ಭಾನುವಾರ, ಮಾರ್ಚ್ 7, 2021
19 °C

ಬಸ್‌ ಟಾಪ್‌ ಮೇಲೆ ಕುಳಿತು ಪ್ರಯಾಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಸ್‌ ಟಾಪ್‌ ಮೇಲೆ ಕುಳಿತು ಪ್ರಯಾಣ

ಬೆಂಗಳೂರು: ಮತದಾನಕ್ಕೆ ಜನರು ಉತ್ಸಾಹ ತೋರಿದರೂ ನಗರದಿಂದ ಗ್ರಾಮೀಣ ಪ್ರದೇಶಕ್ಕೆ ಹೋಗಲು ಸರಿಯಾದ ಬಸ್‌ ಸೌಕರ್ಯಗಳು ಇರಲಿಲ್ಲ.

ಚುನಾವಣಾ ಕಾರ್ಯಕ್ಕಾಗಿ ಬಿಎಂಟಿಸಿಯ 1493 ಬಸ್‌ಗಳನ್ನು ಬಳಸಲಾಗಿದೆ. ಇದರಿಂದಾಗಿ ನಗರದಲ್ಲಿ ಬಸ್‌ ಸೇವೆಯಲ್ಲಿ ವ್ಯತ್ಯಯ ಕಂಡುಬಂತು. ಮತದಾನ ಮಾಡುವ ಆಸೆಯಿಂದ ಮತದಾರರು ಸಿಕ್ಕ ಸಿಕ್ಕ ವಾಹನಗಳನ್ನು ನಿಲ್ಲಿಸಿ ಊರಿಗೆ ಹೋಗುತ್ತಿರುವ ದೃಶ್ಯ ಬೆಂಗಳೂರು–ಪುಣೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಮಾನ್ಯವಾಗಿತ್ತು. ಖಾಸಗಿ ಬಸ್‌ಗಳ ಸಂಚಾರವೂ ಬೆರಳೆಣಿಕೆಯಷ್ಟಿತ್ತು.

ಹೊಸಕೋಟೆ ಬಸ್‌ ನಿಲ್ದಾಣಕ್ಕೆ ಬರುತ್ತಿದ್ದ ಖಾಸಗಿ ಬಸ್‌ಗಳ ಟಾಪ್‌ ಮೇಲೆ ಕುಳಿತು ಜನ ಊರುಗಳಿಗೆ ಪ್ರಯಾಣ ಬೆಳೆಸಿದರು. ನೆಲಮಂಗಲ, ದಾಬಸಪೇಟೆ, ತುಮಕೂರಿಗೆ ಹೋಗುವ ನೂರಾರು ಪ್ರಯಾಣಿಕರು ನವರಂಗ, ಯಶವಂತಪುರ, ಗೊರಗುಂಟೆಪಾಳ್ಯ, ಪೀಣ್ಯ, ದಾಸರಹಳ್ಳಿ, ಜಾಲಹಳ್ಳಿ ಕ್ರಾಸ್‌, 8ನೇ ಮೈಲಿ ಬಸ್‌ ನಿಲ್ದಾಣಗಳಲ್ಲಿ  ನಿಂತಿದ್ದರು. ಹಾಸನ, ಶಿವಮೊಗ್ಗ, ಮೈಸೂರು, ರಾಮನಗರ ಸೇರಿದಂತೆ ಹೊರ ಜಿಲ್ಲೆಗಳಿಗೆ ಹೋಗುವ ಪ್ರಯಾಣಿಕರೂ ತೊಂದರೆ ಅನುಭವಿಸಿದರು.

‘ಮತದಾನ ಮಾಡಲು ಸೋಲದೇವನಹಳ್ಳಿಗೆ ಹೋಗಬೇಕು. ಬೆಳಿಗ್ಗೆ 10 ಗಂಟೆ ಬಂದು ಬಸ್‌ಗಾಗಿ ಕಾಯುತ್ತಿದ್ದೇನೆ. ಆದರೆ, ಗಂಟೆಗೊಮ್ಮೆ ಬಸ್‌ಗಳು ಬರುತ್ತಿವೆ. ಅದೂ ಪ್ರಯಾಣಿಕರಿಂದ ತುಂಬಿರುತ್ತಿವೆ’ ಎಂದು ಜಾಲಹಳ್ಳಿ ಕ್ರಾಸ್‌ ಬಸ್‌ ನಿಲ್ದಾಣದಲ್ಲಿದ್ದ ಮಂಜೇಶ್‌ ಬೇಸರ ವ್ಯಕ್ತಪಡಿಸಿದರು.

ಶಿವಾಜಿ ನಗರ, ಶಾಂತಿನಗರ, ಚೌಡೇಶ್ವರಿ, ಯಶವಂತಪುರ ಮತ್ತೀಕೆರೆ ಸೇರಿದಂತೆ ನಗರದ ವಿವಿಧ ಬಸ್‌ ನಿಲ್ದಾಣಗಳಲ್ಲಿ ನೂರಾರು ಪ್ರಯಾಣಿಕರು ಬಸ್‌ಗಾಗಿ ಕಾಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಸಂಚಾರ ವಿರಳ: ಮತದಾರರು ಹಕ್ಕು ಚಲಾಯಿಸಿದ ಬಳಿಕ ತಮ್ಮ ಕುಟುಂಬದೊಂದಿಗೆ ವಾರಾಂತ್ಯ ಕಳೆಯಲು ನಗರಕ್ಕೆ ಸಮೀಪದಲ್ಲಿರುವ ಪ್ರವಾಸಿ ಸ್ಥಳಕ್ಕೆ ಹೋಗಿದ್ದರಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಜನ, ವಾಹನ ಸಂಚಾರ ವಿರಳವಾಗಿತ್ತು.

ಬಹುತೇಕರು ತಮ್ಮ ಕುಟುಂಬಗಳೊಂದಿಗೆ ಮೈಸೂರು, ಕೊಡಗಿನತ್ತ ತೆರಳಿದ್ದರಿಂದ ಬೆಂಗಳೂರಿನಿಂದ ಬಿಡದಿಯ ವರೆಗೆ ಸಂಚಾರ ದಟ್ಟಣೆ ಕಂಡುಬಂತು. ಸಂಚಾರ ಪೊಲೀಸ್‌ ಸಿಬ್ಬಂದಿ ಚುನಾವಣೆ ಕಾರ್ಯಕ್ಕೆ ತೆರಳಿದ್ದರಿಂದ ಸಮಸ್ಯೆಗೆ ಸ್ಪಂದಿಸುವವರು ಯಾರೂ ಇರಲಿಲ್ಲ.

‘ಬೆಳಿಗ್ಗೆ 7 ಗಂಟೆಗೆ ಮತ ಚಲಾಯಿಸಿ ವಾರಾಂತ್ಯ ಕಳೆಯಲು ಕುಟುಂಬದೊಂದಿಗೆ ಚಿಕ್ಕಮಗಳೂರಿಗೆ ಹೊರಟಿದ್ದೇನೆ. ಮತದಾನ ಮಾಡುವುದು ನಮ್ಮ ಹಕ್ಕು’ ಎಂದು ಸುರೇಶ್‌ ಹೇಳಿದರು.

ದರ ದುಪ್ಪಟ್ಟು?

ನಗರದಲ್ಲಿ ಬೆರಳೆಣಿಕೆಯಷ್ಟು ಸಂಖ್ಯೆಯಲ್ಲಿ ಸಂಚರಿಸುತ್ತಿದ್ದ ಬಿಎಂಟಿಸಿ ಬಸ್‌ಗಳಲ್ಲಿ ದುಪ್ಪಟ್ಟ ಟಿಕೆಟ್ ದರ ವಸೂಲು ಮಾಡಲಾಗಿದೆ ಎಂದು ಪ್ರಯಾಣಿಕರು ದೂರಿದ್ದಾರೆ.

ಮೆಜೆಸ್ಟಿಕ್‌ನಿಂದ ಟೋಲ್‌‌ಗೇಟ್‌ಗೆ ಟಿಕೆಟ್‌ ದರ ₹10 ಇದೆ. ಆದರೆ, ಬಸ್‌ಗಳ ನಿರ್ವಾಹಕರು ₹20 ಸಂಗ್ರಹಿಸಿದ್ದಾರೆ. ಚುನಾವಣೆ ನೆಪದಲ್ಲಿ ಬಿಎಂಟಿಸಿ ಪ್ರಯಾಣಿಕರನ್ನು ಸುಲಿಗೆ ಮಾಡುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.