ಕಾಫಿನಾಡಿನಲ್ಲಿ ಶಾಂತಿಯುತ ಮತದಾನ

7
ಮತಯಂತ್ರಗಳಲ್ಲಿ ಅಡಗಿದ 60 ಅಭ್ಯರ್ಥಿಗಳ ರಾಜಕೀಯ ಭವಿಷ್ಯ

ಕಾಫಿನಾಡಿನಲ್ಲಿ ಶಾಂತಿಯುತ ಮತದಾನ

Published:
Updated:

ಚಿಕ್ಕಮಗಳೂರು: ಕೆಲವೆಡೆ ಮತಯಂತ್ರ ಸಮಸ್ಯೆಯಿಂದಾಗಿ ಮತದಾನಕ್ಕೆ ಅಡಚಣೆ, ವಿಳಂಬ, ಸಣ್ಣಪುಟ್ಟ ಸಮಸ್ಯೆ ಬಿಟ್ಟರೆ ಜಿಲ್ಲೆಯ ಐದೂ ಕ್ಷೇತ್ರಗಳಲ್ಲಿ ಶಾಂತಿಯುತವಾಗಿ ಮತ್ತು ವ್ಯವಸ್ಥಿತವಾಗಿ ಮತದಾನ ನಡೆದಿದೆ. ಐದೂ ಕ್ಷೇತ್ರಗಳ 60 ಅಭ್ಯರ್ಥಿಗಳ ಚುನಾವಣಾ ಭವಿಷ್ಯ ಈಗ ಮತಯಂತ್ರದಲ್ಲಿ ಅಡಗಿದೆ.

ಬೆಳಿಗ್ಗೆ 7 ಗಂಟೆಯಿಂದ ಮತದಾನ ಪ್ರಕ್ರಿಯೆ ಆರಂಭವಾಗಿತ್ತು. ಮತಗಟ್ಟೆಗಳಲ್ಲಿ ಮತದಾರರ ಸಂಖ್ಯೆ ಬೆಳಿಗ್ಗೆ ಕಡಿಮೆ ಇತ್ತು. ಮಧ್ಯಾಹ್ನದ ಹೊತ್ತಿಗೆ ಬಿರುಸುಗೊಂಡಿತು. ಮಧ್ಯಾಹ್ನ ಮತ್ತು ಸಂಜೆ ಮತಕೇಂದ್ರಗಳಲ್ಲಿ ಮತದಾರರ ಸಾಲು ಹೆಚ್ಚು ಇತ್ತು. ಕೂಲಿ ಕಾರ್ಮಿಕರು, ಇತರ ಕೆಲಸಗಳಿಗೆ ಹೋಗುವವರು ಬೆಳಿಗ್ಗೆಯೇ ಹಕ್ಕು ಚಲಾಯಿಸಿ ಕೆಲಸಗಳತ್ತ ಮುಖ ಮಾಡಿದರು. ಮತ್ತೆ ಕೆಲವರು ಕೆಲಸ ಮುಗಿಸಿ ಕೊಂಡು ಬಂದು ಸಂಜೆ ಮತ ಚಲಾಯಿಸಿದರು.

ಜಿಲ್ಲೆಯ 20 ಕಡೆಗಳಲ್ಲಿ ಸಖಿ ಮತಗಟ್ಟೆಗಳನ್ನು ತೆರಯಲಾಗಿತ್ತು. ಈ ಕೇಂದ್ರಗಳಿಗೆ ಮಹಿಳಾ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಅವರು ಬಸವನಹಳ್ಳಿಯ ಸರ್ಕಾರಿ ಶಾಲೆಯ ಮತಗಟ್ಟೆ ಸಂಖ್ಯೆ 188ರಲ್ಲಿ ಮತಚಲಾಯಿಸಿದರು. ಕಾಂಗ್ರೆಸ್‌ ಅಭ್ಯರ್ಥಿ ಬಿ.ಎಲ್‌.ಶಂಕರ್‌ ಅವರು ಮೂಡಿಗೆರೆ ಕ್ಷೇತ್ರ ವ್ಯಾಪ್ತಿ ಬಣಕಲ್‌ನ ಮತಗಟ್ಟೆಯಲ್ಲಿ ಹಕ್ಕು ಚಲಾಯಿಸಿದರು. ಇನ್ನು ಜೆಡಿಎಸ್‌ನ ಹರೀಶ್‌ ಅವರು ಉದ್ದೇಬೋರನಹಳ್ಳಿ ಸರ್ಕಾರಿ ಶಾಲೆ ಮತಗಟ್ಟೆಯಲ್ಲಿ ಮತಚಲಾಯಿಸಿದರು. ಈ ಕ್ಷೇತ್ರದಲ್ಲಿ ಒಟ್ಟು 18 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಮತ ಕೇಂದ್ರಗಳಿಂದ ಅನತಿ ದೂರದಲ್ಲಿ ಅಭ್ಯರ್ಥಿಗಳ ಬೆಂಬಲಿಗರು, ಪಕ್ಷಗಳ ಕಾರ್ಯಕರ್ತರು ಕುರ್ಚಿ, ಮೇಜುಗಳನ್ನು ಹಾಕಿಕೊಂಡು ಮತದಾರರಿಗೆ ಮತಪಟ್ಟಿಯಲ್ಲಿ ಗುರುತಿನಚೀಟಿ ನೋಂದಣಿ, ಸಂಖ್ಯೆ, ಭಾಗ ಇತರ ಮಾಹಿತಿ ಒದಗಿಸಿದರು. ಗ್ರಾಮ, ಪಟ್ಟಣ, ನಗರ ಎಲ್ಲ ಕಡೆ ಮತಗಟ್ಟೆಗಳಿಂದ ಅನತಿ ದೂರದಲ್ಲಿ, ಅರಳಿ ಕಟ್ಟೆಗಳು, ಅಂಗಡಿಗಳ ಬಳಿ ಜನ ಸಂದಣಿ ಹೆಚ್ಚು ಇತ್ತು. ಇನ್ನು ಎಲ್ಲೆಲ್ಲಿಯೂ ಅಭ್ಯರ್ಥಿಗಳ ತುರುಸಿನ ಪೈಪೋಟಿಯ ಮಾತುಕತೆ ಇತ್ತು. ಮತಗಟ್ಟೆಗಳಲ್ಲಿ ಮಹಿಳಾ ಮತದಾರರು ಮಧ್ಯಾಹ್ನ ಹೆಚ್ಚು ಇದ್ದರು. ಗರ್ಭಿಣಿಯರು, ಬಾಣಂತಿಯರು, ವೃದ್ಧೆಯರು ಎಲ್ಲರೂ ಉತ್ಸಾಹದಿಂದ ಮತ ಚಲಾಯಿಸಿದರು.

ಬೆಟ್ಟಿಂಗ್‌: ಇಂಥವರೇ ಗೆಲ್ಲುತ್ತಾರೆ ಎಂದು ಬಾಜಿ ಕಟ್ಟುವುದರಲ್ಲಿ ತೊಡಗಿದ್ದಾರೆ. ನಮ್ಮ ಅಭ್ಯರ್ಥಿ ಗೆದ್ದೇ ಗೆಲ್ಲುತ್ತಾರೆ ಎಂದು ಬಾಜಿ ಕಟ್ಟಿದ್ದೇನೆ ಎಂದು ಕಳಾಸಪುರದ ಗ್ರಾಮಸ್ಥರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಬೆಳವಾಡಿ ಮತಗಟ್ಟೆಯಲ್ಲಿ ಹೊಸ ಮತದಾರಿಣಿ ಬಿ.ಕಾಂ ವಿದ್ಯಾರ್ಥಿನಿ ಬಿ.ಬಿ.ಪ್ರೇಮಾ ಮೊದಲ ಬಾರಿಗೆ ಮತದಾನ ಮಾಡಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಪ್ರೇಮಾ ‘ಮತದಾನದ ಮಹತ್ವದ ಬಗ್ಗೆ ಕಾಲೇಜಿನಲ್ಲಿ ಅರಿವು ಮೂಡಿಸಿದ್ದಾರೆ. ಮೊದಲ ಬಾರಿ ಮತದಾನ ಖುಷಿ ತಂದಿದೆ. ಆಯ್ಕೆಯಾದವರು ನಮ್ಮ ಊರಿಗೆ ಒಂದು ಪಿಯು ಕಾಲೇಜು ಸ್ಥಾಪಿಸಬೇಕು ಎಂಬುದು ನಮ್ಮ ಬೇಡಿಕೆ’ ಎಂದರು.

ಬೆಳವಾಡಿಯಲ್ಲಿ ಪಂಚಾಯಿತಿ ವತಿಯಿಂದ ಚುನಾವಣೆ ಸಿಬ್ಬಂದಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಶಾಲೆಯ ಬಿಸಿಯೂಟದ ನೌಕರರು ತಿಂಡಿ, ಊಟ ತಯಾರಿಸಿದ್ದರು.

ಬಿಸಿಯೂಟ ತಯಾರಕಿ ಪಾರ್ವತಮ್ಮ ಮಾತನಾಡಿ, ಬೆಳಿಗ್ಗೆ ಉಪಾಹಾರಕ್ಕೆ ಚಿತ್ರಾನ್ನ ಮಾಡಿದ್ದೆವು. ಮಧ್ಯಾಹ್ನಕ್ಕೆ ಬೇಳೆಸಾರು, ಅನ್ನ ಮಾಡಿದ್ದೇವೆ. ಪಂಚಾಯಿತಿಯವರು ಅಕ್ಕಿ, ಬೇಳೆ ಎಲ್ಲ ಒದಗಿಸಿದ್ದಾರೆ’ ಎಂದರು. ಸಿಂಧಿಗೆರೆಯಲ್ಲಿ ಮತಗಟ್ಟೆಗಳಲ್ಲಿ ಉದ್ದುದ್ದ ಸರತಿ ಸಾಲು ಇತ್ತು. ಮೂರು ಮತಗಟ್ಟೆಗಳ ಬಳಿಯೂ ಮತದಾರರ ಸಂದಣಿ ಹೆಚ್ಚು ಇತ್ತು.

‘ಉದ್ಯೋಗ ಅರಸಿ ವಲಸೆ ಹೋಗಿರುವವರು ಬಂದು ಮತ ಚಲಾಯಿಸಿದ್ದಾರೆ. ಕಾಫಿ ತೋಟಗಳಿಗೆ ಕೆಲಸಕ್ಕೆ ಹೋಗುವವರು ಬೆಳಿಗ್ಗೆಯೇ ವೋಟು ಹಾಕಿ ಕೂಲಿಗೆ ಹೋದರು’ ಎಂದು ಸಿಂಧಿಗೆರೆ ಗ್ರಾಮಸ್ಥ ನವರಾಜ್‌ ಹೇಳಿದರು.

ಪಿಳ್ಳೇನಹಳ್ಳಿಯಲ್ಲಿ ಮತಕೇಂದ್ರಗಳ ಬಳಿ ಮಧ್ಯಾಹ್ನ 2 ಗಂಟೆ ಹೊತ್ತಿಗೆ ಸರದಿ ಸಾಲು ಕಡಿಮೆಯಾಗಿತ್ತು. ಜನರು ಉತ್ಸಾಹದಿಂದ ಹಕ್ಕು ಚಲಾಯಿಸುವುದರಲ್ಲಿ ಪಾಲ್ಗೊಂಡಿದ್ದರು.

‘ಸಾವಿರ ಅಡಿ ಆಳದ ಕೊಳವೆ ಬಾವಿ ಕೊರೆಸಿದರೂ ನೀರು ಬರುತ್ತಿಲ್ಲ. ನೀರಿಲ್ಲದೆ ಅಡಿಕೆ, ತೆಂಗಿನ ತೋಟಗಳು ಒಣಗಿವೆ. ಈ ಭಾಗಕ್ಕೆ ನೀರಾವರಿ ಬಹಳ ಅಗತ್ಯ ಇದೆ’ ಎಂದು ಗ್ರಾಮಸ್ಥ ಚಂದ್ರಪ್ಪ ಹೇಳಿದರು.

ವೃದ್ಧರು, ಅಶಕ್ತರು, ರೋಗಿಗಳು, ಗರ್ಭಿಣಿಯರು, ಬಾಣಂತಿಯರು, ಅಂಗವಿಕಲರಿಗೆ ಮತದಾನ ಕೇಂದ್ರಕ್ಕೆ ತೆರಳಲು ಕುಟುಂಬದವರು, ಊರಿನನವರು ನೆರವಾದರು. ಎಲ್ಲ ಕಡೆ ಮತಗಟ್ಟೆಗಳ ಬಳಿ ಬಿಗಿ ಭದ್ರತೆ ನಿಯೋಜಿಸಲಾಗಿತ್ತು. ಕೆಲವು ಕಡೆ ಗಾಲಿ ಕುರ್ಚಿ ವ್ಯವಸ್ಥೆ ಇಲ್ಲ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡರು.

ರೈತರಿಗೆ ಹರ್ಷ ತಂದ ಮಳೆ

ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಳಾಸಪುರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಾಲ್ಕು ದಿನಗಳಿಂದ ಹದ ಮಳೆಯಾಗಿದ್ದು ರೈತರಲ್ಲಿ ಹರ್ಷ ಮೂಡಿಸಿದೆ. ಮಳೆಯಿಂದ ಕೆರೆಕಟ್ಟೆ, ಹೊಂಡಗಳಿಗೆ ತುಸು ನೀರಾಗಿದೆ.

ಕಳಸಾಪುರದ ಕೃಷಿಕ ಚಂದ್ರಶೇಖರ್‌ ಸುದ್ದಿಗಾರೊಂದಿಗೆ, ‘ಕೆಲ ವರ್ಷಗಳಿಂದ ಮಳೆಯಿಲ್ಲದೆ ಕೆರೆಕಟ್ಟೆಗಳು ಒಣಗಿದ್ದವು, ಈಗ ಮಳೆಯಾಗಿರುವುದು ಖುಷಿ ತಂದಿದೆ. ಗ್ರಾಮದ ಹಿರೆಕೆರೆಗೆ ಸ್ವಲ್ಪ ನೀರು ಬಂದಿದೆ. ಜಮೀನು ಹದ ಮಾಡಿಕೊಂಡಿದ್ದೇವೆ. ತರಕಾರಿ, ಜೋಳ, ಹತ್ತಿ. ಶೇಂಗಾ ಮೊದಲಾದ ಬೆಳೆಗಳನ್ನು ಬೆಳೆಯುತ್ತೇವೆ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry