ಪಿಯು ದಾಖಲಾತಿ ಹೆಚ್ಚಳಕ್ಕೆ ಆಂದೋಲನ

7
ಫೇಸ್‌ಬುಕ್, ವಾಟ್ಸ್‌ಆ್ಯಪ್‌ ಬಳಕೆ ಮಾಡಿಕೊಳ್ಳಲು ಇಲಾಖೆ ಸುತ್ತೋಲೆ

ಪಿಯು ದಾಖಲಾತಿ ಹೆಚ್ಚಳಕ್ಕೆ ಆಂದೋಲನ

Published:
Updated:
ಪಿಯು ದಾಖಲಾತಿ ಹೆಚ್ಚಳಕ್ಕೆ ಆಂದೋಲನ

ಬೆಂಗಳೂರು: ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಿಸಲು ವಿವಿಧ ಕಾರ್ಯಕ್ರಮಗಳ ಮೂಲಕ ಆಂದೋಲನ ಕೈಗೊಳ್ಳುವಂತೆ ಪದವಿಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರಾದ ಸಿ.ಶಿಖಾ ಸುತ್ತೋಲೆ ಹೊರಡಿಸಿದ್ದಾರೆ.‌

ಸುತ್ತೋಲೆ ಮುಖ್ಯಾಂಶ: ಕಾಲೇಜು ಬಿಟ್ಟ ಅಥವಾ ನೂತನವಾಗಿ ದಾಖಲಾದ ವಿದ್ಯಾರ್ಥಿಗಳನ್ನು ಉಪನ್ಯಾಸಕರಿಗೆ ದತ್ತು ನೀಡುವ ಮೂಲಕ ಹಾಜರಾತಿ ಹಾಗೂ ಗುಣಮಟ್ಟದ ಕಲಿಕೆಯನ್ನು ಖಾತ್ರಿಪಡಿಸಬೇಕು.

ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರು ತಮ್ಮ ವ್ಯಾಪ್ತಿಯಡಿಯಲ್ಲಿ ಬರುವ ಪ್ರೌಢಶಾಲೆಗಳಲ್ಲಿ ಉತ್ತೀರ್ಣವಾಗಿರುವ ವಿದ್ಯಾರ್ಥಿಗಳ ಮಾಹಿತಿ ಸಂಗ್ರಹಿಸಿ, ಆ ವಿದ್ಯಾರ್ಥಿಗಳ ಪೋಷಕರನ್ನು ಸಂಪರ್ಕಿಸಿ, ಕಾಲೇಜಿಗೆ ದಾಖಲಾಗುವಂತೆ ಪ್ರೋತ್ಸಾಹಿಸಬೇಕು.

ಕಾಲೇಜಿನಲ್ಲಿರುವ ಸಂಪನ್ಮೂಲ, ಸೌಲಭ್ಯ, ಸರ್ಕಾರದ ಯೋಜನೆ ಇತ್ಯಾದಿಗಳನ್ನು ಬಿಂಬಿಸುವ ಆಕರ್ಷಣೀಯ ಕರಪತ್ರ, ದೂರವಾಣಿ/ವಾಟ್ಸ್‌ಆ್ಯಪ್‌/ಫೇಸ್‌ಬುಕ್‌ ಮೂಲಕ ಆಂದೋಲನ ಕೈಗೊಳ್ಳಬಹುದು. ಈ ಎಲ್ಲಾ ಕಾರ್ಯಗಳಿಗೆ ಪದವಿ ಪೂರ್ವ ಕಾಲೇಜುಗಳ ಸಂಚಿತ ನಿಧಿಯಲ್ಲಿರುವ ಅನುದಾನದಲ್ಲಿ ₹1,000ವರೆಗೆ ನೀಡಲಾಗುತ್ತದೆ.

ಸ್ಥಳೀಯ ಕೇಬಲ್‌ ಟಿ.ವಿ.ಗಳಲ್ಲಿ ಕಾಲೇಜಿನಲ್ಲಿರುವ ಸೌಲಭ್ಯ, ಸಾಧನೆ ಮಾಡಿರುವ ವಿದ್ಯಾರ್ಥಿಗಳ ವಿವರ, ಶೇಕಡಾವಾರು ಫಲಿತಾಂಶ ಬಿತ್ತರಿಸಬಹುದು. ಸಾಧಕರ ಭಾವಚಿತ್ರಗಳನ್ನು ಕಾಲೇಜಿನ ಸೂಚನಾ ಫಲಕಗಳಲ್ಲಿ/ ಫ್ಲೆಕ್ಸ್‌ಗಳಲ್ಲಿ ಬಿತ್ತರಿಸಬಹುದು.

ಉತ್ತಮ ಪ್ರಾಂಶುಪಾಲರನ್ನು ಪ್ರತಿ ತಾಲ್ಲೂಕಿಗೆ ನೋಡಲ್‌ ಅಧಿಕಾರಿಯನ್ನಾಗಿ ನೇಮಿಸಿ ಆಂದೋಲನ ಯಶಸ್ವಿಗೆ ಕ್ರಮ ಕೈಗೊಳ್ಳುವಂತೆ ಉಪನಿರ್ದೇಶಕರಿಗೆ ಸೂಚಿಸಲಾಗಿದೆ.

ಕಳೆದ ಶೈಕ್ಷಣಿಕ ಸಾಲಿನಲ್ಲಿ ಸಾಧನೆ ಮಾಡಿದ ಜಿಲ್ಲಾ ವ್ಯಾಪ್ತಿಯ ಎರಡು ಸರ್ಕಾರಿ ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳ ವಿವರ ಸಂಗ್ರಹಿಸಬೇಕು. ಕ್ರೀಡೆ, ಬರವಣಿಗೆ, ಸಾಹಿತ್ಯ, ಸಮಾಜ ಸೇವೆಗಳಲ್ಲಿ ಸಾಧನೆ ಮಾಡಿದ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳ ವಿವರ ದಾಖಲಿಸಬೇಕು. ಈ ಮಾಹಿತಿಗಳನ್ನು ಇಲಾಖೆ ಕಚೇರಿಯ ಶೈಕ್ಷಣಿಕ ಶಾಖೆಗೆ ಭಾವಚಿತ್ರಗಳ ಸಹಿತ academic.pue@gmail.com ಇಮೇಲ್‌ ಮಾಡಬೇಕು.

ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದ ಪ್ರತಿಭಾವಂತ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಉಚಿತವಾಗಿ ಪಠ್ಯ ಪುಸ್ತಕ ಒದಗಿಸುವ ಪುಸ್ತಕ ನಿಧಿ– ಬುಕ್‌ ಬ್ಯಾಂಕ್‌ ಯೋಜನೆಯನ್ನೂ ಆರಂಭಿಸಲಾಗುವುದು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry