ಗುರುವಾರ , ಮಾರ್ಚ್ 4, 2021
20 °C
ಎಸ್‌ಎಸ್‌ಎಲ್‌ಸಿ ಫಲಿತಾಂಶ ಕಳೆದ ಬಾರಿಗಿಂತ ಶೇ 3.68ರಷ್ಟು ಫಲಿತಾಂಶ ವೃದ್ಧಿ

ಶೇಕಡಾವಾರು ಏರಿಕೆ; ಸ್ಥಾನದಲ್ಲಿ ಕುಸಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶೇಕಡಾವಾರು ಏರಿಕೆ; ಸ್ಥಾನದಲ್ಲಿ ಕುಸಿತ

ಶಿವಮೊಗ್ಗ: ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಕಳೆದ ಬಾರಿಗಿಂತ ಶೇ 3.68ರಷ್ಟು ವೃದ್ಧಿಯಾಗಿದ್ದರೂ ರಾಜ್ಯದ ಜಿಲ್ಲೆಗಳ ಪಟ್ಟಿಯಲ್ಲಿ ಜಿಲ್ಲೆಯು 20ನೇ ಸ್ಥಾನ ಪಡೆಯುವ ಮೂಲಕ ಕಳೆದ ಬಾರಿಗಿಂತ 5 ಸ್ಥಾನ ಕುಸಿತ ಕಂಡಿದೆ.

ಈ ಬಾರಿ ಬಂದ ಒಟ್ಟು ಫಲಿತಾಂಶ ಶೇ 78.75 ಪಡೆದಿದೆ. ಕಳೆದ ಬಾರಿ ಶೇ 75.07 ಫಲಿತಾಂಶ ಪಡೆದಿದ್ದರೂ ಜಿಲ್ಲೆಗೆ 15ನೇ ಸ್ಥಾನ ಇತ್ತು.

ಮೂವರು ಜಿಲ್ಲೆಗೆ ಪ್ರಥಮ: ಶಿವಮೊಗ್ಗ ವಿಕಾಸ ಶಾಲೆಯ ಮಯ ಎಸ್‌. ರಾವ್, ಸಾಂದೀಪಿನಿ ಶಾಲೆಯ ಕೆ.ಅನನ್ಯಾ

ತಲಾ 623 ಅಂಕ ಪಡೆದು ಜಿಲ್ಲೆಗೆ ಮೊದಲ ಸ್ಥಾನ ಪಡೆದರೆ, ಶಿಕಾರಿಪುರ ಲಯನ್ಸ್ ಪ್ರೌಢಶಾಲೆಯ ಎಂ.ಎನ್. ಧನ್ಯಾ ತಲಾ 622 ಅಂಕ ಗಳಿಸುವ ಮೂಲಕ ಜಿಲ್ಲೆಗೆ ಎರಡನೇ ಸ್ಥಾನ ಪಡೆದಿದ್ದಾಳೆ.

ಶಿವಮೊಗ್ಗ ವೆಂಕಟೇಶ ನಗರದ ಸತೀಶ್ ಕುಮಾರ್–ನಾಗವೇಣಿ ದಂಪತಿ ಅವಳಿ ಪುತ್ರರಾದ ಮಯ ಎಸ್. ರಾವ್ 623 ತೆಗೆದರೆ, ಮನು ಎಸ್. ರಾವ್ 614 ಅಂಕ ಪಡೆದಿದ್ದಾರೆ. ಇಬ್ಬರೂ ವಿಕಾಸ ಶಾಲೆಯ ವಿದ್ಯಾರ್ಥಿಗಳು.

ಮಯ ಎಸ್.ರಾವ್ ಇಂಗ್ಲಿಷ್‌ನಲ್ಲಿ 99, ಕನ್ನಡ- 99, ಸಂಸ್ಕೃತ- 125, ವಿಜ್ಞಾನ 100, ಸಮಾಜ ವಿಜ್ಞಾನ 100, ಗಣಿತ 100 ಅಂಕ ಪಡೆದಿದ್ದಾರೆ.

ಸಾಂದೀಪಿನಿ ಶಾಲೆಯ ವಿದ್ಯಾರ್ಥಿನಿ ಕೆ. ಅನನ್ಯ 623 ಅಂಕ ಪಡೆದಿದ್ದಾಳೆ.

ಇಂಗ್ಲಿಷ್ -99, ಸಂಸ್ಕೃತ- 125, ವಿಜ್ಞಾನ -99, ಕನ್ನಡ 100, ಸಮಾಜ 100, ಗಣಿತ 100 ಅಂಕ ಪಡೆದಿದ್ದಾರೆ. ತಂದೆ ಕೃಷ್ಣ ಬಿಎಸ್‌ಎನ್‌ಎಲ್‌ ಸಹಾಯಕ ಪ್ರಧಾನ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತಾಯಿ ಮಂಜುಳಾ ಪಶುಸಂಗೋಪನಾ ಇಲಾಖೆ ಉದ್ಯೋಗಿ.

ಶಿಕಾರಿಪುರ ವರದಿ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪಟ್ಟಣದ ಬನಸಿರಿ ಲಯನ್ಸ್ ವಿದ್ಯಾಸಂಸ್ಥೆ ವಿದ್ಯಾರ್ಥಿನಿ ಎನ್.ಎಂ. ಧನ್ಯಾ 622 (ಶೇ 99.52)ಅಂಕ ಪಡೆದಿದ್ದಾರೆ.

ಧನ್ಯ ಕನ್ನಡದಲ್ಲಿ 125, ಇಂಗ್ಲಿಷ್ 99, ಹಿಂದಿ 100, ವಿಜ್ಞಾನ 100, ಸಮಾಜ ವಿಜ್ಞಾನ 100, ಗಣಿತ 98 ಅಂಕ ಪಡೆದಿದ್ದಾರೆ. ವಿದ್ಯಾರ್ಥಿನಿ ಕಪ್ಪನಹಳ್ಳಿ ಗ್ರಾಮದ ನಿವಾಸಿ ಹಾಗೂ ಚಿಕ್ಕಲವತ್ತಿ ಗ್ರಾಮದ ಸರ್ಕಾರಿ ಶಾಲೆ ಶಿಕ್ಷಕ ಆರ್‌.ಎಂ. ನವೀನ್‌ ಪುತ್ರಿ. ಪಿಯು ನಂತರ ಎಂಬಿಬಿಎಸ್‌ ಪೂರೈಸುವ ಗುರಿ ಹೊಂದಿದ್ದಾರೆ.

ಅಭಿರಾಮ್‌ ಭಾಗವತ್‌ಗೆ ಶೇ 98 ಅಂಕ: ಶಾರದಾ ದೇವಿ ಅಂಧರ ವಿಕಾಸ ಕೇಂದ್ರ ಶಾಲೆಯ ಅಂಧ ವಿದ್ಯಾರ್ಥಿ ಅಭಿರಾಮ್‌ ಭಾಗವತ್‌ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ 98.04 (619) ಅಂಕ ಪಡೆದಿದ್ದಾರೆ.

‘ತಡರಾತ್ರಿವರೆಗೆ ನಿತ್ಯವೂ ಅಭ್ಯಾಸ’

‘ನಿತ್ಯವೂ ತಡರಾತ್ರಿ 2ರವರೆಗೂ ಅಭ್ಯಾಸ ಮಾಡುತ್ತಿದ್ದೆವು. ಸಹೋದರ ಮನು ನಮ್ಮ ತರಗತಿಯಲ್ಲೇ ಇದ್ದ ಕಾರಣ ಇಬ್ಬರೂ ಒಟ್ಟಿಗೆ ಅಭ್ಯಾಸ ಮಾಡುತ್ತಿದ್ದೆವು. ಹಾಗಾಗಿ, ಅಂದಿನ ವಿಷಯ ಅಂದೇ ಓದು ಮುಗಿಸುತ್ತಿದ್ದೆವು. ಮನೆಯಲ್ಲೂ ಪೋಷಕರು ಯಾವುದೇ ಒತ್ತಡ ಹಾಕದೇ ಓದಲು ಪ್ರೋತ್ಸಾಹಿಸಿದ್ದರು’ ಎಂದು ಮಯ ಎಸ್.ರಾವ್ ಸ್ಮರಿಸಿದರು.

ಶಾಲೆಯಲ್ಲೂ ಶಿಕ್ಷಕರು ಎಲ್ಲಾ ರೀತಿಯ ಪ್ರೋತ್ಸಾಹ ನೀಡಿದ್ದರು. ಇಷ್ಟು ಅಂಕಗಳು ಬರುತ್ತವೆ ಎಂದು ಇಬ್ಬರೂ ಅಂದುಕೊಂಡಿರಲಿಲ್ಲ. ರಾಜ್ಯಕ್ಕೆ ಮೂರನೇ ಸ್ಥಾನ ಪಡೆದಿರುವುದು ನನಗೆ ಸಂತಸ ತಂದಿದೆ ಎಂದು ವಿದ್ಯಾರ್ಥಿ ಮಯ ಮನದಾಳ ತೋಡಿಕೊಂಡರು. ಪಿಯುನಲ್ಲಿ ವಿಜ್ಞಾನ ವಿಷಯ ಆಯ್ಕೆ ಮಾಡಿಕೊಳ್ಳುತ್ತೇನೆ ಎಂದರು.

‘ಪಠ್ಯಪುಸ್ತಕ ಮನನವಾಗಬೇಕು’

‘ಆಯಾ ವರ್ಷ ನಿಗದಿ ಮಾಡಿದ ಪಠ್ಯ ಪುಸ್ತಕ ಮನನ ಮಾಡಿಕೊಳ್ಳಬೇಕು. ತರಗತಿಯಲ್ಲಿ ಶಿಕ್ಷಕರು ಮಾಡಿದ ಪಾಠ ಅಂದೇ ಓದಿ ಅರ್ಥ ಮಾಡಿಕೊಳ್ಳಬೇಕು. ಆ ಕೆಲಸ ತಪ್ಪದೇ ಮಾಡಿದ ಕಾರಣ ಇಷ್ಟು ಅಂಕ ಪಡೆಯಲು ಸಾಧ್ಯವಾಯಿತು’ ಎಂದು ಕೆ. ಅನನ್ಯಾ 623 ಅಂಕ ಪಡೆದ ಗುಟ್ಟು ಬಿಚ್ಚಿಟ್ಟರು.

‘ನಿತ್ಯ ಬೆಳಿಗ್ಗೆ 2 ಗಂಟೆ, ಸಂಜೆ 3 ಗಂಟೆ ತಪ್ಪದೇ ಓದುತ್ತಿದ್ದೆ. ಅಪ್ಪ ಅಮ್ಮ ಕೆಲಸದ ಒತ್ತಡದ ಮಧ್ಯೆಯೂ ಪ್ರೋತ್ಸಾಹ ನೀಡುತ್ತಿದ್ದರು. ಪಿಯುನಲ್ಲಿ ವಿಜ್ಞಾನ ವಿಷಯ ಆಯ್ಕೆ ಮಾಡಿಕೊಂಡು ಅತಿ ಹೆಚ್ಚು ಅಂಕ ಪಡೆಯುತ್ತೇನೆ’ ಎಂದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.