ಮಂಗಳವಾರ, ಮಾರ್ಚ್ 2, 2021
26 °C
ಮಹದಾಯಿ ವಿಚಾರದಲ್ಲಿ ಮೌನ

ಎಷ್ಟೋ ಭಾರತೀಯರಿಗಿಂತ ನನ್ನ ತಾಯಿ ದೇಶದ ಉತ್ತಮ ಪ್ರಜೆ: ರಾಹುಲ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಎಷ್ಟೋ ಭಾರತೀಯರಿಗಿಂತ ನನ್ನ ತಾಯಿ ದೇಶದ ಉತ್ತಮ ಪ್ರಜೆ: ರಾಹುಲ್‌

ಬೆಂಗಳೂರು: ‘ಇಟಲಿ ಮೂಲದವರಾದ ನನ್ನ ತಾಯಿ ನಾನು ಕಂಡಿರುವ ಎಷ್ಟೋ ಭಾರತೀಯರಿಗಿಂತಲೂ ದೇಶದ ಉತ್ತಮ ಪ್ರಜೆ’ ಎಂದು ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಹೇಳಿದರು. 

‘ನನ್ನ ತಾಯಿ ಇಟಲಿ ಮೂಲದವರು. ಅವರ ಜೀವನ ಬಹುಪಾಲು ಸಮಯವನ್ನು ಭಾರತದಲ್ಲಿ ಕಳೆದಿದ್ದಾರೆ. ನಾನು ಕಂಡಿರುವ ಎಷ್ಟೋ ಭಾರತೀಯರಿಗಿಂತಲೂ ನನ್ನ ತಾಯಿ ಉತ್ತಮ ಭಾರತೀಯಳು. ಈ ದೇಶಕ್ಕಾಗಿ ಆಕೆ ಸಾಕಷ್ಟು ತ್ಯಾಗ ಮಾಡಿದ್ದಾಳೆ, ನೋವುಂಡಿದ್ದಾಳೆ. ಸೋನಿಯಾ ಮತ್ತು ರಾಹುಲ್ ಬಗ್ಗೆ ಮಾತನಾಡುವುದರಿಂದ ಅವರಿಗೆ ಖುಷಿ ಆಗುತ್ತೆ ಎಂಬುದಾದರೆ ಮಾತನಾಡಲಿ. ಜನ ಎಲ್ಲವನ್ನೂ ಗಮನಿಸುತ್ತಿದ್ದಾರೆ. ಮುಂದೆ ನಮಗೂ ಸಮಯ ಬರುತ್ತದೆ’ ಎಂದರು.

ದೇವಸ್ಥಾನ ಮತ್ತು ಐತಿಹಾಸಿಕ ಸ್ಥಳಗಳಿಗೆ ಭೇಟಿ ಕೊಟ್ಟಿದ್ದೇನೆ. ಜಾತಿಗಳನ್ನು ಒಡೆಯುವ ಯಾವುದೇ ಸಂಸ್ಥೆಗಳಿಗೆ ನಾನು ಹೋಗಿಲ್ಲ. ನಾವು ಅನುಸರಿಸುವ ಪದ್ಧತಿ ನಂಬಿಕೆಯೇ ಧರ್ಮ. ಹಿಂದು ಅನ್ನುವ ಬಿಜೆಪಿ ನಾಯಕರಿಗೆ ಹಿಂದು ಪದದ ಅರ್ಥ ಗೊತ್ತಿಲ್ಲ ಎಂದು ಟಾಂಗ್‌ ನೀಡಿದರು. 

ಕನ್ನಡ ಅಸ್ಮಿತೆ ಉಳಿಸಲು ಬದ್ಧ

ಕಾಂಗ್ರೆಸ್‌ಗೆ ಬಹುಮತ ಬರುತ್ತದೆ. ಅತಂತ್ರ ವಿಧಾನಸಭೆ ಇರುವುದಿಲ್ಲ. ಈ ಚುನಾವಣೆ ಕನ್ನಡದ ಅಸ್ಮಿತೆ ಮೇಲೆ ನಡೆಯುತ್ತಿದೆ. ಕರ್ನಾಟಕ ಜನ ಕಾಂಗ್ರೆಸ್ಸನ್ನು ಆರಿಸುತ್ತಾರೆ.

ಬಸವ ತತ್ವವೇ ನಮ್ಮ ತತ್ವ. ಅದೇ ನಮಗೆ ಸ್ಪಿರಿಟ್. ಆರ್‌ಎಸ್‌ಎಸ್‌ ಕರ್ನಾಟಕವನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದೆ. ನಾವು   ಯಾವುದೇ ಕಾರಣಕ್ಕೂ ಅವಕಾಶ ಕೊಡುವುದಿಲ್ಲ.

ಭಾಷೆ, ಸಂಸ್ಕೃತಿ ಮತ್ತು ಬಸವ ತತ್ವದ ಮೇಲೆ ಸವಾರಿ ಮಾಡಲು ಆರ್‌ಎಸ್‌ಎಸ್‌ ಹೊರಟಿದೆ. ಆರ್‌ಎಸ್‌ಎಸ್‌ ಐಡಿಯಾಲಜಿ ಮತ್ತು ಕರ್ನಾಟಕದ ಅಸ್ಮಿತೆಯ ಮಧ್ಯೆ ನಡೆಯುವ ಹೋರಾಟ ಈ ಚುನಾವಣೆ. ಕರ್ನಾಟಕದ ಅಸ್ಮಿತೆಯನ್ನ ಉಳಿಸಲು ಬದ್ಧರಾಗಿದ್ದೇವೆ ಎಂದು ಹೇಳಿದರು.

ಪಾಕಿಸ್ತಾನದೊಂದಿಗೆ ಇರುವ ಗಡಿ ಸಮಸ್ಯೆ ಹಾಗೂ ಚೀನಾದೊಂದಿಗಿನ ಡೊಕ್ಲಾಮ್‌ ಬಿಕ್ಕಟ್ಟು ಬಗೆಹರಿಸಲು ಮುಂದಾಗದೆ ಅಜೆಂಡಾ ಆಗಿ ಮಾರ್ಪಾಡು ಮಾಡಿಕೊಳ್ಳುತ್ತಿದೆ.

ರಾಜ್ಯದಲ್ಲಿ ಟೆಂಪಲ್ ರನ್:

ಪಕ್ಷದ ನಾಯಕನಾಗಿ ಎಲ್ಲ ಧರ್ಮ, ಸಮುದಾಯಕ್ಕೆ ಗೌರವ ಕೊಡಬೇಕು. ಯಾರೇ ಕರೆದರೂ ನಾನು ಹೋಗಿದ್ದೇನೆ. ಐತಿಹಾಸಿಕ ಮತ್ತು ಪ್ರಸಿದ್ಧ ಮಠ, ದೇವಸ್ಥಾನಗಳಿಗೆ ಭೇಟಿ ನೀಡಿದ್ದೇನೆ.

ಪ್ರಚಾರದ ವೇಳೆ‌ ಹಲವು ಮಂದಿರ, ಮಸೀದಿ, ಚರ್ಚ್‌ಗಳಿಗೆ ಭೇಟಿ ನೀಡಿದ್ದೇನೆ. ನಮಗೆ ಎಲ್ಲ ಸಮುದಾಯಗಳೂ ಮುಖ್ಯ. ಅವರು ಬೇಡ, ಇವರು ಬೇಡ ಅನ್ನುವ ಪಕ್ಷ ನಮ್ಮದಲ್ಲ. ಹಾಗಾಗಿ ಎಲ್ಲ ಕಡೆಯೂ ನಾನು ತಲುಪಿದ್ದೇನೆ.

ಮಹದಾಯಿ ವಿಚಾರಕ್ಕೆ ಸಂಬಂಧಿಸಿದಂತೆ, ‘ಅದು ಪ್ರಧಾನಿಗೆ ಬಿಟ್ಟದ್ದು’ ಎಂದರು.

ಮೋದಿ ಹಾಗೂ ನನ್ನ ನಡುವೆ ಚುನಾವಣೆ ಅಲ್ಲ

ಈ ಚುನಾವಣೆ ನನ್ನ ಭವಿಷ್ಯಕ್ಕಾಗಿ ಅಲ್ಲ. ನಾನು ಮುಂದೆ ಪ್ರಧಾನಿ ಆಗಲು ಸಹಕಾರಿಯೂ ಅಲ್ಲ, ಮೋದಿ ಹಾಗೂ ನನ್ನ ನಡುವಿನ ಚುನಾವಣೆಯೂ ಅಲ್ಲ. ಈ ಚುನಾವಣೆ ಕರ್ನಾಟಕದ ಸ್ಫೂರ್ತಿಗಾಗಿ ಎಂದರು.

ದೇಶಕ್ಕೆ ಕರ್ನಾಟಕದ ಕೊಡುಗೆ ಅಪಾರ. ಬೆಂಗಳೂರು ರಾಷ್ಟ್ರದ ಹೆಮ್ಮೆ. ಮುಂದಿನ ವರ್ಷಗಳಲ್ಲಿ ಬೆಂಗಳೂರು ಸಿಲಿಕಾನ್ ವ್ಯಾಲಿ ಆಗಲಿದೆ.

ರಫೇಲ್‌ ಡೀಲ್‌

ರಫೇಲ್ ಯುದ್ಧ ವಿಮಾನದ ಟೆಂಡರ್‌ ಎಚ್‌ಎಎಲ್‌ಗೆ ಸಿಗಬೇಕಿತ್ತು. ಆದರೆ ಅದು ಎಚ್‌ಎಎಲ್ ಕೈ ತಪ್ಪಿದೆ. ₹45 ಸಾವಿರ ಕೋಟಿಯ ಟೆಂಡರ್‌ ಅನ್ನು ಬೇರೆಯವರಿಗೆ ನೀಡಲಾಗಿದೆ. ಇದು ಉದ್ಯೋಗ ಸೃಷ್ಟಿಯೂ ಇಲ್ಲವಾಗಿದೆ ಎಂದು ಕೇಂದ್ರದ ವಿರುದ್ಧ ಆರೋಪಿಸಿದರು.

ತೈಲ ಬ್ಯಾರಲ್‌ ಬೆಲೆ 140 ಡಾಲರ್‌ನಿಂದ 70 ಡಾಲರ್‌ಗೆ ಇಳಿದಿದೆ. ಆದರೂ ಪೆಟ್ರೋಲ್‌ ಬೆಲೆ ಕಡಿಮೆ ಮಾಡಿಲ್ಲ. ಇದರಿಂದ ದೇಶದ ಜನರಿಗೆ ಮತ್ತಷ್ಟು ಹೊರೆಯಾಗಿದೆ.

ದಲಿತರಿಗೆ ದೇಶದಲ್ಲಿ‌ ರಕ್ಷಣೆಯಿಲ್ಲದಂತಾಗಿದೆ. ಉತ್ತರ ಪ್ರದೇಶದಲ್ಲಿ ದಲಿತರ ಮೇಲಿನ‌ ಹಲ್ಲೆ ನಿಂತಿಲ್ಲ. ಅದನ್ನು ತಡೆಯಲು ಪ್ರಧಾನಿ ವಿಫಲರಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಉತ್ತಮ ಪ್ರಣಾಳಿಕೆ ಕೊಟ್ಟಿದ್ದೇವೆ: ಸಿದ್ದರಾಮಯ್ಯ

ಬಿಜೆಪಿಯವರು ವೈಯಕ್ತಿಕ ವಿಚಾರವನ್ನು ಇಟ್ಟು ದಾಳಿ ಮಾಡುವ ಪ್ರಯತ್ನ ಮಾಡಿದ್ದಾರೆ. ಹೀಗಾಗಿ‌ ನಾನು ‌ಕಠಿಣ ಶಬ್ಧಗಳಲ್ಲಿ‌ ತಿರುಗೇಟು ನೀಡಿದ್ದೇನೆ. ವೈಯುಕ್ತಿವಾಗಿ ಮೋದಿ, ಅಮಿತ್‌ ಶಾ ಬಗ್ಗೆ ಮಾತನಾಡಿಲ್ಲ.

ಪ್ರಧಾನಿ ತೀರ ಕೆಳಮಟ್ಟಕ್ಕೆ ಇಳಿದಿದ್ದು ಸರಿಯಲ್ಲ. ಅವರು ಅಭಿವೃದ್ಧಿ ವಿಚಾರದಲ್ಲಿ ಮಾತನಾಡಿದ್ದರೆ ತಪ್ಪಿರಲಿಲ್ಲ. ಮೋದಿ ಮತ್ತು ಶಾ ಏನೇ ಹೇಳಿಕೊಳ್ಳಲಿ, ರಾಜ್ಯದ ಜನ ತುಂಬ ಗಂಭೀರವಾಗಿ‌ ಯೋಚಿಸಿ ಚುನಾವಣೆಯಲ್ಲಿ ಪ್ರಬುದ್ಧತೆ ತೋರಲಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಭವಿಷ್ಯ ನುಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.