಓದಿ: ಮನೆಯಂಗಳದಲ್ಲಿ ಮಾತುಕತೆ | ಪ್ರತ್ಯೇಕ ತುಳು ರಾಜ್ಯದ ಬೇಡಿಕೆ ಹುಚ್ಚುತನ

ನನ್ನ ಎರಡು ವರ್ಷದ ಪ್ರಾಥಮಿಕ ಶಿಕ್ಷಣಮೀಯ ಪದವಿನಲ್ಲಿಯೇ ಆಯಿತು. ಮೂರನೇ ಕ್ಲಾಸ್‌ನಿಂದ ಹೈಸ್ಕೂಲ್‌ವರೆಗೂ ಮಂಜೇಶ್ವರದಲ್ಲಿ ಅಜ್ಜ–ಅಜ್ಜಿಯ ಮನೆಯಲ್ಲಿದ್ದು ಓದಿದೆ. ನಮ್ಮದು ಕೂಡುಕುಟುಂಬವಾದ್ದರಿಂದ ಸಹಜವಾಗಿಯೇ ಮಕ್ಕಳ ಸೈನ್ಯವೇ ಇತ್ತು. ಶಾಲೆಗೆ ಹೋಗುವಾಗ ದರ್ಬೆ ಮನೆ ಮತ್ತು ನಮ್ಮ ಕೆಲಸದವರ ಮಕ್ಕಳೆಲ್ಲ ಸೇರಿ ಏನಿಲ್ಲವೆಂದರೂ 25 ಮಕ್ಕಳು ಇರುತ್ತಿದ್ದೆವು. ಮಳೆಗಾಲದಲ್ಲಿ ನೆರೆ ಬಂದರೆ ಅಷ್ಟೂ ಜನ ಚಕ್ಕರ್‌. ಹಾಗಾಗಿ ಮಳೆ ಜೋರಾಗಿದ್ದರೆ ದರ್ಬೆಯ ಮಿನಿ ಸೈನ್ಯ ಬರುವುದಿಲ್ಲ ಎಂದು ಟೀಚರ್‌ಗಳು ಊಹಿಸುತ್ತಿದ್ದರು.

ಹೈಸ್ಕೂಲ್‌ ಓದುತ್ತಿರುವಾಗ ಮಂಜೇಶ್ವರ ಗೋವಿಂದ ಪೈಗಳ ಒಡನಾಟದ ಅದೃಷ್ಟ ನನಗೆ ಸಿಕ್ಕಿತು. ಅವರ ಸೊಸೆಯೇ ನಮಗೆ ಕನ್ನಡ ಟೀಚರ್‌ ಆಗಿದ್ದರು. ಪ್ರತಿ ಶನಿವಾರ, ಭಾನುವಾರ ಪೈಗಳ ಮನೆಗೆ ಹೋಗುತ್ತಿದ್ದೆವು. ಅಲ್ಲಿರುವ ಪುಸ್ತಕಗಳ ದೂಳು ಒರೆಸಿ ಇಡುವುದು ನನ್ನ ಕೆಲಸ! ಜಿ.ಪಿ.ರಾಜರತ್ನಂ, ಮಾಸ್ತಿ ವೆಂಕಟೇಶ ಅಯ್ಯಂಗಾರ್‌, ಕುವೆಂಪು ಅವರನ್ನು ಪೈಗಳ ಮನೆಯಲ್ಲಿ ನೋಡುತ್ತಿದ್ದೆ. ಶಿವರಾಮ ಕಾರಂತರಂತೂ ಆಗಾಗ್ಗೆ ಬರುತ್ತಿದ್ದರು. ಒಂದು ಸಲ ಕಾರಂತರು ಮತ್ತು ಪೈಗಳ ನಡುವೆ ವಾಗ್ಯುದ್ಧವೇ ನಡೆಯಿತು. ಯಕ್ಷಗಾನದ ಮೂಲ ಕವಿ ಪಾರ್ತಿ ಸುಬ್ಬ ಉಡುಪಿ ಮೂಲದವನು ಎಂಬುದು ಕಾರಂತರ ವಾದವಾಗಿತ್ತು. ಪೈಗಳು ಬಿಡುತ್ತಾರಾ? ‘ಕಾರಂತರೇ, ನೀವು ತಲೆಕೆಳಗಾಗಿ ಕಾಲು ಮೇಲಾಗಿ ನಿಂತರೂ ಪಾರ್ತಿ ಸುಬ್ಬ ಕುಂಬಳೆಯವನೇ ಎಂಬುದನ್ನು ಸಾಧಿಸಿ ತೋರಿಸುತ್ತೇನೆ ಬೇಕಿದ್ದರೆ’ ಎಂದು ಕಾರಂತರಿಗೆ ಸವಾಲು ಹಾಕಿದರು. ಕಾರಂತರು ಕೆಂಡಾಮಂಡಲರಾಗಿ ‘ನಾನಿನ್ನು ಇಲ್ಲಿಗೆ ಬರುವುದೇ ಇಲ್ಲ’ ಎಂದು ಒಂದು ದಿನ ಹೊರಟುಹೋದರು. ಅದಾಗಿ ಕೆಲವರ್ಷ ಅವರು ಬರಲೂ ಇಲ್ಲ.

ಸಾರಸ್ವತ ಲೋಕದ ದಿಗ್ಗಜರ ಪರಿಚಯವಾಗುತ್ತಿದ್ದಂತೆ ನನಗೂ ಬರೆಯಬೇಕು ಎಂಬ ತುಡಿತ ಶುರುವಾಯಿತು. ಪೈಗಳಲ್ಲಿ ಹೇಳಿದೆ. ‘ನೀನು ಕವಿಯಾಗಬೇಕೆಂದಿದ್ದರೆ ಮೊದಲು ಕುಮಾರವ್ಯಾಸನ ಭಾರತವನ್ನು ಓದು’ ಎಂದರು. ನಾನು ಓದಿದೆ. ಮಳೆಗಾಲದಲ್ಲಿ ನಮ್ಮ ಮನೆಯಲ್ಲಿ ಯಕ್ಷಗಾನ ತಾಳ ಮದ್ದಲೆ, ನಾಟಕ ನಡೆಯುತ್ತಿತ್ತು. ಅದಕ್ಕಿಂತಲೂ ಹೆಚ್ಚು ಪ್ರಭಾವ ಬೀರಿದ್ದು ಭಾರತ ವಾಚನ. ಕುಮಾರವ್ಯಾಸನ ಮಹಾಭಾರತವನ್ನು ನಮ್ಮ ಮನೆಯಲ್ಲಿ ಓದುತ್ತಿದ್ದರು. ಹಾಗಾಗಿ ಸಣ್ಣ ಪ್ರಾಯದಲ್ಲೇ ಕುಮಾರವ್ಯಾಸ ನನ್ನ ಮೇಲೆ ಪ್ರಭಾವ ಬೀರಿದ್ದ.

ನಾನು ಇಂಟರ್‌ಮೀಡಿಯೆಟ್ ಓದಲು ಮಂಗಳೂರಿಗೇ ಹೋಗಬೇಕಾಗಿತ್ತು. ಮಂಜೇಶ್ವರದಿಂದ ರೈಲಿನಲ್ಲಿ ಹೋಗಿಬರುತ್ತಿದ್ದೆ. ಇಂಟರ್‌ಮೀಡಿಯೆಟ್‌ ಮುಗಿಯುತ್ತಿದ್ದಂತೆ ಮುಂದೆ ಎಂಜಿನಿಯರಿಂಗ್‌ ಓದಬೇಕು ಎಂದು ನನ್ನಪ್ಪ ಹೇಳಿದ್ದರು. ಆದರೆ ನಾನು ಸೈನ್ಸ್‌ ಬಿಟ್ಟು ಆರ್ಟ್ಸ್‌ಗೆ ಬದಲಿಸಿಕೊಂಡೆ. ಬಿ.ಎ. ಪದವಿ ಓದಿದೆ. ಸ್ನಾತಕೋತ್ತರ ಪದವಿಗೆ (ಎಕನಾಮಿಕ್ಸ್‌) ಮುಂಬೈಗೆ ಹೋದೆ. ಮುಂಬೈಯಲ್ಲಿ ಎಂ.ಪಿ.ಪ್ರಕಾಶ್‌ ಅವರೂ ನನ್ನ ಸಹಪಾಠಿ. ಕನ್ನಡದ ಹುಡುಗರೆಲ್ಲ ಒಟ್ಟಾಗಿ, ಮುಂಬೈ ವಿಶ್ವವಿದ್ಯಾಲಯದ ಇತಿಹಾಸದಲ್ಲೇ ಮೊದಲ ಸಲ ಯಕ್ಷಗಾನ ಪ್ರದರ್ಶಿಸಿದ್ದೆವು. ಅಲ್ಲಿಂದೀಚೆ ಅಲ್ಲಿನ ಕಾಲೇಜುಗಳಲ್ಲಿಯೂ ಯಕ್ಷಗಾನ ಪ್ರದರ್ಶನಗಳು ನಡೆದವು. ಮುಂಬೈನಲ್ಲಿರುವಾಗಲೇ ಮನೋರಮಾ ಜೊತೆ ನನ್ನ ಮದುವೆ ಆಯಿತು. (ಅವಳನ್ನು ನಾನು ರಮಾ ಅಂತ ಕರೀತೇನೆ).

1955ರಲ್ಲಿ ನನಗೆ ಜನರಲ್‌ ಇನ್ಷೂರೆನ್ಸ್‌ ಕಂಪೆನಿಯಲ್ಲಿ ಕೆಲಸ ಸಿಕ್ಕಿತು. ಸ್ವಲ್ಪ ಸಮಯದಲ್ಲೇ ನನಗೆ ಆಫ್ರಿಕಾಕ್ಕೆ ಹೋಗುವಂತೆ ಸೂಚನೆ ಬಂತು. ಹೋಗಲೇಬೇಕಾದ್ದರಿಂದ ಪತ್ನಿ ಮತ್ತು ನಾನು ಹೋದೆವು. ಆಗಿನ ದಿನಗಳಲ್ಲಿ ಈಗಿನಷ್ಟು ಸುಲಭವಾಗಿ ವೀಸಾ ಸಿಗುತ್ತಿರಲಿಲ್ಲ. ಕಂಪೆನಿ ಕೆಲಸವಾದ ಕಾರಣ ನಮಗೆ ಕಷ್ಟವಾಗಲಿಲ್ಲವೆನ್ನಿ. ಹಾಗೆ ಹೋದವನು ಘಾನಾ ಮತ್ತು ನೈಜೀರಿಯಾದಲ್ಲಿ 25 ವರ್ಷ ಇದ್ದೆ. ಸಂದೀಪ ಮತ್ತು ಪ್ರಜ್ಞಾ ಹುಟ್ಟಿದ್ದು ಅಲ್ಲಿಯೇ. ಮಕ್ಕಳು ಬೆಳೆಯುತ್ತಿದ್ದಂತೆ ನಮ್ಮೂರಿಗೆ ಮರಳಬೇಕೆಂದು ತೀರ್ಮಾನಿಸಿ ನಮ್ಮ ಕಂಪೆನಿಗೆ ಪತ್ರ ಬರೆದೆ. ಆಫ್ರಿಕಾದಲ್ಲಿದ್ದಷ್ಟೂ ವರ್ಷ ಬದುಕು ನಮಗೆ ಕಷ್ಟ ಎನಿಸಲೇ ಇಲ್ಲ. ಅಲ್ಲಿನ ಜನರು ನಮ್ಮನ್ನು ಅಂದರೆ ಏಷ್ಯಾದವರನ್ನು ಬಹಳ ಗೌರವದಿಂದ ಕಾಣುತ್ತಿದ್ದರು.

ನಾನು ಬೆಂಗಳೂರಿಗೆ ಬಂದದ್ದು 1980ರ ದಶಕದಲ್ಲಿ. ಇಲ್ಲಿ ಮಾಗಡಿ ರಸ್ತೆಯಲ್ಲಿ ‘ಸನ್‌ವ್ಯಾಲಿ’ ಎಂಬ ರೆಸಾರ್ಟ್‌ ಆರಂಭಿಸಿದೆ. ಬೆಂಗಳೂರಿನ ಮೊದಲ ರೆಸಾರ್ಟ್‌ ಅದು. ರಫ್ತು ಉದ್ಯಮದಲ್ಲಿ ತೊಡಗಿಸಿಕೊಳ್ಳುವ ಬಯಕೆ ಉಂಟಾಯಿತು. ರಫ್ತು ಉದ್ಯಮದಲ್ಲಿ ಸಾಕಷ್ಟು ಪ್ರಯೋಗಗಳನ್ನು ಮಾಡಿದೆ. ಪಿ.ಸಿ.ಎಕ್ಸ್‌ಪೋರ್ಟ್ಸ್‌ ಎಂಬ ನಮ್ಮ ಕಂಪೆನಿ ಘಾನಾ, ನೈಜೀರಿಯಾ, ಲಂಡನ್‌ನಲ್ಲಿ ಸಾಕಷ್ಟು ಹೆಸರು ಗಳಿಸಿತು. ಬೆಂಗಳೂರಿನಲ್ಲಿ ನೆಲೆಸಿದ ಮೇಲೆ ಕರ್ನಾಟಕ ಚಿತ್ರಕಲಾ ಪರಿಷತ್‌ ಮತ್ತು ಬಂಟರ ಸಂಘಕ್ಕೆ ಆಯ್ಕೆಯಾದೆ. 1995ರಲ್ಲಿ ನನ್ನ ನೇತೃತ್ವದಲ್ಲಿ ನಡೆದ ವಿಶ್ವ ಬಂಟರ ಸಮ್ಮೇಳನ ಅತ್ಯಂತ ಯಶಸ್ವಿಯಾಯಿತು. ಚಿತ್ರಕಲಾ ಪರಿಷತ್‌ಗೆ ಅಕಾಡೆಮಿಕ್‌ ಸ್ಪರ್ಶ ಕೊಡಲು ಸಾಧ್ಯವಾಯಿತು.

ನೌಕರಿ ಮತ್ತು ರಫ್ತು ಉದ್ಯಮದಲ್ಲಿದ್ದಾಗಲೂ ನನ್ನ ಮನಸ್ಸು ಕೃಷಿಯಲ್ಲಿ ತೊಡಗಿಸಿಕೊಳ್ಳುವಂತೆ ತುಡಿಯುತ್ತಿತ್ತು. ಹಾಗಾಗಿ ಉದ್ಯಮದಿಂದ ಹೊರಬಂದು ನಮ್ಮೂರಿನಲ್ಲಿ 100 ಎಕರೆಯಲ್ಲಿ ತೆಂಗು ತೋಟ ಮಾಡಿದೆ. ರಂಬುಟಾನ್‌, ಅವಕಾಡೊ, ಮಾವಿನ ಗಿಡಗಳನ್ನು ಹಾಕಿದೆ. ಅವಕಾಡೊ ಗಿಡ ಹಾಕಲು ಪ್ರೇರಣೆ ನೀಡಿದವರು ಬೆಳ್ತಂಗಡಿ ತಾಲ್ಲೂಕಿನ ದಿಡುಪೆ ಎಂಬಲ್ಲಿನ ಜೇಕಬ್‌ ಎನ್ನುವ ಪ್ರಗತಿಪರ ಕೃಷಿಕ.

‘ಕೂಡಿ ಬಾಳು, ಹಂಚಿ ತಿನ್ನು’ ಎಂಬ ನಮ್ಮ ಮನೆತನದ ಪರಂಪರೆ ಬಗ್ಗೆ ಆರಂಭದಲ್ಲಿ ಹೇಳಿದೆ ನೋಡಿ. ಈಗಲೂ ಪ್ರತಿ ದೀಪಾವಳಿಗೆ ನಮ್ಮ ಕುಟುಂಬದ ಪ್ರತಿ ಸದಸ್ಯರೂ– ವಿದೇಶಗಳಲ್ಲಿ ಇರುವವರೂ– ನಮ್ಮ ಊರಿನ ಮನೆಯಲ್ಲಿ ಸೇರುತ್ತೇವೆ. ಅಂದು, ಆ ವರ್ಷದ ತೋಟದ ಫಸಲಿನಿಂದ ಬಂದ ಹಣವನ್ನು ಸಮಾನವಾಗಿ ಹಂಚುತ್ತೇನೆ. ಹಣ ಹಾಕಿದವರ ಪಾಲನ್ನು ಪ್ರತ್ಯೇಕವಾಗಿ ಅವರಿಗೆ ಕೊಡುತ್ತೇನೆ.  ನಾನು ದೇವಸ್ಥಾನ ಅಥವಾ ಭೂತಾರಾಧನೆಗೆ ಸಂಬಂಧಿಸಿದ ಕಾರ್ಯಕ್ರಮಗಳಿಗೆ ದೇಣಿಗೆ ನೀಡಿಲ್ಲ. ಇದಕ್ಕಾಗಿ ಸಾಕಷ್ಟು ಮಂದಿಯ ವಿರೋಧವೂ ಎದುರಾಗಿದೆ. ಶಾಲೆ, ವಿದ್ಯಾರ್ಥಿಗಳು, ರಂಗ ಚಟುವಟಿಕೆಗಳಿಗೆ ಕೇಳಿದಾಗಲೆಲ್ಲ ಕೊಡುತ್ತೇನೆ. ನನ್ನ ಉದ್ದೇಶ, ನಿಲುವು ನನಗೆ ಸ್ಪಷ್ಟವಿದೆ. ಹಾಗಾಗಿ ಬೇಸರವಿಲ್ಲ.

ನನಗೆ ಇಬ್ಬರು ಮಕ್ಕಳು. ಸಂದೀಪ ಚೌಟ, ಚಿತ್ರರಂಗದಲ್ಲಿ ಸಂಗೀತ ನಿರ್ದೇಶಕನಾಗಿ ಹೆಸರು ಮಾಡುತ್ತಿದ್ದಾನೆ. ಅವನ ಹೆಂಡತಿ ಅರ್ಚನಾ ನನ್ನ ಎಲ್ಲಾ ಕೆಲಸಗಳಲ್ಲಿ ಈಗ ನೆರವಾಗುತ್ತಾಳೆ. ಮಗಳು ಪ್ರಜ್ಞಾ ಚೌಟ ಆನೆ ತಜ್ಞಳಾಗಿ, ಸಂಶೋಧಕಿಯಾಗಿ ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿದ್ದಾಳೆ. ದುಬಾರೆ ಅರಣ್ಯದಲ್ಲಿ ಅವಳ ‘ಆನೆ ಮನೆ’ಯಲ್ಲಿ ಈಗ ಏಳು ಆನೆಗಳನ್ನು ಸಾಕುತ್ತಿದ್ದಾಳೆ. ಸದ್ಯ ಪ್ಯಾರಿಸ್‌ನಲ್ಲಿ ಗಂಡ ಮತ್ತು ಮಗಳೊಂದಿಗೆ ಇದ್ದಾಳೆ. ಅವಳಿಗೆ ಆನೆಯ ಹುಚ್ಚು ಹೇಗೆ ಶುರುವಾಯಿತೋ ಗೊತ್ತಿಲ್ಲ. ಲಂಡನ್‌ನಲ್ಲಿ ಸಮಾಜವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿ ಬಂದವಳು ‘ಅಪ್ಪಾ ನಾನು ಮಾವುತಳಾಗಬೇಕು’ ಎಂದು ಒಂದು ದಿನ ಹೇಳಿದಾಗ ನಾನು ಬೆಚ್ಚಿಬಿದ್ದಿದ್ದೆ. ಆದರೆ ಅವಳ ನಿರ್ಧಾರ ಅಚಲವಾಗಿತ್ತು. ಇವತ್ತು ಜಗತ್ತು ತಿರುಗಿ ನೋಡುವಂತಹ ಕೆಲಸವನ್ನು ಮಾಡಿದ ಮೇಲೆ ನನ್ನ ಮಗಳು ಎಂತಹ ಸಾಧನೆ ಮಾಡಿದ್ದಾಳಲ್ಲ ಎಂದು ಹೆಮ್ಮೆಯಾಗುತ್ತಿದೆ.  ಹೀಗೆ, ನನ್ನ ಬದುಕು ತೆರೆದ ಪುಸ್ತಕದಂತೆ ಇದೆ. ಹಣ ಗಳಿಸುವುದು ಮುಖ್ಯವಲ್ಲ, ಅದನ್ನು ಸಮಾಜದಲ್ಲಿ ಅವಶ್ಯಕತೆ ಇರುವವರೊಂದಿಗೆ ಹಂಚಿಕೊಳ್ಳುವುದೂ ಮುಖ್ಯ ಎಂಬುದು ನನ್ನ ನಂಬಿಕೆ. ಅದರಂತೆ ನಡೆದಿದ್ದೇನೆ.

ಬೆಂಗಳೂರಿನಿಂದ ಕಲಾ ಪಯಣ

ರೆಸಾರ್ಟ್‌ ಶುರು ಮಾಡಿದ ಮೇಲೆ ಬೆಳಿಗ್ಗೆ ಅಲ್ಲಿ ಹೋಗಿ ಈಜೋದು, ಎಳನೀರು ಕುಡಿಯೋದು, ಸಂಜೆ ರವೀಂದ್ರ ಕಲಾಕ್ಷೇತ್ರದಲ್ಲಿ ನಾಟಕ ನೋಡೋದು ನನ್ನ ದಿನಚರಿಯಾಗಿತ್ತು. ನಾಟಕಗಳಿಗೆ ತಪ್ಪದೇ ಬರುವ ಈ ಗಡ್ಡಧಾರಿ ಯಾರು ಎಂದು ಒಂದು ದಿನ ಸಿ.ಜಿ.ಕೃಷ್ಣಸ್ವಾಮಿ (ಸಿಜಿಕೆ) ಮಾತನಾಡಿಸಿದರು. ಅಲ್ಲಿಂದೀಚೆ ನಮ್ಮಿಬ್ಬರ ಒಡನಾಟ, ರಂಗ ಚಟುವಟಿಕೆಗಳು ಶುರುವಾದವು. ಕನ್ನಡದ ಪ್ರಮುಖ ನಾಟಕಗಳನ್ನು ಚಿತ್ರಕಲಾ ಪರಿಷತ್‌ ಅಥವಾ ರವೀಂದ್ರ ಕಲಾಕ್ಷೇತ್ರದಲ್ಲಿ ನಿರಂತರವಾಗಿ ನಾನೂ ಅವರೂ ಸೇರಿ ಮಾಡಿಸಿದೆವು.

‘ರಂಗನಿರಂತರ’ ತಂಡ ಸಿಜಿಕೆ ಮತ್ತು ನನ್ನ ಕನಸಿನ ತಂಡ. ಅವರ ನಿಧಾನನಂತರ ಸಿಜಿಕೆ ರಾಷ್ಟ್ರೀಯ ರಂಗೋತ್ಸವ ರಂಗಭೂಮಿಯ ಮಹತ್ವದ ಕಾರ್ಯಕ್ರಮವಾಗಿ ಬೆಳೆಯುತ್ತಿದೆ. ಈ ಬಾರಿಯ ರಂಗೋತ್ಸವ ಬಹಳ ವಿಶೇಷವಾಗಿತ್ತು. ಈ ಸಲ ನಾನು ದೇಣಿಗೆ ಕೊಡುವ ಅಗತ್ಯವೂ ಬರಲಿಲ್ಲ. ಅಂದರೆ ತಂಡ ಆರ್ಥಿಕವಾಗಿಯೂ  ಬೆಳೆದಿದೆ ಎಂದರ್ಥ. ಇದು ರಂಗಭೂಮಿಯ ಮಟ್ಟಿಗೆ ಮಹತ್ವದ ಬೆಳವಣಿಗೆ.

ಸಿಜಿಕೆ ಅವರು ನನ್ನ ‘ರಂಗಭೂಮಿಯ ಎಟಿಎಂ’ ಎಂದೋ, ‘ಚೌಟರ ಕಿಸೆಯಲ್ಲಿ ಎಷ್ಟಿದೆ ನೋಡಿ’ ಎಂದೋ ತಮಾಷೆ ಮಾಡುತ್ತಿದ್ದರು. ಅನೇಕ ನಾಟಕ ತಂಡಗಳ ಪರಿಚಯವಾಯಿತು. ಕರ್ನಾಟಕ ಚಿತ್ರಕಲಾ ಪರಿಷತ್‌ನ ಕಾರ್ಯದರ್ಶಿಯಾದಾಗ ಹೊಸ ಕ್ಯಾಂಪಸ್‌ಗಾಗಿ ಸರ್ಕಾರದಿಂದ ₹20 ಕೋಟಿ ಅನುದಾನ ಬಿಡುಗಡೆಯಾಯಿತು. ‘ಚಿತ್ರಸಂತೆ’ ಆರಂಭವಾಗಿ 18 ವರ್ಷಗಳಾಗಿವೆ. ಲಂಡನ್‌ನಲ್ಲಿರುವಾಗ ಚಿತ್ರಕಲೆಗೆ ಅಲ್ಲಿ ಸಿಗುವ ಮಾನ್ಯತೆಯನ್ನು ನೋಡಿದ್ದೆ. ಅದೇ ಪ್ರೇರಣೆಯಿಂದ ಇಲ್ಲಿ ಚಿತ್ರಸಂತೆಯ ಪರಿಕಲ್ಪನೆ ಅನುಷ್ಠಾನಕ್ಕೆ ತಂದೆ. ಈಗ ಒಂದೇ ದಿನದಲ್ಲಿ ಕೋಟ್ಯಂತರ ರೂಪಾಯಿಗಳ ವ್ಯವಹಾರ ನಡೆಯುತ್ತದೆ. ಇದು, ಕಲಾ ಜಗತ್ತಿನ ಅಚ್ಚರಿ ಅಲ್ವೇ?

ಬೆಂಗಳೂರಿನಲ್ಲಷ್ಟೇ ಅಲ್ಲದೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ, ಕಾಸರಗೋಡು ಜಿಲ್ಲೆಯಲ್ಲಿಯೂ ರಂಗ ಚಟುವಟಿಕೆಗಳಿಗೆ ಹಣ ಸಹಾಯ ಮಾಡುತ್ತಿದ್ದೆ. ಕಾಂತಾವರ ಮತ್ತು ಮುದ್ರಾಡಿಯಲ್ಲಿ ನನ್ನದೇ ಹೆಸರಿನ ರಂಗ ಸಂಸ್ಥೆಗಳನ್ನು ಶುರು ಮಾಡಿದ್ದಾರೆ.

ಆನಂದಕೃಷ್ಣ ಎಂಬ ‘ಹುಡುಗ’ ಬರೆದ ಲೇಖನಗಳು

ನಾನು ಸಾಹಿತ್ಯ ಕೃಷಿ ಶುರು ಮಾಡಿದ್ದು ಬಹಳ ತಡವಾಗಿ. ತುಳು ಸಾಹಿತ್ಯವನ್ನು ಬೆಳೆಸುವ ಉದ್ದೇಶದಿಂದ ಬರೆಯತೊಡಗಿದೆ. ‘ಆನಂದಕೃಷ್ಣ’ ಎಂಬ ಹೆಸರಿನಿಂದ ಬರೆಯುತ್ತಿದ್ದೆ. ನಾನು ಎಂದು ಗೊತ್ತಿಲ್ಲದೆ ಸಾಹಿತ್ಯಪ್ರಿಯರು ನನ್ನಲ್ಲಿಯೇ ಅದರ ಬಗ್ಗೆ ಚರ್ಚಿಸುವುದು ಮಾಮೂಲಾಗಿತ್ತು.

ಒಮ್ಮೆ ಒಬ್ಬರು ಬಂದು ‘ಅದ್ಯಾರೋ ಆನಂದಕೃಷ್ಣ ಎಂಬ ಹುಡುಗ ಚೆನ್ನಾಗಿ ಬರೀತಿದ್ದಾನೆ ಅವನು ಯಾರು ಎಂದು ನೋಡಬೇಕಿತ್ತಲ್ಲ’ ಎಂದರು. ‘ಹುಡುಗನೇ ಆಗಿರಬೇಕಾ ಮುದುಕ ಆಗಿರಬಾರದಾ?’ ಎಂದು ಕಾಲೆಳೆದೆ. ಕೃಷ್ಣಾನಂದ ಎಂಬ ಹೆಸರನ್ನು ತಿರುವಿ ಆನಂದಕೃಷ್ಣ ಎಂದು ಮಾಡಿಕೊಂಡಿದ್ದೆ. ಅದು ನಾನೇ ಎಂದು ಆಮೇಲೆ ಎಲ್ಲರಿಗೂ ಗೊತ್ತಾಯಿತು.

ಕರಿಯಜ್ಜೆರೆನ ಕತೆಕ್ಕುಲು ಮತ್ತು ಪಿಲಿಪತ್ತಿ ಗಡಸು (ನಾಟಕ), ಪತ್ತ್ ಪಜ್ಜೆಲು, ದರ್ಮೆತ್ತಿಮಾತೆ, ಉರಿ ಉಷ್ಣದ ಮಾಯೆ, ಮಿತ್ತಬೈಲ್‌ ಯಮುನಕ್ಕೆ (ಕನ್ನಡಕ್ಕೂ ಭಾಷಾಂತರವಾಗಿರುವ ತುಳು ನಾಟಕ) ಕೃತಿಗಳು ತುಳು ಮತ್ತು ಕನ್ನಡ ಸಾಹಿತ್ಯ ಮತ್ತು ರಂಗಭೂಮಿ ಕ್ಷೇತ್ರದಲ್ಲಿ ಬಹಳ ಮೆಚ್ಚುಗೆ ಗಳಿಸಿವೆ. ಎಲ್ಲಾ ಚಟುವಟಿಕೆಗಳನ್ನು ಮೆಚ್ಚಿ ಮಂಗಳೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್‌ ನೀಡಿದೆ.

(7ನೇ ಮೇ 2018ರಂದು ಪ್ರಕಟವಾಗಿದ್ದ ಲೇಖನವನ್ನು ಮತ್ತೆ ಪ್ರಕಟಿಸಲಾಗಿದೆ)

ಬರಹ ಇಷ್ಟವಾಯಿತೆ?

 • 10

  Happy
 • 0

  Amused
 • 0

  Sad
 • 0

  Frustrated
 • 0

  Angry