ಸೋಮವಾರ, ಮಾರ್ಚ್ 8, 2021
29 °C

ಮತದಾರರ ಮನವೊಲಿಸಲು ಬಿರುಸಿನ ಪ್ರಚಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮತದಾರರ ಮನವೊಲಿಸಲು ಬಿರುಸಿನ ಪ್ರಚಾರ

ಧಾರವಾಡ: ರಾಜ್ಯ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭಗೊಂಡಿದ್ದು, ವಿವಿಧ ಪಕ್ಷಗಳ ಅಭ್ಯರ್ಥಿಗಳು ಕ್ಷೇತ್ರ ವ್ಯಾಪ್ತಿಯ ವಿವಿಧ ಪ್ರದೇಶಗಳಲ್ಲಿ ಪಾದಯಾತ್ರೆ, ಮನೆ,ಮನೆ ಭೇಟಿ, ಮುಖಂಡರ ಸಭೆಗಳು ಸೇರಿದಂತೆ ಸಾಧ್ಯವಿರುವ ಎಲ್ಲ ಆಯಾಮಗಳಲ್ಲಿ ಮತದಾರರ ಮನವೊಲಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.

ಈ ಬಾರಿ ಬಿಸಿಲಿನ ತೀವ್ರತೆ ಹೆಚ್ಚಾಗಿರುವುದು ಅಭ್ಯರ್ಥಿಗಳ ಪ್ರಚಾರಕ್ಕೆ ಸ್ವಲ್ಪ ಮಟ್ಟಿಗೆ ತೊಂದರೆಯಾಗಿದೆ. ಹೀಗಾಗಿ ಬೆಳಗಿನ ಜಾವ ಮತ್ತು ಸಂಜೆ ಸೂರ್ಯಾಸ್ತದ ನಂತರ ಅಭ್ಯರ್ಥಿಗಳು ಮನೆ, ಮನೆಗೆ ಭೇಟಿ ನೀಡುತ್ತಿದ್ದು, ತಾವು ಮಾಡಿದ ಅಭಿವೃದ್ಧಿ ಕಾರ್ಯಗಳು, ಪಕ್ಷದ ಪ್ರಣಾಳಿಕೆ, ಹೊಸ ಭರವಸೆ ನೀಡುವ ಮೂಲಕ ಮತದಾರರ ಮನಸ್ಸನ್ನು ಗೆಲ್ಲುವ ಪ್ರಯತ್ನ ನಡೆಸಿದ್ದಾರೆ.

ಧಾರವಾಡ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಮೃತ ದೇಸಾಯಿ ಮಂಗಳವಾರ ಬೆಳಿಗ್ಗೆ ಕೋಟುರ, ತೇಗೂರ ಮತ್ತು ಉಪ್ಪಿನ ಬೆಟಗೇರಿ ಗ್ರಾಮಗಳಲ್ಲಿ ಪಾದಯಾತ್ರೆ ನಡೆಸಿದರು. ಅಲ್ಲದೇ ಮನೆ,ಮನೆಗೆ ಭೇಟಿ ನೀಡಿ ಬಿಜೆಪಿ ಅಧಿಕಾರದಲ್ಲಿದ್ದಾಗ ಕೈಗೊಂಡ ಅಭಿವೃದ್ಧಿ ಕಾರ್ಯಗಳು, ಜಾರಿಗೊಳಿಸಿದ ಹೊಸ ಯೋಜನೆಗಳು ಮತ್ತು ಸದ್ಯ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಯೋಜನೆಗಳ ಕುರಿತು ಮತದಾರರಿಗೆ ಮಾಹಿತಿ ನೀಡುವುದರ ಜತೆ ಈ ಬಾರಿ ಧಾರವಾಡ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಿಸುವಂತೆ ಮನವಿ ಮಾಡಿದರು.

ಇದೇ ವೇಳೆ ಅನೇಕ ಯುವಕರು ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಸೇರ್ಪಡೆಗೊಂಡರು. ದುರ್ಗಪ್ಪ ಹೊಸಮನಿ, ಮಂಜುನಾಥ ದೊಡ್ಡಮನಿ, ವಸಂತ ಹೊಸಮನಿ, ಚನ್ನವ್ವ ಹೊಸಮನಿ, ಸುಭಾಸ ಉಳ್ಳಿಗೇರಿ, ಮಂಜುನಾಥ ಬೇವಿನಗಿಡದ ಅಮೃತ ದೇಸಾಯಿ ಅವರೊಂದಿಗಿದ್ದರು.

ಇದೇ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ವಿನಯ ಕುಲಕರ್ಣಿ ತಾಲ್ಲೂಕಿನ ನರೇಂದ್ರ ಗ್ರಾಮದಲ್ಲಿ ಬಿರುಸಿನ ಪ್ರಚಾರ ನಡೆಸಿದರು. ಮನೆ,ಮನೆಗೆ ತೆರಳಿ ಕಾಂಗ್ರೆಸ್‌ ಪಕ್ಷದ ಸಾಧನೆಗಳನ್ನು ವಿವರಿಸಿದ ಅವರು, ಅಭಿವೃದ್ಧಿ ಕಾರ್ಯ ಮುಂದುವರಿಸಲು ಮತ್ತೊಂದು ಅವಕಾಶ ನೀಡುವಂತೆ ಮತದಾರರಲ್ಲಿ ಮನವಿ ಮಾಡಿದರು.

ಧಾರವಾಡ ಪಶ್ಚಿಮ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅರವಿಂದ ಬೆಲ್ಲದ ನಗರದ ಪಂಚಕಚೇರಿ ಓಣಿಯಲ್ಲಿ ಮಂಗಳವಾರ ಬೆಳಿಗ್ಗೆ ಪಾದಯಾತ್ರೆ ನಡೆಸಿ ಮತಯಾಚಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.