ಶುಕ್ರವಾರ, ಫೆಬ್ರವರಿ 26, 2021
18 °C
ನಾಯಕರು ನಿರಾಳ, ಸಮಾಲೋಚನಾ ಸಭೆ, ಪ್ರಾರ್ಥನಾಲಯಗಳ ಭೇಟಿ

ಅಮ್ಮನೊಡನೆ ಪಟ್ಟಾಂಗ, ಫೋನ್‌ಗೆ ರಜೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಮ್ಮನೊಡನೆ ಪಟ್ಟಾಂಗ, ಫೋನ್‌ಗೆ ರಜೆ

ಮಂಗಳೂರು: ಸುಮಾರು ಒಂದೂವರೆ ತಿಂಗಳಿನಿಂದ ರಾಜಕೀಯ ತಂತ್ರಗಾರಿಕೆ, ಆರೋಪ, ಪ್ರತ್ಯಾರೋಪಗಳಲ್ಲಿ ವ್ಯಸ್ತರಾಗಿದ್ದ ರಾಜಕೀಯ ಮುಖಂಡರು ಭಾನುವಾರ ನಿಜಕ್ಕೂ ವಿಶ್ರಾಂತಿಯ ಖುಷಿಯನ್ನು ಅನುಭವಿಸಿದರು.

ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಎಲ್ಲ ಪಕ್ಷದ ನಾಯಕರು ಚುನಾವಣಾ ರಾಜಕೀಯದಲ್ಲಿ ಮುಳುಗಿ ಮನೆ ಮಠವನ್ನೇ ಮರೆತು ಓಡಾಡುತ್ತಿದ್ದರು. ಶಾಸಕರು, ಸಂಸದರು ತಮ್ಮ ಪಕ್ಷದ ಪರವಾಗಿ ಟೊಂಕ ಕಟ್ಟಿ ನಿಂತು ಯುದ್ಧಕಣದಲ್ಲಿ ಹೋರಾಟ ಮಾಡಿ ಬಳಲಿದ್ದರು. ಪ್ರಚಾರದ ಭರಾಟೆ, ಎದುರು ಪಕ್ಷದವರು ಏನು ಹೇಳುತ್ತಾರೆ ಎಂಬ ಬಗ್ಗೆ ಎಚ್ಚರದಿಂದ ಗಮನಿಸುವಿಕೆ, ಪ್ರತಿ ಹೇಳಿಕೆಗಳ ಬಿಡುಗಡೆ, ಮಾಧ್ಯಮದವರೊಡನೆ ಮಾತುಕತೆಯಲ್ಲಿ ಮುಳುಗಿ ಹೋಗಿದ್ದ ಜನಪ್ರತಿನಿಧಿಗಳು ಭಾನುವಾರ ನಿರಾಳವಾಗಿದ್ದರು.

ಸಂಸದ ನಳಿನ್‌ ಕುಮಾರ್‌ ಕಟೀಲ್‌ ಅವರು ಚುನಾವಣೆಯ ಗುಂಗಿನಿಂದ ಹೊರ ಬಂದಿದ್ದು, ಭಾನುವಾರ ಜಿಲ್ಲೆಯ ಹಲವು ಪ್ರಮುಖ ದೇವಸ್ಥಾನಗಳ ಕೆಲಸ ಕಾರ್ಯಗಳ ಕುರಿತ ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿದ್ದರು. ‘ಪುತ್ತೂರಿನಲ್ಲಿ ದೇವಸ್ಥಾನಕ್ಕೆ ಸಂಬಂಧಿಸಿದ ಸಭೆಯ ಬಳಿಕ ಪಾಲ್ತಾಡಿಗೆ ಬಂದಿದ್ದೇನೆ. ಅಮ್ಮನೊಡನೆ ಮಾತನಾಡಿ ತುಂಬ ದಿನಗಳಾಗಿದ್ದವು. ಇಲ್ಲಿ ಜೋರು ಮಳೆ ಬಂದಿದೆ. ತೋಟದಲ್ಲಿ ಅಡ್ಡಾಡಿ ಮನಸ್ಸು ಹಗುರಾಗಿದೆ’ ಎಂದು ಅವರು ‘ಪ್ರಜಾವಾಣಿ’ ಜೊತೆ ಮಾತನಾಡುತ್ತ ಹೇಳಿದರು.

‘ಪ್ರಚಾರದ ಕೆಲಸ ಮುಗಿದರೂ, ಬಿಡುವು ಅಂತೇನೂ ಇಲ್ಲ. ಹಲವು ದಿನಗಳಿಂದ ಮಾಡಲು ಬಾಕಿ ಉಳಿದ ಕೆಲಸಗಳತ್ತ ಗಮನ ಹರಿಸಿದ್ದೇನೆ.  ಆರೇಳು ಕಡೆ ಮದುವೆ ಕಾರ್ಯಕ್ರಮಗಳಿದ್ದವು. ಅಲ್ಲಿ ಕಾರ್ಯಕರ್ತರ ಭೇಟಿಯೂ ಸಾಧ್ಯವಾಯಿತು. ತುಸು ನಿರಾಳವಾದ ದಿನ ಹೌದು’  ಎಂದು ಅವರು ಹೇಳಿದರು.

ಸಚಿವ ರಮಾನಾಥ ರೈ ಅವರು ಮುಂಜಾನೆ ವ್ಯಾಯಾಮ ಮಾಡದೇ ಬಹಳ ದಿನಗಳಾಗಿದ್ದವು. ಭಾನುವಾರ ಕಳ್ಳಿಗೆಯ ತಮ್ಮ ಮನೆಯಲ್ಲಿ ಎರಡು ತಾಸು ವ್ಯಾಯಾಮ ಮಾಡಿ ಉಪಾಹಾರದ ಬಳಿಕ ಮನೆಗೆ ಬಂದಿದ್ದ ಸಂದರ್ಶಕರೊಡನೆ ಮಾತುಕತೆ ನಡೆಸಿದರು. ಬಳಿಕ ಉಪ್ಪಿನಂಗಡಿಯಲ್ಲಿ ನಡೆದ ತಮ್ಮ ಅಣ್ಣನ ಉತ್ತರಕ್ರಿಯೆಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸಂಜೆ ಮನೆಗೆ ವಾಪಸ್ಸಾಗಿ ವಿಶ್ರಾಂತಿ ಪಡೆದರು.

ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಜೆ. ಆರ್‌. ಲೋಬೊ ಕಳೆದ 15 ದಿನಗಳಿಂದ ಬೆಳಿಗ್ಗೆ ಯೋಗ ಅಭ್ಯಾಸವನ್ನು ಕೈಬಿಟ್ಟಿದ್ದರು. ‘ಇವತ್ತು ಮುಂಜಾನೆ ಒಂದು ಗಂಟೆ ಯೋಗ ಮಾಡಿದ್ದೇ ಮನಸ್ಸು ಹಗುರವಾಯಿತು. ನನ್ನ ಅಣ್ಣನ ಮಗನಿಗೆ ಮಗಳು ಹುಟ್ಟಿದ್ದಾಳೆ. ಅವಳ ನಾಮಕರಣಕ್ಕೆಂದು ಗುರುಪುರ ಕೈಕಂಬಕ್ಕೆ ಬಂದಿದ್ದೇನೆ. ಮೊಮ್ಮಗಳ ನೆಪದಲ್ಲಿ ಎಲ್ಲ ಬಂಧುಗಳೂ ಪಟ್ಟಾಂಗ ಮಾಡಲು ಸಿಕ್ಕಿದರು. ಫೋನ್‌ ದೂರ ಇರಿಸಿ ಅವರೊಡನೆ ಖುಷಿಯಾಗಿ ಸಮಯ ಕಳೆದೆ. ಫಿಲೋಮಿನಾ ನನ್ನ ನೆರಳು ಕಂಡೇ ಬಹಳ ದಿನ ಆಯಿತು ಎಂದು ಹೇಳುತ್ತಿದ್ದಳು. ಮಧ್ಯಾಹ್ನ ಉಂಡು ಗಡದ್ದು ನಿದ್ದೆ ಮಾಡಿ ಮನಸ್ಸು ಪ್ರಫುಲ್ಲವಾಗಿದೆ’ ಎಂದು ಅವರು ಹೇಳಿದರು. 

ಉತ್ತರ ಕ್ಷೇತ್ರದ ಶಾಸಕ ಮೊಹಿಯುದ್ದೀನ್‌ ಬಾವಾ ಮನೆಯಲ್ಲಿ ನಿರಾಳ ಕ್ಷಣಗಳನ್ನು ಕಳೆದು ಒಂದು ರೌಂಡ್‌ ಈಜು ಹೊಡೆದು ಹಗುರಾದರು. ಇಂಡಿಯನ್‌ ಕೋಸ್ಟ್‌ ಗಾರ್ಡ್‌ನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಸಂಜೆ ಮನೆಯಲ್ಲಿ ಸಮಯ ಕಳೆದರು.

ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವೇದವ್ಯಾಸ ಕಾಮತ್‌ ಕಾರ್ಯಕರ್ತರೊಡನೆ ಮಾತುಕತೆ, ಮದುವೆ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರೆ, ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಭರತ್‌ ಶೆಟ್ಟಿ ಮನೆಯವರೊಂದಿಗೆ ಹೆಚ್ಚು ಸಮಯ ಕಳೆದರು. ಸಿ‍ಪಿಎಂ ಅಭ್ಯರ್ಥಿ ಮುನೀರ್‌ ಕಾಟಿಪಳ್ಳ ಬಹುದಿನಗಳ ನಂತರ ತಮ್ಮ ಬುಲೆಟ್‌ ಬೈಕ್‌ ಓಡಿಸಿ ಖುಷಿಪಟ್ಟರು.

ಫ್ರೀ ಇಲ್ಲಪ್ಪಾ: ಖಾದರ್‌

ಸಚಿವ ಯು.ಟಿ. ಖಾದರ್‌ ಅವರಿಗೆ ಭಾನುವಾರ ಒಂದು ಕ್ಷಣವೂ ಬಿಡುವು ಸಿಗಲಿಲ್ಲ. ‘ಮಳಿಗೆ ಉದ್ಘಾಟನೆ, ಮದುವೆಗಳಲ್ಲಿ ಭಾಗವಹಿಸಿದೆ. ಆಸ್ಪತ್ರೆಯಲ್ಲಿದ್ದ ಬಂಧುಗಳನ್ನು ನೋಡಿದೆ. ನನಗಾಗಿ ಕೆಲಸ ಮಾಡಿದವರನ್ನುಅಲ್ಲಲ್ಲಿ ಕಂಡು ಮಾತನಾಡಿಸಿದೆ. ಪ್ರಚಾರದ ಗುಂಗು ಇಲ್ಲದೇ ಇದ್ದರೂ, ಇವತ್ತು ಫ್ರೀ ಅಂತೇನೂ ಇಲ್ಲ. ಮನೆಯವರಿಗೆ ನಾನು ಸಿಗಲಿಲ್ಲ ಎಂಬ ಆರೋಪ ಇವತ್ತೂ ಇದ್ದೇ ಇದೆ’ ಎಂದು ಸಚಿವ ಖಾದರ್‌ ಹೇಳಿದರು.  ‘ಪ್ರಚಾರದ ಒತ್ತಡವಿಲ್ಲ ಎನ್ನುವುದೇ ಖುಷಿ. ಆದರೆ ಯಾವತ್ತಿಗಿಂತ ಹೆಚ್ಚಿನ ಓಡಾಟ ಇವತ್ತು’ ಎಂದು ಅವರು ಮತ್ತೊಂದು ಕಾರ್ಯಕ್ರಮಕ್ಕೆ ಹೊರಡಲು ಅಣಿಯಾದರು.

**

ರಾಜಕೀಯ ಜೀವನದಲ್ಲಿ ಅತ್ಯುತ್ತಮ ದಿನಗಳೆಂದರೇ ಮತದಾನ ಮತ್ತು ಮತ ಎಣಿಕೆಯ ನಡುವಿನ ಅವಧಿ. ಯಾವುದೆ ಆತಂಕವಿಲ್ಲದೇ ಪ್ರಶಾಂತ ಮನಸ್ಸಿನಿಂದ ಈ ದಿನಗಳನ್ನು ಕಳೆಯುತ್ತೇನೆ

- ಜೆ. ಆರ್‌. ಲೋಬೊ,ಶಾಸಕ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.