ಶುಕ್ರವಾರ, ಫೆಬ್ರವರಿ 26, 2021
22 °C
ಬಹುತೇಕ ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ಬೀಗ

ದಿನೇ ದಿನೇ ಹೆಚ್ಚುತ್ತಿರುವ ನೀರಿನ ಬವಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಿನೇ ದಿನೇ ಹೆಚ್ಚುತ್ತಿರುವ ನೀರಿನ ಬವಣೆ

ಹಾವೇರಿ: ಚುನಾವಣೆಯ ಪ್ರಚಾರದ ಅಬ್ಬರದ ನಡುವೆಯೇ ಬಿಸಿಲಿನ ಝಳವೂ ಹೆಚ್ಚಿದೆ. ಈ ನಡುವೆ ಅಂತರ್ಜಲ ಮಟ್ಟವೂ ಕುಸಿಯುತ್ತಿದ್ದು, ನಗರದಲ್ಲಿ ನೀರಿನ ಹಾಹಾಕಾರವೂ ಹೆಚ್ಚಾಗುತ್ತಿದೆ.

ಸುಮಾರು ನಾಲ್ಕೈದು ವರ್ಷಗಳ ಹಿಂದೆ ನಗರದ ಬಹುತೇಕ ನಿವಾಸಿಗಳು ತಮ್ಮ ತಮ್ಮ ಮನೆಗೆ ₹40ರಿಂದ ₹50 ನೀಡಿ ಕುಡಿಯುವ ನೀರಿನ ಕ್ಯಾನ್ ಹಾಕಿಸಿಕೊಳ್ಳಬೇಕಿತ್ತು. ಈಚಿನ ವರ್ಷಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಸ್ಥಾಪನೆಗೊಂಡಿದ್ದು, ಕುಡಿಯುವ ನೀರಿನ ಸಮಸ್ಯೆಗೆ ಪರ್ಯಾಯ ಸಿಕ್ಕಿತ್ತು.

ಆದರೆ, ಕೆಲ ವರ್ಷಗಳಲ್ಲಿ ಬರದ ತೀವ್ರತೆ ಹೆಚ್ಚುತ್ತಿದ್ದು, ನಗರಗಳಲ್ಲಿ ಪ್ರಾರಂಭವಿರುವ ಬಹುತೇಕ ಶುದ್ಧ ಕುಡಿಯುವ ನೀರಿನ ಘಟಕಗಳ ನೀರು ಖಾಲಿಯಾಗಿವೆ. ಕೆಲವೆಡೆ ಬೆಳಿಗ್ಗೆ 7ರಿಂದ 8.30ರ ಹಾಗೂ ಸಂಜೆ 5 ರಿಂದ 7ರ ವರೆಗೆ ಮಾತ್ರ ನೀರು ನೀಡಲಾಗುತ್ತಿದೆ. ಅಷ್ಟೇ ಅಲ್ಲದೇ, ಅವುಗಳ ಎದುರು ಉದ್ದುದ್ದ ಸಾಲುಗಳೂ ಸರ್ವೇ ಸಾಮಾನ್ಯವಾಗಿದೆ.

ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಹಾಗೂ ಇತರ ಅನುದಾನದಲ್ಲಿ ನಾಗೇಂದ್ರನಮಟ್ಟಿ, ಹೊಸಮಠದ ಬಳಿ, ಶಿವಯೋಗೀಶ್ವರ ನಗರಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಆರಂಭಗೊಂಡಿವೆ. ಆದರೆ, ಈ ವರೆಗೂ ಹನಿ ನೀರಿಲ್ಲ, ಬೀಗವನ್ನು ಕೂಡಾ ತೆಗೆದಿಲ್ಲ.

ನಾಗೇಂದ್ರನಮಟ್ಟಿ, ಮುಲ್ಲಾನಕೆರೆ, ಬಸವೇಶ್ವರ ನಗರ, ಶಿವಾಜಿ ನಗರ, ಗುತ್ತಲ ರಸ್ತೆ, ಶಿವಬಸವ ನಗರ, ಶಿವಯೋಗೀಶ್ವರ ನಗರ, ತಾಜ್‌ ನಗರ, ಉದಯನಗರ, ಬಸ್ತಿ ಓಣಿ, ಕಲ್ಲುಮಂಠಪ ರಸ್ತೆ, ಶಾಂತಿ ನಗರ, ಇಜಾರಿಲಕಮಾಪುರ ಸೇರಿದಂತೆ ಬಹುತೇಕ ಕಡೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ವಿಪರೀತವಾಗಿದೆ.

ಸರ್ಕಾರದ ಶುದ್ಧ ಕುಡಿಯುವ ನೀರಿನ ಘಟಕಗಳೂ ಸಮರ್ಪಕವಾಗಿ ನಡೆಯುತ್ತಿಲ್ಲ. ನಗರದ ಬಹುತೇಕ ಖಾಸಗಿ ಘಟಕಗಳು ನೀರಿನ ಕೊರತೆಯಿಂದ ಬೀಗ ಹಾಕಿವೆ. ಇನ್ನುಳಿದ ಕೆಲವು ಘಟಕಗಳಲ್ಲಿ ದಿನಕ್ಕೆ 100 ರಿಂದ 120 ಕ್ಯಾನ್‌ಗಳಷ್ಟು ನೀರನ್ನು ಮಾತ್ರ ನೀಡಲಾಗುತ್ತಿದೆ. ಕೊಳವೆ ಬಾವಿಗಳಲ್ಲಿ ದಿನಕ್ಕೆ ಎರಡರಿಂದ ಮೂರು ಗಂಟೆ ಮಾತ್ರ ನೀರು ಬರುತ್ತಿದೆ ಎಂದು ಎಂದು ಶಿವಬಸವ ನಗರದ ಖಾಸಗಿ ಶುದ್ಧ ಕುಡಿಯುವ ನೀರಿನ ಘಟದ ಮುರುಗೇಶ ಅಂಕಲಕೋಟಿ ‘ಪ್ರಜಾವಾಣಿ’ಗೆ ತಿಳಿಸಿದರು.

ನಗರದ ಅಂತರ್ಜಲಮಟ್ಟವು ನೆಲಮಟ್ಟದಿಂದ 51.17 ಅಡಿಗಳಷ್ಟು ಕುಸಿದಿದೆ ಎಂದು ಹಿರಿಯ ಭೂ ವಿಜ್ಞಾನಿ ಎಂ.ಬಿ.ಬಳಿಗಾರ ತಿಳಿಸಿದರು.

ಶಿವಯೋಗೀಶ್ವರ ನಗರದಲ್ಲಿ ಸ್ಥಾಪಿಸಿರುವ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ನಗರಸಭೆಯಿಂದ ಯಾವುದೇ ಅನುದಾನವನ್ನು ನೀಡಿಲ್ಲ. ನೀರಿನ ಸಮಸ್ಯೆ ಅಧಿಕವಾಗಿರುವ ಕಡೆಗಳಲ್ಲಿ ಹೊಸ ಕೊಳವೆ ಬಾವಿಯನ್ನು ಕೊರೆಯಿಸಲಾಗಿದೆ. ನೀರಿನ ಸಮಸ್ಯೆಯನ್ನು ಬಗೆಹರಿಸಲಾಗುತ್ತಿದೆ ಎಂದು ಪೌರಾಯುಕ್ತ ಶಿವಕುಮಾರಯ್ಯ ತಿಳಿಸಿದರು.

ಬಿಸಿಲಿನ ಪರಿಣಾಮ ಜನತೆ ನೀರಿಗಾಗಿ ಪರದಾಡುತ್ತಿರುವ ದೃಶ್ಯ ನಗರದಲ್ಲಿ ಸಾಮಾನ್ಯವಾಗಿದೆ. ನಮ್ಮ ಓಣಿಯ ನಳದ ಮೂಲಕ ನೀರು ಬಿಡುತ್ತಾರೆ. ನಾವು ಅಲ್ಲಿ ಸಂಗ್ರಹಿಸಬೇಕು. ಆದರೆ, ಮನೆ ಸಂಪರ್ಕದ ನಳದಲ್ಲಿ ನೀರು ಬಾರದೇ ಮೂರು ತಿಂಗಳು ಕಳೆದಿವೆ ಎಂದು ನಾಗೇಂದ್ರನಮಟ್ಟಿಯ ನಿವಾಸಿ ರಾಜು ಬ್ಯಾಡಗಿ ದೂರಿದರು.

ನಾಗೇಂದ್ರನಮಟ್ಟಿ ಪೊಲೀಸ್‌ ಠಾಣೆ ಎದುರು ಶುದ್ಧ ಕುಡಿಯುವ ನೀರನ ಘಟಕವೂ ಜನರ ಬಳಕೆಗೆ ಇಲ್ಲದಾಗಿದೆ ಎನ್ನುತ್ತಾರೆ ಅಲ್ಲಿನ ನಿವಾಸಿ ಮಾಲತೇಶ ಹ್ಯಾಡ್ಲ.

**

ನಗರಸಭೆಯ ಮೂರು ಶುದ್ಧ ಕುಡಿಯುವ ನೀರಿನ ಘಟಕಗಳ ಪೈಕಿ ಒಂದು ನೀರಿನ ಸಮಸ್ಯೆಯಿಂದ ತಾತ್ಕಾಲಿಕವಾಗಿ ಬಂದ್‌ ಆಗಿದೆ

– ಶಿವಕುಮಾರಯ್ಯ, ಪೌರಾಯುಕ್ತ, ನಗರಸಭೆ

–ಪ್ರವೀಣ ಸಿ. ಪೂಜಾರ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.