ಮಂಗಳವಾರ, ಮಾರ್ಚ್ 2, 2021
31 °C

ವಿನಯ 'ಕೈ' ಬಿಟ್ಟ ಲಿಂಗಾಯತ ಸ್ವತಂತ್ರ ಧರ್ಮ ಹೋರಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿನಯ 'ಕೈ' ಬಿಟ್ಟ ಲಿಂಗಾಯತ ಸ್ವತಂತ್ರ ಧರ್ಮ ಹೋರಾಟ

ಧಾರವಾಡ: ಜಿಲ್ಲೆಯ ಪ್ರಭಾವಿ ಲಿಂಗಾಯತ ಮುಖಂಡ ವಿನಯ ಕುಲಕರ್ಣಿ ಅನಿರೀಕ್ಷಿತವಾಗಿ ಸೋಲು ಕಂಡಿದ್ದು, ಜೆಡಿಎಸ್‌ ತೊರೆದು ಬಿಜೆಪಿ ತೆಕ್ಕೆಗೆ ಜಾರಿದ್ದ ಅಮೃತ್‌ ದೇಸಾಯಿ ಕೊನೆಗೂ ಗೆಲುವಿನ ಸಿಹಿಯುಂಡಿದ್ದಾರೆ. 

ಬಿಜೆಪಿಯಲ್ಲಿ ಟಿಕೆಟ್‌ಗಾಗಿ ಮಾಜಿ ಶಾಸಕಿ ಸೀಮಾ ಮಸೂತಿ ಹಾಗೂ ವಲಸೆ ಬಂದಿರುವ ಅಮೃತ್‌ ಮಧ್ಯೆ ಟಿಕೆಟ್‌ಗಾಗಿ ಪೈಪೋಟಿ ಇತ್ತು. ಆದರೆ, ಪಕ್ಷದ ವರಿಷ್ಠರು ಟಿಕೆಟ್‌ ನೀಡುವುದಾಗಿ ಮಾತು ಕೊಟ್ಟಿದ್ದರಿಂದ ಅಮೃತ್ ದೇಸಾಯಿ ಅವರಿಗೇ ಮಣೆ ಹಾಕಲಾಯಿತು. ಮೊದ ಮೊದಲು ಸೀಮಾ ಬಂಡಾಯ ಎದ್ದಿದ್ದರಾದರೂ ಪಕ್ಷದ ಹಿರಿಯ ನಾಯಕ ಜಗದೀಶ ಶೆಟ್ಟರ್‌ ಅವರ ಸಂಧಾನ ಫಲಿಸಿದ ಪರಿಣಾಮ ಅಮೃತ್ ಪರವಾಗಿ ಚುನಾವಣೆಯಲ್ಲಿ ಕೆಲಸ ಮಾಡಿದರು.

ಬಿಜೆಪಿಯ ಮತಗಳ ಜೊತೆಗೇ ಅಮೃತ್ ಅವರನ್ನು ಗೆಲುವಿನ ದಡ ಸೇರಿಸಿದ್ದು ಅವರ ಮನೆತನಕ್ಕೆ ನಿಷ್ಠವಾದ ಕುಟುಂಬಗಳ ಸುಮಾರು 25 ಸಾವಿರಕ್ಕೂ ಅಧಿಕ ಮತಗಳು. 

ಧಾರವಾಡ ತಾಲ್ಲೂಕಿನ ಹಂಗರಕಿ ದೇಸಾಯಿ ಮನೆತನ ಅಯ್ಯಪ್ಪ ದೇಸಾಯಿ (ಅಮೃತ್ ತಂದೆ) ಕಾಲದಿಂದಲೂ ರಾಜಕೀಯದಲ್ಲಿ ಸಕ್ರಿಯವಾಗಿದೆ. ಅಲ್ಲದೇ, ಈ ಮನೆತನದ ಬಳಿ ಇದ್ದ ಸಾವಿರಾರು ಎಕರೆ ಭೂಮಿ ಟೆನೆನ್ಸಿ ಕಾಯ್ದೆ ಪ್ರಕಾರ ಬಡವರಿಗೆ ಹಂಚಿಕೆಯಾಗಿದೆ. ಹಾಗಾಗಿ, ದೇಸಾಯಿ ಅವರ ಜಮೀನುಗಳನ್ನು ಉಳುಮೆ ಮಾಡುತ್ತಿರುವವರು ಇಂದಿಗೂ ದೇಸಾಯಿ ಕುಟುಂಬಕ್ಕೆ ನಿಷ್ಠರು. ಗರಗ, ಹಂಗರಕಿ, ಕೋಟೂರು, ಸಿಂಗನಳ್ಳಿ, ನೀರಲಕಟ್ಟಿ, ಮುಮ್ಮಿಗಟ್ಟಿ ಗ್ರಾಮಗಳಲ್ಲಿ ಅಮೃತ್ ಅವರ ಪ್ರಭಾವ ಇದೆ. ಜೊತೆಗೆ ಪಕ್ಷದ ಕಾರ್ಯಕರ್ತರು ಧಾರವಾಡ ನಗರ ವ್ಯಾಪ್ತಿಯ ಎಂಟು ವಾರ್ಡ್‌ಗಳಲ್ಲಿ ಸಕ್ರಿಯವಾಗಿ ಕೆಲಸ ಮಾಡಿದ್ದರಿಂದ ದೇಸಾಯಿ ಗೆಲುವು ಸುಲಭವಾಯಿತು ಎನ್ನಲಾಗುತ್ತಿದೆ. ಜೊತೆಗೆ, ಅಮೃತ ದೇಸಾಯಿ ಸತತ ಎರಡು ಚುನಾವಣೆಗಳಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿ ಸೋಲು ಕಂಡಿದ್ದರು. ಈ ಅನುಕಂಪವೂ ಚುನಾವಣೆಯಲ್ಲಿ ಕೆಲಸ ಮಾಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಇನ್ನು ವಿನಯ ಕುಲಕರ್ಣಿ ಸೋಲಿಗೆ ಕಾರಣಗಳು ಹಲವು. ಪ್ರಬಲ ಗಣಿ ಮತ್ತು ಭೂವಿಜ್ಞಾನ ಖಾತೆ ಹಾಗೂ ಜಿಲ್ಲಾ ಉಸ್ತುವಾರಿ ಖಾತೆಯನ್ನು ಹೊಂದಿದ್ದರೂ ಜಿಲ್ಲೆಯ ಅಭಿವೃದ್ಧಿಗೆ ಸಾಕಷ್ಟು ಕೆಲಸ ಮಾಡಲಿಲ್ಲ ಎಂಬ ಆರೋಪಗಳು ಕೇಳಿ ಬಂದಿವೆ. ಜೊತೆಗೆ, ಅವರ ಹಿಂಬಾಲಕರು ಕ್ಷೇತ್ರದ ಜನರನ್ನು ಸಚಿವರ ಭೇಟಿಗೆ ಅವಕಾಶ ಕೊಡಿಸಲಿಲ್ಲ ಎಂಬ ಆರೋಪಗಳಿವೆ. ತಾಲ್ಲೂಕಿನ ಉಪ್ಪಿನ ಬೆಟಗೇರಿಗೆ ತೆರಳಿದ್ದ ಸಂದರ್ಭದಲ್ಲಿ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದರು.

2008ರಲ್ಲಿ ಸೀಮಾ ಮಸೂತಿ ಎದುರು ಸೋಲನುಭವಿಸಿದ್ದ ವಿನಯ ಕುಲಕರ್ಣಿ ಈ ಬಾರಿ ಅಮೃತ್ ಎದುರು ಸೋಲು ಕಂಡಿದ್ದಾರೆ. ದೇಸಾಯಿ ಮೊದಲ ಬಾರಿಗೆ ಗೆಲುವಿನ ಸಿಹಿ ಉಂಡಿದ್ದಾರೆ.

ಸ್ವತಂತ್ರ ಲಿಂಗಾಯತ ಧರ್ಮದ ಹೋರಾಟದಲ್ಲಿ ಸಕ್ರಿಯವಾಗಿದ್ದ ವಿನಯ ಕುಲಕರ್ಣಿಗೆ ಈ ಹೋರಾಟ ಸಿಹಿ ಬದಲು ಕಹಿ ಉಣಿಸಿದ್ದು ಸ್ಪಷ್ಟ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.