ಭಾನುವಾರ, ಮಾರ್ಚ್ 7, 2021
30 °C

ಮೋದಿ, ರಾಹುಲ್ ಐದು ನಿಮಿಷ ಚರ್ಚೆಗೆ ಬರಲಿ: ಅಸಾದುದ್ದೀನ್ ಓವೈಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೋದಿ, ರಾಹುಲ್ ಐದು ನಿಮಿಷ ಚರ್ಚೆಗೆ ಬರಲಿ: ಅಸಾದುದ್ದೀನ್ ಓವೈಸಿ

ಬೆಳಗಾವಿ: ಪ್ರಧಾನಿ ನರೇಂದ್ರ ಮೋದಿ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಗೆ ತಾಕತ್ತಿದ್ದರೆ ನನ್ನೊಂದಿಗೆ ಕೇವಲ ಐದು ನಿಮಿಷ ಚರ್ಚೆಗೆ ಬರಲಿ ಎಂದು ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಸವಾಲು ಹಾಕಿದರು.

ಇಲ್ಲಿನ ಕ್ಲಬ್ ರಸ್ತೆಯಲ್ಲಿರುವ ಸಿಪಿಇಡಿ ಕಾಲೇಜು ಮೈದಾನದಲ್ಲಿ ಜೆಡಿಎಸ್ ಅಭ್ಯರ್ಥಿಗಳ ಪರ ನಡೆದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

ಅವರು ಹೇಳುವ ಸ್ಥಳ ಹಾಗೂ ನೀಡುವ ಸಮಯಕ್ಕೆ ಹೋಗಿ ಚರ್ಚಿಸಲು ಸಿದ್ಧವಿದ್ದೇನೆ ಎಂದರು.

ಕಾಂಗ್ರೆಸ್ ಹಾಗೂ ಬಿಜೆಪಿಯಿಂದ ದಲಿತರು, ಅಲ್ಪಸಂಖ್ಯಾತರ ಅಭಿವೃದ್ಧಿ ಆಗುವುದಿಲ್ಲ. ಈ ಪಕ್ಷಗಳು ಜನರ ಜೀವನ ಹಾಳು ಮಾಡುತ್ತಿವೆ. ಮುಂದೆ ಮನೆಗಳನ್ನೂ ಹಾಳು ಮಾಡುತ್ತವೆ ಎಂದು ವಾಗ್ದಾಳಿ ನಡೆಸಿದರು.

ದೇಶ ಹಾಗೂ ಕರ್ನಾಟಕದಲ್ಲಿ ಪರ್ಯಾಯ ರಾಜಕಾರಣದ ಅವಶ್ಯಕತೆ ಇದೆ. ಮೋದಿಯನ್ನು ಸೋಲಿಸಲು ಕಾಂಗ್ರೆಸ್ ಪಕ್ಷದಿಂದ ಸಾಧ್ಯವಿಲ್ಲ. ಪ್ರಾದೇಶಿಕ ಪಕ್ಷಗಳು ಒಗ್ಗೂಡುವುದರಿಂದ ಮಾತ್ರ ಅದು ಸಾಧ್ಯ ಎಂದರು. ವಿಧಾನಸಭೆ ಚುನಾವಣೆಯಲ್ಲಿ ಈ ಎರಡೂ ಪಕ್ಷಗಳಿಗೆ ಪಾಠ ಕಲಿಸಬೇಕು ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಜಾತ್ಯತೀತತೆ ಬಗ್ಗೆ ಕೇವಲ ಭಾಷಣ ಮಾಡುತ್ತಾರೆ. ಆದರೆ, ಅದನ್ನು ಜಾರಿಗೆ ತಂದಿಲ್ಲ. ಈವರೆಗೆ ಅವರು ಎಷ್ಟು ಮುಸ್ಲಿಮರನ್ನು ಶಾಸಕ, ಸಂಸದರನ್ನಾಗಿ ಮಾಡಿದ್ದಾರೆ ಉತ್ತರಿಸಲಿ. ಅವರು ಪರಿಶಿಷ್ಟ ಜಾತಿ, ಪಂಗಡದವರು ಹಾಗೂ ಗಿರಿಜನರಿಗೆ ಮೀಸಲಿಟ್ಟಿದ್ದ ಅನುದಾನದಲ್ಲಿ ಶೇ 40ರಷ್ಟನ್ನೂ ಖರ್ಚು ಮಾಡಿಲ್ಲ ಎಂದು ಟೀಕಿಸಿದರು.

ಲಘು ಲಾಠಿ ಪ್ರಹಾರ: ಅಸಾದುದ್ದೀನ್ ಆಗಮಿಸಿದಾಗ ಹಾಗೂ ಹೊರಡುವಾಗ ಅವರ ಕಾರಿನತ್ತ ನುಗ್ಗಿದ ಅಭಿಮಾನಿಗಳು ಹಾಗೂ ಕಾರ್ಯಕರ್ತರನ್ನು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಚದುರಿಸಿದರು. ಮುಂಜಾಗ್ರತಾ ಕ್ರಮವಾಗಿ ವ್ಯಾಪಕ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.