ಶನಿವಾರ, ಫೆಬ್ರವರಿ 27, 2021
31 °C
ಒಂದೂವರೆ ತಿಂಗಳಲ್ಲಿ 742 ಅರ್ಜಿಗಳ ವಿಲೇವಾರಿ: ಅನಕ್ಷರಸ್ಥರೂ ಪಾಸ್‌ಪೋರ್ಟ್‌ ಪಡೆಯಲು ಸಾಧ್ಯ

ಅರ್ಜಿ ಸಲ್ಲಿಸಿದ ತಿಂಗಳಲ್ಲಿ ಪಾಸ್‌ಪೋರ್ಟ್‌

ಚಂದ್ರಕಾಂತ ಮಸಾನಿ Updated:

ಅಕ್ಷರ ಗಾತ್ರ : | |

ಅರ್ಜಿ ಸಲ್ಲಿಸಿದ ತಿಂಗಳಲ್ಲಿ ಪಾಸ್‌ಪೋರ್ಟ್‌

ಬೀದರ್‌: ವಿದೇಶಕ್ಕೆ ಹೋಗಲು ಬಯಸುವವರು, ವಿದ್ಯಾರ್ಥಿಗಳು ಹಾಗೂ ಉದ್ಯೋಗಸ್ಥರಿಗೆ ನಗರದಲ್ಲಿ ಆರಂಭವಾಗಿರುವ ಪಾಸ್‌ಪೋರ್ಟ್‌ ಸೇವಾ ಕೇಂದ್ರ ಅನುಕೂಲಕರವಾಗಿ ಪರಿಣಮಿಸಿದೆ. ಪಾಸ್‌ಪೋರ್ಟ್‌ಗಾಗಿ ಏಜೆಂಟರಿಗೆ ಕೇಳಿದಷ್ಟು ಹಣಕೊಟ್ಟು ದೂರದ ಬೆಂಗಳೂರು ಅಥವಾ ಹುಬ್ಬಳ್ಳಿಯಲ್ಲಿರುವ ಕೇಂದ್ರಗಳಿಗೆ ಹೋಗುವುದು ತಪ್ಪಿದೆ.

ಇಲ್ಲಿಯ ಪಾಸ್‌ಪೋರ್ಟ್‌ ಸೇವಾ ಕೇಂದ್ರಕ್ಕೆ ನಿತ್ಯ 30 ರಿಂದ 40 ಜನ ಬರುತ್ತಿದ್ದಾರೆ. ಸರಿಯಾಗಿ ದಾಖಲೆಗಳನ್ನು ಕೊಡದ ವ್ಯಕ್ತಿಗಳಿಗೆ ತಿಳಿವಳಿಕೆ ನೀಡಲಾಗುತ್ತಿದೆ. ಕೇಂದ್ರ ಆರಂಭವಾದಾಗಿನಿಂದ ಒಟ್ಟು742 ಅರ್ಜಿಗಳ ವಿಲೇವಾರಿ ಮಾಡಲಾಗಿದೆ.

ಸೇವಾ ಕೇಂದ್ರದಲ್ಲಿ ಆನ್‌ಲೈನ್‌ ಮೂಲಕ ಭಾವಚಿತ್ರ ಹಾಗೂ ಬೆರಳಚ್ಚು ಪಡೆಯಲಾಗುತ್ತಿದೆ. ಇನ್ನುಳಿದ ಮಾಹಿತಿಗಳನ್ನು ಆನ್‌ಲೈನ್‌ ಮೂಲಕವೇ ಭರ್ತಿ ಮಾಡಿಕೊಂಡು ನೇರವಾಗಿ ಸಂಬಂಧಪಟ್ಟವರ

ಮನೆಗೆ ಪಾಸ್‌ಪೋರ್ಟ್‌ ಕಳಿಸಲಾಗುತ್ತಿದೆ.

ಹೀಗೆ ಮಾಡಿ: ವೈಬ್‌ಸೈಟ್‌ www.passportindia.gov.inನಲ್ಲಿ ಅರ್ಜಿಯನ್ನು ಭರ್ತಿ ಮಾಡಬೇಕು. ಅಂತರ್ಜಾಲ ಬ್ಯಾಂಕಿಂಗ್ ಸೌಲಭ್ಯ ಬಳಸಿ ₹ 1,500 ಶುಲ್ಕ ಪಾವತಿಸಬೇಕು. ಶುಲ್ಕ ಪಾವತಿ­ಸಿದ್ದು ಖಚಿತವಾದ ಬಳಿಕ ಮಾತ್ರ , ದಿನಾಂಕ ನಿಗದಿಯಾಗುತ್ತದೆ. ಅರ್ಜಿ­ದಾರರು ದಿನಾಂಕ ಆಯ್ಕೆ ಮಾಡುವಂತಿಲ್ಲ. ಬದಲಾಗಿ ಲಭ್ಯ ಇರುವ ದಿನಾಂಕ ಮತ್ತು ಸಮಯವನ್ನು ವೆಬ್‌ಸೈಟ್‌ನಲ್ಲೇ ನೀಡಲಾಗುತ್ತದೆ. ನಿಗದಿಪಡಿಸಿದ ದಿನ ಅನಾರೋಗ್ಯ ಅಥವಾ ಇನ್ನಾವುದೋ ಕಾರಣದಿಂದ ಬರಲು ಸಾಧ್ಯವಾಗದಿದ್ದರೆ ಆನ್‌ಲೈನ್‌ನಲ್ಲಿ ಬೇರೆ ದಿನಾಂಕವನ್ನು ಮರು ಆಯ್ಕೆ ಮಾಡಿಕೊಳ್ಳಬಹುದು. ದಾಖಲೆಗಳ ಪರಿಶೀಲನೆಯ ದಿನ ಮೂಲ ದಾಖಲಾತಿ ಹಾಗೂ ಅವುಗಳ ನಕಲು ಪ್ರತಿ ತರಬೇಕು. ಎಸ್ಸೆಸ್ಸೆಲ್ಸಿ ಅಂಕಪಟ್ಟಿ, ಅಂಕಪಟ್ಟಿಯಲ್ಲಿನ ಹೆಸರಿಗೆ ಹೊಂದುವಂತಹ ವಿಳಾಸ ಮತ್ತು ದಾಖಲೆ ಇರುವ ಆಧಾರ್‌ ಕಾರ್ಡ್, ಮತದಾರರ ಗುರುತಿನ ಚೀಟಿ, ಬ್ಯಾಂಕ್‌ ಪಾಸ್‌ಬುಕ್‌ ಅಥವಾ ವಿದ್ಯುತ್‌ ಬಿಲ್‌ ನಕಲು ಪ್ರತಿ ಕೊಡಬೇಕು. ಅಭ್ಯರ್ಥಿಗಳು ಎಸ್ಸೆಸ್ಸೆಲ್ಸಿ ಮೂಲ ಅಂಕಪಟ್ಟಿ ಕಾಲೇಜಿಗೆ ಕೊಟ್ಟಿದ್ದರೆ, ಆ ಕಾಲೇಜಿನ ಪ್ರಾಚಾರ್ಯರಿಂದ ಅಧೀನ ಪ್ರಮಾಣಪತ್ರ ಪಡೆದು ಸಲ್ಲಿಸಬೇಕು.

‘ಕುಟುಂಬದ ಮುಖ್ಯಸ್ಥ ಹಾಗೂ ಸದಸ್ಯರು ಒಂದೇ ಬಾರಿಗೆ ಪಾಸ್‌ಪೋರ್ಟ್‌ ಮಾಡಿಸಿಕೊಳ್ಳಬಹುದಾಗಿದೆ. 18 ವರ್ಷದೊಳಗಿನ ಮಕ್ಕಳಿಗೆ ಪಾಸ್‌ಪೋರ್ಟ್‌ ಬೇಕಾಗಿದ್ದಲ್ಲಿ ಪಾಲಕರ ಪಾಸ್‌ಪೋರ್ಟ್‌ ಪ್ರತಿ ಲಗತ್ತಿಸಬೇಕು. ಸರ್ಕಾರಿ ಉದ್ಯೋಗದಲ್ಲಿದ್ದರೆ ಮೇಲಧಿಕಾರಿಯಿಂದ ನಿರಪೇಕ್ಷಣಾ ಪತ್ರ ಪಡೆಯಬೇಕು. ವಿವರಗಳಿಗೆ ವೈಬ್‌ಸೈಟ್‌ www.passportindia.gov.in ವೀಕ್ಷಿಸಬಹುದು ಅಥವಾ ದೂರವಾಣಿ: 08482- 225351 ಸಂಪರ್ಕಿಸಬಹುದು’ ಎಂದು ಪಾಸ್‌ಪೋರ್ಟ್ ಸೇವಾ ಕೇಂದ್ರದ ಅಧಿಕಾರಿ ಮಂಗಲಾ ಭಾಗವತ್‌ ಹೇಳುತ್ತಾರೆ.

‘ಸಾಮಾನ್ಯವಾಗಿ ಪಾಸ್‌ಪೋರ್ಟ್‌ 30 ರಿಂದ 45 ದಿನಗಳಲ್ಲಿ ಬರುತ್ತದೆ. ಪ್ರಸ್ತುತ ಒಂದು ತಿಂಗಳಲ್ಲೇ ಪಾಸ್‌ಪೋರ್ಟ್‌ ಕೊಡಲಾಗುತ್ತಿದೆ. ತುರ್ತು ಪಾಸ್‌ಪೋರ್ಟ್‌ ಬೇಕಾಗಿದ್ದರೆ ತತ್ಕಾಲ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಇದಕ್ಕೆ ₹ 3,500 ಶುಲ್ಕ ಪಾವತಿಸಬೇಕು. ಹುಬ್ಬಳ್ಳಿ ಅಥವಾ ಬೆಂಗಳೂರಿನಲ್ಲಿರುವ ಪಾಸ್‌ಪೋರ್ಟ್‌ ಕೇಂದ್ರಕ್ಕೆ ತೆರಳಿ ದಾಖಲೆಗಳನ್ನು ಪರಿಶೀಲನೆಗೆ ಕೊಡಬೇಕು. ಒಂದು ವಾರದಲ್ಲಿ ಪಾಸ್‌ಪೋರ್ಟ್‌ ಮನೆಗೆ ತಲುಪಲಿದೆ’ ಎಂದು ಮಂಗಲಾ ಭಾಗವತ್‌ ತಿಳಿಸುತ್ತಾರೆ.

**

ಅನಕ್ಷರಸ್ಥರು ಆನ್‌ಲೈನ್‌ನಲ್ಲಿ ಆಧಾರ ಕಾರ್ಡ್‌ ಪ್ರತಿಯನ್ನು ಪಡೆದುಕೊಂಡು ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಬಹದು

- ಮಂಗಲಾ ಭಾಗವತ್‌, ಪಾಸ್‌ಪೋರ್ಟ್ ಸೇವಾ ಕೇಂದ್ರದ ಅಧಿಕಾರಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.