ಗುರುವಾರ , ಫೆಬ್ರವರಿ 25, 2021
30 °C

ಕರ್ನಾಟಕದ ಒಲವುಗಳು: ಮತ ಆಯ್ಕೆಯ ಹಿಂದಿನ ಕಾರಣಗಳು

ನಿಖಿಲ್‌ ಕನೇಕಲ್‌ Updated:

ಅಕ್ಷರ ಗಾತ್ರ : | |

ಕರ್ನಾಟಕದ ಒಲವುಗಳು: ಮತ ಆಯ್ಕೆಯ ಹಿಂದಿನ ಕಾರಣಗಳು

ಆರು ದಿನಗಳ ಕಾಲ ರಾಜ್ಯದ ಆರು ಜಿಲ್ಲೆಗಳಲ್ಲಿ 1,200 ಕಿಲೋಮೀಟರ್‌ ಪಯಣದ ಬಳಿಕ 2018ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಯಾರು ಎಷ್ಟು ಸ್ಥಾನಗಳನ್ನು ಗೆಲ್ಲುತ್ತಾರೆ ಎಂಬ ಅಂದಾಜು ಮಾಡಲು ನಾನು ಹೋಗುವುದಿಲ್ಲ. ರಾಜ್ಯದಾದ್ಯಂತ ವಿವಿಧ ಪ್ರವೃತ್ತಿಗಳು ಹಾಗೂ ವರ್ತನೆಗಳನ್ನು ಗಮನಿಸಿದ್ದೇನೆ. ಕಂಡದ್ದರ ಸಾರಾಂಶ ಇಲ್ಲಿದೆ:

1. ‘ಕಳೆದ ಐದು ವರ್ಷಗಳಲ್ಲಿ ತುಂಬಾಕೆಲಸ ಆಗಿದೆ’– ನಾನು ಪ್ರಯಾಣಿಸಿದ ಹಾಸನ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಈ ಮಾತು ದೃಢವಾಗಿ ಕೇಳಿಸಿದೆ. ಸ್ಥಳೀಯ ಮೂಲಸೌಕರ್ಯ, ಆರ್ಥಿಕ ಅಭಿವೃದ್ಧಿ, ಆಹಾರ ಭದ್ರತೆ ಮುಂತಾದ ಕ್ಷೇತ್ರಗಳಲ್ಲಿ ಈ ಸರ್ಕಾರ ಉತ್ತಮ ಕೆಲಸ ಮಾಡಿದೆ ಎಂದು ‍ಜನರು ಹೇಳಿದ್ದಾರೆ. ಇದನ್ನು ಹೇಳಲು ಜನರಿಗೆ ಅವರ ರಾಜಕೀಯ ಒಲವು ನಿಲುವುಗಳೂ ಅಡ್ಡಿಯಾಗಿಲ್ಲ. ರಾಜ್ಯದಾದ್ಯಂತ ಕಣ್ಣಿಗೆ ಕಾಣುವ ರೀತಿಯಲ್ಲಿ ಆಡಳಿತವಿರೋಧಿ ಅಲೆ ಇಲ್ಲದಿರಲು ಬಹುಶಃ ಇದುವೇ ಕಾರಣ. ಇತರ ರಾಜ್ಯಗಳಿಗೆ ಹೋಲಿಸಿದರೆ ರಾಜಕೀಯವಾಗಿ ಹೆಚ್ಚು ಜಾಗೃತಿ ಇರುವ ರಾಜ್ಯ ಎಂಬ ಖ್ಯಾತಿ ಕರ್ನಾಟಕಕ್ಕೆ ಇದೆ. ಹಾಗಾಗಿಯೇ ಅಧಿಕಾರದಲ್ಲಿ ಇರುವ ಸರ್ಕಾರಕ್ಕೆ ಮತ್ತೊಂದು ಅವಧಿ ಕೊಡಿ ಎಂದು ಜನರ ಮನವೊಲಿಸುವುದು ಸುಲಭದ ಕೆಲಸವಲ್ಲ.

2. ‘ನಮ್ಮ ಬ್ಯಾಂಕ್‌ ಖಾತೆಯಲ್ಲಿ ₹15 ಲಕ್ಷ’– ವಿದೇಶಗಳಲ್ಲಿ ಇರಿಸಲಾಗಿರುವ ಭಾರಿ ಪ್ರಮಾಣದ ಕಪ್ಪುಹಣವನ್ನು ವಾಪಸ್ ತಂದು ಪ್ರತಿ ಭಾರತೀಯನ ಬ್ಯಾಂಕ್‌ ಖಾತೆಗೆ ₹15 ಲಕ್ಷ ಜಮೆ ಮಾಡುವುದಾಗಿ 2014ರ ಲೋಕಸಭೆ ಚುನಾವಣಾ ಪ್ರಚಾರ ಸಂದರ್ಭದಲ್ಲಿ ನರೇಂದ್ರ ಮೋದಿ ಅವರು ನೀಡಿದ್ದ ಭರವಸೆ ಜನರ ಗಮನ ಸೆಳೆದಿತ್ತು. ಇದು ನಂಬಲಾಗದ ಭರವಸೆಯಾಗಿದ್ದರೂ, ಅದು ಈಡೇರಿಲ್ಲ ಎಂಬ ಬಗ್ಗೆ ಕೆಲವು ಜನರಿಗೆ ಮೋದಿ ಅವರ ಬಗ್ಗೆ ಅತೃಪ್ತಿ ಇದೆ. ಅವರ ರಾಜಕೀಯ ವಿಶ್ವಾಸಾರ್ಹತೆಗೆ ಸ್ವಲ್ಪ ಮಟ್ಟಿಗೆ ಇದು ಹಾನಿ ಮಾಡಿದೆ. ಹಾಗಾಗಿ, ಇದರಷ್ಟು ಅವಾಸ್ತವಿಕ ಅಲ್ಲದ ಭರವಸೆಗಳನ್ನೂ ಜನರು ಅನುಮಾನದಿಂದಲೇ ನೋಡುತ್ತಿದ್ದಾರೆ.

3. ‘ಮೋದಿ, ಮೋದಿ’– ಪ್ರಧಾನಿ ಮೋದಿ ಅವರ ವರ್ಚಸ್ಸು ಪ್ರಬಲವಾಗಿಯೇ ಇದೆ. ಬಿಜೆಪಿಯ ತಾರಾ ಪ್ರಚಾರಕನಾಗಿ ಮೋದಿ ಅವರ ವೈಯಕ್ತಿಕ ಜನಪ್ರಿಯತೆ ಕರ್ನಾಟಕದ ಮತದಾರರಲ್ಲಿಯೂ ಪ್ರತಿಧ್ವನಿಸಿದಂತೆ ಕಾಣಿಸುತ್ತದೆ. ಎರಡು ಪ್ರಸಂಗಗಳ ಮೂಲಕ ಒಂದು ಚಿತ್ರಣವನ್ನು ಕ‌ಟ್ಟಿಕೊಡಲು ಯತ್ನಿಸುತ್ತೇನೆ. ಮೊದಲನೆಯದಾಗಿ, ಸುಮಾರು 30 ಸಾವಿರ  ಜನರು ಭಾಗವಹಿಸಿದ್ದ, ಮೋದಿ ಅವರು ಚಿಕ್ಕಮಗಳೂರಿನಲ್ಲಿ ನಡೆಸಿದ್ದ ರ‍್ಯಾಲಿ ರಾಕ್‌ ಕಾರ್ಯಕ್ರಮದ ವೈಶಿಷ್ಟ್ಯ ಹೊಂದಿತ್ತು. ಪ್ರಧಾನಿ ಬಂದರು, ಜನರಲ್ಲಿ ಉನ್ಮಾದ ಮೂಡಿಸಿದರು ಮತ್ತು ಬೆಳಗಾವಿ ಹಾಗೂ ಬೀದರ್‌ನ ರ‍್ಯಾಲಿಯತ್ತ ಸಾಗಿದರು. ಮೋದಿ ಅವರ ಶೈಲಿ, ಸಕಾಲಿಕತೆ ಮತ್ತು ರ‍್ಯಾಲಿಗಳ ಪ್ರಮಾಣ ಅವರಲ್ಲಿ ಇನ್ನೂ ಸರಕು ಇದೆ ಎಂಬುದನ್ನು ತೋರಿಸುತ್ತದೆ. 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ರಥ ಎಳೆಯುವ ಸಾಮರ್ಥ್ಯ ಅವರಲ್ಲಿ ಇದೆ ಎಂಬುದಕ್ಕೂ ಇದು ದ್ಯೋತಕವಾಗಿದೆ. ಎರಡನೆಯದಾಗಿ, ಮತ ಚಲಾಯಿಸಿದ ಬಳಿಕ ಶಿವಮೊಗ್ಗ ಜಿಲ್ಲೆಯ ಸಾಗರದ ಸಣ್ಣ ಹೋಟೆಲೊಂದರಲ್ಲಿ ಯುವತಿಯೊಬ್ಬರು ತಿಂಡಿ ತಿನ್ನುತ್ತಿದ್ದರು. ತಾನು ಯಡಿಯೂರಪ್ಪನವರಿಗಾಗಿ ಬಿಜೆಪಿಗೆ ಮತ ಹಾಕಿಲ್ಲ. ಅವರ ಬಗ್ಗೆ ನಂಬಿಕೆ ಉಳಿದಿಲ್ಲ. ಇಲ್ಲಿನ ಅಭ್ಯರ್ಥಿ ಎಚ್‌. ಹಾಲಪ್ಪನವರಿಗಾಗಿಯೂ ಮತ ಹಾಕಿಲ್ಲ. ಮೋದಿ ಅವರಿಗಾಗಿ ಮತ ಹಾಕಿದ್ದೇನೆ ಎಂದು ಅವರು ಹೇಳಿದರು. ಕಳೆದ ನಾಲ್ಕು ವರ್ಷಗಳಲ್ಲಿ ಮೋದಿ ಅವರು ದೇಶಕ್ಕೆ ಒಳ್ಳೆಯದು ಮಾಡಿದ್ದಾರೆ ಎಂಬ ನಂಬಿಕೆ ಆ ಯುವತಿಯಲ್ಲಿ ಇತ್ತು.

4. ಬ್ಯಾನರ್‌, ಬಂಟಿಂಗ್‌ಗಳಂತಹ ಬಾಹ್ಯ ಪ್ರಚಾರ ಕಡಿಮೆ ಇದ್ದರೂ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಮತಗಟ್ಟೆಗೆ ಹೋಗಿದ್ದಾರೆ. ಇದು ಮಾಧ್ಯಮ ಮತ್ತು ತಂತ್ರಜ್ಞಾನ ನಮ್ಮ ರಾಜ್ಯದಲ್ಲಿ ವಹಿಸಿರುವ ಪಾತ್ರವನ್ನು ತೋರುತ್ತದೆ. ಸಾಂಪ್ರದಾಯಿಕವಾಗಿ, ಭಾರತದಲ್ಲಿ ಚುನಾವಣೆ ಎಂದರೆ ಗದ್ದಲ, ಅಬ್ಬರ ಮತ್ತು ಪ್ರದರ್ಶನ. ಅಭ್ಯರ್ಥಿಗಳ ಬೃಹತ್‌ ಕಟೌಟ್‌ಗಳೂ ಇದರಲ್ಲಿ ಸೇರುತ್ತವೆ. ಈ ಬಾರಿಯ ಪ್ರಚಾರ ಮುಖ್ಯವಾಗಿ, ಪತ್ರಿಕೆಗಳು ಮತ್ತು ಸುದ್ದಿ ವಾಹಿನಿಗಳ ಜಾಹೀರಾತುಗಳು, ವಾಟ್ಸ್‌ಆ್ಯಪ್‌, ಟ್ವಿಟರ್‌, ಫೇಸ್‌ಬುಕ್‌ ಮತ್ತು ಇನ್‌ಸ್ಟಾಗ್ರಾಂನಂತಹ ಸಾಮಾಜಿಕ ಜಾಲತಾಣಗಳ ಮೂಲಕ ನಡೆದಿದೆ. ಇದು ನಮ್ಮ ಜನತಂತ್ರ ಪ್ರಬುದ್ಧಗೊಂಡಿರುವುದನ್ನು ತೋರಿಸುತ್ತದೆ. ‘ವಿದೇಶಿಯರೊಬ್ಬರು ಇಲ್ಲಿಂದ ಹಾದು ಹೋದರೆ ಇಲ್ಲೊಂದು ಚುನಾವಣೆ ನಡೆಯುತ್ತಿದೆ ಎಂಬುದು ಅವರ ಅರಿವಿಗೇ ಬರುವುದಿಲ್ಲ’ ಎಂದು ನಮ್ಮ ಪ್ರಯಾಣದ ಜತೆಗಾರರೊಬ್ಬರು ಹೇಳಿರುವುದು ಇದನ್ನೇ ಸೂಚಿಸುತ್ತದೆ.

5. ವಿಶೇಷವಾಗಿ ಕರಾವಳಿಯಲ್ಲಿ ತೀವ್ರವಾದಿ ಧರ್ಮನಿಷ್ಠೆ ಪ್ರದರ್ಶನ ಮುಖ್ಯವಾಹಿನಿಯೇ ಆಗಿಬಿಟ್ಟಿದೆ. ಇಲ್ಲಿನ ಬಹುತೇಕ ಹಿಂದೂಗಳಲ್ಲಿ ಅಭದ್ರತೆಯ ಭಾವ ಇದ್ದಂತೆ ತೋರುತ್ತಿದೆ. ಮುಸ್ಲಿಮರ ತುಷ್ಟೀಕರಣ, 24 ಹಿಂದೂಗಳ ಹತ್ಯೆಯಾಗಿದೆ ಎಂಬ ಹೇಳಿಕೆ (ಮಾಧ್ಯಮ ವರದಿಗಳು ಇದಕ್ಕೆ ವ್ಯತಿರಿಕ್ತವಾಗಿವೆ), ಮುಸ್ಲಿಮರ ಸಂಖ್ಯೆ ಹಿಂದೂಗಳನ್ನು ಹಿಂದಿಕ್ಕಬಹುದೆಂಬ ಭೀತಿ, ಹಿಂದೂಗಳಿಗೆ ರಕ್ಷಣೆ ಇಲ್ಲ ಎಂಬ ಆತಂಕವು ಹಿಂದುತ್ವದ ಜನಪ್ರಿಯತೆಯ ಹಿಂದಿನ ಮುಖ್ಯ ಕಾರಣಗಳು.

‘ಈ ಮೊದಲು ನಮ್ಮ ಪಕ್ಷವಾಗಲೀ, ಪಕ್ಷದ ಕಾರ್ಯಕರ್ತರಾಗಲೀ ಹಿಂದುತ್ವದ ಬಗ್ಗೆ ಮಾತೇ ಆಡುತ್ತಿರಲಿಲ್ಲ. ಆದರೆ ಈಗ ಸಮಾಜವೇ ಆ ಬಗ್ಗೆ ಮಾತನಾಡುತ್ತಿದೆ’ ಎಂದು ರಾಜ್ಯದಲ್ಲಿ ಹಿಂದುತ್ವವು ಚುನಾವಣೆಯ ವಿಷಯವಾಗಿ ಮುನ್ನೆಲೆಗೆ ಬಂದ ಬಗೆಯನ್ನು ಶಿವಮೊಗ್ಗದಿಂದ ಬಿಜೆಪಿ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ವಿವರಿಸುತ್ತಾರೆ. ‘ಲವ್‌ ಜಿಹಾದ್’ನಂತಹ ಪ್ರಕರಣಗಳಿಂದಾಗಿ ಕರಾವಳಿಯು ‘ಹಿಂದುತ್ವದ ಪ್ರಯೋಗಶಾಲೆ’ ಎಂಬ ಹೆಸರನ್ನು ಕೆಲವು ವರ್ಷಗಳಿಂದ ಪಡೆದುಕೊಂಡಿದೆ. ಚುನಾವಣೆಯ ಸಂದರ್ಭದಲ್ಲಿ ಇದು ಇನ್ನಷ್ಟು ನಿಚ್ಚಳವಾಗುತ್ತದೆ.

‘ಈಗ ಜನ ಯಾರನ್ನೇ ತಮ್ಮ ಮನೆಗೆ ಊಟಕ್ಕೆ ಕರೆಯಬೇಕೆಂದರೂ ಎರಡೆರಡು ಸಲ ಯೋಚಿಸುತ್ತಾರೆ. ಆದರೆ ನಾವು ಹುಡುಗರಾಗಿದ್ದಾಗ ನಮ್ಮಲ್ಲಿ ಇಂತಹ ಭಾವನೆಗಳು ಇರಲಿಲ್ಲ. ನಮ್ಮ ಮುಸ್ಲಿಂ ಗೆಳೆಯರ ಮನೆಯಲ್ಲಿ ನಾವು ಬಿರಿಯಾನಿ ತಿನ್ನುತ್ತಿದ್ದೆವು’ ಎಂದು ಈ ವಿದ್ಯಮಾನವನ್ನು ಈ ಪತ್ರಿಕೆಯ ಕುಂದಾಪುರದ ವರದಿಗಾರ ನಮಗೆ ಪರಿಣಾಮಕಾರಿಯಾಗಿ ವಿವರಿಸಿದರು. ಅವರು ಮಧ್ಯವಯಸ್ಕ ಹಿಂದೂ.

6. ಮೈಸೂರನ್ನು ಆಳಿದ್ದ ಟಿಪ್ಪು ಸುಲ್ತಾನನ ಜಯಂತಿ ಆಚರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಕೈಗೊಂಡ ನಿರ್ಧಾರ ಸಂಪ್ರದಾಯವಾದಿ ಹಿಂದೂಗಳ ಅತೃಪ್ತಿಗೆ ಕಾರಣವಾಗಿದೆ. ಸರ್ಕಾರದ ಈ ಕ್ರಮವನ್ನು ಉಡುಪಿಯ ಉದ್ಯಮಿಯೊಬ್ಬರು ‘ಇದು ಬೇಕಾಗಿತ್ತಾ?’ ಎಂಬ ಪ್ರಶ್ನೆಯ ಮೂಲಕವೇ ಬಿಡಿಸಿಟ್ಟರು.

7. ಈ ಬಾರಿ ಪ್ರಚಾರದ ಸಂದರ್ಭದಲ್ಲಿ ಬಳಕೆಯಾದ ಭಾಷೆಯ ಬಗ್ಗೆ ಸಾಮಾನ್ಯ ಕನ್ನಡಿಗರಿಗೆ ಅಸಮಾಧಾನವಿದ್ದದ್ದು ಹಲವು ಕಡೆ ಕಂಡು ಬಂತು.  ಪ್ರಚಾರ ಹೆಚ್ಚು ಸಭ್ಯವಾಗಿರಬೇಕು ಎಂದು ಅವರು ಬಯಸುತ್ತಾರೆ. ಬೇರೆ ಕ್ಷೇತ್ರಗಳಲ್ಲಿಯೇ ಆದರೂ ಸಿನಿಮಾ ನಟ ಡಾ.ರಾಜ್‌ಕುಮಾರ್, ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕರಾದ ಅನಿಲ್ ಕುಂಬ್ಳೆ ಮತ್ತು ರಾಹುಲ್ ದ್ರಾವಿಡ್ ಸಾರ್ವಜನಿಕ ಜೀವನದಲ್ಲಿ ವರ್ತನೆ ಹೇಗಿರಬೇಕು ಎಂಬುದನ್ನು ಈಗಾಗಲೇ ತೋರಿಸಿಕೊಟ್ಟಿದ್ದಾರೆ. ಇದರಿಂದ ದೂರ ಸರಿಯುವುದು ಅಪಾಯಕಾರಿ; ಸರಳ ಮನಸ್ಥಿತಿಯ ಕನ್ನಡಿಗರನ್ನು ತಮ್ಮೆಡೆಗೆ ಸೆಳೆಯಲು ಅಕ್ರಮಣಕಾರಿ ಶೈಲಿಯನ್ನು ಅನುಸರಿಸುವುದರ ಬಗ್ಗೆ ಜನರಿಗೆ ಸಮ್ಮತಿ ಇಲ್ಲ.

8. ಸಿದ್ದರಾಮಯ್ಯ ಅವರ ಅನ್ನಭಾಗ್ಯ (ಬಡ ಕುಟುಂಬಗಳಿಗೆ ಉಚಿತವಾಗಿ ಏಳು ಕೆ.ಜಿ.ವರೆಗೆ ಅಕ್ಕಿ ನೀಡುವ ಯೋಜನೆ) ಅತ್ಯಂತ ಯಶಸ್ವಿ ಯೋಜನೆ. ಸರ್ಕಾರದ ಮಹತ್ವಾಕಾಂಕ್ಷೆಯ ಈ ಯೋಜನೆ ಮತ್ತು ಇತರ ಕೆಲವು ಯೋಜನೆಗಳ ಬಗ್ಗೆ ಜನರಲ್ಲಿ ಗಾಢವಾದ ಕೃತಜ್ಞತಾ ಭಾವವಿದೆ. ಬಹುತೇಕ ಗ್ರಾಮೀಣ ಜನರಿಗೆ ಇವುಗಳು ಅತ್ಯಂತ ಪ್ರಯೋಜನಕಾರಿ ಯೋಜನೆಗಳು. ಹಸಿವು ಮುಕ್ತ ರಾಜ್ಯ ನಿರ್ಮಾಣಕ್ಕಾಗಿ ಹಾಕಿದ ಶ್ರಮವನ್ನು ಜನರು ಗಂಭೀರವಾಗಿ ಪರಿಗಣಿಸಿದ್ದಾರೆ. ಸಾಮಾಜಿಕ ನ್ಯಾಯದ ಹರಿಹಾರ ಎಂದು ತಮ್ಮನ್ನು ಗುರುತಿಸಿಕೊಳ್ಳಲು ಬಯಸುವ ಸಿದ್ದರಾಮಯ್ಯ ಅವರಿಗೆ ಈ ಯೋಜನೆಗಳು ಹೆಚ್ಚಿನ ವಿಶ್ವಾಸ ತುಂಬಿವೆ.

9. ಕೊನೆಯದಾಗಿ, ಈ ಚುನಾವಣೆಯಲ್ಲಿ ಯಾವುದೇ ಪಕ್ಷದ ವಿರುದ್ಧ ಅಥವಾ ಪರ ಅಲೆ ಇಲ್ಲ. ಇದು ಅತ್ಯಂತ ಜಿದ್ದಾಜಿದ್ದಿನ ಚುನಾವಣೆಯಾದರೂ, ಸದ್ದಿಲ್ಲದೆ ನಡೆದಿದೆ. ಈ ಚುನಾವಣೆಯಲ್ಲಿ ಹರಿದಾಡಿದ ಅಂತಃಪ್ರವಾಹಗಳು ಮಂಗಳವಾರದ ಫಲಿತಾಂಶದಲ್ಲಿ ವ್ಯಕ್ತವಾಗಲಿವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.