ಶುಕ್ರವಾರ, ಫೆಬ್ರವರಿ 26, 2021
18 °C

ಬಾಲಿವುಡ್ ಅಮ್ಮಂದಿರ ದೊಡ್ಡ ತೆಕ್ಕೆ

ವಿಶಾಖ ಎನ್. Updated:

ಅಕ್ಷರ ಗಾತ್ರ : | |

ಬಾಲಿವುಡ್ ಅಮ್ಮಂದಿರ ದೊಡ್ಡ ತೆಕ್ಕೆ

1986. ಸುಡುಜ್ವರದಲ್ಲೂ ಮಗುವಿಗೆ ಎದೆಹಾಲುಣಿಸಿ, ತಮ್ಮ ಲಕ್ಷಣವಾದ ಮುಖದಲ್ಲಿ ಮೂಡಿದ್ದ ನೋವಿನ ನಿರಿಗೆಗಳನ್ನು ಕಾಣದಂತೆ ಮಾಡಲು ಸ್ಮಿತಾ ಪಾಟೀಲ್ ಹೆಣಗಾಡುತ್ತಿದ್ದರು. ಮಗಳ ಸಂಕಟ ನೋಡಲಾಗದ ಅವರ ತಾಯಿಯ ಕರುಳು ಚುರ‍್ರೆನ್ನುತ್ತಿತ್ತು. ಮಗುವಿಗೆ ಜನ್ಮ ನೀಡಿದ ಎರಡೇ ವಾರಗಳಲ್ಲಿ ಸ್ಮಿತಾ ಶಾಶ್ವತವಾಗಿ ಕಣ್ಮುಚ್ಚಿದರು.

ಅವರ ಮಗ ಪ್ರತೀಕ್ ಬಬ್ಬರ್ ಹುರಿಗಟ್ಟಿದ ದೇಹವನ್ನು ನೋಡಿ ಅಜ್ಜಿ ದೃಷ್ಟಿ ತೆಗೆದಿದ್ದರು. ‘ನಿನ್ನಮ್ಮ ಈಗ ನಿನ್ನನ್ನು ನೋಡಬೇಕಿತ್ತು’ ಎಂದಾಗ ಅವರ ಕಣ್ಣಂಚಿನಲ್ಲಿ ಹನಿ.

ಮೂವತ್ತೊಂದನೇ ವಯಸ್ಸಿಗೇ ಸ್ಮಿತಾ ಸಾಲು ಸಾಲು ಪರ್ಯಾಯ ಸಿನಿಮಾಗಳ ನೆನಪು, ಚಳವಳಿಯ ಬಿಸುಪು ಉಳಿಸಿ ಹೋಗಿಬಿಟ್ಟರು. ಅವರ ನೆನಪುಗಳಿಗೆಲ್ಲ ಸಾಕ್ಷಿಯಂಬಂತೆ ಬೆಳೆದ ಮಗ ಅಭಿನಯದಲ್ಲಿ ಛಾಪು ಮೂಡಿಸಲು ಒದ್ದಾಡುತ್ತಲೇ ಇದ್ದಾರೆ.

ಹಿಂದಿ ಚಿತ್ರರಂಗದಲ್ಲಿ ಚಿಕ್ಕಪ್ರಾಯದಲ್ಲಿಯೇ ಹೆಸರು ಮಾಡಿ, ಬಲು ಬೇಗ ಸಂಸಾರ ಕಟ್ಟಿಕೊಂಡು, ತಾಯಿಯಾದ ಅನೇಕರಿದ್ದಾರೆ. ಹೊಸ ತಲೆಮಾರಿನ ಕಡೆ ನೋಡಿ. ಶಾರುಖ್ ಜೋಡಿಯಾಗಿ ಮೆರೆದ ಕಾಜೋಲ್ ಒಂದು ಗರ್ಭಪಾತ, ಅದರ ನಂತರ ಶಸ್ತ್ರಚಿಕಿತ್ಸೆ, ಆಮೇಲೆ ಯಶಸ್ವಿ ತಾಯಿಯಾಗಿ ಮತ್ತೆ ಶಾರುಖ್ ಜೋಡಿಯಾಗಿಯೇ ಅಭಿನಯಿಸಿದರಲ್ಲ. ಈಗ ಅವರ ಸುಂದರ ವದನ ಒಡವೆ ಜಾಹೀರಾತಿನಲ್ಲಿ ಕಂಗೊಳಿಸುತ್ತಿದೆ.

ತೆಲುಗಿನ ‘ಬೊಮ್ಮರಿಲು’ ಸಿನಿಮಾದಲ್ಲಿ ಮಿಂಚಿ, ಹಿಂದಿ ಚಿತ್ರರಂಗದಲ್ಲಿ ಸಣ್ಣ ನಗು ತುಳುಕಿಸುವ ಹೊತ್ತಿಗೇ ಜೆನಿಲಿಯಾ ಡಿಸೋಜಾ ರಿತೇಷ್ ದೇಶಮುಖ್ ಪ್ರೇಮದ ತೆಕ್ಕೆಗೆ ಬಿದ್ದರು. ಈಗವರ ಜೊತೆಗೆ ಎರಡು ಕಂದಮ್ಮಗಳು ನಗುತ್ತಿವೆ. ನೃತ್ಯಗಾತಿಯಾಗಿ ಛಾಪು ಮೂಡಿಸಿ, ನಟಿಯಾಗಿ ಅಮ್ಮನ ಹಾದಿ ಹಿಡಿದಿದ್ದ ಇಶಾ ಡಿಯೋಲ್ ತಮ್ಮ ಮಗುವಿನ ಪುಟ್ಟ ಪಾದದ ಗುರುತನ್ನು ಮರಳಲ್ಲಿ ಮೂಡಿಸಿ, ಅದಕ್ಕೊಂದು ಚೌಕಟ್ಟು ಹಾಕಿಟ್ಟುಕೊಂಡಿದ್ದಾರೆ.

ಸೈಫ್ ಅಲಿ ಖಾನ್ ಜೊತೆಗೆ ದಾಂಪತ್ಯಗೀತೆ ಹಾಡುವ ಮುಂಚಿನಿಂದಲೂ ಸುದ್ದಿಯ ಅಲೆಗಳನ್ನೆಬ್ಬಿಸುತ್ತಾ ಬಂದ ಕರೀನಾ ಕಪೂರ್, ಈಗ ತೈಮೂರ್‌ನ ಹೆಮ್ಮೆಯ ತಾಯಿ. ಮತ್ತೆ ಸಿನಿಮಾವಕಾಶ ಅವರದ್ದಾಗಿದ್ದು, ಜಿಮ್ ನಲ್ಲಿ ಬೆವರಿಳಿಸುತ್ತಿದ್ದಾರೆ. ಒಂದು ಕಾಲದಲ್ಲಿ ಝೀರೊ ಸೈಜ್ ಇದ್ದ ಅವರು ಮತ್ತೆ ನಟಿಯಾಗಿ ಅಭಿಮಾನಿಗಳ ಹೃದಯಕ್ಕೆ ಗಾಳ ಹಾಕಲು ಸಿದ್ಧರಾಗುತ್ತಿದ್ದಾರೆ.

ಸೌಂದರ್ಯ ರಾಣಿ ಐಶ್ವರ್ಯಾ ರೈ ಭಗ್ನಪ್ರೇಮದ ನಂತರ ದೊಡ್ಡಮನೆಯ ಸೊಸೆಯಾಗಿ, ಮುದ್ದಿನ ಮಗಳಿಗೆ ಅಮ್ಮನಾಗಿ, ಮತ್ತೆ ನಟನೆಯ ಚುಂಗು ಹಿಡಿದರು. ಗೋವಿಂದ ಜೋಡಿಯಾಗಿ ಮೆರೆದಿದ್ದ ಕರಿಷ್ಮಾ ಕಪೂರ್ ಸಹ ಅಮ್ಮನಾಗಿ ಮಕ್ಕಳ ಕಣ್ಮಣಿಯೇ ಹೌದು.ಮಗಳು ಆರಾಧ್ಯಾಳ ಜೊತೆ ಐಶ್ವರ್ಯಾ

ಸಂಕಷ್ಟ ಕಾಲದಲ್ಲಿ ಬೋನಿ ಕಪೂರ್ ಅವರನ್ನು ಪ್ರೀತಿಸಿ ಮದುವೆಯಾದ ಶ್ರೀದೇವಿ, ಮಗಳ ಕಣ್ಣಿಗೆ ನಟಿಯಾಗುವ ಕನಸನ್ನು ತುಂಬಿಯೇ ಕಣ್ಮುಚ್ಚಿದ್ದು. ಕಣ್ಣರೆಪ್ಪೆಯಲ್ಲೇ ಮಗಳನ್ನು ಕಾಪಾಡುತ್ತಿದ್ದ ಅವರ ಕುರಿತ ಕಥನಗಳು ಈಗ ಹರಿದಾಡುತ್ತಿವೆ.

ಬಾಲಿವುಡ್ ಅಮ್ಮಂದಿರ ಪರಂಪರೆಯ ಅನುಭವಗಳೂ ಕಾಡದೇ ಇರವು. 16ರ ಪ್ರಾಯದಲ್ಲೇ ಸೂಪರ್ ಸ್ಟಾರ್ ರಾಜೇಶ್ ಖನ್ನಾ ಅವರ ಪ್ರೇಮದ ಅಲೆ ಮೇಲೆ ಕಳೆದುಹೋದ ಡಿಂಪಲ್ ಕಪಾಡಿಯಾ ಅವರ ಹೊಟ್ಟೆಯಲ್ಲಿ ಹುಟ್ಟಿದವರು ಟ್ವಿಂಕಲ್ ಖನ್ನಾ. ಡಿಂಪಲ್ ದಾಂಪತ್ಯ ಯಾತನಾಮಯವಾಗಿತ್ತು. ಹಾಗೆಂದು ಅವರೇ ಹೇಳಿಕೊಂಡಿದ್ದರು. ಮದುವೆಯಾದದ್ದೇ ಸಂತೋಷ ಎನ್ನುವುದು ಮುಗಿದೇಹೋಯಿತೆಂದು ಅಲವತ್ತುಕೊಂಡಿದ್ದರು. ಈಗ ಮಗಳು ಟ್ವಿಂಕಲ್ ಮಕ್ಕಳ ದೇಖರೇಖಿ ಮಾಡುತ್ತಾ ಸಂತೋಷ ಪಡುತ್ತಿದ್ದರೆ, ಅವರ ಪತಿ ಅಕ್ಷಯ್ ಕುಮಾರ್ ಜಾಣ ನಟನಾಗಿ ತಮ್ಮ ಇನಿಂಗ್ಸ್ ಮುಂದುವರಿಸಿದ್ದಾರೆ. ಕಾಜೋಲ್ ಪತಿ ಅಜಯ್ ದೇವಗನ್ ಕೂಡ ನಟನಾಗಿ ಇನ್ನೂ ಬ್ಯುಸಿಯಾಗಿರುವುದು ಪತ್ನಿಯ ಸಹಕಾರದಿಂದಲೇ.

ತೈಮುರ್ ಕಣ್ಣಲ್ಲಿ ಹೊಸ ಕನಸುಗಳ ಕಾಣುತ್ತಿರುವ ಸೈಫ್ ಅಲಿ ಖಾನ್ ಕಿವಿಗೆ ಅವರ ಅಮ್ಮ ಶರ್ಮಿಳಾ ಟ್ಯಾಗೋರ್ ತಮ್ಮ ಪ್ರೇಮದ ದಿನಗಳ ಕಥನವನ್ನು ಹಾಕಿದ್ದರು. ಅವರೂ ಚಿಕ್ಕಪ್ರಾಯದಲ್ಲೇ ಕ್ರಿಕೆಟರ್ ಮನ್ಸೂರ್ ಅಲಿ ಖಾನ್ ಪಟೌಡಿ ಮಾಡಿದ ಪ್ರೇಮಾಭಿಷೇಕದಲ್ಲಿ ತೋಯ್ದಿದ್ದವರೇ.

ಸೈಫ್ ಪತ್ನಿ ಕರೀನಾ ಕಪೂರ್ ಅವರ ಅಮ್ಮ ಬಬಿತಾ ಈ ದಿನಮಾನದ ಮಕ್ಕಳಿಗೆ ಗೊತ್ತಿರಲಿಕ್ಕಿಲ್ಲ. ಅವರೂ ನಟಿಯಾಗಿದ್ದವರೇ. ಮೂವತ್ತಕ್ಕೂ ಮೊದಲೇ ತಾಯಿಯಾಗಿ, ಎರಡು ಮಕ್ಕಳ ಹಡೆದು, ಸಂಸಾರಮುಖಿಯಾದವರು.

ಗಜನಿ ಸಿನಿಮಾದಲ್ಲಿ ಅಮೀರ್ ಖಾನ್ ಗಾಂಭೀರ್ಯಕ್ಕೆ ಸಾಟಿಯಾಗಿ ಅಭಿನಯಿಸಿದ್ದ ಅಸೀನ್ ಈಗ ಹೆಣ್ಣುಮಗುವಿನ ತಾಯಿ. ನಟನೆಯಿಂದ ಅವರು ವಿಮುಖರಾಗಿ ವರ್ಷಗಳೇ ಉರುಳಿಬಿಟ್ಟವು. ಲೀಸಾ ಹೇಡನ್ ಅಮ್ಮನಾಗಿ ಅನುಭವಿಸುತ್ತಿರುವ ಖುಷಿಯನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡರೆ, ಸೆಲೆನಾ ಜೇಟ್ಲಿ ಅವಳಿ ಮಕ್ಕಳ ತಾಯಿಯಾಗಿ ಮೊಗೆದುಕೊಳ್ಳುತ್ತಿರುವ ಆನಂದಗಳನ್ನೆಲ್ಲಾ ಸಾಮಾಜಿಕ ಜಾಲತಾಣಗಳಿಗೆ ಹರಿಬಿಡುತ್ತಿದ್ದಾರೆ.

ಇವೆಲ್ಲಕ್ಕಿಂತ ಮುಖ್ಯವಾಗಿ ಬಾಡಿಗೆ ತಾಯಿಯಿಂದ ಅವಳಿ ಮಕ್ಕಳ ತಂದೆಯಾಗಿರುವ ಕರಣ್ ಜೋಹರ್, ‘ನನ್ನ ಮನಸ್ಸೂ ತಾಯಿಯದ್ದೇ’ ಎಂದು ಹೇಳಿಕೊಂಡಿದ್ದು ವಿಶೇಷ.

ಅಭಿಮಾನಿಗಳ ಎದೆಯಲ್ಲಿ ಕನಸಿನ ಬೀಜ ಬಿತ್ತುವ ನಟಿಯರು ಅಮ್ಮನಾಗಿ ಸವೆಸುವ ಬದುಕು ‘ಏನೆಲ್ಲಾ ಇದ್ದೂ… ಎಷ್ಟೆಲ್ಲ ಪಡಿಪಾಟಲು’ ಎಂಬ ವಾಕ್ಯವನ್ನು ಕೆದಕುತ್ತಿರುವಂತೆ ಭಾಸವಾಗುತ್ತದೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.