ಶನಿವಾರ, ಫೆಬ್ರವರಿ 27, 2021
27 °C
ನಗರದಲ್ಲಿ ಪೂರ್ವಮುಂಗಾರಿನ ನರ್ತನ

ಬಾನಲ್ಲಿ ಮಿಂಚಿನ ಸಂಚಾರ, ಸಿಡಿಲಿನ ಅಬ್ಬರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾನಲ್ಲಿ ಮಿಂಚಿನ ಸಂಚಾರ, ಸಿಡಿಲಿನ ಅಬ್ಬರ

ಬೆಂಗಳೂರು: ವಾರದಿಂದ ಬಿಡುವು ನೀಡಿದ್ದ ಮುಂಗಾರುಪೂರ್ವ ಮಳೆ ಗುರುವಾರ ಭರ್ಜರಿಯಾಗಿ ಆರ್ಭಟಿಸಿತು. ಅತ್ತ ವಿಧಾನಸಭೆ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದ ಕೆಲವೇ ಗಂಟೆಗಳಲ್ಲಿ ಗಾಳಿ, ಮಳೆ, ಮಿಂಚು, ಗುಡುಗಿನ ಅಬ್ಬರ ಆರಂಭವಾಯಿತು.

ಮಳೆ ಆರಂಭಕ್ಕೂ ಮುನ್ನ ಇಡೀ ನೀಲಾಗಸವೆಲ್ಲ ಕವಿದ ಕಾರ್ಮೋಡಗಳು ಧಾರಾಕಾರವಾಗಿ ಸುರಿಯುವ ಸೂಚನೆ ನೀಡಿತ್ತು. ಏಳು ಗಂಟೆ ಸುಮಾರಿಗೆ ಆರಂಭವಾದ ಮಿಂಚು–ಗುಡುಗಿನ ಅಬ್ಬರ ಬೆಂಗಳೂರಿಗರನ್ನು ಬೆಚ್ಚಿಬೀಳಿಸಿತು. ಮಿಂಚುಗಳ ಸಂಚಾರ ಒಮ್ಮೆ ಇಡೀ ಬಾನು ಬೆಳಗಿದಂತಿದ್ದರೆ ಮತ್ತೊಮ್ಮೆ ಕತ್ತಿ ಝಳಪಿಸಿದಂತ್ತಿತ್ತು. ಮಗದೊಮ್ಮೆ ಬಾನಲ್ಲಿ ಬೆಳ್ಳಿಗೆರೆ ಮೂಡಿಸಿದಂತಿತ್ತು.

ಮಿಂಚು ಮರೆಯಾದ ತಕ್ಷಣ ಅಪ್ಪಳಿಸುತ್ತಿದ್ದ ಗುಡುಗಿನ ಶಬ್ದ ನಡುಕ ಹುಟ್ಟಿಸುವಂತಿತ್ತು. ಬಾನಲ್ಲಿ ಏನೋ ಸ್ಫೋಟ ನಡೆಯಿತು ಎಂಬಂತ ಅನುಭವ ನೀಡಿತು. ಸಾಮಾಜಿಕ ಜಾಲತಾಣಗಳಲ್ಲಿ ಮಳೆಗಿಂತ ಹೆಚ್ಚಾಗಿ ಮಿಂಚು–ಗುಡುಗಿನ ಬಗ್ಗೆಯೇ ಹೆಚ್ಚು ಸಂದೇಶಗಳು ಹರಿದಾಡಿದವು.

ಮನೆಗಳಿಗೆ ನುಗ್ಗಿದ ನೀರು: ಸುಮಾರು ಒಂದು ಗಂಟೆಗೂ ಹೆಚ್ಚುಕಾಲ ಧಾರಾಕಾರವಾಗಿ ಮಳೆ ಸುರಿದಿದ್ದರಿಂದ ಜೆ.ಪಿ ನಗರ, ಬಿಳೆಕಹಳ್ಳಿ, ಕೆ.ಪಿ ಅಗ್ರಹಾರ, ಮಹದೇವಪುರ, ಮಲ್ಲೇಶ್ವರ ಸೇರಿದಂತೆ ಅನೇಕ ಕಡೆಗಳಲ್ಲಿ ಮನೆಗಳಿಗೆ ನೀರು ನುಗ್ಗಿತು. ವಿಷಯ ತಿಳಿದು, ಸ್ಥಳಕ್ಕೆ ತೆರಳಿ ಪರಿಹಾರ ಕಾರ್ಯಾಚರಣೆ ಕೈಗೊಳ್ಳಲಾಯಿತು ಎಂದು ಆಗ್ನಿಶಾಮಕ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಸಂಚಾರ ಅಸ್ತವ್ಯಸ್ತ: ನಗರದಲ್ಲಿ ಚರಂಡಿಗಳ ಅವ್ಯವಸ್ಥೆ ಮತ್ತೆ ಅನಾವರಣಗೊಂಡಿತು. ಮಳೆಯ ನೀರು ರಸ್ತೆಯಲ್ಲೇ ಹರಿದಿದ್ದರಿಂದ ಸಂಚಾರ ದಟ್ಟಣೆ ಉಂಟಾಯಿತು. ಮೈಕೋ ಬಂಡೆಯ ಸಮೀಪ ಮರಬಿದ್ದರೆ, ಸಿಲ್ಕಬೋರ್ಡ್‌ ಜಂಕ್ಷನ್‌, ಕೆ.ಆರ್ ಪುರಂ, ಆರ್‌.ಆರ್‌. ನಗರ, ನಾಯಂಡಹಳ್ಳಿ, ಯಶವಂತಪುರ, ಶಾಂತಿ ನಗರ, ವಿಲ್ಸನ್‌ ಗಾರ್ಡನ್‌, ಬಸವೇಶ್ವರ ನಗರದಲ್ಲಿ ರಸ್ತೆಯಲ್ಲಿ ನೀರು ನಿಂತಿದ್ದರಿಂದ ಸಂಚಾರ ಸಮಸ್ಯೆ ತಲೆದೋರಿತು.

ಅದೇರಾಗ ಅದೇಹಾಡು ಎನ್ನುವಂತೆ ಕೆಲವೆಡೆ ಅಂಡರ್‌ ಪಾಸ್‌ಗಳಲ್ಲಿ ಮೊಣಕಾಲಿನ ವರೆಗೆ ನೀರು ನಿಂತುಕೊಂಡಿತ್ತು. ಸಂಚಾರ ದಟ್ಟಣೆಯಲ್ಲಿ ಸಿಲುಕಿದ ವಾಹನ ಸವಾರರು, ಪ್ರಯಾಣಿಕರು ಸುಮಾರು ಒಂದು ಗಂಟೆಗೂ ಹೆಚ್ಚುಕಾಲ ರಸ್ತೆಯಲ್ಲೇ ಕಾಲಕಳೆಯಬೇಕಾಯಿತು.

ಹರಸಾಹಸ: ನಗರ ಸಂಚಾರ ಪೊಲೀಸ್‌ ವಿಭಾಗದ ಕೆಲ ಸಿಬ್ಬಂದಿ ಚುನಾವಣೆ ಬಂದೋಬಸ್ತ್‌ಗಾಗಿ ತೆರಳಿದ್ದರಿಂದ ಸಂಚಾರ ದಟ್ಟಣೆ ಸಮಸ್ಯೆ ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು. ಸಂಚಾರ ದಟ್ಟಣೆಯ ಬಗ್ಗೆ ಸಾರ್ವಜನಿಕರಿಂದ ಬಂದ ದೂರಿಗೆ ಇರುವ ಸಿಬ್ಬಂದಿಯನ್ನೇ ಬಳಸಿಕೊಂಡು ಸ್ಪಂದಿಸಿ, ಪರಿಸ್ಥಿತಿ ನಿಯಂತ್ರಿಸಲಾಯಿತು ಎಂದು ಸಂಚಾರ ಪೊಲೀಸರೊಬ್ಬರು ತಿಳಿಸಿದರು.

ಶ್ರೇಷಾದ್ರಿಪುರ, ಹೈಗ್ರೌಂಡ್‌, ವೈಯಾಲಿ ಕಾವಲ್‌, ಸದಾಶಿವ ನಗರ,  ಕಬ್ಬನ್‌ಪಾರ್ಕ್‌, ವಿಧಾನಸೌಧ, ಅಶೋಕ ನಗರ, ವಿಲ್ಸನ್‌ ಗಾರ್ಡನ್‌, ಎಸ್‌.ಆರ್‌ ನಗರ, ಎಸ್‌.ಜೆ. ಪಾರ್ಕ್‌, ವಿವೇಕ ನಗರ,  ಹಲಸೂರು, ಇಂದಿರಾ ನಗರ,  ಬೈಯಪ್ಪನಹಳ್ಳಿ,  ಜೆ.ಬಿ. ನಗರ,  ಪುಲಕೇಶಿ ನಗರ, ರಾಮಮೂರ್ತಿ ನಗರ, ಹೆಣ್ಣೂರು, ಬಾಣಸವಾಡಿಯಲ್ಲಿ ಉತ್ತಮ ಮಳೆಯಾಗಿದೆ.

ಚಿಕ್ಕಪೇಟೆ ಉಪ್ಪಾರಪೇಟೆ, ಸಿಟಿ ಮಾರ್ಕೆಟ್‌, ಕಲಾಸಿಪಾಳ್ಯ, ಜೆ.ಜೆ ನಗರ, ಬ್ಯಾಟರಾಯನಪುರ, ಚಂದ್ರಾಲೇಔಟ್‌, ಜ್ಞಾನಭಾರತಿ,  ಕೆಂಗೇರಿ, ರಾಜರಾಜೇಶ್ವರಿ ನಗರ, ವಿಜಯನಗರ, ಮಾಗಡಿ ರಸ್ತೆ, ಕಾಮಾಕ್ಷಿಪಾಳ್ಯ ಹಾಗೂ ರಾಜಾಜಿನಗರ, ಶ್ರೀರಾಂಪುರ, ಸುಬ್ರಮಣ್ಯನಗರ, ಗಾಯತ್ರಿ ನಗರ, ರಾಜಗೋಪಾಲನಗರ, ನಂದಿನಿ ಬಡಾವಣೆ, ಯಶವಂತಪುರ ಮತ್ತೀಕರೆ, ಪಿಣ್ಯ, ಜಾಲಹಳ್ಳಿ, ದಾಸರಹಳ್ಳಿ, ಬಾಗಲಗುಂಟೆ,  ಜೆ.ಸಿ. ನಗರ, ಸಂಜಯ ನಗರ, ಹೆಬ್ಬಾಳ ಆರ್‌.ಟಿ.ನಗರದಲ್ಲಿ ಉತ್ತಮ ಮಳೆಯಾಗಿದೆ.

ಅವ್ಯವಸ್ಥೆ

ಬೆಂಗಳೂರು:
ಮಳೆಯೊಂದಿಗೆ ಬಲವಾದ ಗಾಳಿಯೂ ಬೀಸಿದ್ದರಿಂದ ನಗರದ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ರೈಲು ನಿಲ್ದಾಣದ ಐದನೇ ಪ್ಲಾಟ್‌ಪಾರ್ಮ್‌ನಲ್ಲಿ ಛಾವಣಿಗೆ ಹಾನಿಯಾಗಿದ್ದರಿಂದ ನೀರು ಸೋರಿಕೆ ಪ್ರಯಾಣಿಕರು ತೊಂದರೆ ಅನುಭವಿಸಿದರು.

ಛಾವಣಿಯಿಂದ ಸೋರುತ್ತಿದ್ದ ಮಳೆಯ ನೀರು ಪ್ಲಾಟ್‌ ಫಾರ್ಮ್‌ನಲ್ಲಿ ಹರಿಯುತ್ತಿದ್ದರಿಂದ ಕೆಲ ಪ್ರಯಾಣಿಕರು ಜಾರಿ ಬಿದ್ದು ಗಾಯ ಮಾಡಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪ್ರಚಾರಕ್ಕೆ ತಣ್ಣೀರು!

ವಿಧಾನಸಭೆ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಕೊನೆಗೊಂಡಿದ್ದರಿಂದ ಕಣದಲ್ಲಿರುವ ರಾಜಕೀಯ ಪಕ್ಷಗಳ ಮತ್ತು ಪಕ್ಷೇತರ ಅಭ್ಯರ್ಥಿಗಳ ಬೆಂಬಲಿಗರು ಮನೆಮನೆ ಪ್ರಚಾರಕ್ಕೆ ಹೊರಡಲು ಅಣಿಯಾಗಿದ್ದರು. ಆದರೆ, ಮಳೆ, ಸಿಡಿಲು– ಗುಡುಗಿನ ಆರ್ಭಟ ಅವರ ಉತ್ಸಾಹಕ್ಕೆ ತಣ್ಣೀರೆರಚಿತು.

ಬಗಲಗುಂಟೆಯಲ್ಲಿ ಮನೆಮನೆ ಪ್ರಚಾರಕ್ಕೆ ತೆರಳಿದ್ದ ಬಿಜೆಪಿಯ ಹತ್ತಕ್ಕೂ ಹೆಚ್ಚು ಕಾರ್ಯಕರ್ತರು ಮಳೆ ನಿಲ್ಲುವವರೆಗೂ ಅಂಗಡಿ ಮುಂಗಟ್ಟುಗಳೆದುರು ನಿಂತು ಮಳೆಯಿಂದ ರಕ್ಷಣೆ ಪಡೆದರು. ಮಳೆ ನಿಂತ ಮೇಲೆಯೇ ಅವರು ಪ್ರಚಾರಕ್ಕೆ ತೆರಳಿದರು.

ಕುಂದಾಪುರದಲ್ಲಿ 8 ಸೆಂ.ಮೀ. ಮಳೆ

ಬೆಂಗಳೂರು:
ಗುರುವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲಿ ಕರಾವಳಿ ಹಾಗೂ ಒಳನಾಡಿನ ಅಲ್ಲಲ್ಲಿ ಮಳೆಯಾಗಿದೆ.

ಕುಂದಾಪುರದಲ್ಲಿ 8 ಸೆಂ.ಮೀ, ಮಂಗಳೂರು 7, ಕೋಟ 5, ಪಣಂಬೂರು, ಸೇಡಂ, ಮೂಡಿಗೆರೆ ತಲಾ 4, ಜಗಲ್‌ಬೇಟ್‌, ಕೊಟ್ಟಿಗೆಹಾರ, ಜಯಪುರ, ಹೊನ್ನಾವರ, ಮಂಕಿ, ಶಿಗ್ಗಾವಿ, ಭದ್ರಾವತಿ, ಕೊಪ್ಪದಲ್ಲಿ ತಲಾ 2 ಸೆಂ.ಮೀ. ಮಳೆ ದಾಖಲಾಗಿದೆ.

ಹವಾಮಾನ ಮುನ್ಸೂಚನೆ: ಕರಾವಳಿಯ ಹಲವೆಡೆ ಹಾಗೂ ಉತ್ತರ, ದಕ್ಷಿಣ ಒಳನಾಡಿನ ಅಲ್ಲಲ್ಲಿ ಗುಡುಗುಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.