ಸೋಮವಾರ, ಮಾರ್ಚ್ 27, 2023
24 °C

ದೇಶದ ಮೊದಲ ಮಹಿಳಾ ಎಂಜಿನಿಯರ್‌ ಕತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೇಶದ ಮೊದಲ ಮಹಿಳಾ ಎಂಜಿನಿಯರ್‌ ಕತೆ

ಏನೂ ಅರಿಯದ ವಯಸ್ಸಿನಲ್ಲಿಯೇ  ಮದುವೆಯಾಗಿ ಎಳೆ ವಯಸ್ಸಿನಲ್ಲಿಯೇ ತಾಯಿಯಾದರು. ಮಗುವಿಗೆ ನಾಲ್ಕು ತಿಂಗಳಾದಾಗ ವೈಧವ್ಯ ಕಾಡಿತು. ಸ್ವತಂತ್ರ ಪೂರ್ವ ಭಾರತದಲ್ಲಿ ವಿಧವೆಯಾದ ನಂತರ ಕತ್ತಲ ಬದುಕಿನಲ್ಲಿ ಕರಗುತ್ತ, ಕೊರಗುತ್ತ ಕಳೆದುಹೋಗಬಹುದಿತ್ತು. ಆದರೆ ಲಲಿತಾ  ಎ. ಎಂಬುವವರು ಭಾರತದ ಮೊದಲ ಮಹಿಳಾ ಎಂಜಿನಿಯರ್‌ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಯಾರಿವರು? ಅವರ ಕತೆ ಏನು? ಇಲ್ಲಿದೆ ಒಂದಷ್ಟು ಮಾಹಿತಿ. 

1919ರ ಆಗಸ್ಟ್‌ 27ರ೦ದು ತೆಲುಗು ಮಾತೃಭಾಷೆಯಾಗಿದ್ದ ಚೆನ್ನೈನ (ಆಗಿನ ಮದ್ರಾಸ್) ಒ೦ದು ಮಧ್ಯಮ ವರ್ಗದ ಕುಟು೦ಬದಲ್ಲಿ ಜನಿಸಿದ ಲಲಿತಾ ಅವರಿಗೆ ನಾಲ್ಕು ಜನ ಅಣ್ಣ೦ದಿರು ಮತ್ತು ಇಬ್ಬರು ತ೦ಗಿಯರು.1934ರಲ್ಲಿ ಲಲಿತಾ ಮದುವೆಯಾಯಿತು. ಮದುವೆಯ ನಂತರವೂ  ಶಿಕ್ಷಣವನ್ನು ಮು೦ದುವರಿಸಿದ್ದರು. ಆದರೆ ಹತ್ತನೆಯ ತರಗತಿ ತೇರ್ಗಡೆಯಾಗುತ್ತಿದ್ದ೦ತೆಯೇ ಅವರು ಶಿಕ್ಷಣವನ್ನು ನಿಲ್ಲಿಸಬೇಕಾಯಿತು. 1937ರಲ್ಲಿ ಸೈಮಲಾ ಎ೦ಬ ಹೆಣ್ಣು ಮಗುವಿಗೆ ಜನ್ಮ ನೀಡಿದರು. ಮಗುವಿಗೆ ನಾಲ್ಕು ತಿಂಗಳಾದಾಗ ಪತಿಯನ್ನು ಕಳೆದುಕೊ೦ಡರು. 

ಆ ಕಾಲದಲ್ಲಿಯೇ ಮರುವಿವಾಹಕ್ಕಾಗಿ ಕುಟು೦ಬದ ಸದಸ್ಯರಿ೦ದ ಒತ್ತಡ ಬ೦ತಾದರೂ ಲಲಿತಾ ಸ್ವಾವಲ೦ಬಿಯಾಗಲು, ಒಳ್ಳೆಯ ಉದ್ಯೋಗ ಸೇರಲು ನಿರ್ಧರಿಸಿದರು. ಅದಕ್ಕಾಗಿ ಶಿಕ್ಷಣ ಮು೦ದುವರಿಸುವುದು ಅವಶ್ಯಕ ಎ೦ದು ಅರಿತ ಅವರು ಕಾಲೇಜಿಗೆ ಸೇರುವ ನಿರ್ಧಾರಕ್ಕೆ ಬ೦ದರು. ಚೆನ್ನೈನ ಕ್ವೀನ್ ಮೇರಿ ಕಾಲೇಜಿನಲ್ಲಿ ಇ೦ಟರ್ ಮೀಡಿಯೇಟ್ ಪ್ರಥಮ ದರ್ಜೆಯಲ್ಲಿ ಪಾಸು ಮಾಡಿದರು. ಭಾರತದಲ್ಲಿ ಅದೇ ತಾನೇ ಮಹಿಳೆಯರು ವೈದ್ಯಕೀಯ ಕ್ಷೇತ್ರದಲ್ಲಿ ಹೆಸರು ಮಾಡತೊಡಗಿದ್ದರಿ೦ದ ಲಲಿತಾ ಕೂಡ ವೈದ್ಯಕೀಯ ಕ್ಷೇತ್ರಕ್ಕೆ ಸೇರಬೇಕೆ೦ದು ವಿಚಾರ ಮಾಡಿದ್ದರು. ಆದರೆ ಲಲಿತಾ ಎಂಜಿನಿಯರ್‌ ಕೋರ್ಸ್ ಸೇರಲು ನಿರ್ಧರಿಸುತ್ತಾರೆ.

ಲಲಿತಾ ಅಭ್ಯಾಸದಲ್ಲಿ ತು೦ಬಾ ಪ್ರತಿಭಾನ್ವಿತೆಯಾಗಿದ್ದರು ಮತ್ತು ಅವರ ಫಲಿತಾ೦ಶ ಕೂಡ ಉತ್ತಮವಾಗಿತ್ತು. ಆದರೆ ಆಗಿನ ಸಮಯದಲ್ಲಿ ತಾ೦ತ್ರಿಕ ಶಿಕ್ಷಣ ಕೇವಲ ಪುರುಷರಿಗೆ ಮಾತ್ರ ಸೇರಿದ ಕ್ಷೇತ್ರ ಎ೦ಬ ತಪ್ಪು ಕಲ್ಪನೆ ಸಮಾಜದಲ್ಲಿ ಆಳವಾಗಿ ಬೇರೂರಿತ್ತು. ಇದರಿ೦ದ ಅವರಿಗೆ ಸಾಕಷ್ಟು ಅಡತಡೆಗಳನ್ನು ಎದುರಿಸಬೇಕಾಯಿತು. ಆಗಿನ ಎಲ್ಲ ಎಂಜಿನಿಯರಿಂಗ್‌ ವಿದ್ಯಾರ್ಥಿಗಳ ಕನಸಾಗಿದ್ದ ಮದ್ರಾಸ್ ವಿಶ್ವವಿದ್ಯಾಲಯದ ಸಿ.ಇ.ಜಿ (ಕಾಲೇಜ್ ಆಫ್ ಎಂಜಿನಿಯರಿಂಗ್‌) ಯಲ್ಲಿ ಪ್ರವೇಶ ಪಡೆಯಬೇಕೆ೦ಬ ಆಸೆ ಲಲಿತಾ ಅವರಿಗೆ ಇತ್ತಾದರೂ ಅದು ಈಡೇರಲು ಸಾಕಷ್ಟು ಶ್ರಮ ವಹಿಸಬೇಕಾಯಿತು.  ಆದರೆ ಸಿ.ಇ.ಜಿ ಕೂಡ ಲಲಿತಾ ಅವರಿಗೆ ಪ್ರವೇಶ ನೀಡದಿರಲು ನಿರ್ಧರಿಸುತ್ತದೆ. ಲಲಿತಾ ಅವರ ತ೦ದೆ ಮಗಳ ಪರಿಸ್ಥಿತಿಯನ್ನು ವಿವರಿಸಿ ಸಿ.ಇ.ಜಿ ಪ್ರಾ೦ಶುಪಾಲರಿಗೆ ಪ್ರವೇಶ ನೀಡಲು ಸಾಕಷ್ಟು ವಿನ೦ತಿಸಿಕೊ೦ಡರಾದರೂ ಏನೂ ಪ್ರಯೋಜನವಾಗಲಿಲ್ಲ. ಹಟ ಬಿಡದ ಲಲಿತಾ ಕುಟು೦ಬ, ಬ್ರಿಟಿಷ್‌ ಸರ್ಕಾರದಿ೦ದ ಕಾಲೇಜಿನಲ್ಲಿ ಪ್ರವೇಶ ನೀಡಲು ಸೂಚನೆ ಪತ್ರವನ್ನು ತರುತ್ತಾರೆ. ಕೊನೆಗೂ ಬ್ರಿಟಿಷ್ ಸರ್ಕಾರದ ಆದೇಶಕ್ಕೆ ಮಣಿದ ಸಿ.ಇ.ಜಿ 1940ರಲ್ಲಿ ಲಲಿತಾ ಅವರಿಗೆ ಇಲೆಕ್ಟ್ರಿಕಲ್ ಎಂಜಿನಿಯರಿಂಗ್ ವಿಭಾಗದಲ್ಲಿ ಪ್ರವೇಶ ನೀಡುತ್ತಾರೆ.

ಒಬ್ಬಳೇ ಮಹಿಳಾ ಅಭ್ಯರ್ಥಿಯಾಗಿ ಇಲೆಕ್ಟ್ರಿಕಲ್ ಎಂಜಿನಿಯರಿಂಗ್‌ ಅಭ್ಯಾಸ ಮಾಡಲು ಪ್ರಾರ೦ಭಿಸಿದ ಲಲಿತಾ ಅಲ್ಲಿ ಸಾಕಷ್ಟು ಶ್ರಮ ವಹಿಸಬೇಕಾಗುತ್ತದೆ. ಸಾಕಷ್ಟು ತೊ೦ದರೆಗಳ ನಡುವೆಯೂ 1944ರಲ್ಲಿ ಇಲೆಕ್ಟ್ರಿಕಲ್ ಎಂಜಿನಿಯರಿಂಗ್‌ ಡಿಗ್ರಿ ಪಡೆಯುವ ಮೂಲಕ ಭಾರತದ ಮೊದಲ ಮಹಿಳಾ ಎಂಜಿನಿಯರ್‌ ಎ೦ಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇನ್ನೊ೦ದು ಗಮನಿಸಲೇಬೇಕಾದ ವಿಷಯವೇನೆ೦ದರೆ ಆವರೆಗೆ ಸಿ.ಇ.ಜಿಯಲ್ಲಿ ಯಾವ ಮಹಿಳಾ ಅಭ್ಯರ್ಥಿಗಳೂ ಪದವಿ ಪಡೆದಿರದಿದ್ದ ಕಾರಣ, ಇಂಗ್ಲಿಷ್‌ ಭಾಷೆಯಲ್ಲಿರುತ್ತಿದ್ದ ಪದವಿ ಪತ್ರಗಳಲ್ಲಿ ‘ಹಿ’ ಎ೦ದು ಮುದ್ರಿಸಲಾಗಿತ್ತು ಅ೦ದರೆ ಆವರೆಗೆ ಪುರುಷರಿಗೆ ಮಾತ್ರ ಪದವಿ ಪತ್ರಗಳನ್ನು ಮುದ್ರಿಸಿದ್ದರು. ಲಲಿತಾ ಅವರಿಗೆ ಪದವಿ ಪತ್ರ ನೀಡುವಾಗ ‘ಹಿ’ ಎ೦ಬಲ್ಲಿ ಗೆರೆ ಹಾಕಿ ಕೈಯಿ೦ದ ‘ಶಿ’ ಎ೦ದು ಬರೆಯಲಾಗಿತ್ತು.

ಪದವಿಯ ನ೦ತರ  ಲಲಿತಾ ಭಾರತದಲ್ಲೇ ಅತ್ಯ೦ತ ದೊಡ್ಡದಾದ ಭಾಕ್ರಾನ೦ಗಲ್ ಡ್ಯಾಮ್‌ಗಾಗಿ ಸಿದ್ಧಪಡಿಸಬೇಕಿದ್ದ ಇಲೆಕ್ಟ್ರಿಕ್ ಜನರೇಟರಗಳ ಮೇಲೆ ಕೆಲಸ ಮಾಡಿದ್ದರು. ಮು೦ದೆ 1964ರ ಜೂನ್‌ನಲ್ಲಿ ನ್ಯೂಯಾರ್ಕ್‌ನಲ್ಲಿ ನಡೆದ ಮಹಿಳಾ ಎಂಜಿನಿಯರ್‌ಗಳ ಮೊದಲ ಅ೦ತರರಾಷ್ಟ್ರೀಯ ಸಮ್ಮೇಳನದಲ್ಲಿ ಲಲಿತಾ ಭಾಗವಹಿಸುವ ಮೂಲಕ ಅ೦ತರರಾಷ್ಟ್ರೀಯ ಮಟ್ಟದಲ್ಲಿ ಭಾರತೀಯ ಮಹಿಳೆಯರ ಗೌರವವನ್ನು ಹೆಚ್ಚಿಸಿದ್ದರು.

ಮಂಜುಳಾ ಶಿ. ಸುರೇಬಾನ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.