ಬುಧವಾರ, ಮಾರ್ಚ್ 3, 2021
22 °C

ಅರ್ಜುನ್‌ ರನ್ನರ್‌ ಅ‍ಪ್‌

ಪಿಟಿಐ Updated:

ಅಕ್ಷರ ಗಾತ್ರ : | |

ಅರ್ಜುನ್‌ ರನ್ನರ್‌ ಅ‍ಪ್‌

ನವದೆಹಲಿ: ಭಾರತದ ಅರ್ಜುನ್‌ ಖಾಡೆ, ನೈಜೀರಿಯಾದ ಅಬುಜಾದಲ್ಲಿ ನಡೆದ ಐಟಿಎಫ್‌ ಫ್ಯೂಚರ್ಸ್‌ ಟೆನಿಸ್‌ ಟೂರ್ನಿಯಲ್ಲಿ ರನ್ನರ್‌ ಅಪ್‌ ಆಗಿದ್ದಾರೆ.

ಭಾನುವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಫೈನಲ್‌ನಲ್ಲಿ ಅರ್ಜುನ್‌ 3–6, 1–6ರ ನೇರ ಸೆಟ್‌ಗಳಿಂದ ಬ್ರೆಜಿಲ್‌ನ ಜಾವೊ ಮೆನೆಂಜೆಸ್‌ ವಿರುದ್ಧ ಪರಾಭವಗೊಂಡರು.

ವಿಶ್ವ ಕ್ರಮಾಂಕ ಪಟ್ಟಿಯಲ್ಲಿ 397ನೇ ಸ್ಥಾನದಲ್ಲಿದ್ದ ಖಾಡೆ, ಮೊದಲ ಸೆಟ್‌ನ ಶುರುವಿನಲ್ಲಿ ಎದುರಾಳಿಗೆ ಪ್ರಬಲ ಪೈಪೋಟಿ ಒಡ್ಡಿದರು. ಹೀಗಾಗಿ ಆರಂಭದ ಆರು ಗೇಮ್‌ಗಳಲ್ಲಿ ಸಮಬಲದ ಪೈಪೋಟಿ ಕಂಡುಬಂತು.

ನಂತರ ಮೆನೆಂಜೆಸ್‌ ಅಬ್ಬರಿಸಿದರು. ಮಿಂಚಿನ ಸರ್ವ್‌ಗಳ ಮೂಲಕ ಭಾರತದ ಆಟಗಾರನನ್ನು ಕಂಗೆಡಿಸಿದ ಅವರು ಸುಲಭವಾಗಿ ಗೆದ್ದರು.

ಎರಡನೇ ಸೆಟ್‌ನಲ್ಲಿ ಖಾಡೆ, ತಿರುಗೇಟು ನೀಡಬಹುದೆಂಬ ನಿರೀಕ್ಷೆ ಹುಸಿಯಾಯಿತು. ಆರಂಭದ ಐದೂ ಗೇಮ್‌ಗಳಲ್ಲಿ ಮಿಂಚಿದ ಬ್ರೆಜಿಲ್‌ನ ಆಟಗಾರ 5–0ರ ಮುನ್ನಡೆ ಗಳಿಸಿದರು. ಆರನೇ ಗೇಮ್‌ನಲ್ಲಿ ಎದುರಾಳಿಗೆ ತಿರುಗೇಟು ನೀಡಿದ ಖಾಡೆ ಹಿನ್ನಡೆಯನ್ನು 1–5ಕ್ಕೆ ತಗ್ಗಿಸಿಕೊಂಡರು. ಏಳನೇ ಗೇಮ್‌ನಲ್ಲಿ ಸರ್ವ್‌ ಕಾಪಾಡಿಕೊಂಡ ಜಾವೊ ಭಾರತದ ಆಟಗಾರನ ಸವಾಲು ಮೀರಿದರು.

ಖಾಡೆ ಅವರು ಐಟಿಎಫ್‌ ಟೂರ್ನಿಯಲ್ಲಿ ಮೂರನೇ ಬಾರಿ ರನ್ನರ್‌ ಅಪ್‌ ಆಗಿದ್ದಾರೆ. ಈ ವರ್ಷದ ಆರಂಭದಲ್ಲಿ ಕೋಲ್ಕತ್ತ ಮತ್ತು ತಿರುವನಂತಪುರದಲ್ಲಿ ನಡೆದಿದ್ದ ಟೂರ್ನಿಗಳ ಫೈನಲ್‌ನಲ್ಲೂ ಅವರು ಸೋತಿದ್ದರು. ಫೆಬ್ರುವರಿಯಲ್ಲಿ ಭುವನೇಶ್ವರದಲ್ಲಿ ಜರುಗಿದ್ದ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿದ್ದರು.

‘ಮೊದಲ ಸೆಟ್‌ನಲ್ಲಿ ಎದುರಾಳಿಗೆ ಪ್ರಬಲ ಪೈಪೋಟಿ ಒಡ್ಡಿದೆ. ಆದರೆ ಎರಡನೇ ಸೆಟ್‌ನಲ್ಲಿ ಮೆನೆಂಜೆಸ್‌, ಆರಂಭದಿಂದಲೇ ಆಕ್ರಮಣಕಾರಿ ಆಟ ಆಡಿ ಮೇಲುಗೈ ಸಾಧಿಸಿದರು. ಈ ಸೋಲಿನಿಂದ ಹೊಸ ಪಾಠ ಕಲಿತಿದ್ದೇನೆ. ಮುಂದಿನ ಟೂರ್ನಿಗಳಲ್ಲಿ ಪ್ರಶಸ್ತಿ ಗೆಲ್ಲಲು ಪ್ರಯತ್ನಿಸುತ್ತೇನೆ’ ಎಂದು ಖಾಡೆ ಹೇಳಿದ್ದಾರೆ.

*

ಈ ಸೋಲಿನಿಂದ ಹೊಸ ಪಾಠ ಕಲಿತಿದ್ದೇನೆ. ಮುಂದಿನ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲಲು ಶ್ರಮಿಸುತ್ತೇನೆ.

-ಅರ್ಜುನ್‌ ಖಾಡೆ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.