ಸೋಮವಾರ, ಮಾರ್ಚ್ 8, 2021
31 °C

ನೀರ್ಗಲ್ಲು ಪ್ರದೇಶದಲ್ಲಿ ಆಹಾರ ಶೇಖರಣೆಗೆ ‘ಸೈಲೊ’ ಉಪಕರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನೀರ್ಗಲ್ಲು ಪ್ರದೇಶದಲ್ಲಿ ಆಹಾರ ಶೇಖರಣೆಗೆ ‘ಸೈಲೊ’ ಉಪಕರಣ

ಮೈಸೂರು: ಸಿಯಾಚಿನ್‌ನಂತಹ ನೀರ್ಗಲ್ಲು ಪ್ರದೇಶಗಳಲ್ಲಿ ಆಹಾರ ಪದಾರ್ಥಗಳನ್ನು ಸಾಮಾನ್ಯ ವಾತಾವರಣದ ಸ್ಥಿತಿಯಲ್ಲೇ ಶೇಖರಣೆ ಮಾಡಲು ‘ಸೈಲೊ’ ಉಪಕರಣ, ಮಾಂಸದ ಗುಣಮಟ್ಟ ಪರೀಕ್ಷಾ ಕಿಟ್‌ ಹಾಗೂ ನೌಕಾಪಡೆಗಾಗಿ ‘ಹಾಟ್‌ ಪ್ಲೇಟ್‌’ಅನ್ನು ರಕ್ಷಣಾ ಆಹಾರ ಸಂಶೋಧನಾ ಪ್ರಯೋಗಾಲಯ (ಡಿಎಫ್‌ಆರ್‌ಎಲ್‌) ಅಭಿವೃದ್ಧಿಪಡಿಸಿದೆ.

ಹಿರಿಯ ವಿಜ್ಞಾನಿ ದೇವಕುಮಾರ್‌ ಯಾದವ್‌ ‘ಸೈಲೊ’ ಉಪಕರಣವನ್ನು ಆವಿಷ್ಕರಿಸಿದ್ದಾರೆ. ಇದನ್ನು ಕಣಜವೆಂದೂ ಕರೆಯಲಾಗುತ್ತದೆ. ನೆಲದಾಳದಲ್ಲಿ ಇಡಲಾಗುತ್ತದೆ. ಇದರಲ್ಲಿ ಮೂರು ಪ್ರತ್ಯೇಕ ಬಾಕ್ಸ್‌ಗಳಿದ್ದು, ಪ್ರತಿಯೊಂದರಲ್ಲೂ ತಲಾ ಒಂದು ಟನ್‌ ಆಹಾರ ಪದಾರ್ಥ ಶೇಖರಣೆ ಮಾಡಬಹುದು. ಸಾಮಾನ್ಯ ವಾತಾವರಣ ಸೃಷ್ಟಿಸಲು ಅಗತ್ಯವಿರುವ ವಿದ್ಯುತ್‌ ಪೂರೈಸಲು ಸೌರಫಲಕಗಳನ್ನು ಹೊಂದಿರುವ ಪ್ರತ್ಯೇಕ ಘಟಕವಿದೆ. ಇದನ್ನು ಶೇಖರಣಾ ಘಟಕದಿಂದ ಬೇರ್ಪಡಿಸಿ ಬೇರೆಡೆ ಸಹ ಕೊಂಡೊಯ್ಯಲು ಅವಕಾಶವಿದೆ.

–40 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಇರುವ ಕಡೆ ಆಹಾರ ಪದಾರ್ಥಗಳು ಫ್ರೀಜರ್‌ ಆಗಿರುತ್ತವೆ. ಇಂತಹ ಆಹಾರವನ್ನು ನೇರವಾಗಿ ಸೇವಿಸಲು ಸಾಧ್ಯವಾಗುವುದಿಲ್ಲ. ಅವು ಸಾಮಾನ್ಯ ವಾತಾವರಣದಲ್ಲಿ ಇರುವಂತಹ ವ್ಯವಸ್ಥೆಯನ್ನು ಈ ಸಾಧನದಲ್ಲಿ ಅಳವಡಿಸಲಾಗಿದೆ. ಇದನ್ನು ಮೂರು ತಿಂಗಳಲ್ಲಿ ಸೇನೆಗೆ ಹಸ್ತಾಂತರಿಸಲಾಗುತ್ತದೆ ಎಂದು ಡಿಎಫ್‌ಆರ್‌ಎಲ್‌ ತಾಂತ್ರಿಕ ಅಧಿಕಾರಿ ಹರೀಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಭಾರತೀಯ ನೌಕಾಪಡೆಯ ಹಡಗುಗಳಲ್ಲಿ ಅಡುಗೆ ತಯಾರಿಸಲು ಬಳಸುತ್ತಿದ್ದ ವಿದ್ಯುತ್‌ ಉಪಕರಣಗಳಲ್ಲಿ ಕಾಯಿಲ್‌ಗಳು ಬೇಗ ಹಾಳಾಗುತ್ತಿದ್ದವು. ಇದರಿಂದ ನೌಕಾಪಡೆಯ ಸಿಬ್ಬಂದಿಗೆ ತೊಂದರೆ ಉಂಟಾಗುತ್ತಿತ್ತು. ಕಾಯಿಲ್‌ಗಳು ಬೇಗ ಹಾಳಾಗದ ಹಾಗೂ ತ್ವರಿತಗತಿಯಲ್ಲಿ ಆಹಾರ ತಯಾರಿಸಲು ಅನುಕೂಲವಾಗುವ ಉಪಕರಣವನ್ನು ತಯಾರಿಸುವಂತೆ ಡಿಎಫ್‌ಆರ್‌ಎಲ್‌ಗೆ ಮನವಿ ಮಾಡಲಾಗಿತ್ತು. ಅದಕ್ಕೂ ಈಗ ಸಂಸ್ಥೆ ಪರಿಹಾರ ರೂಪಿಸಿದೆ.

ಡಿಎಫ್‌ಆರ್‌ಎಲ್‌ ಹಿರಿಯ ವಿಜ್ಞಾನಿ ಡಾ.ಎ.ರಾಮಕೃಷ್ಣ ಅವರು ‘ಹಾಟ್‌ ಪ್ಲೇಟ್‌’ ಎಂಬ ಉಪಕರಣವನ್ನು ಕಂಡುಹಿಡಿದಿದ್ದಾರೆ. ಇದಕ್ಕೆ ಶಾಖವನ್ನು 40ರಿಂದ 280 ಡಿಗ್ರಿ ಸೆಲ್ಸಿಯಸ್‌ವರೆಗೂ ನೀಡಬಹುದು. ಇದರಲ್ಲಿ ದೋಸೆ ಮಾಡಬಹುದು. ನೀರು ಕಾಯಿಸಿಕೊಳ್ಳಬಹುದು. ತವಾ ಕೆಳಗೆ ಆಹಾರ ಪದಾರ್ಥಗಳನ್ನು ಬಿಸಿ ಮಾಡಿಕೊಳ್ಳಲು ಮೈಕ್ರೋವೇವ್ ಓವನ್‌ ರೀತಿಯ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಉಪಕರಣಕ್ಕೆ ನೀರು ಬಿದ್ದರೂ ಯಾವುದೇ ತೊಂದರೆ ಆಗುವುದಿಲ್ಲ.

ಬಾದಾಮಿ, ಗೋಡಂಬಿ, ಒಣದ್ರಾಕ್ಷಿ, ಕರ್ಜೂರದಿಂದ ‘ನಟ್‌ಬಾರ್‌’ಗಳನ್ನು ತಯಾರಿಸಲಾಗಿದ್ದು, ಶೀತ ಪ್ರದೇಶದಲ್ಲೂ ಹಾಗೆಯೇ ಸೇವಿಸುವ ಸಾಮರ್ಥ್ಯ ಹೊಂದಿರುವುದು ಇದರ ವಿಶೇಷ.

ಮಾಂಸ ಪರೀಕ್ಷಿಸಲು ಕಿಟ್‌ ಆವಿಷ್ಕಾರ

ಸೈನಿಕರಿಗೆ ಮಾಂಸ ಪೂರೈಕೆ ಮಾಡುವ ಸಂದರ್ಭದಲ್ಲಿ ಅದು ಹಾಳಾಗಿರುವ ಸಾಧ್ಯತೆ ಇರುತ್ತದೆ. ತಂಪನೆಯ ವಾತಾವರಣದಲ್ಲಿ ಮಾಂಸ ಹಾಳಾಗಿದೆಯೇ ಎಂಬುದನ್ನು ಪತ್ತೆ ಮಾಡುವುದು ಸಾಧ್ಯವಾಗುವುದಿಲ್ಲ. ಅದಕ್ಕಾಗಿ ‘ಮಾಂಸದ ಗುಣಮಟ್ಟ ಪರೀಕ್ಷಾ ಕಿಟ್‌’ಅನ್ನು ಡಾ.ಎಂ.ಸಿ.ಪಾಂಡೆ ಆವಿಷ್ಕರಿಸಿದ್ದಾರೆ. ಇದರ ಬೆಲೆ ₹900.

ಮಾಂಸದ ಮಾದರಿಯನ್ನು ಬಾಟಲಿಗೆ ಹಾಕಿ, 5 ಮಿ.ಲೀ ನೀರು ಹಾಕಬೇಕು. ಕಿಟ್‌ನಲ್ಲಿರುವ ‘ಸ್ಟ್ರಿಪ್’ಅನ್ನು ಬಾಟಲಿಗೆ ಹಾಕಿದ ತಕ್ಷಣ ಅದರ ಬಣ್ಣ ನೀಲಿ ಇದ್ದರೆ ಮಾಂಸ ಚೆನ್ನಾಗಿದೆ ಎಂದರ್ಥ. ಸ್ಟ್ರಿಪ್‌ನ ಬಣ್ಣ ಕೆಂಪು ಅಥವಾ ಪಿಂಕ್‌ ಆದರೆ ಮಾಂಸ ಕೆಟ್ಟಿದೆ ಎಂದರ್ಥ.

ಇದನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಕೊಂಡೊಯ್ಯುವುದು ಸುಲಭ. ಸೇನೆಯಲ್ಲದೆ, ಸಾಮಾನ್ಯರೂ ಈ ಸಾಧನ ಬಳಸಿ ಮಾಂಸದ ಗುಣಮಟ್ಟ ಪರೀಕ್ಷೆ ಮಾಡಬಹುದು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.