ರಾಜ್ಯಪಾಲರಿಗೆ ನಾಯಕನ ಆಯ್ಕೆ ಪ್ರತಿ ಸಲ್ಲಿಸಿ, ಸರ್ಕಾರ ರಚನೆಗೆ ಅವಕಾಶ ಕೋರಿದ್ದೇವೆ: ಯಡಿಯೂರಪ್ಪ

ಬೆಂಗಳೂರು: ನಮ್ಮ ಬಿಜೆಪಿ ಶಾಸಕಾಂಗ ಪಕ್ಷ ನನ್ನನ್ನು ನಾಯಕನನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಿದೆ. ಆ ಪ್ರತಿಯನ್ನು ರಾಜ್ಯಪಾಲರಿಗೆ ಕೊಟ್ಟು ಸರ್ಕಾರ ರಚನೆಗೆ ಅವಕಾಶ ಕೋರಿದ್ದೇವೆ ಎಂದು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ತಿಳಿಸಿದರು.
ಬುಧವಾರ ಬೆಳಿಗ್ಗೆ 11ಕ್ಕೆ ರಾಜಭವನಕ್ಕೆ ಪಕ್ಷದ ಮುಖಂಡರ ಜತೆ ತೆರಳಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿ ಹೊರ ಬಂದ ಬಳಿಕ ಅವರು ಸುದ್ದಿಗಾರರ ಜತೆ ಮಾತನಾಡಿದರು.
ನಾಯಕನನ್ನಾಗಿ ಆಯ್ಕೆಮಾಡಿರುವ ಪ್ರತಿಯನ್ನು ರಾಜ್ಯಪಾಲರಿಗೆ ಸಲ್ಲಿಸಿ, ಆದಷ್ಟು ಬೇಗ ಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕರಿಸಲು ಅವಕಾಶ ಕೋರಿ ಮನವಿ ಮಾಡಿದ್ದೇವೆ. ರಾಜ್ಯಪಾಲರು ಅದಕ್ಕೆ ಅವಕಾಶ ನೀಡುತ್ತಾರೆ ಎಂಬ ವಿಶ್ವಾಸ ನಮಗಿದೆ. ಶೇ 100ಕ್ಕೆ 100ರಷ್ಟು ನಾವು ಸರ್ಕಾರ ರಚಿಸುತ್ತೇವೆ ಎಂದು ತಿಳಿಸಿದರು.
ನಮಗೆ ಬಹುಮತ ಇದೆ ಎಂಬುದನ್ನು ರಾಜ್ಯಪಾಲರಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ನಾವು ಸರ್ಕಾರ ರಚಿಸುವುದು ನಿಶ್ಚಿತ ಎಂದರು.
‘ನಾಳೆ ನೀವು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ಸಿದ್ಧತೆ ನಡೆದಿದೆ’ ಎಂಬ ಸುದ್ದಿ ಇದೆಯಲ್ಲಾ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಸಿದ ಯಡಿಯೂರಪ್ಪ, ‘ನಮಗೆ ರಾಜ್ಯಪಾಲರ ಪತ್ರ ಬಂದ ಬಳಿಕ ತಿಳಿಸುತ್ತೇನೆ. ಅದರಲ್ಲಿ ಮುಚ್ಚಿಡುವುದೇನಿದೆ’ ಎಂದಷ್ಟೇ ಹೇಳಿ, ನಗು ಮುಖದಿಂದಲೇ ತೆರಳಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.