ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಯಂತ್ರಣಕ್ಕೆ ಪೊಲೀಸರ ಪರದಾಟ

ಕಟಪಾಡಿ ಜಂಕ್ಷನ್‌ನಲ್ಲಿ ವಾಹನ ದಟ್ಟಣೆಯ ಕಿರಿ ಕಿರಿ!
Last Updated 7 ಮೇ 2018, 13:57 IST
ಅಕ್ಷರ ಗಾತ್ರ

ಶಿರ್ವ: ರಾಷ್ಟ್ರೀಯ ಹೆದ್ದಾರಿ 66ರ ಕಟಪಾಡಿ ಜಂಕ್ಷನ್ ಸಮೀಪ ದಿನನಿತ್ಯ ವಾಹನ ದಟ್ಟಣೆ ಕಿರಿಕಿರಿ ಹೆಚ್ಚಾಗಿದೆ. ಸ್ಥಳೀಯ ಪೋಲಿಸರು ಪ್ರಯಾಣಿಕರನ್ನು ಮತ್ತು ವಾಹನಗಳನ್ನು ನಿಯಂತ್ರ್ರಿಸಲು ಹರಸಾಹಸ ಪಡಬೇಕಾದ ಸ್ಥಿತಿ ಇದೆ.

ಕಟಪಾಡಿ ಜಂಕ್ಷನ್ ನಲ್ಲಿ ಹೆದ್ದಾರಿಯಲ್ಲಿ ವಾಹನ ಸಂಚಾರ ಒತ್ತಡ ಹೆಚ್ಚಾಗಿದ್ದು, ವಾಹನಗಳನ್ನು ಅಡ್ಡಗಟ್ಟಿ ನಿಲ್ಲಿಸಿ, ಪಾದಾಚಾರಿಗಳನ್ನು ರಸ್ತೆ ದಾಟಿಸುವುದಕ್ಕೆ ನಿತ್ಯವೂ ಪೊಲೀಸರು ಕಾವಲು ಕಾಯುವಂತಹ ಸ್ಥಿತಿ ಬಂದಿದೆ. ಕಟಪಾಡಿ ಉಪ ಠಾಣಾ ಪೊಲೀಸರಿಗೆ ರಾತ್ರಿ ಹಗಲು ಹೆದ್ದಾರಿಯಲ್ಲಿಯೇ ಕರ್ತವ್ಯ ನಿರ್ವಹಣೆ ಮಾಡುವ ಸ್ಥಿತಿ ಬಂದಿದೆ.

ನಾಲ್ಕು ಕಡೆಗಳಿಂದ ಹೆದ್ದಾರಿಯಿಂದ ಕಟಪಾಡಿಗೆ ಜಂಕ್ಷನ್‌ಗೆ ಬರುವ ವಾಹನಗಳನ್ನು ನಿಯಂತ್ರಿಸಲು ಕಷ್ಟ ಸಾಧ್ಯವಾಗಿದೆ. ಕಟಪಾಡಿಯಿಂದ ಶಿರ್ವ ಕಡೆಗೆ, ಕಾಪುವಿನಿಂದ ಉಡುಪಿ ಕಡೆಗೆ, ಅದೇ ರೀತಿ ಉಡುಪಿಯಿಂದ ಕಾಪು ಕಡೆಗೆ ಸಂಚಾರ ಮಾಡುವ ವಾಹನಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಈ ಜಂಕ್ಷನ್‌ನಲ್ಲಿ ಪಾದಾಚಾರಿಗಳು ಕೂಡಾ ರಸ್ತೆ ದಾಟಲು ಸಮಸ್ಯೆ ಉಂಟಾಗುತ್ತದೆ. ಕಟಪಾಡಿ ಹೊರ ಠಾಣಾ ಪೊಲೀಸ್ ಸಿಬ್ಬಂದಿ ಜನರನ್ನು ಹಾಗೂ ವಾಹನಗಳನ್ನು ನಿಯಂತ್ರಿಸದಿದ್ದಲ್ಲಿ ಈ ಪ್ರದೇಶದಲ್ಲಿ ರಸ್ತೆ ಅಪಘಾತ ಆಗುವ ಸಂಭವ ಇವೆ.

ಚುನಾವಣೆ ಸಮಯವಾಗಿರುವುದರಿಂದ ಹೆದ್ದಾರಿಯಲ್ಲಿ ವಾಹನಗಳ ಓಡಾಟ ಹೆಚ್ಚಾಗಿದೆ. ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳ ವಾಹನಗಳು ಚತುಷ್ಪಥ ಹೆದ್ದಾರಿಯಲ್ಲಿ ಸಂಚಾರ ಮಾಡುವ ಸಂಖ್ಯೆಯೂ ಹೆಚ್ಚಾಗಿದೆ. ಸಂಚಾರ ಅಸ್ತವ್ಯಸ್ಥವಾದರೆ ಗಂಟೆಗಟ್ಟಲೆ ವಾಹನಗಳು ನಿಲ್ಲಬೇಕಾಗುತ್ತದೆ ಎಂಬುದು ವಾಹನ ಸವಾರರ ಅಳಲು. ಕಟಪಾಡಿ ಜಂಕ್ಷನ್‌ಲ್ಲಿ ಅಂಡರ್ ಪಾಸ್ ಅಥವಾ ಮೇಲ್ಸೇತುವೆ ನಿರ್ಮಾಣ ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ ಚತುಷ್ಪಥ ರಸ್ತೆ ನಿರ್ಮಾಣ ವೇಳೆ ಕಟಪಾಡಿಯಲ್ಲಿ ಅವೈಜ್ಞಾನಿಕವಾಗಿ ಜಂಕ್ಷನ್ ರಸ್ತೆ ನಿರ್ಮಾಣ ಮಾಡಲಾಗಿದೆ. ಈ ಭಾಗದಲ್ಲಿ ಅಗತ್ಯ ಅಂಡರ್ ಪಾಸ್ ಅಥವಾ ಮೇಲ್ಸೇತುವೆ ನಿರ್ಮಾಣ ಮಾಡಬೇಕು ಎಂದು ಸಮಾಜ ಸೇವಕ ಸಂತೋಷ್ ಶೆಟ್ಟಿ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT