ವಾಗ್ದಂಡನೆ ಸನಿಹ ತಲುಪಿದ್ದ ಕಾಟ್ಜು

7
ನ್ಯಾಯಾಂಗದ ಅನುಭವ ಪುಸ್ತಕದಲ್ಲಿ ಉಲ್ಲೇಖ

ವಾಗ್ದಂಡನೆ ಸನಿಹ ತಲುಪಿದ್ದ ಕಾಟ್ಜು

Published:
Updated:
ವಾಗ್ದಂಡನೆ ಸನಿಹ ತಲುಪಿದ್ದ ಕಾಟ್ಜು

ನವದೆಹಲಿ: ಅಲಹಾಬಾದ್‌ ಹೈಕೋರ್ಟ್‌ನಲ್ಲಿ 1992ರಲ್ಲಿ ನ್ಯಾಯಮೂರ್ತಿಯಾಗಿ ಕೆಲಸ ಮಾಡುತ್ತಿದ್ದಾಗ ವಾಗ್ದಂಡನೆಗೆ ಒಳಗಾಗಬಹುದಾದ ಸಂದರ್ಭ ಎದುರಾಗಿತ್ತು ಎಂದು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಮಾರ್ಕಂಡೆಯ ಕಾಟ್ಜು ಹೇಳಿದ್ದಾರೆ.

ಉತ್ತರ ಪ್ರದೇಶದ ಶಿಕ್ಷಣ ಇಲಾಖೆಯು ಶಿಕ್ಷಕರೊಬ್ಬರ ನೇಮಕಾತಿಯನ್ನು ರದ್ದು ಮಾಡಿತ್ತು. ಈ ರದ್ದತಿ ಆದೇಶವನ್ನು ತಾವು ವಜಾ ಮಾಡಿದ ಬಳಿಕ ವಾಗ್ದಂಡನೆಯ ಸನ್ನಿವೇಶ ಸೃಷ್ಟಿಯಾಗಿತ್ತು ಎಂದು ಅವರು ನೆನಪಿಸಿಕೊಂಡಿದ್ದಾರೆ.

ಸುಪ್ರೀಂ ಕೋರ್ಟ್‌ನ ಅತ್ಯಂತ ಹಿರಿಯ ನ್ಯಾಯಮೂರ್ತಿಯನ್ನು ಮುಖ್ಯ ನ್ಯಾಯಮೂರ್ತಿಯಾಗಿ ನೇಮಕ ಮಾಡುವ ಪದ್ಧತಿಯನ್ನು ಕೈಬಿಡಬೇಕು. ಯಾಕೆಂದರೆ ಈ ‍ಪದ್ಧತಿ ಲೋಪದಿಂದ ಕೂಡಿದೆ ಎಂಬುದು ಈಗಾಗಲೇ ಸಾಬೀತಾಗಿದೆ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ. ನ್ಯಾಯಾಂಗ ಕ್ಷೇತ್ರದ ತಮ್ಮ ಅನುಭವವನ್ನು ಇಟ್ಟುಕೊಂಡು ‘ವಿದರ್‌ ಇಂಡಿಯನ್‌ ಜುಡಿಷಿಯರಿ’ ಎಂಬ ಪುಸ್ತಕವನ್ನು ಕಾಟ್ಜು ಬರೆದಿದ್ದಾರೆ.

ಅಲಹಾಬಾದ್‌ ಹೈಕೋರ್ಟ್‌ನ ಪ್ರಭಾರ ಮುಖ್ಯ ನ್ಯಾಯಮೂರ್ತಿಯಾಗಿ ಮತ್ತು ದೆಹಲಿ ಹಾಗೂ ಮದ್ರಾಸ್‌ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಕೂಡ ಕಾಟ್ಜು ಕೆಲಸ ಮಾಡಿದ್ದಾರೆ.

‘ಅತ್ಯಂತ ಹಿರಿಯ ನ್ಯಾಯಮೂರ್ತಿಗೆ ಬದ್ಧತೆ ಇರಬಹುದು. ಆದರೆ ಅವರ ಬುದ್ಧಿಮತ್ತೆ ಸಾಮಾನ್ಯವಾಗಿರಬಹುದು. ಸೇವಾ ಹಿರಿತನದಲ್ಲಿ ಅವರಿಗಿಂತ ಕೆಳಗೆ ಇರುವವರು ತಮ್ಮ ತೀರ್ಪುಗಳ ಮೂಲಕ ಅಸಾಧಾರಣ ಬುದ್ಧಿವಂತಿಕೆ ತೋರಿಸಿ‌ದ್ದರೆ ಅವರನ್ನೇ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕ ಮಾಡಬೇಕು’ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ವಾಗ್ದಂಡನೆಗೆ ಸಂಬಂಧಿಸಿ: ‘1991ರ ನವೆಂಬರ್‌ನಲ್ಲಿ ಅಲಹಾಬಾದ್‌ ಹೈಕೋರ್ಟ್‌ಗೆ ಕಾಯಂ ನ್ಯಾಯಮೂರ್ತಿಯಾಗಿ ನಾನು ನೇಮಕವಾದೆ. ಕೆಲವೇ ತಿಂಗಳಲ್ಲಿ ವಾಗ್ದಂಡನೆ ಎದುರಿಸಬೇಕಾದ ಸ್ಥಿತಿ ಉಂಟಾಗಿತ್ತು.

‘ಉತ್ತರ ಪ್ರದೇಶದ ಗಾಜಿಯಾಬಾದ್‌ ಜಿಲ್ಲೆಯ ಶಾಲೆಯೊಂದಕ್ಕೆ ನರೇಶ್‌ ಚಂದ್‌ ಎಂಬವರನ್ನು ಶಿಕ್ಷಕರಾಗಿ ನೇಮಕ ಮಾಡಲಾಗಿತ್ತು. ಆದರೆ ಇದು ಕಾಯಂ ನೇಮಕ ಆಗಿರಲಿಲ್ಲ. ಆ ಹುದ್ದೆ ಪರಿಶಿಷ್ಟ ಜಾತಿಗೆ ಮೀಸಲಾಗಿದ್ದುದರಿಂದ ಇತರ ಹಿಂದುಳಿದ ವರ್ಗಕ್ಕೆ ಸೇರಿದ್‌ ಚಂದ್ ಅವರನ್ನು ಕಾಯಂಗೊಳಿಸಲು ಜಿಲ್ಲೆಯ ಶಾಲಾ ನಿರೀಕ್ಷಣಾಧಿಕಾರಿ ನಿರಾಕರಿಸಿದ್ದರು. ಶಾಲಾ ಆಡಳಿತ ಮಂಡಳಿಯು ಚಂದ್‌ ಅವರನ್ನು ಕೆಲಸದಿಂದ ವಜಾ ಮಾಡಿತ್ತು.

‘ಚಂದ್‌ ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅವರನ್ನು ಮರುನೇಮಕ  ಮಾಡಿಕೊಳ್ಳುವಂತೆ ನಾನು ಆದೇಶ ನೀಡಿದೆ. ಈ ಆದೇಶದ ಪರ ಮತ್ತು ವಿರುದ್ಧ ದೇಶದಾದ್ಯಂತ ಹಲವು ರ‍್ಯಾಲಿಗಳು ನಡೆದವು. ನನಗೆ ಬೆದರಿಕೆ ಕರೆಗಳು ಬಂದವು. ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಸೇರಿದ ಹಲವು ಸಂಸದರು ದೆಹಲಿಯಲ್ಲಿ ಸಭೆ ಸೇರಿ ನನ್ನ ವಿರುದ್ಧ ವಾಗ್ದಂಡನೆ ನೋಟಿಸ್‌ ನೀಡಲು ನಿರ್ಧರಿಸಿದ್ದರು ಎಂಬುದು ಪತ್ರಿಕಾ ವರದಿಗಳಿಂದ ನನಗೆ ತಿಳಿಯಿತು. ನೇಮಕವಾದ ಕೆಲವೇ ತಿಂಗಳುಗಳಲ್ಲಿ ಕೆಲಸ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿತ್ತು’ ಎಂದು ಪುಸ್ತಕದಲ್ಲಿ ಕಾಟ್ಜು ಬರೆದಿದ್ದಾರೆ.

* ದೇಶದ ನ್ಯಾಯಾಂಗ ವ್ಯವಸ್ಥೆ ಉತ್ಸಾಹದಾಯಕವಾಗಿ ಕಾಣಿಸುತ್ತಿಲ್ಲ. ನ್ಯಾಯಾಂಗದಲ್ಲಿ ಅಗತ್ಯ ಬದಲಾವಣೆ ತರಲು ಎಲ್ಲರೂ ಒಗ್ಗಟ್ಟಾಗಿ ಪ್ರಯತ್ನ ಮಾಡಬೇಕಿದೆ

-ಮಾರ್ಕಂಡೆಯ ಕಾಟ್ಜು, ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry