ಕರಾವಳಿಯಲ್ಲಿ ನಿಜವಾದ ಮೋದಿ ಅಲೆ

7

ಕರಾವಳಿಯಲ್ಲಿ ನಿಜವಾದ ಮೋದಿ ಅಲೆ

Published:
Updated:
ಕರಾವಳಿಯಲ್ಲಿ ನಿಜವಾದ ಮೋದಿ ಅಲೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಬೆಳಿಗ್ಗೆ 10 ಗಂಟೆಗೆ ಮೊದಲ ಫಲಿತಾಂಶ ಮೂಡುಬಿದಿರೆ ಕ್ಷೇತ್ರದ ರೂಪದಲ್ಲಿ ಹೊರಬಂದಿದ್ದು, ಬಿಜೆಪಿಯ ಉಮಾನಾಥ ಕೋಟ್ಯಾನ್‌ ಅವರು ಜಯಭೇರಿ ಬಾರಿಸಿದ್ದಾರೆ. ಕ್ಷೇತ್ರದಲ್ಲಿ ಬಿಜೆಪಿ ಇದೇ ಮೊದಲ ಬಾರಿಗೆ ಜಯ ಗಳಿಸಿದೆ.

ಉಳಿದ ಆರು ಏಳು ಕ್ಷೇತ್ರಗಳ ಪೈಕಿ ಮಂಗಳೂರು ಕ್ಷೇತ್ರ ಹೊರತುಪಡಿಸಿ ಉಳಿದ ಆರೂ ಕ್ಷೇತ್ರಗಳಲ್ಲಿ ಬಿಜೆಪಿಯ ಅಭ್ಯರ್ಥಿಗಳು ಮುನ್ನಡೆಯಲ್ಲಿದ್ದಾರೆ. ಈ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೋದಿ ಅಲೆ ಭರ್ಜರಿಯಾಗಿಯೇ ಬೀಸಿರುವುದು ಸ್ಪಷ್ಟವಾಗಿದೆ.

ಮಂಗಳೂರು ಕ್ಷೇತ್ರದಲ್ಲಿ ಹಾಲಿ ಶಾಸಕ ಕಾಂಗ್ರೆಸ್‌ನ ಯು.ಟಿ.ಖಾದರ್‌ ಗೆಲುವಿನತ್ತ ದಾಪುಗಾಲು ಇಟ್ಟಿದ್ದಾರೆ. ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಸಂತೋಷ್‌ ಕುಮಾರ್‌ ರೈ ಬೊಳಿಯಾರ್ ಅವರಿಗಿಂತ 25 ಸಾವಿರ ಮತಗಳ ಅಂತರದಿಂದ ಮುಂದಿದ್ದಾರೆ.

ಮಂಗಳೂರು ದಕ್ಷಿಣದಲ್ಲಿ ಬಿಜೆಪಿಯ ವೇದವ್ಯಾಸ ಕಾಮತ್‌ 7,157 ಮತಗಳ ಅಂತರದಿಂದ ಮುಂದಿದ್ದರೆ, ಮಂಗಳೂರು ಉತ್ತರದಲ್ಲಿ ಬಿಜೆಪಿ ಭರತ್‌ ಶೆಟ್ಟಿ 8.,763 ಮತಗಳ ಮುನ್ನಡೆಯಲ್ಲಿದ್ದಾರೆ. ಪುತ್ತೂರಿನಲ್ಲಿ ಬಿಜೆಪಿಯ ಸಂಜೀವ ಮಠಂದೂರು 7,242 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದರೆ, ಸುಳ್ಯದಲ್ಲಿ ಬಿಜೆಪಿಯ ಎಸ್.ಅಂಗಾರ, ಬೆಳ್ತಂಗಡಿಯಲ್ಲಿ ಹರೀಶ್‌ ಪೂಂಜಾ 4,592 ಮತಗಳ ಅಂತರದಿಂದ ಮುನ್ನಡೆಯಲ್ಲಿದ್ದಾರೆ.

ಕಳೆದ ಬಾರಿ ಕಾಂಗ್ರೆಸ್‌ 7ರಲ್ಲಿ ಗೆದ್ದಿದ್ದರೆ, ಬಿಜೆಪಿ 1ರಲ್ಲಿ ಗೆದ್ದಿತ್ತು. ಈ ಬಾರಿ ಈ ಫಲಿತಾಂಶ  ಉಲ್ಟಾಪಲ್ಟಾ ಆಗುವ ಲಕ್ಷಣ ಕಾಣಿಸಿದೆ.

ಉಡುಪಿ ಜಿಲ್ಲೆಯಲ್ಲಿ ಕಾಪು, ಕುಂದಾಪುರ, ಕಾರ್ಕಳ, ಉಡುಪಿ ಮತ್ತು ಬೈಂದೂರು ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆಯಲ್ಲಿದೆ. ಹೀಗಾಗಿ ಉಡುಪಿಯ ಐದೂ ಕ್ಷೇತ್ರಗಳನ್ನು ಈ ಬಾರಿ ಬಿಜೆಪಿ ತನ್ನ ಬುಟ್ಟಿಗೆ ಹಾಕಿಕೊಳ್ಳುವ ಲಕ್ಷಣ ಕಾಣಿಸಿದೆ.

ಉಡುಪಿ ಜಿಲ್ಲೆಯಲ್ಲಿ ಕಳೆದ ಬಾರಿ ಕಾಂಗ್ರೆಸ್ ಮೂರು ಕ್ಷೇತ್ರಗಳಲ್ಲಿ ಗೆದ್ದಿದ್ದರೆ, 1ರಲ್ಲಿ ಬಿಜೆಪಿ ಗೆದ್ದಿತ್ತು. 1 ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಗೆಲುವು ಸಾಧಿಸಿದ್ದರು.

ಮೋದಿ ಅಲೆ: ಉಡುಪಿ ಮತ್ತು ಮಂಗಳೂರಿಗೆ ಚುನಾವಣಾ ಪ್ರಚಾರ ಭಾಷಣ ಮಾಡಲು ಬಂದಿದ್ದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜನಸಾಗರವೇ ಎದುರಾಗಿತ್ತು. ಮೋದಿ ಅಲೆ ಇರುವುದು ಆಗಲೇ ಸ್ಪಷ್ಟವಾಗಿತ್ತು. ಇದೀಗ ಮತದಾರರು ಅದನ್ನು ಸಾಬೀತುಪಡಿಸಿದ್ದಾರೆ.

ಮುಸ್ಲಿಮರ ತುಷ್ಟೀಕರಣ ನೀತಿಯನ್ನು ಕಾಂಗ್ರೆಸ್‌ ಅನುಸರಿಸುತ್ತಿದೆ ಎಂಬುದು ಈ ಬಾರಿಯ ಬಿಜೆಪಿಯ ಪ್ರಮುಖ ಚುನಾವಣಾ ಪ್ರಚಾರ ವಿಚಾರವಾಗಿತ್ತು. ಅಭಿವೃದ್ಧಿಯ ಮಂತ್ರವನ್ನು ಕಾಂಗ್ರೆಸ್‌ ಪಠಿಸುತ್ತಿತ್ತು. ಜಿಲ್ಲೆಯಲ್ಲಿ ಮತ ವಿಭಜನೆ ಆಗಬಾರದು ಎಂಬ ಕಾರಣಕ್ಕೆ ಎಸ್‌ಡಿಪಿಐ ಅಭ್ಯರ್ಥಿಗಳನ್ನು ಕಣದಲ್ಲಿ ಇರದಂತೆ ನೋಡಿಕೊಂಡರೂ ಕೂಡಾ ಕಾಂಗ್ರೆಸ್‌ಗೆ ನಿರೀಕ್ಷಿತ ಮತ ಚಲಾವಣೆ ಆಗದಿರುವುದು ಈ ಬಾರಿಯ ವಿಶೇಷವಾಗಿದೆ.

ಈ ಬಾರಿ ಮತದಾನ ಪ್ರಮಾಣ ಗಣನೀಯ ಏರಿಕೆ ಆಗಿದ್ದುದು ಬಿಜೆಪಿಗೆ ವರದಾನವಾಗಿರುವುದು ಸ್ಪಷ್ಟವಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry