ವಿ.ವಿ ಪ್ಯಾಟ್‌ಗೆ ಬಿಸಿಲೇ ಸವಾಲು

7

ವಿ.ವಿ ಪ್ಯಾಟ್‌ಗೆ ಬಿಸಿಲೇ ಸವಾಲು

Published:
Updated:
ವಿ.ವಿ ಪ್ಯಾಟ್‌ಗೆ ಬಿಸಿಲೇ ಸವಾಲು

ಚಿತ್ರದುರ್ಗ: ವಿಧಾನಸಭಾ ಚುನಾವಣೆಗೆ ಶನಿವಾರ ನಡೆಯಲಿರುವ ಮತದಾನದಲ್ಲಿ ಬಳಕೆಯಾಗುತ್ತಿರುವ ಮತ ಖಾತರಿ ಯಂತ್ರಕ್ಕೆ (ವಿ.ವಿ. ಪ್ಯಾಟ್), ರಾಜ್ಯದಲ್ಲಿ ಏರುತ್ತಿರುವ ಬಿಸಿಲು ಸವಾಲಾಗಿದ್ದು, ಸಿಬ್ಬಂದಿಯನ್ನು ಚಿಂತೆಗೀಡು ಮಾಡಿದೆ.

ವಿದ್ಯುನ್ಮಾನ ಮತಯಂತ್ರದ (ಇವಿಎಂ) ಜೊತೆ ವಿ.ವಿ. ಪ್ಯಾಟ್‌ ಯಂತ್ರ ಅಳವಡಿಸಲಾಗಿದೆ. ಸೆನ್ಸರ್‌ನಿಂದ ಕಾರ್ಯ ನಿರ್ವಹಿಸುವ ಈ ಯಂತ್ರವನ್ನು ತಂಪಾದ ಸ್ಥಳದಲ್ಲಿ ಇಡಬೇಕು. ಬಿಸಿಲು ಹೆಚ್ಚಾಗಿರುವ ಪ್ರದೇಶಗಳಲ್ಲಿ ಯಂತ್ರವನ್ನು ಸಂರಕ್ಷಿಸಿಡುವುದು ಹೇಗೆ ಎಂಬ ಪ್ರಶ್ನೆ ಮತಗಟ್ಟೆ ಸಿಬ್ಬಂದಿಯನ್ನು ಕಾಡುತ್ತಿದೆ.

ಇವಿಎಂನಲ್ಲಿ ಮತ ಚಲಾಯಿಸಿದ 7 ಸೆಕೆಂಡ್‌ ಒಳಗೆ, ಮತ ಪಡೆದ ಅಭ್ಯರ್ಥಿಯ ವಿವರ ವಿ.ವಿ. ಪ್ಯಾಟ್ ಯಂತ್ರದ ಗಾಜಿನ ಕಿಂಡಿಯಲ್ಲಿ ಕಾಣಿಸುತ್ತದೆ. ಈ ವಿವರವನ್ನು ಒಳಗೊಂಡ ಚೀಟಿ ಪ್ರತ್ಯೇಕ ಪೆಟ್ಟಿಗೆಯಲ್ಲಿ ಬೀಳುತ್ತದೆ. ಉಷ್ಣಾಂಶ ಹೆಚ್ಚಾದರೆ ಇದು ಕಾರ್ಯ ನಿರ್ವಹಿಸುವುದು ಅನುಮಾನ ಎನ್ನುತ್ತಾರೆ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಬಿಇಎಂಎಲ್‌ ಎಂಜಿನಿಯರ್‌.

‘ಅತಿ ಸೂಕ್ಷ್ಮ ಯಂತ್ರವಾಗಿರುವ ವಿ.ವಿ. ಪ್ಯಾಟ್‌ ಅನ್ನು ಮತಗಟ್ಟೆಯಲ್ಲಿ ಹೆಚ್ಚು ಶಾಖ ಅಥವಾ ಬೆಳಕು ಇರುವ ಜಾಗದಲ್ಲಿ ಇಡಬಾರದು’ ಎಂದು ಮಸ್ಟರಿಂಗ್‌ ಕೇಂದ್ರದಿಂದ ಮತಗಟ್ಟೆಗಳಿಗೆ ಹೊರಟ ಸಿಬ್ಬಂದಿಗೆ ಶುಕ್ರವಾರ ಸೂಚನೆ ನೀಡಲಾಯಿತು.

ಆಂಧ್ರ ಪ್ರದೇಶದ ಗಡಿಯಲ್ಲಿರುವ ಮೊಳಕಾಲ್ಮುರು ಕ್ಷೇತ್ರದಲ್ಲಿ ತಾಪಮಾನ ಹೆಚ್ಚಾಗಿದ್ದು, ಯಂತ್ರವನ್ನು ಸಂರಕ್ಷಣೆ  ಮಾಡಿಕೊಳ್ಳುವುದೇ ಸಿಬ್ಬಂದಿಗೆ ಸವಾಲಾಗಿ ಪರಿಣಮಿಸಿದೆ.

‘ಬೆಳಿಗ್ಗೆ 11ರಿಂದ ಮಧ್ಯಾಹ್ನ 3.30ರ ಅವಧಿಯಲ್ಲಿ ವಿ.ವಿ. ಪ್ಯಾಟ್‌ ಕೈಕೊಡುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಈ ಅವಧಿಯಲ್ಲಿ ಉಷ್ಣಾಂಶ ಹೆಚ್ಚಾಗಿರುವುದೇ ಇದಕ್ಕೆ ಕಾರಣ. 40 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆ ಉಷ್ಣಾಂಶವಿದ್ದರೆ ಮಾತ್ರ ಇದು ಕೆಲಸ ಮಾಡುತ್ತದೆ. ಉತ್ತರ ಪ್ರದೇಶ ಹಾಗೂ ಬಿಹಾರದಲ್ಲಿಯೂ ಇದೇ ಸಮಸ್ಯೆ ಎದುರಾಗಿತ್ತು’ ಎಂದು ಹೆಸರು ಹೇಳಲಿಚ್ಛಿಸದ ಎಂಜಿನಿಯರ್‌ ವಿವರಿಸಿದರು.

ಪ್ರತಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಹೆಚ್ಚುವರಿ ಯಂತ್ರಗಳನ್ನು ಸಂಗ್ರಹಿಸಲಾಗಿದೆ. ಪ್ರತಿ ಕ್ಷೇತ್ರಕ್ಕೆ ಬಿಇಎಂಎಲ್‌ನ ಇಬ್ಬರು ಎಂಜಿನಿಯರ್‌ಗಳನ್ನು ನಿಯೋಜಿಸಲಾಗಿದೆ. ಅವರು ತಾಂತ್ರಿಕ ಸಮಸ್ಯೆ ಕಂಡುಬಂದ ಮತಗಟ್ಟೆಗೆ ಭೇಟಿ ನೀಡಿ ಸಮಸ್ಯೆಗೆ ಪರಿಹಾರ ನೀಡಲಿದ್ದಾರೆ.

‘ವಿ.ವಿ.ಪ್ಯಾಟ್‌ ಹಾಗೂ ಇವಿಎಂ ಕುರಿತು ಮತಗಟ್ಟೆ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ತಾಂತ್ರಿಕ ಸಮಸ್ಯೆ ಕಂಡುಬಂದರೆ ಮತ ಯಂತ್ರ ಬದಲಿಸಲಾಗುತ್ತದೆ. ಪರ್ಯಾಯವಾಗಿ ಹೆಚ್ಚುವರಿ ಯಂತ್ರಗಳನ್ನು ಸಂಗ್ರಹಿಸಿ ಇಟ್ಟುಕೊಳ್ಳಲಾಗಿದೆ’

– ವಿ.ವಿ.ಜ್ಯೋತ್ಸ್ನಾ, ಜಿಲ್ಲಾಧಿಕಾರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry