ಸೋಲು–ಗೆಲುವಿನ ಲೆಕ್ಕಾಚಾರ

5
ಗೆಲುವು ನಿಮ್ಮದೇ– ಬೆಂಬಲಿಗರ ಪ್ರೋತ್ಸಾಹ

ಸೋಲು–ಗೆಲುವಿನ ಲೆಕ್ಕಾಚಾರ

Published:
Updated:

ದೇವರ ಹಿಪ್ಪರಗಿ: ಕಳೆದ ತಿಂಗಳಿನಿಂದ ಕ್ಷೇತ್ರದ ಶಾಸಕ ಸ್ಥಾನಕ್ಕಾಗಿ ಹೋರಾಟದ ಹಾದಿಯಲ್ಲಿರುವ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಅಭ್ಯರ್ಥಿಗಳು ಭಾನುವಾರ ಅಲ್ಪ ವಿಶ್ರಾಂತಿಗೆ ಮೊರೆಹೋಗಿದ್ದು, ಗೆಲುವಿನ ಲೆಕ್ಕಾಚಾರ ಅಭ್ಯರ್ಥಿಗಳಲ್ಲಿ ಮುಂದುವರೆದಿದೆ.

ಕ್ಷೇತ್ರದ ಪ್ರತಿ ಗ್ರಾಮಗಳಲ್ಲಿ ಅಲೆದಾಡಿ, ಮತದಾರರ ಕೈಕಾಲು ಹಿಡಿದು, ಮತ ನೀಡುವಂತೆ ಮನವೊಲಿಸಿ ಹಣ ವೆಚ್ಚದೊಡನೆ ಅವಿರತವಾಗಿ ಶ್ರಮವಹಿಸಿ, ಚುನಾವಣೆ ಎದುರಿಸಿ, ಮತದಾನ ಮುಕ್ತಾಯವಾದರೂ ಅಭ್ಯರ್ಥಿಗಳಿಗೆ ಫಲಿತಾಂಶ ಹೊರಬೀಳುವವರೆಗೆ ಒತ್ತಡ ತಪ್ಪಿದ್ದಲ್ಲ.

ಯಾವ ಭಾಗದಲ್ಲಿ ಎಷ್ಟು ಮತ ಬರಬಹುದು? ಯಾವ ಸಮುದಾಯದವರು ಬೆಂಬಲಿಸಿದೆ? ಎಂದು ಬೆಂಬಲಿಗರ ಜೊತೆ ಸೇರಿ ಗೆಲುವಿನ ಲೆಕ್ಕಾಚಾರ ಹಾಕುವುದರ ಮೂಲಕ ಗೆಲುವಿನ ಹತ್ತಿರಕ್ಕೆ ಮುಟ್ಟುತ್ತಿದ್ದಾರೆ. ಅಪ್ಪಿತಪ್ಪಿಯೂ ಸೋಲು ಎಂಬ ಪದ ಬಳಸದ ಬೆಂಬಲಿಗರು ಮೂರು ಪಕ್ಷದ ಅಭ್ಯರ್ಥಿಗಳಿಗೆ ಗೆಲುವಿನ ಹುಮ್ಮಸ್ಸನ್ನೇ ತುಂಬುತ್ತಿದ್ದಾರೆ.

ಕಳೆದ ಬಾರಿ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ಸೋಮನಗೌಡ ಪಾಟೀಲ ಸಾಸನೂರ ಸುಮಾರು 28,425 ಮತ ಪಡೆಯುವುದರ ಮೂಲಕ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದರು. ಈ ಬಾರಿ ಪ್ರಧಾನಿ ಮೋದಿ ಅಲೆ, ಕಾಂಗ್ರೆಸ್ ವಿರೋಧಿ ಅಲೆ, ನಡಹಳ್ಳಿಯವರ ಅನುಪಸ್ಥಿತಿ ಹಿನ್ನೆಲೆಯಲ್ಲಿ ಅದರ ಲಾಭ ಬಿಜೆಪಿ ಗೆಲುವಿಗೆ ಸಹಕಾರಿಯಾಗಲಿದೆ ಎಂಬುವುದು ಕ್ಷೇತ್ರದ ಜನತೆಯ ಲೆಕ್ಕಾಚಾರ.

ಕ್ಷೇತ್ರದಲ್ಲಿ ನವಯುವಕರು ಜಾತಿ ಮತ ಪಂಥ ಮೀರಿ ಪ್ರಧಾನಿ ಮೋದಿಯವರನ್ನು ಮೀರಿ ಬೆಂಬಲಿಸುವ ಮನಸ್ಥಿತಿ ಎದ್ದು ಕಾಣುತ್ತಿದೆ. ಬಿಜೆಪಿಯ ಸಾಂಪ್ರದಾಯಿಕ ಮತಗಳು ಯಾವತ್ತು ಒಡೆದು ಬೇರೆ ಪಕ್ಷಕ್ಕೆ ಹೋಗುವದಿಲ್ಲ ಎಂದು ಬಿಜೆಪಿ ಗೆಲುವಿನ ರಹಸ್ಯವಾಗಿದೆ’ ಎನ್ನುತ್ತಾರೆ ಪಕ್ಷದ ಹಿರಿಯ ಮುಖಂಡರು.

ಇನ್ನೊಂದೆಡೆ ಬಿಜೆಪಿಯಿಂದ ಸಿಡಿದು ಹೋಗಿ ಜೆಡಿಎಸ್ ಸೇರಿ, ಅಭ್ಯರ್ಥಿಯಾದ ರಾಜುಗೌಡ ಪಾಟೀಲ ಕುದರಿಸಾಲವಾಡಗಿ ಬಿಜೆಪಿಗೆ ಪ್ರಬಲ ಪೈಪೋಟಿ ನೀಡಲಿದ್ದಾರೆ. ಈ ಹಿಂದೆಯೂ ಬಿಜೆಪಿಯಲ್ಲಿ ಟಿಕೆಟ್ ಸಿಗದ ಕಾರಣಕ್ಕಾಗಿ ಯಡಿಯೂರಪ್ಪನವರ ಕೆಜೆಪಿಯಿಂದ ಸ್ಪರ್ಧಿಸಿ 24 ಸಾವಿರಕ್ಕಿಂತಲು ಅಧಿಕ ಮತಗಳನ್ನು ಪಡೆದು ಮೂರನೇ ಸ್ಥಾನಕ್ಕೆ ಕುಸಿದಿದ್ದರು. ಈ ಬಾರಿ ಕುಮಾರಸ್ವಾಮಿಯವರ ಬಲ ಹಾಗೂ ಅನುಕಂಪದ ಜೊತೆಗೆ ಜಾತಿ ಲೆಕ್ಕಾಚಾರದ ತಂತ್ರದೊಂದಿಗೆ ಗೆಲುವಿನ ಲೆಕ್ಕಾಚಾರದಲ್ಲಿದ್ದಾರೆ.

ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಬಿ.ಎಸ್.ಪಾಟೀಲ ಯಾಳಗಿ ಬಹುಕಾಲ ಕಾಂಗ್ರೆಸ್‌ನಲ್ಲಿದ್ದರೂ, ಕೂಡ ಕ್ಷೇತ್ರದಲ್ಲಿ ಜನರಿಗೆ ಅಪರಿಚಿತರಂತೆ ಇರುವುದು ಪಕ್ಷದ ಹಿನ್ನೆಡೆಗೆ ಕಾರಣವಾಗಿದೆ. ಕ್ಷೇತ್ರ ಸುತ್ತಿಲ್ಲ ಹಳ್ಳಿಗಳಲ್ಲಿ ಸಂಘಟನೆ, ರ‍್ಯಾಲಿ, ಮಾಡಿಲ್ಲ. ಪಕ್ಷದ ಚಿಹ್ನೆ ಮೇಲೆ ಗೆಲ್ಲಲು ಹರಸಾಹಸ ಪಡುವ ಮುನ್ಸೂಚನೆ ಎದ್ದು ಕಾಣುತ್ತಿದೆ. ಅಲ್ಪಸಂಖ್ಯಾತರ ಹಾಗೂ ದಲಿತರ ಮತಗಳು ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳಲ್ಲಿ ಹರಿದು ಹಂಚಿಹೋಗಿರುವ ಸಾಧ್ಯತೆಯಿದ್ದು, ಬಿಜೆಪಿ ಗೆಲುವಿಗೆ ಅನುಕೂಲವಾಗುವ ವಾತಾವರಣ ಎದ್ದು ಕಾಣುತ್ತಿದೆ.

ಒಟ್ಟಾರೆ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆಯಂತೆ ಕಂಡರೂ, ಜೆಡಿಎಸ್–ಬಿಜೆಪಿ ಮಧ್ಯೆ ನೇರ ಹಣಾಹಣಿಯಿದ್ದು, ಗೆಲುವು ನಮ್ಮದಾಗಲಿದೆ ಎಂದು ಎರಡು ಪಕ್ಷಗಳ ಬೆಂಬಲಿಗರು ಬೆಟ್ಟಿಂಗ್ ಮೂಲಕ ಭವಿಷ್ಯ ನುಡಿಯುತ್ತಿದ್ದಾರೆ. ನಾಳೆ ಎಲ್ಲ ನಿಗೂಢತೆಗಳಿಗೆ ಸ್ಪಷ್ಟ ಉತ್ತರ ಸಿಗಲಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry